LIC ಈಗ ಐಸಿಐಸಿಐ ಬ್ಯಾಂಕ್‌ನಲ್ಲಿ ತನ್ನ ಪಾಲನ್ನು 9.99% ವರೆಗೆ ಹೆಚ್ಚಿಸಲು ಆರ್‌ಬಿಐ ಅನುಮತಿ ನೀಡಿದೆ. ಪ್ರಸ್ತುತ 4.35% ಪಾಲು ಹೊಂದಿರುವ ಎಲ್‌ಐಸಿ, ಮುಂದಿನ ಒಂದು ವರ್ಷದೊಳಗೆ ಈ ಹೆಚ್ಚುವರಿ ಷೇರು ಖರೀದಿಸಬೇಕಿದೆ. ಈ ಬೆಳವಣಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಗಮನ ಸೆಳೆದಿದೆ.

ಮುಂಬೈ: ದೇಶದ ಅತಿದೊಡ್ಡ ವಿಮಾ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮ (LIC) ಇದೀಗ ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ICICI Bankನಲ್ಲಿ ತನ್ನ ಪಾಲನ್ನು ಹೆಚ್ಚಿಸಲು ಮುಂದಾಗಿದೆ. LIC ಗೆ ICICI Bankನಲ್ಲಿ ಒಟ್ಟು 9.99% ವರೆಗೆ ಪಾಲು ಹೊಂದಲು RBI ಅನುಮತಿ ನೀಡಿದೆ. ನಾಳೆ ಅಂದರೆ ಸೋಮವಾರದ ವಹಿವಾಟಿನಲ್ಲಿ ಹೂಡಿಕೆದಾರರು ಎರಡು ಪ್ರಮುಖ ಷೇರುಗಳನ್ನು ಸೂಕ್ಷ್ಮವಾಗಿ ಗಮನಿಸಲಿದ್ದಾರೆ.

RBIಯಿಂದ ಅನುಮೋದನೆ

ICICI Bank ಶನಿವಾರ ಷೇರುಪೇಟೆಗೆ ನೀಡಿದ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 4, 2026ರಂದು RBI ಈ ಅನುಮೋದನೆ ನೀಡಿದೆ. ಹೀಗಾಗಿ ಸೆಪ್ಟೆಂಬರ್ 7ರ ಸೋಮವಾರದ ಷೇರು ವಹಿವಾಟಿನಲ್ಲಿ LIC ಮತ್ತು ICICI Bank ಷೇರುಗಳು ಹೂಡಿಕೆದಾರರ ಗಮನ ಸೆಳೆಯುವ ಸಾಧ್ಯತೆ ಇದೆ.

ಐಸಿಐಸಿಐ ಬ್ಯಾಂಕಿನಲ್ಲಿ ಎಲ್ಐಸಿ ಪಾಲು ಎಷ್ಟು?

2026ರ ಏಪ್ರಿಲ್–ಜೂನ್ ತ್ರೈಮಾಸಿಕದ ಮಾಹಿತಿಯ ಪ್ರಕಾರ, LIC ಬಳಿ ICICI Bankನ 31.18 ಕೋಟಿ ಷೇರುಗಳಿದ್ದು, ಇದು ಬ್ಯಾಂಕಿನ ಶೇ.4.35ರಷ್ಟು ಪಾಲು ಆಗಿದೆ. ಹೊಸ RBI ಅನುಮತಿಯ ಮೂಲಕ LIC ತನ್ನ ಪಾಲನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಅವಕಾಶ ಸಿಕ್ಕಿದೆ. ಗರಿಷ್ಠ ಶೇ.9.99ರಷ್ಟು ಪಾಲು ಹೊಂದಲು LICಗೆ ಇನ್ನೂ ಸುಮಾರು 5.64% ಪಾಲನ್ನು ಹೆಚ್ಚಿಸಿಕೊಳ್ಳುವ ಅವಕಾಶ ಇದೆ.

ಇನ್ನೊಂದು ವಿಮಾ ಕಂಪನಿಗೂ ಪಾಲು

ಜೂನ್ 2026ರ ವೇಳೆಗೆ ICICI Bankನಲ್ಲಿ ವಿಮಾ ಕಂಪನಿಗಳ ಒಟ್ಟು ಪಾಲು ಸುಮಾರು 8.24% ಇತ್ತು. ಈ ಪೈಕಿ SBI Life Insurance ಕೂಡ ಪ್ರಮುಖ ಹೂಡಿಕೆದಾರನಾಗಿದ್ದು, ಬ್ಯಾಂಕಿನಲ್ಲಿ ಸುಮಾರು 1.43% ಪಾಲು ಹೊಂದಿದೆ.

LICಗೆ RBI ವಿಧಿಸಿರುವ ಷರತ್ತು ಏನು?

LIC ಮತ್ತು ICICI ನಡುವಿನ ಈ ಪ್ರಮುಖ ಕಾರ್ಪೊರೇಟ್ ಒಪ್ಪಂದವು ಕೆಲವು ಷರತ್ತುಗಳು ಮತ್ತು ಅನುಮೋದನೆಗಳಿಗೆ ಒಳಪಟ್ಟಿರುತ್ತದೆ ಎಂಬುದನ್ನು ಗಮನಿಸಬೇಕು. ಮೊದಲ ಷರತ್ತು ಏನೆಂದರೆ, LIC ಸೆಪ್ಟೆಂಬರ್ 4, 2027 ರ ಮೊದಲು, ಅಂದರೆ ಮುಂದಿನ ಒಂದು ವರ್ಷದೊಳಗೆ ಹೆಚ್ಚುವರಿ ಷೇರುಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಹಾಗೆ ಮಾಡಲು ವಿಫಲವಾದರೆ RBI ಅನುಮೋದನೆಯನ್ನು ರದ್ದುಗೊಳಿಸಲಾಗುತ್ತದೆ.

ತಕ್ಷಣವೇ 9.99% ಪಾಲು ಖರೀದಿ ಮಾಡಲ್ಲ

RBI ಅನುಮತಿ ನೀಡಿರುವುದರಿಂದ LIC ತಕ್ಷಣವೇ ICICI Bankನ ಶೇ.9.99ರಷ್ಟು ಪಾಲನ್ನು ಖರೀದಿಸುತ್ತದೆ ಎಂದರ್ಥವಲ್ಲ. ಮಾರುಕಟ್ಟೆ ಪರಿಸ್ಥಿತಿ ಮತ್ತು ಷೇರು ಬೆಲೆಯನ್ನು ಗಮನದಲ್ಲಿಟ್ಟುಕೊಂಡು LIC ಹಂತ ಹಂತವಾಗಿ ಷೇರುಗಳನ್ನು ಖರೀದಿಸಬಹುದು.