ದಿನಕ್ಕೆ 35 ರೂಪಾಯಿ ಕೂಲಿ ಮಾಡುತ್ತಿದ್ದ ಗುಜರಾತ್‌ನ ಯುವಕನೊಬ್ಬ, ಕ್ರಿಕೆಟ್ ಮೇಲಿನ ಅಚಲವಾದ ಪ್ರೀತಿಯಿಂದ ಭಾರತ ತಂಡದ ವೇಗದ ಬೌಲರ್ ಆದ ಸ್ಪೂರ್ತಿದಾಯಕ ಕಥೆಯಿದು. 2011ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ 'ಭರೂಚ್ ಎಕ್ಸ್‌ಪ್ರೆಸ್', ಇಂದು ತನ್ನ ಹಳ್ಳಿಯಲ್ಲಿ ಕೃಷಿ ಮಾಡುತ್ತಾ ತೆರೆಮರೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
- ಸುದರ್ಶನ್, ಏಷ್ಯಾನೆಟ್ ಸುವರ್ಣನ್ಯೂಸ್
ಗುಜರಾತ್’ನ ಭರೂಚ್ ಬಳಿ ಇಖಾರ್ ಎಂಬ ಸಣ್ಣ ಹಳ್ಳಿ. ಹಳ್ಳಿ ಪಕ್ಕ ಒಂದು ಟೈಲ್ಸ್ ಫ್ಯಾಕ್ಟರಿ. ಫ್ಯಾಕ್ಟರಿಯಲ್ಲೊಬ್ಬ ಹುಡುಗ ಪ್ರತೀ ದಿನ 8 ಗಂಟೆಗಳ ಕಾಲ ಗಾಣದ ಎತ್ತಿನಂತೆ ದುಡಿಯುತ್ತಿದ್ದ. ಅಷ್ಟು ದುಡಿಮೆಗೆ ಅವನಿಗೆ ಸಿಗುತ್ತಿದ್ದ ಕೂಲಿ ದಿನಕ್ಕೆ 35 ರೂಪಾಯಿ. ಮನೆಯ ಯಜಮಾನ ಇನ್ನೊಬ್ಬರ ಹೊಲದಲ್ಲಿ ಪುಡಿಗಾಸಿಗೆ ದುಡಿಯುತ್ತಿದ್ದ ದಿನಗೂಲಿ ಕಾರ್ಮಿಕ.. ಮನೆ ನಡೆಯಬೇಕೆಂದರೆ ಮಗನೂ ದುಡಿಯಬೇಕಿತ್ತು.
ದಿನಕ್ಕೆ 8 ಗಂಟೆ ಕೆಲಸ. ಸಂಜೆಯಾಗುತ್ತಿದ್ದಂತೆ ಹುಡುಗ ಕ್ರಿಕೆಟ್ ಮೈದಾನಕ್ಕೆ ಓಡಿ ಬಿಡುತ್ತಿದ್ದ. ಕ್ರಿಕೆಟ್ ಆಡಿದರೆ ಅಟ್ಟಿಸಿಕೊಂಡು ಬಂದು ಹೊಡೆಯುತ್ತಿದ್ದ ತಂದೆ. ದುಡಿಮೆ ಅವರ ಅನ್ನದ ಬಟ್ಟಲು. ಹೀಗಾಗಿ ಮಗನ ಕ್ರಿಕೆಟ್ ಪ್ರೀತಿಯನ್ನು ತಂದೆ ವಿರೋಧಿಸುತ್ತಲೇ ಬಂದರು. "ನನ್ನೊಂದಿಗೆ ಬಂದು ಹೊಲದಲ್ಲಿ ಕೆಲಸ ಮಾಡುವುದಾದರೆ ಮಾಡು. ಇಲ್ಲವಾದಲ್ಲಿ ನಿನ್ನನ್ನು ಆಫ್ರಿಕಾಗೆ ಕಳುಹಿಸಿ ಬಿಡುತ್ತೇನೆ. ಅಲ್ಲೇ ದುಡಿಯುವೆಯಂತೆ" ಎಂದು ಅದೆಷ್ಟು ಬಾರಿ ಹೇಳಿದ್ದರೋ ಆ ತಂದೆ.
ಕ್ರಿಕೆಟ್ ಆಟವೇ ಅನ್ನದ ಬಟ್ಟಲಾಗಿ ಬದಲಾದ ಕಥೆ
ಆದರೆ ಕ್ರಿಕೆಟ್ ಆಟವೇ ಆ ಕುಟುಂಬಕ್ಕೆ ಮುಂದೊಂದು ದಿನ ಅನ್ನದ ಬಟ್ಟಲಾಗಲಿದೆ ಎಂಬ ಸಣ್ಣ ಸುಳಿವೂ ಕೂಡ ಆ ತಂದೆಗೆ ಇರಲಿಲ್ಲ. ಅಪ್ಪನ ಕಣ್ತಪ್ಪಿಸಿ ಮಗ ಆಡುತ್ತಲೇ ಇದ್ದ. ಅವನದ್ದು ಅಥ್ಲೆಟಿಕ್ ದೇಹ. ಟೆನಿಸ್ ಬಾಲ್'ನಲ್ಲೇ ಅತೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದ. ಕ್ರಿಕೆಟ್ ಕಡೆ ಗಂಭೀರವಾಗಿ ಆಸಕ್ತಿ ವಹಿಸುವಂತೆ ಶಾಲೆಯ ದೈಹಿಕ ಶಿಕ್ಷಕರು ಸಲಹೆ ನೀಡುತ್ತಾರೆ. ಬರಿಗಾಲಲ್ಲಿ, ಹರಿದ ಚಪ್ಪಲಿಯಲ್ಲಿ ಬೌಲಿಂಗ್ ಮಾಡುತ್ತಿದ್ದ ಹುಡುಗ. ಕ್ರಿಕೆಟ್ ಅಕಾಡೆಮಿ ಸೇರಬೇಕೆಂದರೆ ಕನಿಷ್ಠ ಒಂದು ಜೊತೆ ಶೂಸ್ ಆದರೂ ಬೇಕು. ಆ ಕ್ಷಣ ನೆರವಿಗೆ ಬಂದವನು ಯೂಸುಫ್ ಎಂಬ ಸ್ನೇಹಿತ. ಒಂದು ಜೊತೆ ಶೂಸ್ ತೆಗೆದುಕೊಟ್ಟ ಯೂಸುಫ್ ನೇರವಾಗಿ ಕರೆ ತಂದು ಸೇರಿಸಿದ್ದು ಬರೋಡಾದಲ್ಲಿದ್ದ ಒಂದು ಕ್ರಿಕೆಟ್ ಅಕಾಡೆಮಿಗೆ.
ಅದು 2003. ಬರೋಡಾದ ಕ್ರಿಕೆಟ್ ಅಕಾಡೆಮಿಯೊಂದರಲ್ಲಿ 20 ವರ್ಷದ ಯುವಕನೊಬ್ಬ raw, explosive paceನಲ್ಲಿ ಬೌಲಿಂಗ್ ಮಾಡುತ್ತಿರುತ್ತಾನೆ.. ನೋಡುತ್ತಾ ನಿಂತಿದ್ದ ಆ ವ್ಯಕ್ತಿಗೆ ಅಚ್ಚರಿ. ಅವರು ಭಾರತ ತಂಡದ ಮಾಜಿ ವಿಕೆಟ್ ಕೀಪರ್, ಸೆಲೆಕ್ಟರ್ ಕಿರಣ್ ಮೋರೆ. ಹಳ್ಳಿ ಹುಡುಗನ ವೇಗವನ್ನು ನೋಡಿ ಬೆರಗಾಗಿ ಬಿಟ್ಟರು ಕಿರಣ್ ಮೋರೆ. ಕೂಡಲೇ ಅವರನ್ನು ಚೆನ್ನೈನ MRF ಪೇಸ್ ಫೌಂಡೇಶನ್'ಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ. ಅಲ್ಲಿ 150/kph ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದವನನ್ನು ನೋಡಿ ಆಶ್ಚರ್ಯಚಕಿತರಾಗಿ ಬಿಟ್ಟರು ಆಸ್ಟ್ರೇಲಿಯಾ ದಿಗ್ಗಜರಾದ ಡೆನಿಸ್ ಲಿಲ್ಲೀ ಮತ್ತು ಸ್ಟೀವ್ ವ್ಹಾ.
2006.. ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದವರು ಅವರೇ.. ಭರೂಚ್ ಹುಡುಗನನ್ನು ಬರೋಡದಿಂದ ಚೆನ್ನೈಗೆ ಕಳುಹಿಸಿದ್ದ ಕಿರಣ್ ಮೋರೆ. ರಾಹುಲ್ ದ್ರಾವಿಡ್ ಭಾರತ ತಂಡದ ನಾಯಕ. "ಹೀಗೊಬ್ಬ ಹುಡುಗನಿದ್ದಾನೆ, raw talent.. ಆಡಿಸೋಣ" ದ್ರಾವಿಡ್ ಬಳಿ ಹೇಳಿದ್ದರು ಕಿರಣ್ ಮೋರೆ. ಆಯ್ಕೆ ಸಮಿತಿಯ ಮುಖ್ಯಸ್ಥನೇ ಹೇಳಿದ ಮೇಲೆ ದ್ರಾವಿಡ್ ಮರು ಮಾತಾಡಲಿಲ್ಲ.
ಟೆಸ್ಟ್ ಪಾದಾರ್ಪಣೆಯಲ್ಲೇ ಮಾರಕ ದಾಳಿ
2006ರಲ್ಲಿ ಮೊಹಾಲಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪದಾರ್ಪಣೆ. 97ಕ್ಕೆ 7 ವಿಕೆಟ್ ಉಡಾಯಿಸಿಬಿಟ್ಟ ಹಳ್ಳಿಹೈದ. ಅವನಿಗೆ ಭರೂಚ್ ಎಕ್ಸ್'ಪ್ರೆಸ್ ಎಂಬ ಹೆಸರು ಬಂದದ್ದು ಆಗಲೇ. ಭಾರತ ತಂಡಕ್ಕೆ ಕಾಲಿಟ್ಟ ದಿನಗಳಲ್ಲಿ ಈ ದೇಶಕ್ಕೆ ಅವನೇ ಫಾಸ್ಟೆಸ್ಟ್ ಬೌಲರ್. ಆದರೆ ವೇಗವೇ ಕ್ರಿಕೆಟ್ ವೃತ್ತಿಜೀವನಕ್ಕೆ ಶತ್ರುವಾಗುವ ಸೂಚನೆ ಸಿಗುತ್ತಿದ್ದಂತೆ ಬೌಲಿಂಗ್ ವೇಗವನ್ನು ಕಡಿಮೆ ಮಾಡಿ ಲೈನ್ & ಲೆಂತ್ ಕಡೆ ಗಮನವಿಟ್ಟ. ಚೆಂಡು ಕೈಗೆ ಬಂತೆಂದರೆ ಅವನು ಬೌಲಿಂಗ್ ಮಷಿನ್. ಇಡೀ ದಿನ ಒಂದೇ ಜಾಗಕ್ಕೆ ಬೌಲಿಂಗ್ ಮಾಡು ಎಂದರೆ ಚೆಂಡು ಒಂದಿಂಚೂ ಆಚೆ ಈಚೆ ಹೋಗದಂತೆ ಬೌಲಿಂಗ್ ಮಾಡುತ್ತಿದ್ದ ಚತುರ.
2011ರ ಏಕದಿನ ವಿಶ್ವಕಪ್'ನ unsung hero ಆತ. ಅದರಲ್ಲೂ ಪಾಕಿಸ್ತಾನ ವಿರುದ್ಧದ ಆ ಸೆಮಿಫೈನಲ್. ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ಇನ್ನಿಂಗ್ಸ್ ಮಧ್ಯದ ಮತ್ತು ಕೊನೆಯ ಓವರ್'ಗಳಲ್ಲಿ ಅವನು ಮಾಡಿದ್ದ ಬೌಲಿಂಗ್. ಫೈನಲ್'ನಲ್ಲೂ ಆಡಿದ, ವಿಶ್ವಕಪ್ ಎತ್ತಿ ಹಿಡಿದ. ₹35 ರೂಪಾಯಿಗೆ ದಿನಗೂಲಿ ಮಾಡುತ್ತಿದ್ದ ಹುಡುಗ ಕ್ರಿಕೆಟ್ ವಿಶ್ವಕಪ್ ಗೆದ್ದು ಬಿಟ್ಟ. ಅಂದ ಹಾಗೆ ಅವನ ಹೆಸರು ಮುನಾಫ್ ಪಟೇಲ್. 2011ರ ವಿಶ್ವಕಪ್ ಹೀರೋ ನಿವೃತ್ತಿಯ ನಂತರ ಎಲ್ಲಿಂದ ಬಂದನೋ ಅಲ್ಲಿಗೇ ನಡೆದು ಬಿಟ್ಟ. ಹುಟ್ಟೂರಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮುನಾಫ್ ಪಟೇಲ್, ಕಳೆದ ಐಪಿಎಲ್'ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಕೋಚ್ ಆಗಿದ್ದ. ಅದು ಬಿಟ್ಟರೆ ಅವನದ್ದು ಈಗಲೂ ತೆರೆಮರೆಯ ಜೀವನ..


