ಸಿನಿಮಾದಲ್ಲಿ ನಟಿಸುವ ಆಸೆ ಹೊಂದಿರುವ ಹೊಸ ಪ್ರತಿಭೆಗಳಿಗೆ ನಟ ರಿಷಬ್ ಶೆಟ್ಟಿ ಸುವರ್ಣ ಅವಕಾಶ ನೀಡಿದ್ದಾರೆ. ತಮ್ಮ ಮುಂದಿನ ಹೊಸ ಚಿತ್ರಕ್ಕಾಗಿ ಉತ್ತರ ಕರ್ನಾಟಕ ಶೈಲಿಯ ಕನ್ನಡ ಬಲ್ಲ ನಟ-ನಟಿಯರಿಗಾಗಿ ಆಡಿಷನ್ ಕರೆ ನೀಡಿದ್ದಾರೆ. ಅಕ್ಟೋಬರ್ 2ರಂದು ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಈ ಆಡಿಷನ್ ನಡೆಯಲಿದೆ.
ಎಷ್ಟೋ ಮಂದಿಗೆ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇರುತ್ತದೆ. ಆದರೆ ಯಾರನ್ನು ಸಂಪರ್ಕ ಮಾಡಬೇಕು ಅಂತ ತಿಳಿದಿರೋದಿಲ್ಲ. ಒಂದು ಚಾನ್ಸ್, ಒಂದೇ ಒಂದು ಚಾನ್ಸ್ ಅಂತ ಸಿನಿಮಾ ಆಫೀಸ್‌ಗಳ ಸುತ್ತಲು ಸುತ್ತಾಡುವವರ ಸಂಖ್ಯೆಯೂ ಕಡಿಮೆ ಏನು ಇಲ್ಲ. ಈ ರೀತಿ ಸಿನಿಮಾದಲ್ಲಿ ನಟಿಸಲು ಒಂದು ಅವಕಾಶಕ್ಕಾಗಿ ಕಾದು ಕುಳಿತಿರುವ ಮಂದಿಗೆ ನಟ ರಿಷಬ್ ಶೆಟ್ಟಿ ಗುಡ್ ನ್ಯೂಸ್ ನೀಡಿದ್ದಾರೆ. ತಮ್ಮ ಮುಂದಿನ ಸಿನಿಮಾಗಾಗಿ ಹೊಸ ಕಲಾವಿದರಿಗೆ ಚಾನ್ಸ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ನಿಮಗೆ ನಟನೆಯ ಸಾಮರ್ಥ್ಯವಿದ್ದರೆ, ಈ ಅವಕಾಶವನ್ನು ಬಳಸಿಕೊಳ್ಳಬಹುದು.
ರಿಷಬ್ ಶೆಟ್ಟಿ ಮುಂದಿನ ಸಿನಿಮಾದಲ್ಲಿ ನಿಮಗೂ ಸಿಗಲಿದೆಯಾ ಚಾನ್ಸ್?
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಿಷಬ್ ಶೆಟ್ಟಿ, ನಮ್ಮನ್ ನೋಡ್ಲಿಕ್ಕೆ ನೀವ್ ಬಂದಿದಿರಿ ನಿಮ್ಮನ್ ನೋಡ್ಲಿಕ್ಕೆ ನಾವ್ ಬರ್ತಿದ್ದೇವೆ. ರಿಷಬ್ ಶೆಟ್ಟಿ ಫಿಲಂಸ್ ಕಡೆಯಿಂದ ಪ್ರತಿಭಾವಂತರಿಗೆ ಸುವರ್ಣ ಅವಕಾಶ ಎಂದು ಹೇಳಿದ್ದಾರೆ.
ನಿಮ್ಮ ಸಿನಿಮಾ ರಂಗದ ಪ್ರಯಣ ಇಲ್ಲಿಂದಲೇ ಆರಂಭವಾಗಬಹುದು. ಒಂದು ಸಿನಿಮಾ ಕಥೆ ಸಿದ್ಧ ಮಾಡುತ್ತಿದ್ದೇವೆ. ರಿಷಬ್ ಶೆಟ್ಟಿ ಫಿಲ್ಮ್ಸ್‌ನ ಈ ರೋಚಕ ಹೊಸ ಪ್ರಾಜೆಕ್ಟ್ ಭಾಗವಾಗಲು ಹೊಸ ಪ್ರತಿಭೆಗಳನ್ನು ಹುಡುಕುತ್ತಿದ್ದೇವೆ. ನೀವು ಪ್ರತಿಭಾವಂತರಾಗಿದ್ದರೆ, ನಿಮಗೆ ಇದಕ್ಕೆ ಬೇಕಾದ ಸಾಮರ್ಥ್ಯವಿದೆ ಎಂದು ನಿಮಗೆ ಅನ್ನಿಸಿದರೆ, ಸಿನಿಮಾ ಲೋಕಕ್ಕೆ ಕಾಲಿಡಲು ಇದೊಂದು ಉತ್ತಮ ಅವಕಾಶವಾಗಬಹುದು. ಬನ್ನಿ, ಈ ಪಯಣದ ಭಾಗವಾಗಿ ಎಂದು ಹೇಳಿದ್ದಾರೆ.
ಜೀವನ ಒಂದು ಪಯಣ, ಅದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿ ಎಂದಿರುವ ರಿಷಬ್ ಶೆಟ್ಟಿ, ರಿಷಬ್ ಶೆಟ್ಟಿ ಫಿಲ್ಮ್ಸ್ ಆಡಿಷನ್/ ಕಾಸ್ಟಿಂಗ್ ಕಾಲ್ ಇದು. ಎಲ್ಲಾ ಆಸಕ್ತ ನಟ-ನಟಿಯರಿಗೆ ಆಹ್ವಾನ. ಮುಂದಿನ ಚಿತ್ರದ ಪ್ರಮುಖ ಪಾತ್ರಗಳಿಗೆ ಹೊಸ ಪ್ರತಿಭೆಗಳ ಹುಟುಕಾಟದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಆದರೆ ಇದಕ್ಕೆ ಕೆಲವು ಷರತ್ತುಗಳು ಅನ್ವಯವಾಗುತ್ತದೆ ಎಂದು ಹೇಳಿದ್ದು, ವಯಸ್ಸಿನ ಮಿತಿ ನೀಡಲಾಗಿದೆ. ಪುರುಷರಿಗೆ 20 ರಿಂದ 65 ವರ್ಷ, ಮಹಿಳೆಯರು 20 ರಿಂದ 60 ವರ್ಷ ನಡುವೆ ಇರ್ಬೇಕು. ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲ ಹೊಸ ಪ್ರತಿಭೆಗಳು, ಉತ್ತರ ಕರ್ನಾಟಕದ ಭಾಷಾಶೈಲಿ ತಿಳಿದಿರುವವರು ಇದೇ ಅಕ್ಟೋಬರ್ 02 ರಂದು ಬೆಳಗ್ಗೆ 09 ರಿಂದ ಸಂಜೆ 06 ಗಂಟೆಯೊಳಗೆ ಬೆಂಗಳೂರಿನ ಜಯನಗರದ 4ನೇ ಬ್ಲಾಕ್‌ನಲ್ಲಿರುವ ವಿಜಯಾ ಕಾಲೇಜಿಗೆ ಆಗಮಿಸಲು ಸೂಚನೆ ನೀಡಲಾಗಿದೆ.



