ಜನ ಓಲಾ, ಉಬರ್ ಬಳಸುತ್ತಾರೆ: ಹಿನ್ನಡೆ ಸಮಸ್ಯೆಗೆ ‘ನಿರ್ಮಲ’ ಉತ್ತರ!
ದೇಶದ ಆಟೋಮೊಬೈಲ್ ಕ್ಷೇತ್ರದ ಹಿನ್ನಡೆಗೆ ಸಿಕ್ತು ಕಾರಣ| ನಾವು, ನೀವೆಲ್ಲಾ ಓಲಾ, ಉಬರ್ ಬಳಸುತ್ತಿರುವುದೇ ಆಟೋಮೊಬೈಲ್ ಕ್ಷೇತ್ರದ ಹಿನ್ನಡೆಗೆ ಕಾರಣ| ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಅದ್ಭುತ ಕಾರಣ’| ‘EMI ತಪ್ಪಿಸಲು ಓಲಾ, ಉಬರ್ ಬಳಸುತ್ತಿರುವುದರಿಂದ ಹೊಸ ಕಾರು ಕೊಳ್ಳುವವರಿಲ್ಲ’| ನಿರ್ಮಲಾ ಸೀತಾರಾಮನ್ ಉತ್ತರಕ್ಕೆ ವ್ಯಂಗ್ಯವಾಡಿದ ಕಾಂಗ್ರೆಸ್|
ನವದೆಹಲಿ(ಸೆ.10): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೋದಿ 2.0 ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳು ಸಂದಿವೆ. ಈ ಮಧ್ಯೆ ಕೇಂದ್ರ ಸರ್ಕಾರದ ಇಲಾಖಾವಾರು ಸಚಿವರು ತಮ್ಮ ಇಲಾಖೆಯ ಸಾಧನೆಯ ಕುರಿತು ಮಾಹಿತಿ ನೀಡುತ್ತಿದ್ದಾರೆ.
ಅದರಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ತಮ್ಮ ಇಲಾಖೆಯ ಕುರಿತು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ ಈ ನೂರು ದಿನಗಳಲ್ಲಿ ಆರ್ಥಿಕ ಕುಸಿತದ ಅತೀ ದೊಡ್ಡ ಸವಾಲು ಎದುರಿಸುತ್ತಿದ್ದು, ವಿತ್ತ ಸಚಿವಾಲಯದ ಹೊಣೆ ಹೊತ್ತಿರುವ ನಿರ್ಮಲಾ ಸೀತಾರಾಮನ್ ಬಿಡುವಿಲ್ಲದ ಕಾರ್ಯಭಾರದ ಹೊರೆ ಹೊತ್ತಿದ್ದಾರೆ.
ಈ ಮಧ್ಯೆ ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಉಡಾಫೆಯ ಉತ್ತರ ನೀಡಿರುವ ನಿರ್ಮಲಾ ಸೀತಾರಾಮನ್, ಈ ದೇಶದಲ್ಲಿ ಲಕ್ಷಾಂತರ ಜನರು ತಮ್ಮ EMI ಉಳಿಸಲು ಓಲಾ ಮತ್ತು ಉಬರ್ ಕಾರುಗಳಲ್ಲಿ ಓಡಾಡುತ್ತಾರೆ. ಇದೇ ಕಾರಣಕ್ಕೆ ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಕಂಡಿದೆ ಎಂದು ವಿಚಿತ್ರ ಉತ್ತರ ನೀಡಿದ್ದಾರೆ.
EMI ಭರಿಸುವುದನ್ನು ತಪ್ಪಿಸಲು ಜನ ಓಲಾ, ಉಬರ್’ಗಳಲ್ಲಿ ಓಡಾಡುತ್ತಿದ್ದು, ಹೊಸ ಕಾರುಗಳನ್ನು ಕೊಳ್ಳಲು ಮುಂದೆ ಬರುತ್ತಿಲ್ಲ. ಈ ಕಾರಣಕ್ಕೆ ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಕಂಡಿದೆ ಎಂದು ಸೀತಾರಾಮನ್ ನುಡಿದಿದ್ದಾರೆ.
ಇನ್ನು ವಿತ್ತ ಸಚಿವೆಯ ಹೇಳಿಕೆಗೆ ವ್ಯಂಗ್ಯವಾಡಿರುವ ಪ್ರತಿಪಕ್ಷ ಕಾಂಗ್ರೆಸ್, ಹಾಗಾದರೆ ಬಸ್ ಮತ್ತು ಟ್ರಕ್ ಖರೀದಿಯಲ್ಲಿ ಆದ ಹಿನ್ನಡೆಗೂ ಜನ ಓಲಾ ಮತ್ತು ಉಬರ್’ಗಳಲ್ಲಿ ಓಡಾಡುವುದೇ ಕಾರಣವೇ ಎಂದು ಪ್ರಶ್ನಿಸಿದೆ.