ಇರಾನ್ ಕೊಡಲಾರದ್ದು ಸೌದಿ ಕೊಡತ್ತೆ: ನೀವು ಬಿಟ್ಬಿಡಿ ಚಿಂತೆ!
ಇರಾನ್ ಮೇಲಿನ ಅಮೆರಿಕ ನಿರ್ಬಂಧ ಸನಿಹ! ತೈಲ ಕೊರತೆ ನೀಗಿಸಲು ಭಾರತದ ಜಬರದಸ್ತ್ ಪ್ಲ್ಯಾನ್! ಸೌದಿ ಅರೆಬಿಯಾದಿಂದ ಅಧಿಕ ತೈಲ ಆಮದಿಗೆ ಭಾರತದ ಯೋಜನೆ! 4 ಮಿಲಿಯನ್ ಬ್ಯಾರೆಲ್ ಅಧಿಕ ತೈಲ ಆಮದಿಗೆ ಸೌದಿ ಜೊತೆ ಮಾತುಕತೆ! ವಿಶ್ವದ ಅಗ್ರಗಣ್ಯ ತೈಲ ಆಮದು ರಾಷ್ಟ್ರ ಭಾರತ! ವಿಶ್ವದ ಅಗ್ರಗಣ್ಯ ತೈಲ ರಫ್ತು ರಾಷ್ಟ್ರ ಸೌದಿ ಅರೆಬಿಯಾ
ನವದೆಹಲಿ(ಅ.10): ಇನ್ನೇನು ನವೆಂಬರ್ ನಲ್ಲಿ ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಜಾರಿಗೆ ಬರಲಿದೆ. ಇದರಿಂದ ಇರಾನ್‌ನಿಂದ ಭಾರತಕ್ಕಾಗುವ ತೈಲ ಆಮದು ಕಡಿಮೆಯಾಗಲಿದೆ. ಆದರೂ ಭಾರತ ಸರ್ಕಾರ ಇರಾನ್‌ನಿಂದ ತೈಲ ಆಮದಿಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.
ಇದೇ ವೇಳೆ ಅಂತಿಮ ಸಮಯದಲ್ಲಾಗಬಹುದಾದ ಬದಲಾವಣೆಗಳಿಗೂ ಭಾರತ ಪರ್ಯಾಯ ಮಾರ್ಗ ಹುಡುಕಿದೆ. ವಿಶ್ವದ ಅಗ್ರಗಣ್ಯ ತೈಲ ರಫ್ತು ರಾಷ್ಟ್ರವಾದ ಸೌದಿ ಅರೆಬಿಯಾದಿಂದ ಹೆಚ್ಚಿನ ತೈಲ ಆಮದು ಮಾಡಿಕೊಳ್ಳಲು ಭಾರತ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಸೌದಿ ಅರಬಿಯಾದಿಂದ 4 ಮಿಲಿಯನ್ ಬ್ಯಾರೆಲ್ ಅಧಿಕ ತೈಲ ಆಮದು ಮಾಡಿಕೊಳ್ಳಲು ಭಾರತ ನಿರ್ಧರಿಸಿದೆ ಎನ್ನಲಾಗಿದೆ. ಈ ಕುರಿತು ಈಗಾಗಲೇ ಸೌದಿ ಅರೆಬಿಯಾದೊಂದಿಗೆ ಭಾರತ ಮಾತುಕತೆ ನಡೆಸಿದೆ ಎನ್ನಲಾಗಿದ್ದು, 4 ಮಿಲಿಯನ್ ಬ್ಯಾರೆಲ್ ಹೆಚ್ಚಿನ ತೈಲ ಪೂರೈಸಲು ಸೌದಿ ಸಮ್ಮತಿ ಸೂಚಿಸಿದೆ ಎಂದು ಹೇಳಲಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಶನ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಮತ್ತು ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಕಂಪನಿಗಳಿಗೆ ತಲಾ 1 ಮಿಲಿಯನ್ ಬ್ಯಾರೆಲ್ ಅಧಿಕ ತೈಲ ಆಮದಾಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.
ಭಾರತ ವಿಶ್ವದ ಅಗ್ರಗಣ್ಯ ತೈಲ ಆಮದು ರಾಷ್ಟ್ರವಾಗಿದ್ದು, ಚೀನಾ ನಂತರ ಇರಾನ್‌ನಿಂದ ತೈಲ ಆಂದು ಮಾಡಿಕೊಳ್ಳುವ ಎರಡನೇ ರಾಷ್ಟ್ರ ಕೂಡ ಆಗಿದೆ.
ಇರಾನ್ ಮೇಲೆ ಅಮೆರಿಕದ ನಿರ್ಬಂಧದ ನಂತರ ಭಾರತದ ಮೇಲಾಗುವ ಪರಿಣಾಮವನ್ನು ತಪ್ಪಿಸಲು ಸೌದಿ ಅರೆಬಿಯಾದತ್ತ ಮುಖ ಮಾಡಿರುವ ಕೇಂದ್ರ ಸರ್ಕಾರ, ತೈಲ ಕೊರತೆ ಸರಿದೂಗಿಸಲು ಈಗಾಗಲೇ ಮುಂದಾಗಿರುವುದು ಸಮಾಧಾನಕರ ಸಂಗತಿ ಎಂಬುದು ತಜ್ಞರ ಅಭಿಪ್ರಾಯ.