ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕಾನೂನುಬಾಹಿರವಾಗಿ ಮೊಬೈಲ್ ತಲುಪಿಸಿದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಜೈಲು ವಾರ್ಡನ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ಬೆಂಗಳೂರು (ಸೆ.11): ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲುವಾಸ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೈಲಿನೊಳಗೆ ಕಾನೂನುಬಾಹಿರವಾಗಿ ಮೊಬೈಲ್ ಫೋನ್, ಸಿಮ್ ಕಾರ್ಡ್, ಚಾರ್ಜರ್ ಹಾಗೂ ಪೆನ್ ಡ್ರೈವ್ ತಲುಪಿಸಿದ ಅಕ್ರಮ ಜಾಲವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಜೈಲು ಸಿಬ್ಬಂದಿ (ವಾರ್ಡನ್) ಸೇರಿದಂತೆ ಒಟ್ಟು ಐದು ಜನ ಆರೋಪಿಗಳನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಪ್ರಜ್ವಲ್ ರೇವಣ್ಣ ಮೊಬೈಲ್ ಹ್ಯಾಂಡ್‌ಸೆಟ್‌ಗಾಗಿ 70,000 ರೂಪಾಯಿ ಹಾಗೂ ಸಿಮ್ ಕಾರ್ಡ್‌ಗಾಗಿ 30,000 ರೂಪಾಯಿ ಸೇರಿದಂತೆ ಒಟ್ಟು 1 ಲಕ್ಷ ರೂಪಾಯಿ ಹಣವನ್ನು ನೀಡಿ ಜೈಲಿನೊಳಗೆ ಫೋನ್ ತರಿಸಿಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಬಾಯಲ್ಲಿ ಸಿಮ್ ಅಡಗಿಸಿ ತಂದು ಪ್ರಜ್ವಲ್‌ಗೆ ನೀಡಿದ್ದ ವಿಚಾರಣಾಧೀನ ಕೈದಿ!
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಜೈಲು ವಾರ್ಡನ್ ಪ್ರಕಾಶ್ ಗಾವಡೆ ಎಂಬಾತ ಮೊಬೈಲ್ ಫೋನ್ ಅನ್ನು ಪ್ರಜ್ವಲ್ ರೇವಣ್ಣಗೆ ಖುದ್ದಾಗಿ ಹಸ್ತಾಂತರಿಸಿದ್ದ. ಇನ್ನು ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿಯಾಗಿರುವ ವಿಚಾರಣಾಧೀನ ಕೈದಿ ಮಹಮ್ಮದ್ ತೌಸಿಫ್, ಸಿಮ್ ಕಾರ್ಡ್ ಅನ್ನು ತನ್ನ ಬಾಯಲ್ಲಿ ಅಡಗಿಸಿಕೊಂಡು ಬಂದು ಜೈಲಿನೊಳಗೆ ಪ್ರಜ್ವಲ್‌ಗೆ ತಲುಪಿಸಿದ್ದ.
ಬಳಿಕ ಪ್ರಕಾಶ್ ಗಾವಡೆ, ಮುಂದಿನ ಭೇಟಿಗಳ ಸಂದರ್ಭದಲ್ಲಿ ಚಾರ್ಜರ್ ಮತ್ತು ಪೆನ್ ಡ್ರೈವ್ ಅನ್ನು ಮಾಜಿ ಸಂಸದನಿಗೆ ನೀಡಿದ್ದ. ಅಂದಹಾಗೆ, ಈ ಜೈಲು ಸಿಬ್ಬಂದಿ ಪ್ರಕಾಶ್ ಗಾವಡೆ ಈ ಹಿಂದೆ ಜೈಲಿನೊಳಗೆ ಗಾಂಜಾ ಸರಬರಾಜು ಮಾಡಿದ ಆರೋಪದ ಮೇಲೆಯೂ ಬಂಧನಕ್ಕೊಳಗಾಗಿ ಅಮಾನತುಗೊಂಡಿದ್ದ.
ಸಿಸಿಬಿ ದಾಳಿ ವೇಳೆ ಸಿಕ್ಕಿಬಿದ್ದಿತ್ತು ರಹಸ್ಯ ಮೊಬೈಲ್
ಕಳೆದ ಆಗಸ್ಟ್‌ನಲ್ಲಿ ಸೆಂಟ್ರಲ್ ಕ್ರೈಮ್ ಬ್ರಾಂಚ್ (CCB) ಪೊಲೀಸರು ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಾಕ್ ಮೇಲೆ ದಿಢೀರ್ ದಾಳಿ ನಡೆಸಿದಾಗ, ಮೊಬೈಲ್ ಫೋನ್, ಸಿಮ್ ಕಾರ್ಡ್, ಚಾರ್ಜರ್ ಮತ್ತು ಪೆನ್ ಡ್ರೈವ್ ಜಪ್ತಿಯಾಗಿತ್ತು. ಈ ಸಂಬಂಧ ಪ್ರಜ್ವಲ್ ರೇವಣ್ಣ ಹಾಗೂ ಅವರ ಸಹ-ಕೈದಿ ಪ್ರತಾಪ್ ರೈ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ, ಪ್ರತಾಪ್ ರೈ ತಾನು ನಿರಪರಾಧಿ ಎಂದಿದ್ದು, ನಾನು ಈ ಬ್ಯಾರಾಕ್‌ಗೆ ಬರುವುದಕ್ಕೂ ಮೊದಲಿನಿಂದಲೂ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸುತ್ತಿದ್ದ ಎಂದು ತಿಳಿಸಿದ್ದ.
ಬಂಧಿತ ಐವರು ಆರೋಪಿಗಳನ್ನು ನವೀನ್ ಕುಮಾರ್, ಮಂಜುನಾಥ್, ಮಹಮ್ಮದ್ ತೌಸಿಫ್, ಸಿದ್ದಿಕಿ ಹಾಗೂ ಜೈಲು ವಾರ್ಡನ್ ಗಾವಡೆ ಎಂದು ಗುರುತಿಸಲಾಗಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಎಂ. ನಾರಾಯಣ ತಿಳಿಸಿದ್ದಾರೆ. ನವೀನ್ ಮತ್ತು ಸಿದ್ದಿಕಿ ಫೋನ್ ಹಾಗೂ ಸಿಮ್ ಕಾರ್ಡ್ ವ್ಯವಸ್ಥೆ ಮಾಡಿದ್ದರು. ಮಂಜುನಾಥ್ ಇವರನ್ನು ಪ್ರಜ್ವಲ್ ಮತ್ತು ಗಾವಡೆಗೆ ಸಂಪರ್ಕಿಸಿದ್ದ. ಫೋನ್ ಹಾಗೂ ಸಿಮ್ ಬೆಲೆಯ ಹೊರತಾಗಿ ಗಾವಡೆಗೆ 1 ಲಕ್ಷ ರೂ. (ಫೋನ್‌ಗೆ 70,000 ರೂ. ಮತ್ತು ಸಿಮ್‌ಗೆ 30,000 ರೂ.) ನೀಡಲಾಗಿತ್ತು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂದೇ ವರ್ಷದಲ್ಲಿ ಜೈಲಿನಲ್ಲಿ 300 ಮೊಬೈಲ್‌ಗಳು ವಶ!
ಈ ಪ್ರಸಕ್ತ ವರ್ಷ ಒಂದರಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಂದ ಸುಮಾರು 300 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್, "ಕಾರಾಗೃಹ ಅಧಿಕಾರಿಗಳು 299 ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ಸಿಸಿಬಿ ಪೊಲೀಸರು ದಾಳಿಯ ವೇಳೆ ಪ್ರಜ್ವಲ್ ರೇವಣ್ಣ ಅವರಿಂದ 1 ಫೋನ್ ವಶಪಡಿಸಿಕೊಂಡಿದ್ದಾರೆ. ನಾನು ಅಧಿಕಾರ ವಹಿಸಿಕೊಂಡ ನಂತರ, ಕಟ್ಟುನಿಟ್ಟಿನ ಕಣ್ಣಾವಲು ಇಡಲು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಗಳನ್ನು ಇತರ ಕೇಂದ್ರ ಮತ್ತು ಜಿಲ್ಲಾ ಕಾರಾಗೃಹಗಳಿಗೆ ವರ್ಗಾಯಿಸಲಾಗಿದೆ" ಎಂದು ತಿಳಿಸಿದ್ದಾರೆ.
ಮತ್ತಿಬ್ಬರು ಜೈಲು ಸಿಬ್ಬಂದಿಗಳ ಬಂಧನ
ಕೈದಿಗಳಿಗೆ ಮೊಬೈಲ್ ಪೂರೈಸುತ್ತಿದ್ದ ಆರೋಪದ ಮೇಲೆ ಚೀಫ್ ವಾರ್ಡನ್ ವಿಜಯ್ ಕುಮಾರ್ ಮತ್ತು ವಾರ್ಡನ್ ಶ್ರೀಕಾಂತ್ ನಾಯಕ್ ಎಂಬುವವರನ್ನೂ ಪೊಲೀಸರು ಬಂಧಿಸಿದ್ದಾರೆ. ಭರತ್ ಅಲಿಯಾಸ್ ಕೆಟಿಎಮ್ ಭರತ್ ಎಂಬ ಕೈದಿಗೆ ವಿಜಯ್ ಕುಮಾರ್ ಮೊಬೈಲ್ ನೀಡಿದ್ದ. 2026 ರ ಮೇ ತಿಂಗಳಲ್ಲಿ ನಡೆದ ದಾಳಿಯ ವೇಳೆ ಭರತ್ ಬಳಿ ಒಂದು ಮೊಬೈಲ್ ಹಾಗೂ ಸಿಮ್ ಕಾರ್ಡ್ ಸಿಕ್ಕಿತ್ತು. ತನಿಖೆಯ ವೇಳೆ ಚೀಫ್ ವಾರ್ಡನ್ ಆಗಿದ್ದ ವಿಜಯ್ ಕುಮಾರ್ ತನ್ನ ಉಡುಪಿನಲ್ಲಿ ಫೋನ್ ಬಚ್ಚಿಟ್ಟುಕೊಂಡು ಮುಖ್ಯ ದ್ವಾರದ ತಪಾಸಣೆಯಿಂದ ತಪ್ಪಿಸಿಕೊಂಡು ಒಳಗೆ ತಂದಿರುವುದು ಗೊತ್ತಾಗಿದೆ.
ಇನ್ನೊಬ್ಬ ವಾರ್ಡನ್ ಶ್ರೀಕಾಂತ್ ನಾಯಕ್ ವಿವಿಧ ಬ್ಯಾರಾಕ್‌ಗಳಲ್ಲಿದ್ದ ಕೈದಿಗಳಿಗೆ ಬರೋಬ್ಬರಿ 12 ಮೊಬೈಲ್ ಫೋನ್‌ಗಳನ್ನು ಸರಬರಾಜು ಮಾಡಿದ್ದ. ಜನವರಿಯಲ್ಲಿ ಬ್ಯಾರಾಕ್‌ಗಳ ಮೇಲೆ ದಾಳಿ ನಡೆಸಿ 4 ಮೊಬೈಲ್, 2 ಸಿಮ್ ಹಾಗೂ ಚಾರ್ಜರ್ ವಶಪಡಿಸಿಕೊಂಡು ತನಿಖೆ ನಡೆಸಿದಾಗ, ಶ್ರೀಕಾಂತ್ ನಾಯಕ್ ಈ ಕೃತ್ಯ ಎಸಗಿರುವುದು ಬಹಿರಂಗವಾಗಿದೆ.


