ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಟ್ರಾಫಿಕ್ ಪೊಲೀಸರೊಬ್ಬರು ತಮ್ಮ ಕೈಯಾರೆ ಚರಂಡಿ ಸ್ವಚ್ಛಗೊಳಿಸಿದ ವಿಡಿಯೋ ವೈರಲ್ ಆಗಿದೆ. ಪೊಲೀಸ್ ಅಧಿಕಾರಿಯ ಈ ಮಾನವೀಯ ಸೇವೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ..

ಬೆಂಗಳೂರು: ಕಳೆದ ಒಂದು ವಾರದಿಂದ ಸಿಲಿಕಾನ್ ಸಿಟಿಯಲ್ಲಿ ಸಂಜೆ ವೇಳೆಗೆ ಭಾರೀ ಮಳೆಯಾಗುತ್ತಿದೆ.. ಮಳೆ ಬಂದಾಗ ಎಂದಿನಂತೆ ಪ್ರಮುಖ ನಗರಗಳ ರಸ್ತೆಗಳು ನದಿಯಂತೆ ಆಗುತ್ತವೆ. ಜನ ಪರದಾಡುತ್ತಾರೆ, ವಾಹನಗಳ ಓಡಾಡಲು ಕಷ್ಟಪಡುವಂತಹ ನಿರ್ಮಾಣ ಆಗುತ್ತಿದೆ. ಇಷ್ಟಕ್ಕೆಲ್ಲ ಕಾರಣ ಚರಂಡಿ ವ್ಯವಸ್ಥೆ ಸರಿ ಇಲ್ಲದಿರೋದು.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗ್ತಿದೆ. ಟ್ರಾಫಿಕ್ ಪೊಲೀಸರೊಬ್ಬರು ನದಿಯಂತಾಗಿದ್ದ ರಸ್ತೆಗೆ ಇಳಿದು, ನೀರನ್ನು ಚರಂಡಿಗೆ ಬಿಡುವ ಕೆಲಸ ಮಾಡಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದ್ದು, ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.

ವಿಡಿಯೋದಲ್ಲಿ ಏನಿದೆ?

ರಸ್ತೆ ಮಧ್ಯೆ ನೀರು ನಿಂತಿದೆ. ವಾಹನಗಳ ಸಂಚಾರಕ್ಕೆ ಅಡಚಣೆ ಆಗಿದೆ. ರಸ್ತೆ ತುಂಬಾ ನೀರು ನಿಂತಿರೋದ್ರಿಂದ ಎಲ್ಲಿ ಗುಂಡಿಯಿದೆ, ಎಲ್ಲಿ ರಸ್ತೆ ಸರಿ ಇದೆ ಅನ್ನೋದೇ ಗೊತ್ತಾಗ್ತಿಲ್ಲ. ಇದರ ಮಧ್ಯೆ ವಾಹನ ಸವಾರರು ಹರಸಾಹಸ ಮಾಡುತ್ತಿದ್ದಾರೆ. ಹರಿಬರೆಯಲ್ಲಿ ಅದೇ ರಸ್ತೆಯಲ್ಲೇ ವಾಹನ ಚಲಾಯಿಸಿಕೊಂಡು ಹೋಗ್ತಿದ್ದಾರೆ. ಆರಂಭದಲ್ಲಿ ಟ್ರಾಫಿಕ್ ಪೊಲೀಸ್, ರಸ್ತೆಯಲ್ಲಿ ನಿಂತಿದ್ದ ನೀರನ್ನ ಮೋರಿಗೆ ಕಳುಹಿಸುವುದು ಹೇಗೆ ನೋಡಿದ್ದಾರೆ. ನಂತರ ಕಸಕಡ್ಡಿಗಳಿಂದ ತುಂಬಿ ನೀರು ಸರಾಗವಾಗಿ ಇಳಿಯದ ಜಾಗವನ್ನ ಪತ್ತೆ ಮಾಡಿ, ತಮ್ಮ ಕೈಯಾರೇ ಅದನ್ನು ಕ್ಲೀನ್ ಮಾಡಿದ್ದಾರೆ. ನಂತರ ಸ್ಥಳೀಯರೊಬ್ಬರು ಪೊಲೀಸ್ ಅಧಿಕಾರಿಗೆ ಸಹಾಯ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗ್ತಿದ್ದು, ಪೊಲೀಸ್ ಅಧಿಕಾರಿಗಳ ಈ ಮಾನವೀಯ ಸೇವೆಗೆ ಮೆಚ್ಚುಗೆ ವ್ಯಕ್ತವಾಗ್ತಿದೆ..

View post on Instagram
 

ಇಂದು ಕೂಡ ಮಳೆ ಸಾಧ್ಯತೆ

ಸಂಜೆ ವೇಳೆಗೆ ಇವತ್ತೂ ಕೂಡ ಮಳೆ ಬರುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.. ಕೇವಲ ಬೆಂಗಳೂರು ಮಾತ್ರವಲ್ಲ, ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಮೂರು ದಿನಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನ ನೀಡಿದೆ. ಸೆಪ್ಟೆಂಬರ್ 23ರಂದು ಉತ್ತರ ಒಳನಾಡಿನಲ್ಲಿ ಗಂಟೆಗೆ 40–50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ. ಸೆಪ್ಟೆಂಬರ್ 23ರಂದು ಉತ್ತರ ಒಳನಾಡಿನಲ್ಲಿ ಅತಿ ಭಾರೀ ಮಳೆಯ ಎಚ್ಚರಿಕೆಯನ್ನ ನೀಡಿದೆ.

ಜೊತೆಗೆ ಸೆಪ್ಟೆಂಬರ್ 23 ಮತ್ತು 24ರಂದು ದಕ್ಷಿಣ ಒಳನಾಡಿನಲ್ಲಿ ಮಳೆ ಬರುವ ಸೂಚನೆ ಇದೆ. ಸೆಪ್ಟೆಂಬರ್ 24ರಂದು ಕರಾವಳಿ ಕರ್ನಾಟಕದಲ್ಲಿ ಅತ್ಯಂತ ಭಾರೀ ಮಳೆ ಆಗುವ ಸಾಧ್ಯತೆ. ಸೆಪ್ಟೆಂಬರ್ 22 ಮತ್ತು 25ರಂದು ಕರಾವಳಿಯಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ. ಸೆಪ್ಟೆಂಬರ್ 26 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಇಳಿಕೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಸಂಜೆ ಮಳೆ ಬಂತು ಅಂದ್ರೆ ಒಂದೆಲ್ಲ ಒಂದು ಅನಾಹುತ ಗ್ಯಾರಂಟಿ ಅಂತಲೇ. ನೀರು ನಿಲ್ಲೋದು ಸಾಮಾನ್ಯವಾಗಿಬಿಟ್ಟಿದೆ. ಸಣ್ಣ ಮಳೆ ಬಂದ್ರೂ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿ ಕೆಟ್ಟ ಟ್ರಾಫಿಕ್ ಜಾಮ್ ಉಂಟಾಗಲಿದೆ. ಮಳೆ ಬರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಕೆಲಸ ಮುಗಿಸಿ ಮನೆ ಸೇರೋದು ಒಳ್ಳೆಯದು.