ಬ್ಯಾಂಕಿನಲ್ಲಿ ಅಡವಿಟ್ಟ ಚಿನ್ನ ಕಳವಾದರೆ, ಅದರ ಸುರಕ್ಷತೆಯ ಸಂಪೂರ್ಣ ಹೊಣೆ ಬ್ಯಾಂಕಿನದ್ದಾಗಿರುತ್ತದೆ. ಈ ಸಂದರ್ಭದಲ್ಲಿ ಗ್ರಾಹಕರು ತಮ್ಮ ಹಕ್ಕುಗಳನ್ನು ಹೇಗೆ ಚಲಾಯಿಸಬೇಕು, ಪರಿಹಾರ ಪಡೆಯುವ ಪ್ರಕ್ರಿಯೆ ಮತ್ತು ಸಾಲದ ಸ್ಥಿತಿಗತಿಗಳ ಬಗ್ಗೆ ಆರ್‌ಬಿಐ ನಿಯಮಗಳೇನು ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಸಾಮಾನ್ಯವಾಗಿ ತುರ್ತು ಹಣಕಾಸಿನ ಅಗತ್ಯಗಳಿಗಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಆಭರಣಗಳನ್ನು ಅಡಮಾನ ಇಟ್ಟು (Gold Loan) ಸಾಲ ಪಡೆಯುವುದು ವಾಡಿಕೆ. ಆದರೆ, ನಾವು ಬ್ಯಾಂಕಿನ ಭದ್ರತೆಯಲ್ಲಿ ಇಟ್ಟಿರುವ ಒಡವೆಗಳು ಕಳವಾದರೆ ಅಥವಾ ದರೋಡೆಯಾದರೆ ಅದರ ಹೊಣೆ ಯಾರು? ಗ್ರಾಹಕರಿಗೆ ಸಿಗುವ ಪರಿಹಾರವೇನು? ಸಾಲದ ಕಂತಿನ ಕಥೆಯೇನು? ಎಂಬ ಆತಂಕ ಪ್ರತಿಯೊಬ್ಬರಲ್ಲೂ ಇರುತ್ತದೆ. ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಗಳು ಹಾಗೂ ಗ್ರಾಹಕರ ಹಕ್ಕುಗಳ ವಿವರ ಇಲ್ಲಿದೆ.

ಅಡಮಾನದ ಚಿನ್ನ ಸುರಕ್ಷಿತವಾಗಿಡುವುದು ಬ್ಯಾಂಕಿನ ಕರ್ತವ್ಯ

ಆರ್‌ಬಿಐ ನಿಯಮಗಳ ಪ್ರಕಾರ, ಗ್ರಾಹಕರು ಸಾಲಕ್ಕಾಗಿ ಇಟ್ಟಿರುವ ಚಿನ್ನದ ಆಭರಣಗಳು ಬ್ಯಾಂಕಿನ ಸ್ವಂತ ಆಸ್ತಿಯಾಗುವುದಿಲ್ಲ. ಅದನ್ನು ಅತ್ಯಂತ ಸುರಕ್ಷಿತವಾಗಿ ಹಾಗೂ ಸುಸ್ಥಿತಿಯಲ್ಲಿಡುವುದು ಅವರ ಕಡ್ಡಾಯ ಕರ್ತವ್ಯವಾಗಿದೆ. ಬ್ಯಾಂಕ್‌ಗಳು ತಮ್ಮಲ್ಲಿರುವ ಅಡಮಾನದ ಚಿನ್ನಕ್ಕೆ ಸೂಕ್ತವಾದ ವಿಮೆ (Insurance) ಮಾಡಿಸಿರಬೇಕು. ಒಂದು ವೇಳೆ ಚಿನ್ನ ಕಳವಾದರೆ, ಅದಕ್ಕೆ ಸೂಕ್ತ ಕಾರಣ ಹಾಗೂ ಪರಿಹಾರದ ವಿವರವನ್ನು ಬ್ಯಾಂಕ್ ಗ್ರಾಹಕರಿಗೆ ನೀಡುವುದು ಕಡ್ಡಾಯ.

ಕಳವಾದ ತಕ್ಷಣವೇ ಪರಿಹಾರ ಸಿಗುತ್ತದೆಯೇ?

ಬ್ಯಾಂಕಿನಲ್ಲಿದ್ದ ಚಿನ್ನ ಕಳವಾದ ತಕ್ಷಣವೇ ಅನ್-ಲಿಮಿಟೆಡ್ (ಅಪರಿಮಿತ) ಪರಿಹಾರ ಸಿಗುತ್ತದೆ ಎಂದು ಭಾವಿಸುವಂತಿಲ್ಲ. ಕಳವಾದ ಸನ್ನಿವೇಶ, ಒಪ್ಪಂದದ ಷರತ್ತುಗಳು ಹಾಗೂ ವಿಮಾ ಕಂಪನಿಯ ನೀತಿಗಳ ಆಧಾರದ ಮೇಲೆ ಪರಿಹಾರದ ಮೊತ್ತ ನಿಗದಿಯಾಗುತ್ತದೆ. ಕೇವಲ ಸಾಲದ ಮೊತ್ತಕ್ಕೆ ಮಾತ್ರವೇ ಚಿನ್ನದ ಮೌಲ್ಯ ಸೀಮಿತವಾಗಿರುವುದಿಲ್ಲ. ಹೀಗಾಗಿ, ಚಿನ್ನ ಸಾಲ ಪಡೆಯುವಾಗ ನೀಡುವ ‘ಪ್ಲೆಡ್ಜ್ ರಸೀದಿ’ (Pledge Receipt), ಆಭರಣದ ತೂಕ, ಕ್ಯಾರೆಟ್ (ಶುದ್ಧತೆ) ವಿವರ, ಬಿಲ್ಲುಗಳು ಹಾಗೂ ಫೋಟೋಗಳನ್ನು ಗ್ರಾಹಕರು ಭದ್ರವಾಗಿಟ್ಟುಕೊಳ್ಳುವುದು ಅತ್ಯಗತ್ಯ.

ಕಳವಾದರೆ ತಕ್ಷಣವೇ ಈ ಕ್ರಮ ಕೈಗೊಳ್ಳಿ

ನಿಮ್ಮ ಅಡಮಾನದ ಚಿನ್ನ ಕಳವಾಗಿದೆ ಎಂದು ತಿಳಿದ ತಕ್ಷಣವೇ ಬ್ಯಾಂಕ್‌ಗೆ ತೆರಳಿ ಲಿಖಿತ ರೂಪದಲ್ಲಿ ಮಾಹಿತಿ ನೀಡಿ ಮತ್ತು ದೂರನ್ನು ದಾಖಲಿಸಿ. ಬ್ಯಾಂಕ್ ಪೊಲೀಸರಿಗೆ ನೀಡಿರುವ ಎಫ್‌ಐಆರ್ (FIR) ಪ್ರತಿ ಹಾಗೂ ಸಾಲದ ಸಂಸ್ಥೆಯೊಂದಿಗಿನ ಪ್ರತಿಯೊಂದು ಸಂವಹನದ ದಾಖಲೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

ಚಿನ್ನ ಕಳವಾದರೆ ಸಾಲ ರದ್ದಾಗುತ್ತದೆಯೇ?:

ಅಡಮಾನ ಇಟ್ಟ ಚಿನ್ನ ಕಳವಾದ ತಕ್ಷಣವೇ ನಿಮ್ಮ ಸಾಲದ ಖಾತೆ ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ. ಸಾಲ ಮತ್ತು ಅಡಮಾನದ ಚಿನ್ನ ಎರಡೂ ಬೇರೆ ಬೇರೆ ಒಪ್ಪಂದಗಳಾಗಿರುತ್ತವೆ. ವಿಮಾ ಕಂಪನಿ ಅಥವಾ ಬ್ಯಾಂಕ್ ಪರಿಹಾರ ನೀಡಿದಾಗ, ಆ ಮೊತ್ತವು ನಿಮ್ಮ ಬಾಕಿ ಸಾಲದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಬ್ಯಾಂಕಿನಿಂದ ಲಿಖಿತವಾಗಿ ಪಡೆದುಕೊಳ್ಳಬೇಕು.

ಬ್ಯಾಂಕ್ ಸ್ಪಂದಿಸದಿದ್ದರೆ ಮುಂದೇನು?

ಬ್ಯಾಂಕ್ ಅಧಿಕಾರಿಗಳು ಸೂಕ್ತ ಉತ್ತರ ನೀಡದಿದ್ದರೆ ಅಥವಾ ಪರಿಹಾರ ನೀಡಲು ವಿಫಲವಾದರೆ, ಮೊದಲು ಬ್ಯಾಂಕಿನ 'ಗ್ರೀವೆನ್ಸ್ ಸೆಲ್'ಗೆ (ದೂರು ವಿಭಾಗ) ದೂರು ನೀಡಿ. ಅಲ್ಲಿಯೂ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ಎಲ್ಲಾ ದಾಖಲೆಗಳು, ಪ್ಲೆಡ್ಜ್ ರಸೀದಿ ಹಾಗೂ ಎಫ್‌ಐಆರ್ ಪ್ರತಿಯೊಂದಿಗೆ ಆರ್‌ಬಿಐ ಒಂಬುಡ್ಸ್‌ಮನ್ (RBI Ombudsman) ಅವರಿಗೆ ದೂರು ಸಲ್ಲಿಸಿ ನ್ಯಾಯ ಪಡೆಯಬಹುದು.