ದ್ವೇಷ ಶುರು: ಕರೆನ್ಸಿ ಪಟ್ಟಿಯಿಂದ ಭಾರತವನ್ನು ಹೊರಗಟ್ಟಲಿದೆ ಅಮೆರಿಕ?
ಮಾತು ಕೇಳದ ಭಾರತಕ್ಕೆ ಅಮೆರಿಕದ ನೀಡಲಿದೆ ಶಾಕ್?! ಕರೆನ್ಸಿ ಮೇಲ್ವಿಚಾರಣೆ ಪಟ್ಟಿಯಿಂದ ಭಾರತವನ್ನು ಹೊರಗಿಡಲಿದೆ ಅಮೆರಿಕ?! ಇರಾನ್ ಮೇಲಿನ ನಿರ್ಬಂಧ ಒಪ್ಪಲು ತಯಾರಿಲ್ಲದ ಭಾರತಕ್ಕೆ ಬರೆ?!ಇರಾನ್ ಜೊತೆ ವಾಣಿಜ್ಯ ಒಪ್ಪಂದ ಮಾಡದಿರಲು ಭಾರತದ ಮೇಲೆ ಒತ್ತಡ
ವಾಷಿಂಗ್ಟನ್(ಅ.18): ಇದೇ ನವೆಂಬರ್ 4ರಿಂದ ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಸಂಪೂರ್ಣವಾಗಿ ಜಾರಿಗೆ ಬರಲಿದೆ. ಈ ಮಧ್ಯೆ ನಿರ್ಬಂಧದ ಹೊರತಾಗಿಯೂ ಇರಾನ್‌ನಿಂದ ತೈಲ ಆಮದನ್ನು ಮುಂದುವರೆಸುವುದಾಗಿ ಭಾರತ ಹೇಳಿದೆ.
ಭಾರತದ ಈ ನಿರ್ಧಾರ ಅಮೆರಿಕವನ್ನು ಕೆರಳಿಸಿದ್ದು, ಇರಾನ್ ಜೊತೆ ಯಾವುದೇ ವಾಣಿಜ್ಯ ಒಪ್ಪಂದ ಮಾಡಿಕೊಳ್ಳದಂತೆ ಭಾರತದ ಮೇಲೆ ನಿರಂತರ ಒತ್ತಡ ಹೇರುತ್ತಲೇ ಇದೆ. ಇದಕ್ಕಾಗಿ ತರಹೇವಾರಿ ತಂತ್ರಗಳನ್ನು ಹೆಣೆಯುತ್ತಿರುವ ಅಮೆರಿಕ, ಇದೀಗ ಕರೆನ್ಸಿ ಮೇಲ್ವಿಚಾರಣೆ ಪಟ್ಟಿಯಿಂದ ಭಾರತವನ್ನು ಹೊರಗಿಡುವ ಸಾಧ್ಯತೆ ದಟ್ಟವಾಗಿದೆ.
ಹೌದು, ಭಾರತದ ಇತ್ತೀಚಿನ ಕೆಲವು ನಿರ್ಣಯಗಳು ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಅಮೆರಿಕ ಎಚ್ಚರಿಸಿದೆ. ಇದೇ ಕಾರಣಕ್ಕೆ ವಾಣಿಜ್ಯ ಪಾಲುದಾರ ಪಟ್ಟಿಯಿಂದ ಭಾರತವನ್ನು ಹೊರಗಿಡುವ ಚಿಂತನೆ ನಡೆದಿದೆ.
ಕಳೆದ ಏಪ್ರಿಲ್ ನಲ್ಲಷ್ಟೇ ಅಮೆರಿಕದ ಕರೆನ್ಸಿ ಮೇಲ್ವಿಚಾರಣೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಭಾರತ, ಇದೀಗ ಈ ಪಟ್ಟಿಯಿಂದ ಹೊರ ಬೀಳುವ ಸಾಧ್ಯತೆ ಹೆಚ್ಚು. ಚೀನಾ, ಜರ್ಮನಿ, ಜಪಾನ್ ದ.ಕೋರಿಯಾ ಮತ್ತು ಸ್ವಿಡ್ಜರಲ್ಯಾಂಡ್ ನಂತರ ಅಮೆರಿಕದ ಕರೆನ್ಸಿ ಮೇಲ್ವಿಚಾರಣೆ ಪಟ್ಟಿಯಲ್ಲಿ ಸ್ಥಾನ ಪಡೆದ ದೇಶವಾಗಿ ಭಾರತ ಹೊರಹೊಮ್ಮಿತ್ತು.
ಭಾರತ ಮತ್ತು ಅಮೆರಿಕದ ನಡುವೆ ಪ್ರತಿವರ್ಷ ಒಟ್ಟು ೨೩ ಬಿಲಿಯನ್ ಡಾಲರ್ ಮೊತ್ತದ ವಾಣಿಜ್ಯ ವಹಿವಾಟು ನಡೆಯುತ್ತದೆ. ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿದಿದ್ದು, ಅಮೆರಿಕದ ಈ ಹೊಸ ನಿರ್ಣಯದಿಂದ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.