* ಲಖನೌ ಎದುರು ರೋಚಕ ಸೋಲು ಕಂಡ ಆರ್‌ಸಿಬಿ* ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ ಬಲಿಪಡೆದ ಅಮಿತ್ ಮಿಶ್ರಾ* ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಲು ಕಳ್ಳಾಟವಾಡಿದ್ರಾ ಮಿಶ್ರಾ?

ಬೆಂಗಳೂರು(ಏ.11): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಎದುರು ಲಖನೌ ಸೂಪರ್ ಜೈಂಟ್ಸ್ ತಂಡವು ಒಂದು ವಿಕೆಟ್ ರೋಚಕ ಜಯ ಸಾಧಿಸಿದೆ. ಕೊನೆಯ ಕ್ಷಣದವರೆಗೂ ರೋಚಕತೆ ಕಾಯ್ದುಕೊಂಡಿದ್ದ ಪಂದ್ಯದಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ತಂಡವು ಗೆಲುವಿನ ನಗೆ ಬೀರಿತು. ಇನ್ನು ಇದೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್‌ ತಂಡದ ಅನುಭವಿ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ, ಮೋಸದಾಟವಾಡಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ರಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.

Add Asianetnews Kannada as a Preferred SourcegooglePreferred

ಹೌದು, ಇಲ್ಲಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡದ ಲೆಗ್‌ಸ್ಪಿನ್ನರ್‌ ಅಮಿತ್ ಮಿಶ್ರಾ, ಚೆಂಡಿಗೆ ಎಂಜಲು ಹಚ್ಚಿ, ಶೈನಿಂಗ್‌ ಬರುವಂತೆ ಮಾಡಿದ್ದರು. 12ನೇ ಓವರ್‌ನ ಮೊದಲ ಎಸೆತಕ್ಕೂ ಮುನ್ನ ಅಮಿತ್ ಮಿಶ್ರಾ, ಚೆಂಡಿಗೆ ಹೊಳಪು ತರುವಂತೆ ಮಾಡಲು, ಎಂಜಲು ಹಚ್ಚಿದ ಕ್ಷಣ ಕ್ಯಾಮರಾ ಕಣ್ಣುಗಳಲ್ಲಿ ಶರಣಾಗಿದೆ. ಇದಾಗಿ ಎರಡು ಎಸೆತಗಳಲ್ಲೇ ವಿರಾಟ್ ಕೊಹ್ಲಿಯ ವಿಕೆಟ್ ಕಬಳಿಸುವಲ್ಲಿ ಅಮಿತ್ ಮಿಶ್ರಾ ಯಶಸ್ವಿಯಾದರು. ವಿರಾಟ್ ಕೊಹ್ಲಿ 44 ಎಸೆತಗಳನ್ನು ಎದುರಿಸಿ ತಲಾ 4 ಬೌಂಡರಿ ಹಾಗೂ ಸಿಕ್ಸರ್ ಸಹಾಯದಿಂದ 61 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಹೀಗಿತ್ತು ನೋಡಿ ಆ ಕ್ಷಣ

Scroll to load tweet…

ಕೊರೋನಾ ವೈರಸ್ ಬರುವ ಮುನ್ನ ಚೆಂಡಿನ ಹೊಳಪನ್ನು ಕಾಪಾಡಲು ಬೌಲರ್‌ಗಳು ಚೆಂಡಿಗೆ ಎಂಜಲು ಹಚ್ಚಿ ಬಳಸುತ್ತಿದ್ದರು. ಆದರೆ ಕೋವಿಡ್ ಬಳಿಕ, ಚೆಂಡಿಗೆ ಎಂಜಲು ಹಚ್ಚುವ ಪ್ರಕ್ರಿಯೆಗೆ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ ನಿಷೇಧ ಮಾಡುವಂತೆ ಸಲಹೆ ನೀಡಿತ್ತು. ಇದಾದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು, ಚೆಂಡಿಗೆ ಎಂಜಲು ಹಚ್ಚುವುದನ್ನು ಶಾಶ್ವತವಾಗಿ ನಿಷೇಧಿಸಿತ್ತು. ಚೆಂಡಿಗೆ ಎಂಜಲು ಹಚ್ಚುವುದರಿಂದ ಚೆಂಡಿನ ಹೊಳಪು ಹೆಚ್ಚುವುದರ ಜತೆಗೆ ಹೆಚ್ಚಿನ ತಿರುವನ್ನು ಪಡೆದುಕೊಳ್ಳುತ್ತಿತ್ತು. ಆದರೆ ಇದೀಗ ಐಸಿಸಿ ಅದಕ್ಕೆ ನಿಷೇಧ ಹೇರಿದೆ. ಆದರೆ ಇದಕ್ಕೆ ಬದಲಾಗಿ ಬೌಲರ್‌ಗಳು ತಮ್ಮ ಬೆವರನ್ನು ಚೆಂಡಿಗೆ ಹಚ್ಚಲು ಅವಕಾಶ ನೀಡಿದೆ

IPL 2023 ಲಖನೌ ಎದುರು ರೋಚಕ ಪಂದ್ಯ ಸೋತ ಆರ್‌ಸಿಬಿ; ಅನುಷ್ಕಾ ಶರ್ಮಾ ರಿಯಾಕ್ಷನ್ ವೈರಲ್‌

ಚೆಂಡಿಗೆ ಎಂಜಲು ಹಚ್ಚುವುದನ್ನು ಐಸಿಸಿ ನಿಷೇಧ ಮಾಡಿದ ಬಳಿಕವೂ ಅಮಿತ್ ಮಿಶ್ರಾ ಈ ಹಿಂದೆ ಅದೇ ತಪ್ಪು ಮಾಡಿದ್ದರು. 2021ರ ಐಪಿಎಲ್ ಟೂರ್ನಿಯ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಅಮಿತ್ ಮಿಶ್ರಾ, ತಮಗರಿವಿಲ್ಲದಂತೆಯೇ, ಚೆಂಡಿಗೆ ಎಂಜಲು ಹಚ್ಚಿ ಮೊದಲ ಬಾಲ್ ಹಾಕಲು ಮುಂದಾಗಿದ್ದರು. ಆ ಸಂದರ್ಭದಲ್ಲಿ ಆನ್‌ಫೀಲ್ಡ್‌ ಅಂಪೈರ್ ವಿರೇಂದರ್ ಶರ್ಮಾ, ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ರಿಷಭ್ ಪಂತ್‌ಗೆ ಮೊದಲ ಎಚ್ಚರಿಕೆ ನೀಡಿದ್ದರು.

ಇನ್ನು ಆರ್‌ಸಿಬಿ-ಲಖನೌ ನಡುವಿನ ಪಂದ್ಯ ಹೇಗಿತ್ತು ಎನ್ನುವುದನ್ನು ನೋಡುವುದಾದರೇ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು, ವಿರಾಟ್ ಕೊಹ್ಲಿ(61), ಫಾಫ್ ಡು ಪ್ಲೆಸಿಸ್(79*) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್‌(59) ಸ್ಪೋಟಕ ಅರ್ಧಶತಕದ ನೆರವಿನಿಂದ 2 ವಿಕೆಟ್ ಕಳೆದುಕೊಂಡು 212 ರನ್ ಬಾರಿಸಿತ್ತು.

ಇನ್ನು ಕಠಿಣ ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್ ತಂಡವು 23 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋನಿಸ್(65) ಹಾಗೂ ನಿಕೋಲಸ್ ಪೂರನ್(62) ಸಿಡಿಲಬ್ಬರದ ಅರ್ಧಶತಕ ಹಾಗೂ ಆಯುಷ್ ಬದೋನಿ ಸಮಯೋಚಿತ 30 ರನ್‌ಗಳ ನೆರವಿನಿಂದ ಲಖನೌ ತಂಡವು ಗೆಲುವಿನ ನಗೆ ಬೀರಿತು.