ನವದೆಹಲಿ(ಅ.31): ಇರಾನ್ ಮೇಲಿನ ಅಮೆರಿಕದ ನಿರ್ಬಂಧಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ನವೆಂಬರ್ 4ರಂದು ಇರಾನ್ ಮೇಲಿನ ಅಮೆರಿಕದ ಪೂರ್ಣ ಪ್ರಮಾಣದ ನಿರ್ಬಂಧ ಜಾರಿಗೆ ಬರಲಿದೆ.

ನವೆಂಬರ್ 4ರ ಬಳಿಕ ವಿಶ್ವದ ಯಾವುದೇ ರಾಷ್ಟ್ರ ಇರಾನ್‌ನೊಂದಿಗೆ ಯಾವುದೇ ತರಹದ ವಾಣಿಜ್ಯ ಸಂಬಂಧ ಹೊಂದಬಾರದು ಎಂಬುದು ಅಮೆರಿಕದ ಆಶಯ. ಅಮೆರಿಕದ ಈ ಬಯಕೆ ಇರಾನ್ ತೈಲದ ಮೇಲೆ ಅವಲಂಬಿತವಾಗಿರುವ ಚೀನಾ ಮತ್ತು ಭಾರತದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು.

ವಿಶ್ವದ ಮೂರನೇ ಅತೀ ಹೆಚ್ಚು ತೈಲ ರಫ್ತು ದೇಶವಾದ ಇರಾನ್, ಚೀನಾ ಮತ್ತು ಭಾರತ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳಿಗೆ ಕಚ್ಚಾ ತೈಲ ರಫ್ತು ಮಾಡುತ್ತಿದೆ. ಅಮೆರಿಕದ ನಿರ್ಬಂಧದ ಬಳಿಕ ಇರಾನ್ ಜೊತೆಗಿನ ಭಾರತದ ತೈಲ ಸಂಬಂಧದ ಮೇಲೆ ಕಾರ್ಮೋಡ ಕವಿಯಲಿದೆ ಎಂಬ ಆತಂಕ ಎದುರಾಗಿದೆ.

ಬಗ್ಗದ ಭಾರತ:

ಆದರೆ ಅಮೆರಿಕದ ನಿರ್ಬಂಧದ ಹೊರತಾಗಿಯೂ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದಾಗಿ ಭಾರತ ಈಗಾಗಲೇ ಸ್ಪಷ್ಟಪಡಿಸಿದೆ. ಇದು ಅಮೆರಿಕ ಕಣ್ಣು ಕೆಂಪಾಗಲು ಕಾರಣವೂ ಆಗಿದೆ. ಏನೆ ಆದರೂ ಈ ಮೊದಲಿನ ಪ್ರಮಾಣದಲ್ಲಿ ಭಾರತ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಇದೇ ಕಾರಣಕ್ಕೆ ಸೌದಿ ಅರೇಬಿಯಾದಿಂದ ತೈಲ ಆಮದು ಮಾಡಿಕೊಳ್ಳಲು ಭಾರತ ಮುಂದಾಗಿದ್ದು, ಈಗಾಗಲೇ ಸೌದಿ ಜೊತೆ ಮಾತುಕತೆಯನ್ನೂ ನಡೆಸಿದೆ. ಸೌದಿ ಕೂಡ ತೈಲ ರಫ್ತಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ ಎನ್ನಲಾಗಿದೆ.

ಭಾರತದ ಮಾತು ಕೇಳತ್ತಾ ಅಮೆರಿಕ?:

ಈ ಮಧ್ಯೆ ತನ್ನ ತೈಲ ಅವಶ್ಯಕತೆ ಮತ್ತು ಇರಾನ್‌ನಿಂದ ತೈಲ ಆಮದಿನ ಅನಿವಾರ್ಯತೆ ಕುರಿತು ಭಾರತ ಅಮೆರಿಕಕ್ಕೆ ಮನವರಿಕೆ ಮಾಡಿ ಕೊಡುವ ಪ್ರಯತ್ನ ನಡೆಸಿದೆ. ಅಲ್ಲದೇ ಅಮೆರಿಕದ ನಿರ್ಬಂಧದಲ್ಲಿ ಭಾರತಕ್ಕೆ ಇರಾನ್ ತೈಲ ರಫ್ತು ಮಾಡುವುದಕ್ಕೆ ಅಭ್ಯಂತರವಿಲ್ಲದಂತೆ ನೋಡಿಕೊಳ್ಳಲು ಭಾರತ ಸತತ ಪ್ರಯತ್ನ ನಡೆಸುತ್ತಲೇ ಇದೆ.

ನಿಂತಿಲ್ಲ ತೈಲ ಆಮದು:

ಆದರೂ ನವೆಂಬರ್‌ನಲ್ಲಿ ಇರಾನ್ ನಿಂದ ಬರೋಬ್ಬರಿ 1.25 ಮಿಲಿಯನ್ ಟನ್ ಕಚ್ಚಾ ತೈಲ ಭಾರತಕ್ಕೆ ಆಮದಾಗುವುದು ಖಚಿತವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತ ಇರಾನ್‌ನಿಂದ 22 ಮಿಲಿಯನ್ ಟನ್ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ. ಇದು ಇರಾನ್ ರಫ್ತು ಮಾಡುವ ಒಟ್ಟು ಕಚ್ಚಾ ತೈಲದ ಶೇ.10 ರಷ್ಟಾಗುತ್ತದೆ.

ಏನೆ ಆದರೂ ಭಾರತ ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ ಎಂಬುದಂತೂ ಸ್ಪಷ್ಟ. ಆದರೆ ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಭಾರತ ಇರಾನ್ ನಡುವಣ ತೈಲ ಸಂಬಂಧದ ಮೇಲೆ ಪರಿಣಾಮ ಬೀರುವುದೂ ಕೂಡ ಖಚಿತ ಎನ್ನುತ್ತಾರೆ ತಜ್ಞರು.

ತೈಲದರದ ಗತಿ ಏನು?:

ಇನ್ನು ಒಂದು ವೇಳೆ ಇರಾನ್‌ನಿಂದ ಕಚ್ಚಾ ತೈಲ ಆಮದು ಕಡಿಮೆಯಾದರೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಬಹುದು ಎನ್ನಲಾಗಿದೆ. ಕಾರಣ ಕೇಂದ್ರ ಸರ್ಕಾರ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ತೈಲದರ ಇಳಿಕೆ ಮಾಡುತ್ತಿದ್ದು, ಕಚ್ಚಾ ತೈಲ ಆಮದು ಪ್ರಮಾಣ ಕಡಿಮೆಯಾದರೆ ಈ ಇಳಿಕೆಯ ಪ್ರಹಸನಕ್ಕೆ ಹೊಡೆತ ಬೀಳಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಆದರೆ ಭಾರತ ಅಮೆರಿಕದ ಒತ್ತಡಕ್ಕೆ ಮಣಿಯದೇ ಮೊದಲಿನಂತೆ ಇರಾನ್‌ನಿಂದ ತೈಲ ಆಮದು ಮಾಡಿಕೊಂಡರೆ ಅಥವಾ ಸೌದಿ ಅರೇಬಿಯಾದ ಸಹಾಯ ಪಡೆದರೆ ಈ ಸಮಸ್ಯೆಯೂ ಪರಿಹಾರ ಕಾಣಲಿದೆ ಎಂಬ ಆಶಯ ಕೂಡ ಮನೆ ಮಾಡಿದೆ.

ಇನ್ಮೇಲೆ ನಮಗೆ ಇರಾನ್‌ನಿಂದ ಸ್ವಲ್ಪ ತೈಲವಷ್ಟೇ ಬರೋದು!

ಇರಾನ್ ಬೇಡ, ನಾವಿದ್ದೀವಿ ‘ಫ್ರೆಂಡ್’ ಭಾರತದ ಜೊತೆ: ಯುಎಸ್!

ಅಮೆರಿಕ ಬೇಡ ಅಂತಿದೆ: ಕೇಳದ ಭಾರತ ಇರಾನ್‌ಗೇ ಉಘೇ ಎಂದಿದೆ!

‘ಟ್ರಂಪ್ ಏನ್ಮಾಡ್ತಾರೋ ನೋಡೇ ಬಿಡ್ತಿವಿ: ಇರಾನ್‌ನಿಂದ ಪೆಟ್ರೋಲ್ ತರ್ತಿವಿ’!

ಇರಾನ್ ಕೊಡಲಾರದ್ದು ಸೌದಿ ಕೊಡತ್ತೆ: ನೀವು ಬಿಟ್ಬಿಡಿ ಚಿಂತೆ!

ಇರಾನ್ ಕೈ ಬಿಡದಿದ್ದರೆ ‘ನೋಡ್ಕೊತೀವಿ’: ಭಾರತಕ್ಕೆ ಟ್ರಂಪ್ ಬೆದರಿಕೆ!

ದ್ವೇಷ ಶುರು: ಕರೆನ್ಸಿ ಪಟ್ಟಿಯಿಂದ ಭಾರತವನ್ನು ಹೊರಗಟ್ಟಲಿದೆ ಅಮೆರಿಕ?

ಭಾರತ-ಅಮೆರಿಕ ತೈಲ ಮಾತುಕತೆ: ಟ್ರಂಪ್ ಕೇಳ್ತಾರಾ ನಮ್ಮ ವ್ಯಥೆ?