ಪಿಎಂ ಕೇರ್ಸ್ ಫಂಡ್‌ನ ಇತ್ತೀಚಿನ ಆಡಿಟ್ ವರದಿಯ ಪ್ರಕಾರ, ನಿಧಿಯ ಒಟ್ಟು ಬಾಕಿ ಮೊತ್ತ 8,452 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ಎರಡು ಹಣಕಾಸು ವರ್ಷಗಳಲ್ಲಿ 1,162 ಕೋಟಿ ರೂ. ದೇಣಿಗೆ ಸಂಗ್ರಹವಾಗಿದ್ದರೂ, ಕೇವಲ 16.47 ಕೋಟಿ ರೂ. ಮಾತ್ರ ವೆಚ್ಚ ಮಾಡಿರುವುದು ವರದಿಯಿಂದ ಬಹಿರಂಗವಾಗಿದೆ.
ನವದೆಹಲಿ (ಆ.19): ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರಿಗೆ ನೆರವು ಮತ್ತು ಪರಿಹಾರ ನೀಡುವ 'ಪ್ರಧಾನಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿ'ಯ (PM CARES Fund) ಇತ್ತೀಚಿನ ಆಡಿಟ್ ವರದಿ ಪ್ರಕಟವಾಗಿದ್ದು, 2025ರ ಮಾರ್ಚ್ 31ರ ವೇಳೆಗೆ ನಿಧಿಯ ಒಟ್ಟು ಬಾಕಿ ಮೊತ್ತ 8,452 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಳೆದ ಹಣಕಾಸು ವರ್ಷದ ಅಂತ್ಯದಲ್ಲಿ (2024ರ ಮಾರ್ಚ್ 31) ಈ ಮೊತ್ತವು 7,173 ಕೋಟಿ ರೂಪಾಯಿಯಷ್ಟಿತ್ತು. ಪ್ರಸ್ತುತ ಹೊಸ ಆಡಿಟ್ ವರದಿಯ ಪ್ರಕಾರ ನಿಧಿಯಲ್ಲಿ ಸುಮಾರು 1,279 ಕೋಟಿ ರೂಪಾಯಿಗಳ ಭಾರಿ ಏರಿಕೆ ಕಂಡುಬಂದಿದೆ. ಈ ಪೈಕಿ 7,846.65 ಕೋಟಿ ರೂಪಾಯಿಯನ್ನು ಬ್ಯಾಂಕ್‌ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ (FD) ರೂಪದಲ್ಲಿ ಇಡಲಾಗಿದೆ.
ಕೋವಿಡ್ ಸಂಕಷ್ಟದ ವೇಳೆ ಸ್ಥಾಪನೆಯಾಗಿದ್ದ ಪಿಎಂ ಕೇರ್ಸ್
ಕೋವಿಡ್-19 ಜಾಗತಿಕ ಸಾಂಕ್ರಾಮಿಕ ರೋಗದ ತೀವ್ರ ಸಂಕಷ್ಟದ ಸಮಯದಲ್ಲಿ, 2020ರ ಮಾರ್ಚ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಪಿಎಂ ಕೇರ್ಸ್ ಫಂಡ್' ಅನ್ನು ಒಂದು ಧರ್ಮಾರ್ಥ ಟ್ರಸ್ಟ್ (Charitable Trust) ಆಗಿ ಸ್ಥಾಪಿಸಿದ್ದರು. ಸಾಂಕ್ರಾಮಿಕ ರೋಗಗಳು ಸೇರಿದಂತೆ ಯಾವುದೇ ರೀತಿಯ ತುರ್ತು ಪರಿಸ್ಥಿತಿ ಅಥವಾ ವಿಪತ್ತಿನ ಸಂದರ್ಭಗಳನ್ನು ಎದುರಿಸುವುದು ಮತ್ತು ಅದರಿಂದ ಸಂಕಷ್ಟಕ್ಕೊಳಗಾದ ಸಂತ್ರಸ್ತರಿಗೆ ತಕ್ಷಣದ ಪರಿಹಾರ ಹಾಗೂ ನೆರವು ಒದಗಿಸುವುದು ಈ ನಿಧಿಯ ಮುಖ್ಯ ಉದ್ದೇಶವಾಗಿದೆ. ಈ ನಿಧಿಯು ಸಂಪೂರ್ಣವಾಗಿ ಸಾರ್ವಜನಿಕರ ಹಾಗೂ ವಿವಿಧ ಸಂಸ್ಥೆಗಳ ಸ್ವಯಂಪ್ರೇರಿತ ದೇಣಿಗೆಗಳನ್ನು (Voluntary Contributions) ಮಾತ್ರ ಒಳಗೊಂಡಿದೆ.
ಎರಡು ವರ್ಷಗಳಲ್ಲಿ ಭಾರೀ ದೇಣಿಗೆ, ವೆಚ್ಚ ಕಡಿಮೆ
ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ 'ಪಿಎಂ ಕೇರ್ಸ್' (PM-CARES) ಫಂಡ್, 2023-24 ಮತ್ತು 2024-25ರ ಹಣಕಾಸು ವರ್ಷಗಳಲ್ಲಿ ದೇಶ ಹಾಗೂ ವಿದೇಶಗಳಿಂದ ಬರೋಬ್ಬರಿ 1,162.92 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದೆ. ಆದರೆ, ಈ ಎರಡು ವರ್ಷಗಳ ಅವಧಿಯಲ್ಲಿ ನಿಧಿಯಿಂದ ವೆಚ್ಚ ಮಾಡಿರುವುದು ಕೇವಲ 16.47 ಕೋಟಿ ರೂಪಾಯಿ ಮಾತ್ರ ಎಂಬ ಆಘಾತಕಾರಿ ಸತ್ಯ ಆಡಿಟ್ ವರದಿಗಳಿಂದ ಬಹಿರಂಗವಾಗಿದೆ. ವರದಿಯ ಪ್ರಕಾರ, 2024-25ರ ಸಾಲಿನಲ್ಲಿ 479.97 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದ್ದರೂ, ಕೋವಿಡ್‌ನಿಂದಾಗಿ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳಿಗಾಗಿ ವೆಚ್ಚ ಮಾಡಿದ್ದು ಕೇವಲ 87.85 ಲಕ್ಷ ರೂಪಾಯಿ! ಇನ್ನು 2023-24ರ ಸಾಲಿನಲ್ಲಿ 682.94 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಅದರಲ್ಲಿ ಖರ್ಚು ಮಾಡಿದ್ದು ಕೇವಲ 15.59 ಕೋಟಿ ರೂಪಾಯಿ ಮಾತ್ರ.
2020ರ ಮಾರ್ಚ್‌ನಲ್ಲಿ ಸ್ಥಾಪನೆಯಾದಾಗಿನಿಂದ ಇದುವರೆಗೆ ಪಿಎಂ ಕೇರ್ಸ್ ಫಂಡ್‌ಗೆ ಒಟ್ಟು 14,766.95 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ. ಇದರಲ್ಲಿ 2024-25ರವರೆಗೆ ಒಟ್ಟು 8,133.29 ಕೋಟಿ ರೂಪಾಯಿಯನ್ನು ವೆಚ್ಚ ಮಾಡಲಾಗಿದ್ದು, ಇದರ ಸಿಂಹಪಾಲು ವೆಚ್ಚವು ಕೊರೊನಾ ಸಾಂಕ್ರಾಮಿಕದ ಉತ್ತುಂಗದಲ್ಲಿದ್ದ ಸಮಯದಲ್ಲಿಯೇ ನಡೆದಿದೆ. ಕೋವಿಡ್ ತುರ್ತು ಪರಿಸ್ಥಿತಿಯ ನಡುವೆ, 2020ರ ಮಾರ್ಚ್ 27 ರಂದು ಪ್ರಧಾನಮಂತ್ರಿಯವರನ್ನು ಪದನಿಮಿತ್ತ ಅಧ್ಯಕ್ಷರನ್ನಾಗಿ (Ex-officio Chairman) ಮಾಡಿ 'ಪಿಎಂ ಕೇರ್ಸ್ ಫಂಡ್' ಅನ್ನು ಸ್ಥಾಪಿಸಲಾಗಿತ್ತು.
ಪ್ರಶ್ನೆಗಳ ಸುರಿಮಳೆ ಗೈದ ಅಂಜಲಿ ಭಾರದ್ವಾಜ್
ಈ ಆಡಿಟ್ ವರದಿ ಪ್ರಕಟವಾಗುತ್ತಿದ್ದಂತೆ ಟ್ರಾನ್ಸ್‌ಪೆರೆನ್ಸಿ ಆಕ್ಟಿವಿಸ್ಟ್ ಅಂಜಲಿ ಭಾರದ್ವಾಜ್ ಅವರು 'X' (ಟ್ವಿಟರ್) ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಕಠಿಣ ಪ್ರಶ್ನೆಗಳನ್ನು ಎತ್ತಿದ್ದಾರೆ.
'ಅಂತಿಮವಾಗಿ 2024-25ನೇ ಸಾಲಿನ ಪಿಎಂ ಕೇರ್ಸ್ ಫಂಡ್‌ನ ಆಡಿಟ್ ವರದಿ ಬಹಿರಂಗವಾಗಿದೆ! ಖಾತೆಯಲ್ಲಿ ಲಭ್ಯವಿರುವ 8,452 ಕೋಟಿ ರೂಪಾಯಿಯಲ್ಲಿ ಬಳಕೆಯಾಗಿರುವುದು ಕೇವಲ ಶೇಕಡಾ 0.01 ರಷ್ಟು ಮಾತ್ರ! ಪಿಎಂ ಕೇರ್ಸ್ ಫಂಡ್ ಇಷ್ಟೊಂದು ಬೃಹತ್ ಮೊತ್ತದ ಹಣವನ್ನು ಬಳಸದೆ ಸುಮ್ಮನೆ ಖಾತೆಯಲ್ಲೇ ಏಕೆ ಇಟ್ಟುಕೊಂಡಿದೆ?" ಎಂದು ಅವರು ಪ್ರಶ್ನಿಸಿದ್ದಾರೆ.
ಮುಂದುವರಿದು, "ಅನುಷ್ಠಾನ ಸಂಸ್ಥೆಗಳಿಂದ (Implementing Agencies) 324 ಕೋಟಿ ರೂಪಾಯಿ ಹಣ ವಾಪಸ್ (ರಿಫಂಡ್) ಬಂದಿದೆ. ಆದರೆ ಈ ಪಾವತಿಗಳು ಯಾವುದಕ್ಕಾಗಿ ಮಾಡಲಾಗಿತ್ತು? ಮತ್ತು ಇವುಗಳನ್ನು ಏಕೆ ವಾಪಸ್ ನೀಡಲಾಯಿತು ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಯಾವ ಸಂಸ್ಥೆ ರಿಫಂಡ್ ಮಾಡಿದೆ? ಕಳಪೆ ಉಪಕರಣಗಳ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಈ ರಿಫಂಡ್ ಮಾಡಲಾಗಿದೆಯೇ? ಆಡಿಟ್ ವರದಿಯ ಜೊತೆಗಿರಬೇಕಾದ ಪೂರಕ ಟಿಪ್ಪಣಿಗಳನ್ನು (Accompanying notes) ವೆಬ್‌ಸೈಟ್‌ನಲ್ಲಿ ಏಕೆ ಅಪ್‌ಲೋಡ್ ಮಾಡಲಾಗಿಲ್ಲ?" ಎಂದು ಕೇಳಿದ್ದಾರೆ.
ವಿದೇಶಿ ಮೂಲಗಳಿಂದಲೂ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಪಡೆಯುತ್ತಿರುವ ಮತ್ತು ದುರಂತಗಳ ಸಮಯದಲ್ಲಿ ನಾಗರಿಕರಿಗೆ ನೆರವಾಗಲು ಸ್ಥಾಪಿಸಲಾದ ನಿಧಿಯು "ಸಂಪೂರ್ಣ ರಹಸ್ಯಮಯವಾಗಿದೆ" ಎಂದಿರುವ ಅವರು, "ಮಾಹಿತಿ ಹಕ್ಕು ಕಾಯಿದೆ (RTI) ವ್ಯಾಪ್ತಿಗೆ ಬರಲು ನಿರಾಕರಿಸುವ ಮೂಲಕ ಪಿಎಂ ಕೇರ್ಸ್ ಫಂಡ್ ಸಾರ್ವಜನಿಕ ಪರಿಶೀಲನೆಯಿಂದ ತಪ್ಪಿಸಿಕೊಳ್ಳುತ್ತಿದೆ" ಎಂದು ಕಿಡಿಕಾರಿದ್ದಾರೆ.
ಕಳೆದ ವರ್ಷಗಳ ದೇಣಿಗೆ ಹಾಗೂ ವೆಚ್ಚದ ಹಾದಿ
ಸಾಂಕ್ರಾಮಿಕ ರೋಗದ ಅವಧಿ ಮುಗಿದ ನಂತರ ನಿಧಿಗೆ ಹರಿದುಬರುವ ದೇಣಿಗೆ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. 2020-21ರಲ್ಲಿ ನಿಧಿಗೆ ಅತ್ಯಂತ ಹೆಚ್ಚಿನ ಅಂದರೆ 7,678.68 ಕೋಟಿ ರೂ. ದೇಣಿಗೆ ಬಂದಿತ್ತು. ಇದರಲ್ಲಿ 3,976.17 ಕೋಟಿ ರೂ. ವೆಚ್ಚ ಮಾಡಲಾಗಿತ್ತು. 2021-22ರಲ್ಲಿ 1,936.88 ಕೋಟಿ ರೂ. ದೇಣಿಗೆ ಬಂದಿದ್ದು, 3,716.29 ಕೋಟಿ ರೂ. ವೆಚ್ಚವಾಗಿತ್ತು. 2022-23ರಲ್ಲಿ 912.21 ಕೋಟಿ ರೂ. ದೇಣಿಗೆ ಹರಿದುಬಂದಿದ್ದು, 439.38 ಕೋಟಿ ರೂ. ವೆಚ್ಚವಾಗಿತ್ತು. (ಇದರಲ್ಲಿ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ 346 ಕೋಟಿ ರೂ. ಹಾಗೂ 1 ಲಕ್ಷ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳ ಖರೀದಿಗೆ 91.87 ಕೋಟಿ ರೂ. ಬಳಸಲಾಗಿತ್ತು).


