ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್ ಬಾಲಿವುಡ್‌ಗೆ ಬರುತ್ತಾರೆಯೇ ಎಂಬ ಕುತೂಹಲಕ್ಕೆ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಆರಾಧ್ಯಳನ್ನು ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾದಿಂದ ಕೂಡ ಐಶ್ವರ್ಯಾ ದೂರವಿಟ್ಟಿದ್ದಾಳೆ ಎಂಬುದು ನಿಮಗೆ ಗೊತ್ತೆ? 

ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್‌ರ ಮಗಳು ಆರಾಧ್ಯ ಬಚ್ಚನ್- ಈ ಹೆಸರು ಕೇಳಿದ ತಕ್ಷಣವೇ ಬಾಲಿವುಡ್ ಫ್ಯಾನ್ಸ್‌ಗಳಲ್ಲಿ ಕುತೂಹಲ ಶುರುವಾಗುತ್ತದೆ. “ಆರಾಧ್ಯ ಯಾವಾಗ ಸಿನಿಮಾಗೆ ಬರ್ತಾರೆ?”, “ಅಮ್ಮನಂತೆ ನಟಿಯಾಗ್ತಾರಾ?” ಅನ್ನೋ ಪ್ರಶ್ನೆಗಳು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸುತ್ತುತ್ತಲೇ ಇರುತ್ತವೆ.

ಈ ಕುತೂಹಲಕ್ಕೆ ನೀರೆರೆಯುವಂತೆ ಟ್ಯಾರೋ ಕಾರ್ಡ್ ರೀಡರ್ ಮತ್ತು ಜ್ಯೋತಿಷಿ ಗೀತಾಂಜಲಿ ಸಕ್ಸೇನಾ ಒಂದು ಭಾರೀ ಭವಿಷ್ಯವಾಣಿ ನುಡಿದ್ದಾರೆ. ಹಿಂದಿಯ ಒಂದು ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಗೀತಾಂಜಲಿ ಸಕ್ಸೇನಾ, ಆರಾಧ್ಯ ಬಚ್ಚನ್‌ರ ಭವಿಷ್ಯವನ್ನು ಟ್ಯಾರೋ ಕಾರ್ಡ್ ಮೂಲಕ ವಿಶ್ಲೇಷಿಸಿದ್ದಾರೆ. ಆರಾಧ್ಯ ಬಾಲಿವುಡ್‌ಗೆ ಬರ್ತಾರಾ ಅನ್ನೋ ಪ್ರಶ್ನೆಗೆ ಗೀತಾಂಜಲಿ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ. “ಅವಳು ಸಿನಿಮಾ ಇಂಡಸ್ಟ್ರಿಗೆ ಖಂಡಿತಾ ಬರುತ್ತಾಳೆ. ಆದರೆ ಅದು ಕೇವಲ ನಟಿಯಾಗಿ ಮಾತ್ರ ಇರಬೇಕೆಂದಿಲ್ಲ. ನಟಿಯಾಗಿ ಬಂದು, ಮುಂದೆ ಪ್ರೊಡಕ್ಷನ್ ಅಥವಾ ಬೇರೆ ಕ್ಷೇತ್ರಕ್ಕೂ ಹೋಗಬಹುದು,” ಎಂದು ಹೇಳಿದ್ದಾರೆ.

“ಅವಳು ತುಂಬಾ ಸ್ವತಂತ್ರ ಸ್ವಭಾವದ ಹುಡುಗಿ. ಭವಿಷ್ಯದಲ್ಲಿ ಡೊಮಿನೇಟಿಂಗ್ ಲೇಡಿ ಆಗ್ತಾಳೆ. ಅವಳ ಸುತ್ತ ವಿವಾದಗಳೂ ಇರುತ್ತವೆ. ಆದರೆ ಅವಳು ಬಲಿಷ್ಠ ಮಹಿಳೆಯರ ಕುಟುಂಬದಿಂದ ಬಂದವಳು,” ಎಂದು ಹೇಳಿದ್ದಾರೆ. ಬಚ್ಚನ್ ಕುಟುಂಬದಲ್ಲಿರುವ ಶಕ್ತಿಶಾಲಿ ಮಹಿಳೆಯರ ಪ್ರಭಾವ ಆರಾಧ್ಯ ಮೇಲೂ ಇರಲಿದೆ ಎನ್ನುವುದು ಅವರ ಅಭಿಪ್ರಾಯ.

ಟ್ಯಾರೋ ಕಾರ್ಡ್‌ಗಳ ಪ್ರಕಾರ, 7 ಮತ್ತು 4 ಸಂಖ್ಯೆಗಳ ಕಾಂಬಿನೇಶನ್ ಅವಳ ಜೀವನದಲ್ಲಿ ಹೋರಾಟಗಳನ್ನು ತರುತ್ತದೆ. ಆದ್ರೆ ಆ ಹೋರಾಟಗಳೇ ಅವಳನ್ನು ಇನ್ನಷ್ಟು ಬಲಿಷ್ಠಳನ್ನಾಗಿ ಮಾಡುತ್ತವೆ. ಗೀತಾಂಜಲಿ ಹೇಳುವಂತೆ, ಆರಾಧ್ಯ ತುಂಬಾ ಭಾವನಾತ್ಮಕ ಸ್ವಭಾವದವಳು. “ಅವಳು ಎಮೋಷನಲ್ ಆಗಿದ್ದಾಳೆ. ಅದೇ ಅವಳ ಶಕ್ತಿ ಕೂಡ, ದುರ್ಬಲತೆಯೂ ಕೂಡ,” ಎಂದು ಹೇಳಿದ್ದಾರೆ.

ಆರಾಧ್ಯ ಯಶಸ್ಸು ಸ್ವಜನಪಕ್ಷಪಾತದಿಂದ (ನೆಪೋಟಿಸಂ) ಅಲ್ಲ, ಟ್ಯಾಲೆಂಟ್‌ನಿಂದಲೇ ಬರುತ್ತದೆ ಎನ್ನುವುದನ್ನೂ ಗೀತಾಂಜಲಿ ಸ್ಪಷ್ಟಪಡಿಸಿದ್ದಾರೆ. “ಅವಳು ಒಳ್ಳೆಯ ನಟಿ. ಅವಳಲ್ಲಿ ಟ್ಯಾಲೆಂಟ್ ಇದೆ. ಈ ಇಂಡಸ್ಟ್ರಿ ಅವಳಿಗೆ ಸೂಕ್ತವಾಗಿದೆ. ಮುಂದುವರೆದರೆ ಅವಳು ಯಶಸ್ವಿಯಾಗ್ತಾಳೆ,” ಎಂದು ಹೇಳಿದ್ದಾರೆ.

ಅವಳ ಬಳಿ ಮೊಬೈಲ್‌ ಸಹ ಇಲ್ಲ!

2011ರಲ್ಲಿ ಜನಿಸಿದ ಆರಾಧ್ಯ, ಈಗಾಗಲೇ ತನ್ನ ಶಾಲೆಯಲ್ಲಿ ಸ್ಟಾರ್ ಪರ್ಫಾರ್ಮರ್ ಆಗಿ ಗುರುತಿಸಿಕೊಂಡಿದ್ದಾಳೆ. ಓದಿನಲ್ಲಿ ಮಾತ್ರವಲ್ಲ, ನಾಟಕಗಳಲ್ಲಿ ಲೀಡ್ ರೋಲ್ ಮಾಡಿ ತನ್ನ ನಟನಾ ಕೌಶಲ್ಯ ತೋರಿಸಿದ್ದಾಳೆ. ಇತ್ತೀಚೆಗೆ ಶಾರುಖ್ ಖಾನ್ ಮಗ ಅಬ್ರಾಮ್ ಖಾನ್ ಜೊತೆಗೆ ಒಂದೇ ನಾಟಕದಲ್ಲಿ ನಟಿಸಿ ಗಮನ ಸೆಳೆದಿದ್ದಾಳೆ.

ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಮದುವೆಯಾದದ್ದು ಏಪ್ರಿಲ್ 20, 2007ರಲ್ಲಿ. 2011ರಲ್ಲಿ ಆರಾಧ್ಯ ಜನನ. ಈಗ ಅವಳ ವಯಸ್ಸು 14. ₹2,000 ಕೋಟಿ ಮೌಲ್ಯದ ಬಚ್ಚನ್ ಕುಟುಂಬದ ಏಕೈಕ ವಾರಸುದಾರ್ತಿ ಆರಾಧ್ಯ ಬಚ್ಚನ್. ಅಮ್ಮ ಮಾಜಿ ಮಿಸ್ ವರ್ಲ್ಡ್, ಅಪ್ಪ ಬಾಲಿವುಡ್‌ನ ಹೆಸರಾಂತ ನಟ, ಅಜ್ಜ ಭಾರತೀಯ ಸಿನಿರಂಗದ ಮಹಾ ಐಕಾನ್, ಅಜ್ಜಿ ಗೌರವಾನ್ವಿತ ರಾಜಕಾರಣಿ.

ಇಂತಹ ಹಿನ್ನೆಲೆ ಇರುವ ಆರಾಧ್ಯ ಜೀವನವೂ ಗ್ಯಾಜೆಟ್‌, ಕ್ಯಾಮೆರಾ, ಸೋಶಿಯಲ್ ಮೀಡಿಯಾ ಗ್ಲಾಮರ್‌ಗಳಿಂದ ತುಂಬಿರಬಹುದು ಎಂದು ಯಾರಾದರೂ ಊಹಿಸುವುದು ಸಹಜ. ಆದ್ರೆ ವಾಸ್ತವವೇ ಬೇರೆ! ಆರಾಧ್ಯಗೆ ಸ್ವಂತ ಮೊಬೈಲ್ ಕೂಡ ಇಲ್ಲ! ಇತ್ತೀಚೆಗೆ ಅಭಿಷೇಕ್ ಬಚ್ಚನ್ ಬಹಿರಂಗಪಡಿಸಿದ ಒಂದು ವಿಷಯ ಎಲ್ಲರನ್ನೂ ಅಚ್ಚರಿ ಪಡಿಸಿದೆ. ಆರಾಧ್ಯ ಬಳಿ ಸ್ವಂತ ಮೊಬೈಲ್ ಫೋನ್ ಇಲ್ಲ. ಅಷ್ಟೇ ಅಲ್ಲ—ಅವಳು ಸೋಶಿಯಲ್ ಮೀಡಿಯಾದಿಂದ ಸಂಪೂರ್ಣ ದೂರ.

ಇಂದಿನ ಕಾಲದಲ್ಲಿ ಮಕ್ಕಳು ಬಾಲ್ಯದಲ್ಲೇ ರೀಲ್ಸ್‌, ಲೈಕ್ಸ್‌, ಫಾಲೋವರ್ಸ್‌ಗಳ ನಡುವೆ ಬೆಳೆದು ಬರುತ್ತಿರುವಾಗ, ಬಚ್ಚನ್ ಕುಟುಂಬದ ಈ ನಿರ್ಧಾರ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕ್ರೆಡಿಟ್‌ ಸಂಪೂರ್ಣ ಐಶ್ವರ್ಯಾ ರೈ ಬಚ್ಚನ್‌ಗೆ ಹೋಗಬೇಕು. ಐಶ್ವರ್ಯಾ ತಮ್ಮ ಮಗಳ ಮಾನಸಿಕ ಆರೋಗ್ಯ, ಸಮತೋಲನದ ಬೆಳವಣಿಗೆ ಮತ್ತು ಬಾಲ್ಯದ ಶಾಂತತೆಯನ್ನು ಎಲ್ಲಕ್ಕಿಂತ ಮೇಲು ಎಂದು ನೋಡುತ್ತಾರೆ. ಸೌಲಭ್ಯ, ಹೆಸರು, ಜನರ ನಿರೀಕ್ಷೆ- ಯಾವುದನ್ನೂ ಮಗಳ ಬಾಲ್ಯದ ಮೇಲೆ ಹೇರಲು ಐಶ್ವರ್ಯಾ ಒಪ್ಪಿಲ್ಲ. ಹೀಗಾಗಿ ಆಕೆ ಅನಗತ್ಯ ಡಿಜಿಟಲ್ ವ್ಯಸನದಿಂದ ದೂರ, ಸೋಶಿಯಲ್ ಮೀಡಿಯಾ ಗಾಸಿಪ್‌ಗಳಿಂದ ರಕ್ಷಣೆ, ಚಿಕ್ಕ ವಯಸ್ಸಿನಲ್ಲೇ ಸಾರ್ವಜನಿಕ ವಿಮರ್ಶೆ ಎದುರಿಸುವ ಒತ್ತಡದಿಂದ ದೂರ ಉಳಿದಿದ್ದಾಳೆ.