ಅಮೆರಿಕ ಬೇಡ ಅಂತಿದೆ: ಕೇಳದ ಭಾರತ ಇರಾನ್‌ಗೇ ಉಘೇ ಎಂದಿದೆ!
ತೈಲಕ್ಕಾಗಿ ಇರಾನ್ ಅನ್ನೇ ಮೆಚ್ಚಿಕೊಂಡ ಭಾರತ! ಅಮೆರಿಕದ ನಿರ್ಬಂಧಕ್ಕೂ ಕ್ಯಾರೆ ಎನ್ನದ ಭಾರತ! ಇರಾನ್ ಮೇಲೆ ಅಮೆರಿಕದ ನಿರ್ಬಂಧ ಶೀಘ್ರ ಜಾರಿ! ಇರಾನ್‌ನಿಂದಲೇ ತೈಲ ಆಮದು ಮಾಡಿಕೊಳ್ಳುವುದಾಗಿ ಹೇಳಿದ ಭಾರತ! ಈಗಾಗಲೇ ನವೆಂಬರ್ ತಿಂಗಳಿನ ಒಪ್ಪಂದಕ್ಕೆ ಭಾರತ ಸಹಿ
ನವದೆಹಲಿ(ಅ.6): ‘ವಿಶ್ವವನ್ನು ಸಂಭಾಳಿಸುವ ಜವಾಬ್ದಾರಿಯನ್ನು ಅಮೆರಿಕ ಒಂದೇ ಹೊತ್ತುಕೊಂಡಿಲ್ಲ, ಇನ್ನು ಮುಂದೆ ಅಮೆರಿಕ ತನ್ನ ಸ್ವಹಿತಾಸಕ್ತಿ ಕುರಿತಷ್ಟೇ ಚಿಂತೆ ಮಾಡಲಿದೆ..’ ಇದು ಅಮೆರಿಕ ಅಧ್ಯಕ್ಷ ಪಟ್ಟ ಗಳಿಸಿದ ನಂತರ ಡೋನಾಲ್ಡ್ ಟ್ರಂಪ್ ಆಡಿದ್ದ ನುಡಿಗಳು. ಟ್ರಂಪ್ ಅವರ ಈ ಮಾತನ್ನು ಒಪ್ಪಿ ಅಮೆರಿಕವನ್ನು ಅದಕಷ್ಟೇ ಸಿಮೀತಗೊಳಿಸಿ, ವಿಶ್ವಕ್ಕೆ ಭಾರತದ ನಾಯಕತ್ವ ಪರಿಚಯಿಸಿದವರು ಪ್ರಧಾನಿ ನರೇಂದ್ರ ಮೋದಿ.
ಇದೇ ಕಾರಣಕ್ಕೆ ಅಮೆರಿಕ ಹೇಳುವ ಎಲ್ಲಾ ಮಾತುಗಳನ್ನು ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಇದೀಗ ಕೇಳುತ್ತಿಲ್ಲ. ಒಂದು ವೇಳೆ ಅಮೆರಿಕ ನಿರ್ಬಂಧದ ಬೆದರಿಕೆಯೊಡ್ಡಿದರೆ ಅದಕ್ಕೂ ಭಾರತ ತಲೆ ಕೆಡಿಸಿಕೊಳ್ಳುವುದಿಲ್ಲ.
ಇದಕ್ಕೆ ಉದಾಹರಣೆ ಎಂಬಂತೆ ಇರಾನ್ ಮೇಲೆ ಅಮೆರಿಕ ವಿಧಿಸಿರುವ ಕಠಿಣ ನಿರ್ಬಂಧಗಳು ನವೆಂಬರ್ 4ರಿಂದ ಜಾರಿಗೆ ಬರಲಿದ್ದು, ನಿರ್ಬಂಧಗಳ ಹೊರತಾಗಿಯೂ ಭಾರತ, ಇರಾನ್ ನಿಂದ ತೈಲ ಖರೀದಿ ಮುಂದುವರೆಸಲಿದೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐಒಸಿ) ಮತ್ತು ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್(ಎಂಆರ್ ಪಿಎಲ್) ಈಗಗಾಲೇ ನವೆಂಬರ್ ತಿಂಗಳಲ್ಲಿ ಇರಾನ್ ನಿಂದ 1.25 ಮಿಲಿಯನ್ ಟನ್ ತೈಲ ಖರೀದಿಗೆ ಒಪ್ಪಂದ ಮಾಡಿಕೊಂಡಿವೆ.
ಐಒಸಿ ಎಂದಿನಂತೆ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲಿದೆ. 2018-19ರ ಆರ್ಥಿಕ ವರ್ಷದಲ್ಲಿ ಒಟ್ಟು 9 ಮಿಲಿಯನ್ ಟನ್ ತೈಲ ಆಮದು ಮಾಡಿಕೊಳ್ಳುವ ಯೋಜನೆ ಇದೆ ಎಂದು ಐಒಸಿ ಮೂಲಗಳು ತಿಳಿಸಿವೆ.
ಅಮೆರಿಕ ಇರಾನ್ ಜತೆ ತೈಲ ವ್ಯಾಪಾರ ಒಪ್ಪಂದಕ್ಕೆ ನಿಷೇಧ ಹೇರಿದ್ದರೂ, ಭಾರತ ಮಾತ್ರ ಇರಾನ್ ಜತೆಗೆ ವಾಣಿಜ್ಯ ಮತ್ತು ಹಣಕಾಸು ಸಹಕಾರ, ವ್ಯಾಪಾರ ಮುಂದುವರಿಸಲು ನಿರ್ಧರಿಸಲಿದೆ. ಇತ್ತಿಚೀಗಷ್ಟೇ ತೈಲಕ್ಕಾಗಿ ಇರಾನ್ ಅನ್ನು ಅವಲಂಬಿಸಿರುವ ಭಾರತಕ್ಕೆ ಪರ್ಯಾಯ ಪೂರೈಕೆ ಮಾರ್ಗಗಳನ್ನು ಒದಗಿಸುವುದಾಗಿ ಟ್ರಂಪ್ ಆಡಳಿತ ಭರವಸೆ ನೀಡಿತ್ತು.
2015ರಲ್ಲಿ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದ್ದ ಅಮೆರಿಕ, ಅದು ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿ ಈ ವರ್ಷದ ಆರಂಭದಲ್ಲಿ ಮತ್ತೆ ನಿರ್ಬಂಧ ವಿಧಿಸಿತ್ತು.
ನಿರ್ಬಂಧದ ಮೊದಲ ಹಂತ ಈಗಾಗಲೇ ಜಾರಿಯಲ್ಲಿದ್ದು, ಅದು ನವೆಂಬರ್ 4ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ. ಈ ಅವಧಿಯಲ್ಲಿ ಭಾರತ ಸೇರಿದಂತೆ ಎಲ್ಲ ದೇಶಗಳೂ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣ ಸ್ಥಗಿತಗೊಳಿಸಲಿವೆ ಎಂದು ಅಮೆರಿಕ ನಿರೀಕ್ಷಿಸಿದೆ.
ಆದರೆ ಭಾರತ ಮಾತ್ರ ಇರಾನ್ ತೈಲ ಆಮದಿಗೆ ಮುಂದುವರೆಸಿದೆ. ಇರಾನ್ ಜೊತೆ ಯಾವುದೇ ರೀತಿಯ ವ್ಯವಹಾರ ಮುಂದುವರಿಸುವ ಯಾವುದೇ ದೇಶವು ತನ್ನ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಯೊಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುವುದು ಎಂದು ಅಮೆರಿಕ ಸ್ಪಷ್ಟಪಡಿಸಿದೆ.