ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ತಂಡವನ್ನು ಮಣಿಸಿದ ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಶಫಾಲಿ ವರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಸುಲಭ ಜಯ ಸಾಧಿಸಿತು. ಸೆಪ್ಟೆಂಬರ್ 20ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿವೆ.
ನಿಶಿನ್: ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ತಂಡವನ್ನು ಮಣಿಸಿದ ಭಾರತೀಯ ವನಿತೆಯರು ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಜಪಾನ್ 19.5 ಓವರ್‌ಗಳಲ್ಲಿ ಕೇವಲ 57 ರನ್‌ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಸ್ಫೋಟಕ ಬ್ಯಾಟಿಂಗ್ ಮಾಡಿದ ಶಫಾಲಿ ವರ್ಮಾ ಕೇವಲ 15 ಎಸೆತಗಳಲ್ಲಿ ಅಜೇಯ 40 ರನ್ ಸಿಡಿಸಿದರು. ರಿಚಾ ಘೋಷ್ 12 ರನ್ ಗಳಿಸಿ ಗೆಲುವಿಗೆ ಸಾಥ್ ನೀಡಿದರು. ಗುಲಾನ್ ಕಮಾಲಿನಿ (0) ಮತ್ತು ಭಾರ್ತಿ ಫುಲ್ಮಾಲಿ (6) ಬೇಗನೆ ವಿಕೆಟ್ ಕೈಚೆಲ್ಲಿದರು.
ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಜಪಾನ್ ವನಿತೆಯರು
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಜಪಾನ್ ಪರ ಓಪನರ್ ಐಕಾ ಕ್ಯಾಟೊ ಸ್ಟಾಫೋರ್ಡ್ (25 ರನ್) ಹಾಗೂ ಹರುಣಾ ಇವಾಸಕಿ (10 ರನ್) ಮಾತ್ರ ಎರಡಂಕಿ ದಾಟಿದರು. ಕ್ಯಾಪ್ಟನ್ ಮೈ ಯಾನಗಿಡಾ ಗೋಲ್ಡನ್ ಡಕ್ ಆದರು. ಮೊದಲ ವಿಕೆಟ್‌ಗೆ 24 ರನ್ ಕಲೆಹಾಕಿದ್ದ ಜಪಾನ್, ಆ ಬಳಿಕ ಕೇವಲ 33 ರನ್ ಸೇರಿಸುವಷ್ಟರಲ್ಲಿ ಉಳಿದ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಆಲೌಟ್ ಆಯಿತು.
ಇಡೀ ಇನ್ನಿಂಗ್ಸ್‌ನಲ್ಲಿ ಜಪಾನ್ ಬ್ಯಾಟರ್‌ಗಳು ಕೇವಲ 3 ಬೌಂಡರಿಗಳನ್ನಷ್ಟೇ ಬಾರಿಸಿದರು. ಭಾರತದ ಪರ ಅದ್ಭುತ ಬೌಲಿಂಗ್ ಮಾಡಿದ ಶ್ರೀ ಚರಿಣಿ 4 ಓವರ್‌ಗಳಲ್ಲಿ ಕೇವಲ 10 ರನ್ ನೀಡಿ 4 ವಿಕೆಟ್ ಕಿತ್ತರು. ಶಫಾಲಿ ವರ್ಮಾ 4 ಓವರ್‌ಗಳಲ್ಲಿ 13 ರನ್ ಕೊಟ್ಟು 2 ವಿಕೆಟ್ ಪಡೆದರು. ನಿನ್ನೆ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ ಪಾಕಿಸ್ತಾನ ಪ್ರಯಾಸದ ಗೆಲುವು ಕಂಡಿದೆ. ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಪಾಕಿಸ್ತಾನಕ್ಕೆ 11 ಓವರ್‌ಗಳಲ್ಲಿ 92 ರನ್‌ಗಳ ಟಾರ್ಗೆಟ್ ಇತ್ತು. ಒಂದು ಹಂತದಲ್ಲಿ 47 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನ, ಅಂತಿಮವಾಗಿ 2 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಸೆಮಿಫೈನಲ್‌ಗೆ ವೇದಿಕೆ ಸಜ್ಜು:
ಚೀನಾ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ಉನ್ನತ ಶ್ರೇಯಾಂಕ ಹೊಂದಿರುವ ಬಾಂಗ್ಲಾದೇಶ ಸೆಮಿಫೈನಲ್ ಪ್ರವೇಶಿಸಿತು. ಇನ್ನು ಥಾಯ್ಲೆಂಡ್ ವಿರುದ್ದದ ಎರಡನೇ ಕ್ವಾರ್ಟರ್ ಫೈನಲ್‌ನಲ್ಲಿ ಪಾಕಿಸ್ತಾನ ತಂಡವು 3 ವಿಕೆಟ್‌ಗಳ ಜಯ ಸಾಧಿಸಿ ಸೆಮೀಸ್‌ಗೆ ಲಗ್ಗೆಯಿಟ್ಟಿದೆ. ಶ್ರೀಲಂಕಾ ಹಾಗೂ ಮಲೇಷ್ಯಾ ನಡುವಿನ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಂಕಾ ವನಿತೆಯರು 86 ರನ್‌ಗಳ ಭರ್ಜರಿ ಜಯ ಸಾಧಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿತು. ಇನ್ನು ನಾಲ್ಕನೇ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ಪಡೆಯನ್ನು ಅನಾಯಾಸವಾಗಿ ಬಗ್ಗುಬಡಿದ ಭಾರತ ಸೆಮೀಸ್‌ಗೆ ಎಂಟ್ರಿಕೊಟ್ಟಿದೆ.
ಇದೀಗ ಸೆಪ್ಟೆಂಬರ್ 20ರಂದು ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಮಹಿಳಾ ತಂಡಗಳು ಕಾದಾಡಲಿವೆ. ಇನ್ನೊಂದೆಡೆ ಅದೇ ದಿನ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡಗಳು ಫೈನಲ್ ಟಿಕೆಟ್‌ಗೆ ಸೆಣಸಾಡಲಿವೆ.


