ನವದೆಹಲಿ(ಸೆ.14): ರಫ್ತು ಪ್ರೋತ್ಸಾಹಕ RoDTEP ಯೋಜನೆ ಘೋಷಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್,  ರಫ್ತುದಾರರಿಗೆ 50 ಸಾವಿರ ಕೋಟಿ ರೂ. ಮೊತ್ತದ ಪ್ರೋತ್ಸಾಹ ಧನ ನೀಡುವುದಾಗಿ ತಿಳಿಸಿದ್ದಾರೆ.

ದೇಶದ ವಾಣಿಜ್ಯ ರಫ್ತು ಪ್ರಮಾಣದಲ್ಲಿ ಕುಸಿತ ಕಂಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ರಫ್ತುದಾರರಿಗೆ ಸಹಕಾರಿಯಾಗುವ ಯೋಜನೆ ಘೋಷಿಸಿದೆ.

RoDTEP ಈಗಿರುವ ಪ್ರೋತ್ಸಾಹ ಯೋಜನೆಗಳಿಗೆ ಪರ್ಯಾಯವಾಗಿ ಜಾರಿಗೆ ಬರಲಿದ್ದು, ಈಗಿರುವ ಎಲ್ಲಾ ಯೋಜನೆಗಳಿಗಿಂತಲೂ ಹೆಚ್ಚಿನ ಪ್ರೋತ್ಸಾಹ ಸಿಗುವಂತೆ ಮಾಡಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ರಫ್ತು ಮಾಡುವುದಕ್ಕೆ ಸಹಾಯ ಮಾಡುವ ಬ್ಯಾಂಕ್’ಗಳಿಗೆ ಹೆಚ್ಚಿನ ಇನ್ಶ್ಯೂರೆನ್ಸ್ ಹಾಗೂ ಭಾರತದಲ್ಲಿ ದುಬೈ ಶಾಪಿಂಗ್ ಫೆಸ್ಟಿವಲ್ ರೀತಿಯಲ್ಲಿ ವಾರ್ಷಿಕ ಮೆಗಾ ಶಾಪಿಂಗ್ ಫೆಸ್ಟಿವಲ್’ನ್ನು ಸರ್ಕಾರ ಆಯೋಜಿಸಲಿದೆ ಎಂದು ನಿರ್ಮಲಾ ತಿಳಿಸಿದರು. 

ಆದ್ಯತಾ ವಲಯಗಳಲ್ಲಿ ರಫ್ತು ಮಾಡುವುದಕ್ಕೆ  36,000-68,000 ಕೋಟಿ ರೂಪಾಯಿ ಸಾಲ ಸೌಲಭ್ಯದ ಯೋಜನೆಯನ್ನೂ ನಿರ್ಮಲಾ ಈ ವೇಳೆ ಘೋಷಿಸಿದರು. 

ಅದರಂತೆ ಬಡ್ಡಿ ದರ ಕಡಿತನ್ನು ಗ್ರಾಹಕರಿಗೆ ತಲುಪಿಸಲು ಬ್ಯಾಂಕ್’ಗಳಿಗೆ ಕ್ರಮ ಕೖಗೊಳ್ಳಲು ಸೂಚಿಸಲಾಗಿದ್ದು, ಕ್ರೆಡಿಟ್ ಔಟ್ ಫ್ಲೋ (ಸಾಲ ಕೊಡುವ ಪ್ರಕ್ರಿಯೆ) ಸುಧಾರಣೆಗೆ ,ಮುಂದಾಗಿರುವುದಾಗಿ ಹಣಕಾಸು ಸಚಿವೆ ಸ್ಪಷ್ಟಪಡಿಸಿದರು. 

ಇದೇ ವೇಳೆ  ಹಣದುಬ್ಬರ ನಿಯಂತ್ರಣದಲ್ಲಿದ್ದು, ಕೈಗಾರಿಕಾ ಉತ್ಪಾದನೆ ಸುಧಾರಣೆಯ ಸೂಚಕಗಳು ಸ್ಪಷ್ಟವಾಗಿವೆ ಎಂದು ವಿತ್ತ ಸಚಿವೆ ಸ್ಪಷ್ಟಪಡಿಸಿದ್ದಾರೆ.

ಜಿಎಸ್’ಟಿಯ ಇನ್ಪುಟ್ ತೆರಿಗೆ ಕ್ರೆಡಿಟ್ (ಐಟಿಸಿ) ನಲ್ಲಿ ಸಂಪೂರ್ಣ ಸ್ವಯಂಚಾಲಿತ ಎಲೆಕ್ಟ್ರಾನಿಕ್ ಮರುಪಾವತಿ ವ್ಯವಸ್ಥೆ ತಿಂಗಳಾಂತ್ಯಕ್ಕೆ ಜಾರಿಗೊಳ್ಳಲಿದೆ ಎಂದು ನಿರ್ಮಲಾ ಸ್ಪಷ್ಟಪಡಿಸಿದ್ದಾರೆ.

ಎಫ್’ಪಿಐ ಹರಿವಿನಲ್ಲೂ ಸುಧಾರಣೆಯಾಗಿದ್ದು, ಹೂಡಿಕೆ ದರ ನಿರಂತರವಾಗಿ ಏರಿಕೆಯಾಗುತ್ತಿದೆ ಎಂದು ಸೀತಾರಾಮನ್ ಸ್ಪಷ್ಟಪಡಿಸಿದರು.