- Home
- Karnataka Districts
- Bengaluru Urban
- ಬೆಂಗಳೂರು: ಆಸ್ತಿ ದಾಖಲೆಗಳ ನಿರ್ವಹಣೆಗೆ ನೂತನ 'ಇ-ಆಸ್ತಿ 2.0' ವ್ಯವಸ್ಥೆ ಲೋಕಾರ್ಪಣೆ - ಕೃಷ್ಣ ಬೈರೇಗೌಡ
ಬೆಂಗಳೂರು: ಆಸ್ತಿ ದಾಖಲೆಗಳ ನಿರ್ವಹಣೆಗೆ ನೂತನ 'ಇ-ಆಸ್ತಿ 2.0' ವ್ಯವಸ್ಥೆ ಲೋಕಾರ್ಪಣೆ - ಕೃಷ್ಣ ಬೈರೇಗೌಡ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಆಸ್ತಿ ದಾಖಲೆಗಳ ನಿರ್ವಹಣೆ ಸರಳಗೊಳಿಸಲು 'ಇ-ಆಸ್ತಿ 2.0' ವ್ಯವಸ್ಥೆ ಲೋಕಾರ್ಪಣೆ ಮಾಡಲಾಗಿದೆ. ಕೃತಕ ಬುದ್ಧಿಮತ್ತೆ (AI) ಒಳಗೊಂಡಿರುವ ತಂತ್ರಜ್ಞಾನವು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಜೊತೆಗೆ ಸಾರ್ವಜನಿಕರಿಗೆ ಸುಲಭವಾಗಿ ಇ-ಖಾತಾ ಪಡೆಯಲು ನೆರವಾಗಲಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಆಸ್ತಿ ದಾಖಲೆಗಳ ನಿರ್ವಹಣೆಯನ್ನು ಮತ್ತಷ್ಟು ಸರಳಗೊಳಿಸುವ ಮತ್ತು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ನೂತನ ತಂತ್ರಜ್ಞಾನ ಆಧಾರಿತ ‘ಇ-ಆಸ್ತಿ 2.0’ ವ್ಯವಸ್ಥೆಯನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ಅಧಿಕೃತವಾಗಿ ಲೋಕಾರ್ಪಣೆ ಮಾಡಿದರು.
ಬೆಂಗಳೂರಿನಲ್ಲಿ 35 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಈ ಪೈಕಿ ಈಗಾಗಲೇ 23-24 ಲಕ್ಷಕ್ಕೂ ಹೆಚ್ಚು ಆಸ್ತಿ ದಾಖಲೆಗಳನ್ನು ಗಣಕೀಕರಣಗೊಳಿಸಿ ಡ್ರಾಫ್ಟ್ ಖಾತಾಗಳನ್ನು ವಿತರಿಸಲಾಗಿದೆ. ಸುಮಾರು 11 ಲಕ್ಷ ಆಸ್ತಿ ಮಾಲೀಕರು ತಮ್ಮ ಅಂತಿಮ ಇ-ಖಾತಾವನ್ನು ಪಡೆದುಕೊಂಡಿದ್ದಾರೆ ಎಂದು ಸಚಿವರು ಈ ವೇಳೆ ಮಾಹಿತಿ ನೀಡಿದರು.
ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ:
ಈ ಹಿಂದೆ ಆಸ್ತಿ ದಾಖಲೆಗಳು ಕಾಗದದ ರೂಪದಲ್ಲಿದ್ದು, ತಿದ್ದುಪಡಿ ಹಾಗೂ ಮಧ್ಯವರ್ತಿಗಳ ಹಾವಳಿ ಹೆಚ್ಚಿತ್ತು. ಆದರೆ ಇ-ಖಾತಾ ವ್ಯವಸ್ಥೆಯ ತಂತ್ರಜ್ಞಾನ ಆಧಾರಿತ ಮತ್ತು ನಾಗರಿಕ ಕೇಂದ್ರಿತ ಸೇವೆಗಾಗಿ ಈಗಾಗಲೇ 'ರಾಷ್ಟ್ರೀಯ ಇ-ಆಡಳಿತ 2025 ಚಿನ್ನದ ಪ್ರಶಸ್ತಿ' ಲಭಿಸಿದೆ. ಸಾರ್ವಜನಿಕರ ಶೋಷಣೆ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಈಗ 'ಇ-ಆಸ್ತಿ 2.0' ಅನ್ನು ಮತ್ತಷ್ಟು ಜನಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
‘ಇ-ಆಸ್ತಿ 2.0’ ನ ಪ್ರಮುಖ ವಿಶೇಷತೆಗಳು:
ಸುಲಭ ಪ್ರಕ್ರಿಯೆ: ಹಿಂದಿನ ವ್ಯವಸ್ಥೆಯಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಹಂತಗಳು ನಾಗರಿಕರಿಗೆ ಕಷ್ಟಕರವಾಗಿದ್ದವು. ಈಗ ಬಳಕೆದಾರರ ಅನುಭವವನ್ನು ಸುಧಾರಿಸಿ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ.
ತಿದ್ದುಪಡಿಗೆ ಅವಕಾಶ: ಖಾತಾದಲ್ಲಿ ಹೆಸರು ತಪ್ಪಾಗಿರುವುದು, ಹಿಂದಿನ ಮಾಲೀಕರ ಹೆಸರು ಮುಂದುವರಿದಿರುವುದು ಅಥವಾ ವಿಸ್ತೀರ್ಣ ವ್ಯತ್ಯಾಸದಂತಹ ಸಮಸ್ಯೆಗಳನ್ನು ಸುಲಭವಾಗಿ ಸರಿಪಡಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.
ಇಲಾಖೆಗಳ ಸಮನ್ವಯ: ಕಾವೇರಿ ವ್ಯವಸ್ಥೆ, ಬೆಂಗಳೂರು ಜಲಮಂಡಳಿ (BWSSB) ಹಾಗೂ ಬೆಸ್ಕಾಂ (BESCOM) ಇಲಾಖೆಗಳೊಂದಿಗೆ ಸಂಯೋಜನೆಗೊಳಿಸಲಾಗಿದ್ದು, ಸಾರ್ವಜನಿಕರು ವಿವಿಧ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ.
AI ತಂತ್ರಜ್ಞಾನ: ದಾಖಲೆಗಳ ಪರಿಶೀಲನೆ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಲಾಗಿದೆ. ಹೊರನಾಡಿನಲ್ಲಿರುವವರಿಗೂ ಅನುಕೂಲವಾಗಲು ಡಿಜಿಟಲ್ ಸಹಿ ಸೌಲಭ್ಯ ಕಲ್ಪಿಸಲಾಗಿದೆ.
ಆನ್‌ಲೈನ್ ಬೈಫರ್ಕೇಶನ್ ಮಾಡ್ಯೂಲ್: ಮುಂದಿನ ಸೋಮವಾರದಿಂದ ಖಾತಾ ಬೈಫರ್ಕೇಶನ್‌ಗಾಗಿ ಆನ್ಲೈನ್ ಮಾಡ್ಯೂಲ್ ಲಭ್ಯವಾಗಲಿದ್ದು, 20,000 ಚದರ ಅಡಿವರೆಗೆ ವಿಸ್ತೀರ್ಣದ ಆಸ್ತಿಗಳಿಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಇ-ಖಾತಾ ಪಡೆಯಬಹುದು.
ಈ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

