ಇರಾನ್ ಕೈ ಬಿಡದಿದ್ದರೆ ‘ನೋಡ್ಕೊತೀವಿ’: ಭಾರತಕ್ಕೆ ಟ್ರಂಪ್ ಬೆದರಿಕೆ!
‘ಇರಾನ್ ಜೊತೆ ತೈಲ ಒಪ್ಪಂದ ನಿಲ್ಲಿಸಿ ಇಲ್ಲ ಪರಿಣಾಮ ಎದುರಿಸಿ’! ಭಾರತವೂ ಸೇರಿದಂತೆ ವಿಶ್ವಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬೆದರಿಕೆ! ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಹಗುರವಾಗಿ ಪರಿಗಣಿಸಬೇಡಿ! ಇರಾನ್ ನಿಂದ ತೈಲ ಆಮದನ್ನು ನಿಲ್ಲಿಸುವಂತೆ ಟ್ರಂಪ್ ಆದೇಶ
ವಾಷಿಂಗ್ಟನ್(ಅ.12): ನವೆಂಬರ್ 4 ರ ಬಳಿಕ ಇರಾನ್ ಜೊತೆ ವಾಣಿಜ್ಯ ಒಪ್ಪಂದ ಮುಂದುವರೆಸುವ ರಾಷ್ಟ್ರಗಳನ್ನು ‘ನೋಡಿಕೊಳ್ಳಲಾಗುವುದು’ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬೆದರಿಕೆಯೊಡ್ಡಿದ್ದಾರೆ.
ಇರಾನ್ ಮೇಲಿನ ಅಮೆರಿಕದ ನಿರ್ಬಂಧದ ಹೊರತಾಗಿಯೂ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲಾಗುವುದು ಎಂದು ಭಾರತ ಇತ್ತೀಚಿಗಷ್ಟೇ ಘೋಷಿಸಿತ್ತು. ಹೀಗಾಗಿ ಭಾರತವನ್ನೇ ಗುರಿಯಾಗಿಸಿಕೊಂಡು ಟ್ರಂಪ್ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ಇರಾನ್ ಜೊತೆ ಸಂಬಂಧ ಕಡಿದುಕೊಳ್ಳದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಟ್ರಂಪ್ ನೇರ ಬೆದರಿಕೆಯೊಡ್ಡಿದ್ದಾರೆ.
ನವೆಂಬರ್ 4 ರ ಬಳಿಕ ಇರಾನ್ ಮೇಲೆ ಅಮೆರಿಕದ ಸಂಪೂರ್ಣ ನಿರ್ಬಂಧ ಜಾರಿಗೆ ಬರಲಿದ್ದು, ಇದಾದ ಬಳಿಕ ಇರಾನ್ ಜೊತೆ ತೈಲ ಒಪ್ಪಂದ ಕಡಿದುಕೊಳ್ಳುವ ರಾಷ್ಟ್ರಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಮೆರಿಕದ ಜವಾಬ್ದಾರಿ ಎಂದು ಟ್ರಂಪ್ ಹೇಳಿದ್ದಾರೆ.
ಆದರೆ ಅಮೆರಿಕದ ಎಚ್ಚರಿಕೆ ನಡುವೆಯೂ ಇರಾನ್ ಜೊತೆ ವಾಣಿಜ್ಯ ಸಂಬಂಧ ಮುಂದುವರೆಸುವ ರಾಷ್ಟ್ರಗಳಿಗೆ ಕಠಿಣ ದಿನಗಳು ಎದುರಾಗಲಿವೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಇದು ಭಾರತಕ್ಕೆ ನೀಡಿದ ಎಚ್ಚರಿಕೆ ಸಂದೇಶ ಎಂದು ಅಂದಾಜಿಸಲಾಗಿದ್ದು, ಭಾರತ ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂದು ಕಾದು ನೋಡಬೇಕಿದೆ.