ನವದೆಹಲಿ(ಅ.20): ಇರಾನ್‌ನಿಂದ ಕಚ್ಚಾ ತೆಲವನ್ನು ಆಮದು ಮಾಡುವುದಕ್ಕೆ ಸಂಬಂಧಿಸಿದಂತೆ ಅಮೆರಿಕದ ಜೊತೆ ಭಾರತದ ಮಾತುಕತೆ ಮುಂದುವರೆದಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ರಷ್ಯಾದ ಜೊತೆಗಿನ ಎಸ್‌-400 ಕ್ಷಿಪಣಿ ಒಪ್ಪಂದ ಹಾಗೂ ಇರಾನ್‌ ತೈಲ ಆಮದಿನ ಅಗತ್ಯತೆ ಬಗ್ಗೆ ಅಮೆರಿಕಕ್ಕೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ರವೀಶ್‌ ಕುಮಾರ್‌ ತಿಳಿಸಿದ್ದಾರೆ. 

ಹಲವು ಹಂತಗಳಲ್ಲಿ ಅಮೆರಿಕಕ್ಕೆ ಭಾರತದ ನಿಲುವುಗಳನ್ನು ಸ್ಪಷ್ಟಪಡಿಸಲಾಗಿದೆ. ಇದರಿಂದ ಭಾರತದ ಪರಿಸ್ಥಿತಿ, ನಿರೀಕ್ಷೆಗಳ ಬಗ್ಗೆ ಅಮೆರಿಕಕ್ಕೆ ಚೆನ್ನಾಗಿ ಅರ್ಥವಾಗಲಿದೆ ಎಂಬ ವಿಶ್ವಾಸ ಇದೆ ಎಂದು ರವೀಶ್ ಭರವಸೆ ವ್ಯಕ್ತಪಡಿಸಿದ್ದಾರೆ.

ಅಮೆರಿಕ ನವೆಂಬರ್‌ 4ರಿಂದ ಇರಾನ್‌ ವಿರುದ್ಧ ಕಠಿಣ ಆರ್ಥಿಕ ನಿರ್ಬಂಧಗಳನ್ನು ಜಾರಿಗೆ ತರಲು ಉದ್ದೇಶಿಸಿದೆ. ಹಾಗೂ ಎಲ್ಲ ರಾಷ್ಟ್ರಗಳೂ ಇರಾನ್‌ ತೈಲ ಖರೀದಿಸುವುದನ್ನು ನಿಲ್ಲಿಸಬೇಕು ಎಂದು ಅದು ಬಯಸುತ್ತಿದೆ. 

ಆದರೆ ಇರಾನ್‌ ತೈಲ ಭಾರತದ ಆರ್ಥಿಕ ಪ್ರಗತಿಗೆ ಅವಶ್ಯಕವಾಗಿದ್ದು, ಒಂದು ವೇಳೆ ತೈಲ ಆಮದು ನಿಲ್ಲಿಸಿದರೆ ನೇರವಾಗಿ ಜನಸಾಮಾನ್ಯರಿಗೆ ಇದು ಹೊರೆಯಾಗಲಿದೆ ಎಂದು ಭಾರತ ಅಮೆರಿಕಕ್ಕೆ ಮನವರಿಕೆ ಮಾಡಿಕೊಟ್ಟಿದೆ.