ದೇಶದಲ್ಲಿ ಏನಾಗ್ತಿದೆ? ಉದ್ಯಮ ವಲಯದ ಪರಿಸ್ಥಿತಿ ಹೇಗಿದೆ?:

ಬೆಂಗಳೂರು(ಸೆ.04): ಬೇಡಿಕೆ ಕುಸಿತ, ಉತ್ಪಾದನೆ ಕುಂಠಿತ, ಉದ್ಯೋಗ ಕಡಿತ, ಜಿಡಿಪಿ ಪ್ರಪಾತ ಎಂಬ ಸುದ್ದಿಗಳು ಪ್ರತಿನಿತ್ಯ ಕೇಳಿ ಬರುತ್ತಿವೆ. ಭಾರತದ ಆರ್ಥಿಕತೆ ಹಿಂಜರಿತದ ಹಾದಿಯಲ್ಲಿದೆ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ ಎಂಬ ವಿಶ್ಲೇಷಣೆಗಳು ಇವೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಹಿಂಜರಿತದ ಪ್ರಮುಖ ಲಕ್ಷಣಗಳೇನು, ಯಾವ ಯಾವ ಕ್ಷೇತ್ರದಲ್ಲಿ ಆರ್ಥಿಕ ಕುಸಿತದ ಲಕ್ಷಣ ಕಂಡು ಬರುತ್ತಿದೆ, ಕೇಂದ್ರ ಸರ್ಕಾರ ದೇಶದ ಆರ್ಥಿಕತೆಯನ್ನು ಸುಸ್ಥಿತಿಯಲ್ಲಿಡಲು ಯಾವೆಲ್ಲಾ ಕ್ರಮ ಕೈಗೊಂಡಿದೆ, ಇನ್ನೂ ಏನು ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

ಕುಸಿತಕ್ಕೆ ಮೂಲ ಕಾರಣ ಏನು ಗೊತ್ತಾ?:

ಉತ್ಪಾದನೆಯಾದ ವಸ್ತುಗಳ ಕೊಂಡುಕೊಳ್ಳುವಿಕೆ ಭಾರತದ ಆರ್ಥಿಕತೆಯ ಅಭಿವೃದ್ಧಿಗೆ ಅತ್ಯವಶ್ಯಕ ಅಂಶ. ಭಾರತದ ಆರ್ಥಿಕತೆಯ 5ನೇ 3ರಷ್ಟುಭಾಗ ಅಂದರೆ 50-60% ಆದಾಯ ಈ ಮೂಲಕವೇ ಬರುತ್ತದೆ. ಈ ಪ್ರಕ್ರಿಯೆಯಲ್ಲಿ ಕುಸಿತ ಉಂಟಾದರೆ ಅದು ಇಡೀ ಅರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಕಾರು.. ಕೇಳ್ತಿಲ್ಲ ಯಾರೂ:

ಆಟೋಮೊಬೈಲ್‌ ಕ್ಷೇತ್ರ ದೇಶದ 3.7 ಕೋಟಿ ಜನರಿಗೆ ಉದ್ಯೋಗ ನೀಡಿದೆ. ಇದು ದೇಶದ ಜಿಡಿಪಿಗೆ 7% ಕೊಡುಗೆ ನೀಡುತ್ತಿದೆ. ಸದ್ಯ 5 ಲಕ್ಷ ಪ್ರಯಾಣಿಕರ ವಾಹನಗಳು ಮತ್ತು 30 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗದೆ ಉಳಿದಿವೆ. ಭಾರತದ ಅತಿ ದೊಡ್ಡ ಆಟೋ ಮೊಬೈಲ್‌ ಕಂಪನಿ ಮಾರುತಿ ಸುಜುಕಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ.

ಮಾರುತಿ ಸುಜುಕಿ ಶೇ.33, ಹೋಂಡಾ ಶೇ.51, ಟಾಟಾ ಶೇ.58, ಮಹೀಂದ್ರಾ ಶೇ.25, ಟೊಯೋಟಾ ಶೇ.21ರಷ್ಟುಕುಸಿತ ಕಂಡಿವೆ. 2018ರ ಏಪ್ರಿಲ್‌-ಜೂನ್‌ ತಿಂಗಳಿಗೆ ಹೋಲಿಸಿದರೆ 2019ರ ಇದೇ ಸಮಯದಲ್ಲಿ ಕಾರುಗಳ ಮಾರಾಟ ಪ್ರಮಾಣ 23.3%ರಷ್ಟುಕುಸಿತ ಕಂಡಿದೆ. 2004ರಿಂದ ಈಚೆಗೆ ವಾಹನೋದ್ಯಮದ ಮೇಲೆ ಬಿದ್ದ ದೊಡ್ಡ ಹೊಡೆತ ಇದು.

ಕಾರುಗಳ ಮಾರಾಟ ಸಂಖ್ಯೆಯ ಕುಸಿತ ಟೈರ್‌ ಉತ್ಪಾದನೆಯಿಂದ ಹಿಡಿದು ಸ್ಟೀಲ್‌, ಟೈರ್‌ ಉತ್ಪಾದನೆ ಸೇರಿದಂತೆ ಮತ್ತಿತರ ಕಂಪನಿಯವರೆಗೆ ಋುಣಾತ್ಮಕ ಪರಿಣಾಮ ಬೀರುತ್ತದೆ. ಇದೇ ಸಮಯದಲ್ಲಿ ವಾಹನ ಸಾಲವೂ ಕಳೆದೈದು ವರ್ಷದಲ್ಲಿ 5.1%ರಷ್ಟು ಕುಸಿತ ಕಂಡಿದೆ. ಕಾರು ತಯಾರಿಕಾ ಉದ್ಯಮದ ಮೇಲೆ ಆದಷ್ಟುಹಿನ್ನಡೆ ದ್ವಿಚಕ್ರ ವಾಹನ ಮಾರಾಟದಲ್ಲಿಲ್ಲ.

ಆದರೆ 2019ರ ಏಪ್ರಿಲ್‌ನಿಂದ ಜೂನ್‌ವರೆಗೆ ದ್ವಿಚಕ್ರ ವಾಹನ ಮಾರಾಟ 11.7% ರಷ್ಟುಇಳಿದಿದೆ. ಇನ್ನು ಟ್ರ್ಯಾಕ್ಟರ್‌ಗಳು ಗ್ರಾಮೀಣ ಪ್ರದೇಶಗಳ ಪ್ರಮುಖ ಬೇಡಿಕೆ. 2019ರ ಏಪ್ರಿಲ್‌-ಜೂನ್‌ವರೆಗೆ ಟ್ರ್ಯಾಕ್ಟರ್‌ ಮಾರಾಟವು 14.1% ಕುಸಿತ ಕಂಡಿದೆ. ಕಳೆದ 4 ವರ್ಷದ ಅತಿ ದೊಡ್ಡ ಕುಸಿತ ಇದು.

ಮನೆಗಳು ಇವೆ, ಕೊಳ್ಳುವವರು ಸಿಗುತ್ತಿಲ್ಲ

ರಿಯಲ್‌ ಎಸ್ಟೇಟ್‌ ರೀಸಚ್‌ರ್‍ ಕಂಪನಿಯೊಂದರ ಅಂಕಿ-ಅಂಶಗಳ ಪ್ರಕಾರ, ಭಾರತದ ಪ್ರಮುಖ 30 ನಗರಗಳಲ್ಲಿ 12.8 ಲಕ್ಷ ಮಾರಾಟವಾಗದ ಮನೆಗಳಿವೆ. ಈ ಸಂಖ್ಯೆ 2018 ಮಾಚ್‌ರ್‍ಗಿಂತ 7% ಹೆಚ್ಚಾಗಿದೆ. ಅಂದರೆ ಜನರು ಮನೆಗಳನ್ನು ಕೊಳ್ಳುವುದಕ್ಕಿಂತ ಹೆಚ್ಚು ವೇಗವಾಗಿ ಮನೆಗಳು ನಿರ್ಮಾಣವಾಗುತ್ತಿವೆ. ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಇದರಿಂದ ಭಾರೀ ನಷ್ಟಉಂಟಾಗುತ್ತಿದೆ.

ರಿಯಲ್‌ ಎಸ್ಟೇಟ್‌ ಕ್ಷೇತ್ರ ಹಿನ್ನಡೆ ಅನುಭವಿಸಿದರೆ ಸ್ಟೀಲ್‌, ಸಿಮೆಂಟ್‌, ಪೀಠೋಪಕರಣ, ಪೇಂಟಿಂಗ್‌ ಮುಂತಾದ ಕ್ಷೇತ್ರಗಳಿಗೂ ಹೊಡೆತ ಬೀಳುತ್ತದೆ. ರಿಯಾಲ್ಟಿದರಗಳು ಸ್ಥಿರವಾಗಿದ್ದರೂ ಗ್ರಾಹಕರು ಮನೆ ಕೊಳ್ಳಲು ಮನಸ್ಸು ಮಾಡುತ್ತಿಲ್ಲ. ಸಿಮೆಂಟ್‌, ಉಕ್ಕು ಸೇರಿದಂತೆ ಎಲ್ಲವೂ ದುಬಾರಿಯಾಗಿರುವುದೇ ಇದಕ್ಕೆ ಕಾರಣ.

ಜನರು ಸಾಲ ಮಾಡ್ತಿದ್ದಾರೆ, ಹೊಸ ಮನೆ ಕೊಳ್ಳುತ್ತಿಲ್ಲ:

2019ರ ಏಪ್ರಿಲ್‌ನಿಂದ ಜೂನ್‌ವರೆಗೆ ಬ್ಯಾಂಕುಗಳ ಚಿಲ್ಲರೆ (ರೀಟೆಲ್‌) ಸಾಲವು 16.6%ನಷ್ಟುಏರಿಕೆ ಕಂಡಿದೆ. 2018ರ ಇದೇ ಅವಧಿಯಲ್ಲಿ ಚಿಲ್ಲರೆ ಬ್ಯಾಂಕ್‌ ಸಾಲ ಪ್ರಮಾಣ 17.9ರಷ್ಟಿತ್ತು. ಅದೇ ರೀತಿ ಗೃಹ ಸಾಲ 18.9% ಏರಿಕೆ ಕಂಡಿದೆ. ಕಳೆದ ವರ್ಷ ಗೃಹ ಸಾಲ ಪ್ರಮಾಣ 15.8% ರಷ್ಟಿತ್ತು. ಅಂದರೆ ಗೃಹ ಸಾಲ ಪ್ರಮಾಣ ಏರಿಕೆಯಾಗುತ್ತದೆ.

ಆದರೆ ಮನೆಗಳೇಕೆ ಮಾರಾಟವಾಗುತ್ತಿಲ್ಲ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ ಹೀಗಿದೆ; ಬಂಡವಾಳ ಹೂಡಿಕೆದಾರರು 2003ರಿಂದ 2012ರವರೆಗೆ ಸಾಕಷ್ಟುಮನೆಗಳನ್ನು ಕೊಂಡುಕೊಂಡಿದ್ದರು. ಜನರೀಗ ನೇರವಾಗಿ ಮಾಲೀಕರಿಂದ ಖರೀದಿಸುವ ಬದಲಾಗಿ ಬಂಡವಾಳ ಹೂಡಿಕೆದಾರರಿಂದ ಮನೆ ಖರೀದಿಸುತ್ತಿದ್ದಾರೆ. ಅಂದಹಾಗೆ ಇವೆಲ್ಲಾ ಹೊಸ ಮನೆಗಳಲ್ಲ. ಹಾಗಾಗಿ ಆರ್ಥಿಕ ಪ್ರಗತಿಗೆ ಇದು ಪೂರಕವಾಗಿಲ್ಲ.

ದಿನಬಳಕೆಯ ವಸ್ತುಗಳ ಮಾರಾಟವೂ ಇಳಿಕೆ:

ಬಿಸ್ಕತ್, ಶಾಂಪೂ, ಸೋಪ್‌ನಂತಹ ತ್ವರಿತ ಮಾರಾಟದ ವಸ್ತುಗಳನ್ನು ಉತ್ಪಾದಿಸುವ ಕಂಪನಿಗಳ ಬೆಳವಣಿಗೆ ದರ ತೀವ್ರ ಪ್ರಮಾಣದಲ್ಲಿ ಕುಸಿತ ಕಂಡಿದೆ. ಉದಾಹರಣೆಗೆ 2019ರ ಏಪ್ರಿಲ್‌ನಿಂದ ಜೂನ್‌ವರೆಗೆ ಹಿಂದುಸ್ತಾನ್‌ ಯುನಿಲಿವರ್‌ ಲಿ. ಕಂಪನಿಯ ಒಟ್ಟಾರೆ ಬೆಳವಣಿಗೆ ದರ 5%. ಕಳೆದ ವರ್ಷ ಇದೇ ಅವಧಿಯಲ್ಲಿ ಬೆಳವಣಿಗೆ ದರ 12%ನಷ್ಟಿತ್ತು.

ಅದೇ ರೀತಿ ಡಾಬರ್‌ ಇಂಡಿಯಾ ಬೆಳವಣಿಗೆ ದರವೂ 21%ನಿಂದ 6%ಗೆ ಕುಸಿತ ಕಂಡಿದೆ. ಬ್ರಿಟಾನಿಯಾ ಬೆಳವಣಿಗೆ ದರವೂ 13%ನಿಂದ 6%ಗೆ ಇಳಿಕೆ ಕಂಡಿದೆ. ಇದರರ್ಥ ಜನರು ಪ್ರತಿದಿನ ಮಾರುಕಟ್ಟೆಗೆ ಹೋಗಿ ಖರೀದಿ ಮಾಡುವುದನ್ನು ಕಡಿಮೆ ಮಾಡಿದ್ದಾರೆ.

ಹೂಡಿಕೆ: 15 ವರ್ಷದಲ್ಲೇ ಮಹಾ ಕುಸಿತ:

ಯಾವುದೇ ಅರ್ಥವ್ಯವಸ್ಥೆಯ ಜಿಡಿಪಿ ಬೆಳವಣಿಗೆಗೆ ಹೊಸ ಹೊಸ ಹೂಡಿಕೆಗಳು ಮುಖ್ಯ. ಏಕೆಂದರೆ ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ, ಹೆಚ್ಚು ಆದಾಯ ಬರುತ್ತದೆ. ತನ್ಮೂಲಕ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಆದರೆ ಪ್ರಸಕ್ತ ವರ್ಷದ ಬಂಡವಾಳ ಹೂಡಿಕೆಯಲ್ಲಾದ ಕುಸಿತವು ಆತಂಕಕಾರಿಯಾಗಿದೆ. ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ಜೂನ್‌ವರೆಗೆ ಹೊಸ ಯೋಜನೆಗಳ ಹೂಡಿಕೆ ಘೋಷಣೆ 79.5% ಕುಸಿದಿದೆ.

2004ರಿಂದೀಚೆಗೆ ಕಂಡ ಅತಿ ದೊಡ್ಡ ಕುಸಿತ ಇದು. ಈ ವರ್ಷ 71,337 ಕೋಟಿ ಹೂಡಿಕೆಯಾಗುವುದಾಗಿ ಘೋಷಣೆಯಾಗಿದೆ. ಭಾರತದ ಆರ್ಥಿಕ ಪರಿಸ್ಥಿತಿ ಆತಂಕಕಾರಿಯಾಗಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಆಧಾರ ಬೇಕಿಲ್ಲ ಎನ್ನಲಾಗುತ್ತಿದೆ. ಜೊತೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಯೋಜನೆಯೊಂದರ ಮೇಲೆ ಈಗಾಗಲೇ ಹೂಡಿಕೆಯಾಗಿ ಪೂರ್ಣಗೊಂಡ ಯೋಜನೆಗಳ ಪ್ರಮಾಣ ಈ ವರ್ಷ 48%ರಷ್ಟುಕಡಿಮೆಯಾಗಿದೆ.

ಪ್ರಸಕ್ತ ವರ್ಷ ಕೇವಲ 69,494 ಕೋಟಿ ರು. ಮೊತ್ತದ ಯೋಜನೆಗಳಷ್ಟೇ ಪೂರ್ಣಗೊಂಡಿವೆ. ಮೋದಿ 2.0 ಸರ್ಕಾರದ ಮೊದಲ 50 ದಿನದಲ್ಲಿ ಬಂಡವಾಳ ಹೂಡಿಕೆದಾರರು ಸರಿಸುಮಾರು 12 ಲಕ್ಷ ಕೋಟಿ ರು. ಕಳೆದುಕೊಂಡಿದ್ದಾರೆಂದು ವರದಿಗಳು ಹೇಳಿವೆ.

ರೈಲ್ವೆಗೆ ಸರಕು ಸಾಗಣೆ ಆದಾಯವೂ ಇಲ್ಲ:

ಕಲ್ಲಿದ್ದಲು, ಉಕ್ಕು, ಸಿಮೆಂಟ್‌, ಪೆಟ್ರೋಲಿಯಂ, ರಸಗೊಬ್ಬರ, ಕಬ್ಬಿಣ ಮುಂತಾದ ಸರಕುಗಳ ಸಾಗಣೆಯು ರೈಲುಗಳ ಮುಖಾಂತರವೇ ನಡೆಯುತ್ತದೆ. ರೈಲ್ವೆಯು ಇದನ್ನು ದೇಶದ ಮೂಲೆ ಮೂಲೆಗಳಿಗೆ ತಲುಪಿಸುತ್ತದೆ. ಬಂಡವಾಳ ಹೂಡಿಕೆ ಮತ್ತು ಕೈಗಾರಿಕೆಗಳ ಚಟುವಟಿಕೆಯ ಸಂಕೇತ ಇದು. ಆದರೆ ಕಳೆದ ವರ್ಷದ ಏಪ್ರಿಲ್‌-ಜೂನ್‌ನಲ್ಲಿ 6.4%ರಷ್ಟಿದ್ದ ಬೆಳವಣಿಗೆ ದರ ಈ ವರ್ಷ ಅದೇ ಅವಧಿಯಲ್ಲಿ 2.7%ಗೆ ಇಳಿಕೆ ಕಂಡಿದೆ.

ಭಾರತದ 33% ಕೌಶಲ್ಯಯುತ ಯುವಜನತೆ ನಿರುದ್ಯೋಗಿಗಳು:

2017-18ರಲ್ಲಿ 33% ಯುವ ಜನತೆ ನಿರುದ್ಯೋಗಿಗಳಾಗಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆವೊಂದು ಹೇಳುತ್ತಿದೆ. ಅಲ್ಲದೇ ಈಗಾಗಲೇ ನಷ್ಟದಲ್ಲಿರುವ ಉದ್ಯಮಗಳು ಉದ್ಯೋಗ ಕಡಿತ ಮಾಡುತ್ತಿವೆ. ವಾಹನೋದ್ಯಮದಲ್ಲಿ ಈಗಾಗಲೇ 2.3 ಲಕ್ಷ ಉದ್ಯೋಗ ಕಡಿತಗೊಂಡಿದೆ. ಅಜೀಂ ಪ್ರೇಮ್‌ ಜಿ ಯುನಿವರ್ಸಿಟಿಯ ವರದಿ ಪ್ರಕಾರ, 50 ಲಕ್ಷ ನಗರವಾಸಿ ಯುವ ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾಗಿ ಹೇಳಿದ್ದಾರೆ. ಅದೆಲ್ಲಕ್ಕಿಂತ ಗಂಭೀರ ವಿಷಯ ಎಂದರೆ ನಿರುದ್ಯೋಗಿಗಳ ಪೈಕಿ ಮಹಿಳೆಯರ ಪ್ರಮಾಣವೇ ಹೆಚ್ಚಿದೆಯಂತೆ. ಪ್ರತಿ ಐವರು ನುರಿತ ಮಹಿಳೆಯಲ್ಲಿ ಮೂವರು ನಿರುದ್ಯೋಗಿಗಳಂತೆ.

ಜಿಡಿಪಿ ಭಾರಿ ಕುಸಿತ:

ಸತತ 5 ತ್ರೈಮಾಸಿಕ ಅವಧಿಗಳಿಂದ ಇಳಿಮುಖದ ಹಾದಿಯಲ್ಲಿದ್ದ ಜಿಡಿಪಿಯು ಕಳೆದ ಏಪ್ರಿಲ್‌-ಜೂನ್‌ ಅವಧಿಯಲ್ಲಿ 5%ಗೆ ಇಳಿದಿದೆ. 2018-19ರ ಇದೇ ಅವಧಿಯಲ್ಲಿ ದೇಶದ ಜಿಡಿಪಿ 8% ಇತ್ತು. 6 ವರ್ಷದ ಹಿಂದೆ ಇದೇ ರೀತಿ ಕನಿಷ್ಠ ಜಿಡಿಪಿ ದಾಖಲಾಗಿತ್ತು. ಆಗ ದೇಶದ ಜಿಡಿಪಿ 4.3%ಗೆ ಇಳಿಕೆ ಕಂಡಿತ್ತು. ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ, ಜಿಎಸ್‌ಟಿ, ತಗ್ಗಿದ ಬಂಡವಾಳ ಹೂಡಿಕೆ, ಅಮೆರಿಕ ಮತ್ತು ಚೀನಾ ವ್ಯಾಪಾರ ಯುದ್ಧ ಸೇರಿದಂತೆ ಜಾಗತಿಕ ಆರ್ಥಿಕ ಹಿಂಜರಿತದ ಪರೋಕ್ಷ ಪರಿಣಾಮವೇ ಜಿಡಿಪಿ ಕುಸಿತಕ್ಕೆ ಕಾರಣ ಎನ್ನಲಾಗಿದೆ.

5 ಟ್ರಿಲಿಯನ್‌ ಆರ್ಥಿಕತೆ ಕನಸು ನನಸಾಗುತ್ತಾ?:

ಕಳೆದ ಬಜೆಟ್‌ ಮಂಡನೆ ವೇಳೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್‌ಗೆ ಹೆಚ್ಚಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದರು. ಆದರೆ ಭಾರತದ ಪ್ರಸಕ್ತ ಆರ್ಥಿಕ ಬೆಳವಣಿಗೆಯು ಈ ಕನಸಿಗೆ ಪೂರಕವಾಗಿಲ್ಲ ಎನ್ನುತ್ತಿವೆ ವರದಿಗಳು. ಏಕೆಂದರೆ ಭಾರತ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಸಾಧಿಸಲು ಭಾರತದ ಜಿಡಿಪಿಯು ಕನಿಷ್ಠ 9%ಗೆ ಏರಿಕೆಯಾಗಬೇಕು.

ಆದರೆ ಭಾರತದ ಜಿಡಿಪಿ ಕಳೆದ 6 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಉದ್ಯೋಗ ನಿರ್ಮಾಣ, ಬಂಡವಾಳ ಹೂಡಿಕೆ ಕ್ಷೇತ್ರಗಳ ಬೆಳವಣಿಗೆ ಕಳವಳಕಾರಿಯಾಗಿದೆ. ಇಂಥ ಸ್ಥಿತಿಯಲ್ಲಿ ಭಾರತದ ಸಾರ್ವಜನಿಕ ಬ್ಯಾಂಕುಗಳನ್ನು ವಿಲೀನ ಮಾಡಲಾಗಿದೆ. ಕೇಂದ್ರ ಸರ್ಕಾರ ಆರ್ಥಿಕ ಹಿಂಜರಿಕೆಗೆ ಟಾನಿಕ್‌ ಎಂದು ಹೇಳುತ್ತಿದ್ದರೂ ಕೇಂದ್ರದ ಈ ಕ್ರಮ ಆರ್ಥಿಕತೆಯ ಮೇಲೆ ಋುಣಾತ್ಮಕ ಪರಿಣಾಮ ಬೀರಲಿದೆ ಎಂದು ಕೆಲ ಅರ್ಥಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಸರ್ಕಾರ ಏನು ಮಾಡುತ್ತಿದೆ?:

ಆರ್ಥಿಕ ಹಿಂಜರಿತ ಲಕ್ಷಣಗಳು ಗೋಚರಿಸುತ್ತಿದ್ದಂತೆಯೇ ಕೇಂದ್ರ ಸರ್ಕಾರ 1.76 ಲಕ್ಷ ಕೋಟಿ ರು. ಅನ್ನು ಆರ್‌ಬಿಐನಿಂದ ಪಡೆದುಕೊಂಡಿದೆ. ಈ ಹಣದಿಂದ ಕುಸಿಯುತ್ತಿರುವ ಆರ್ಥಿಕತೆಯನ್ನು ಮೇಲೆತ್ತಬಹುದು ಎಂಬ ನಿರೀಕ್ಷೆ ಇದೆ. ಅದರ ಜೊತೆಗೆ ಹಣಕಾಸು ಸಂಸ್ಥೆಗಳಿಂದ ಪಡೆಯುವ ಗೃಹ ಸಾಲ ಮತ್ತು ವಾಹನ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಸರ್ಚಾಜ್‌ರ್‍ ವಾಪಸ್‌, ಸರ್ಕಾರಿ ಬ್ಯಾಂಕುಗಳಿಗೆ 70,000 ಕೋಟಿ ಬಂಡವಾಳ ಸೇರಿದಂತೆ ಹಲವು ಉಪಕ್ರಮಗಳನ್ನು ಕೈಗೊಂಡಿದೆ.

ದಾರಿ ಯಾವುದಯ್ಯಾ?:

1. ಕೇಂದ್ರ ಸರ್ಕಾರ ಆರ್‌ಬಿಐನಿಂದ ಪಡೆದಿರುವ 1.76 ಲಕ್ಷ ಕೋಟಿ ಹಣವನ್ನು ಆರ್ಥಿಕ ತಜ್ಞರ ಸಲಹೆ ಪಡೆದು ಸಮರ್ಥವಾಗಿ ಬಳಸಿಕೊಳ್ಳಬೇಕು

2. ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕು

3. ಕೃಷಿ ವಲಯದ ಬಿಕ್ಕಟ್ಟನ್ನು ಶಮನ ಮಾಡಲು ಪ್ರಯತ್ನಿಸಬೇಕು

4. ರಫ್ತಿಗೆ ಪ್ರೋತ್ಸಾಹ ನೀಡಬೇಕು

5. ಜಿಎಸ್‌ಟಿ ಸಂಗ್ರಹ ಮತ್ತಷ್ಟುಹೆಚ್ಚಳವಾಗಬೇಕು

ಅಂಕಿಂಶಗಳಲ್ಲಿ ಭಾರತದ ಆರ್ಥಿಕತೆಯ ಸಮಗ್ರ ಚಿತ್ರಣ:

ಬಳಕೆ ಏಪ್ರಿಲ್‌-ಜೂನ್‌ ಬೆಳವಣಿಗೆ ದರ %)2019 2018

ದೇಶೀಯವಾಗಿ ಕಾರುಗಳ ಮಾರಾಟ -23.3 18

ದ್ವಿಚಕ್ರ ವಾಹನ ಮಾರಾಟ -11.7 15.9

ಟ್ರ್ಯಾಕ್ಟರ್‌ಗಳ ಮಾರಾಟ -14.1 25.7

ಮಾರಾಟವಾಗದ ಮನೆಗಳು 7

ಬ್ಯಾಂಕ್‌ ಚಿಲ್ಲರೆ ಸಾಲ 17.9 16.6

ಎಫ್‌ಎಂಜಿಜಿ ಕಂಪನಿಗಳ ಬೆಳವಣಿಗೆ ದರ 12 5

ಹೂಡಿಕೆ

ದೇಶೀಯ ವಾಣಿಜ್ಯ ವಾಹನಗಳ ಮಾರಾಟ -9.5 51.6

ಕೈಗಾರಿಕೆಗಳಿಗೆ ಬ್ಯಾಂಕ್‌ ಸಾಲ 6.5 0.9

ರೈಲು ಸರಕುಗಳಿಂದ ಪಡೆದ ಆದಾಯ 2.7 6.4

ಹೊಸ ಹೂಡಿಕೆಗಳ ಘೋಷಣೆ -79.5 13.2

ಪೂರ್ಣವಾದ ಬಂಡವಾಳ ಹೂಡಿಕೆ ಯೋಜನೆಗಳು -48 49.1

ಸರ್ಕಾರಿ ವೆಚ್ಚ 22.1 1.4

ನಿವ್ವಳ ರಫ್ತು -1.2 14.7