ನವದೆಹಲಿ(ಸೆ.20): ಆರ್ಥಿಕ ಕುಸಿತಕ್ಕೆ ಒಂದೊಂದೇ ಪರಿಹಾರ ಕಂಡುಕೊಳ್ಳುತ್ತಿರುವ ಕೇಂದ್ರ ಸರ್ಕಾರ, ಹಲವು ಹೊಸ ಘೋಷಣೆಗಳ ಮೂಲಕ ಆರ್ಥಿಕ ಪುನಶ್ಚೇತನಕ್ಕೆ ಮುಂದಡಿ ಇಡುತ್ತಿದೆ.

ಅದರಂತೆ ಕಾರ್ಪೊರೇಟ್ ವಲಯಕ್ಕೆ ಭರ್ಜರಿ ಕೊಡುಗೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತೆರಿಗೆ ಕಡಿತ ಮಾಡುವ ಮೂಲಕ ಪುನಶ್ಚೇತನದ ಮುನ್ನಡಿ ಬರೆದಿದ್ದಾರೆ.

ಗೃಹ ಬಳಕೆಯ ವಸ್ತುಗಳ ಉತ್ಪಾದನಾ ಕಂಪನಿಗಳಿಗೆ ತೆರಿಗೆ ಕಡಿತಗೊಳಿಸಿರುವ ಕೇಂದ್ರ ಸರ್ಕಾರ, ಈ ಮೊದಲಿನ ಶೇ.30ರ ಬದಲು ಶೇ.25.2ಕ್ಕೆ ತೆರಿಗೆ ಕಡಿತ ಮಾಡುವ ನಿರ್ಧಾರಕ್ಕೆ ಬಂದಿದೆ. ಶೇ.22ರವರೆಗೂ ತೆರಿಗೆ ಕಡಿತದ ಅವಕಾಶ ಒದಗಿಸಲಾಗಿದೆ.

ಗೃಹ ಬಳಕೆಯ ವಸ್ತುಗಳ ಮೇಲಿನ ಹೂಡಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತೆರಿಗೆ ಕಡಿತ ಮಾಡುವ ನಿರ್ಧಾರಕ್ಕೆ ಬರಲಾಗಿದ್ದು, ಸುಗ್ರೀವಾಜ್ಞೆ ಮೂಲಕ ಅಗತ್ಯ ವಸ್ತುಗಳ ಮೇಲಿನ ತೆರಿಗೆ ಇಳಿಕೆಗೆ ಕ್ರಮ ಕೈಗೊಂಡಿದೆ.

ಕೇಂದ್ರದ ಈ ನಿರ್ಧಾರದಿಂದ ಮಂದಗತಿಯಲ್ಲಿ ಸಾಗುತ್ತಿರುವ ಬಿಸ್ಕಟ್ ಹಾಗೂ ಆಟೋಮೊಬೈಲ್ ಕ್ಷೇತ್ರಗಳು ವೇಗ ಹೆಚ್ಚಿಸಿಕೊಳ್ಳಲಿವೆ ಎಂದು ಆಶಾವಾದ ವ್ಯಕ್ತಪಡಿಸಲಾಗಿದೆ.