ನವದೆಹಲಿ(ಅ.8): ಅಮೆರಿಕದ ನಿರ್ಬಂಧಗಳ ಹೊರತಾಗಿಯೂ ಭಾರತ ನವೆಂಬರ್‌ನಲ್ಲಿ ಇರಾನ್‌ನಿಂದ ತೈಲ ಖರೀದಿಸಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ.

ಇರಾನ್ ಮೇಲೆ ಅಮೆರಿಕ ವಿಧಿಸಿರುವ ಕಠಿಣ ನಿರ್ಬಂಧಗಳು ನವೆಂಬರ್ 4ರಿಂದ ಜಾರಿಗೆ ಬರಲಿದ್ದು, ಇದರ ನಡುವೆಯೂ ನವೆಂಬರ್‌ನಲ್ಲಿ ಇರಾನ್ ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಸರ್ಕಾರಿ ಸ್ವಾಮ್ಯದ ಎರಡು ಕಂಪನಿಗಳನ್ನು ನಿಯೋಜಿಸಲಾಗಿದೆ ಎಂದು ಪ್ರಧಾನ್ ಹೇಳಿದ್ದಾರೆ.

ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ನಮಗೆ ಅಮೆರಿಕದ ನಿರ್ಬಂಧಗಳಿಂದ ವಿನಾಯ್ತಿ ಸಿಗುತ್ತದೆಯೋ ಅಥವಾ ಇಲ್ಲ ಎಂಬುದು ಗೊತ್ತಿಲ್ಲ ಎಂದರು ಸಚಿವರು ತಿಳಿಸಿದ್ದಾರೆ.

ಭಾರತ ತನ್ನದೇ ಆದ ತೈಲ ಅವಶ್ಯಕತೆಗಳನ್ನು ಹೊಂದಿದ್ದು, ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಪ್ರಧಾನ್ ಹೇಳಿದ್ದಾರೆ. 

ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐಒಸಿ) ಮತ್ತು ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್(ಎಂಆರ್ ಪಿಎಲ್) ಈಗಗಾಲೇ ನವೆಂಬರ್ ತಿಂಗಳಲ್ಲಿ ಇರಾನ್ ನಿಂದ 1.25 ಮಿಲಿಯನ್ ಟನ್ ತೈಲ ಖರೀದಿಗೆ ಒಪ್ಪಂದ ಮಾಡಿಕೊಂಡಿವೆ.