ತನ್ನ ಪ್ರಧಾನ ಕಚೇರಿಯ ಮರುಅಭಿವೃದ್ಧಿಗಾಗಿ, ಮೂರು ಬಿಎಂಟಿಸಿ ಸಂಕೀರ್ಣಗಳಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳುವ ಯೋಜನೆಯನ್ನು ಬಿಡಿಎ ಕೈಬಿಟ್ಟಿದೆ. ಆಡಳಿತಾತ್ಮಕ ತೊಂದರೆಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಇದೀಗ ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸುತ್ತಿದೆ.

ಬೆಂಗಳೂರು (ಸೆ.11): ತನ್ನ ಹಾಲಿ ಪ್ರಧಾನ ಕಚೇರಿಯನ್ನು ಕೆಡವಿ ನೂತನ ಮರುಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA), ತಾತ್ಕಾಲಿಕವಾಗಿ ತನ್ನ ಕಚೇರಿಗಳನ್ನು ಮೂರು ಬೇರೆ ಬೇರೆ ಬಿಎಂಟಿಸಿ (BMTC) ಸಂಕೀರ್ಣಗಳಿಗೆ ಸ್ಥಳಾಂತರಿಸುವ ಪ್ರಸ್ತಾಪವನ್ನು ಸಂಪೂರ್ಣವಾಗಿ ಕೈಬಿಟ್ಟಿದೆ. ತನ್ನ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಂದೇ ಸೂರಿನಡಿ ಸಂಯೋಜಿಸಲು ಸಾಧ್ಯವಾಗುವಂತಹ ಏಕೈಕ ಸೂಕ್ತ ಜಾಗಕ್ಕಾಗಿ ಪ್ರಾಧಿಕಾರವು ಈಗ ಹುಡುಕಾಟ ಪ್ರಾರಂಭಿಸಿದೆ.

ಆರಂಭದಲ್ಲಿ ಬಿಡಿಎ, ಶಾಂತಿನಗರ, ಜಯನಗರ ಮತ್ತು ಕಲಾಸಿಪಾಳ್ಯದಲ್ಲಿರುವ ಬಿಎಂಟಿಸಿ ಸಂಕೀರ್ಣಗಳಲ್ಲಿ ಸುಮಾರು 95,747 ಚದರ ಅಡಿ ಕಚೇರಿ ಜಾಗವನ್ನು ಬಾಡಿಗೆಗೆ ಪಡೆಯಲು ಪರಿಶೀಲನೆ ನಡೆಸಿತ್ತು. ನೂತನ ಕಚೇರಿ ನಿರ್ಮಾಣದ ಅವಧಿಯಲ್ಲಿ ತಾತ್ಕಾಲಿಕ ವ್ಯವಸ್ಥೆಯಾಗಿ ಇದನ್ನು ಬಳಸಲು ಯೋಜಿಸಲಾಗಿತ್ತು. ಆದರೆ ಸಿಬ್ಬಂದಿ ಮೂರು ವಿಭಿನ್ನ ಸ್ಥಳಗಳಲ್ಲಿ ಹಂಚಿಹೋಗುವುದರಿಂದ ಆಡಳಿತಾತ್ಮಕವಾಗಿ ತೊಂದರೆಯಾಗಲಿದೆ ಎಂದು ಭಾವಿಸಿದ ಬಿಡಿಎ, ಪ್ರಸ್ತುತ ಈ ಯೋಜನೆಯಿಂದ ಹಿಂದೆ ಸರಿದಿದೆ.

63.53 ಲಕ್ಷ ರೂ. ಬಾಡಿಗೆ, 10 ಕೋಟಿ ರೂ. ಇಂಟೀರಿಯರ್ ವೆಚ್ಚ

ಮೂರು ಕಟ್ಟಡಗಳಿಗೆ ಬಿಎಂಟಿಸಿಯು ತಿಂಗಳಿಗೆ 63.53 ಲಕ್ಷ ರೂಪಾಯಿ ಬಾಡಿಗೆಯನ್ನು ಕೋರಿತ್ತು. ಇದರ ಜೊತೆಗೆ ಬಿಡಿಎ ಸಿಬ್ಬಂದಿಗಾಗಿ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ, ವಿದ್ಯುತ್, ಡಾಟಾ ನೆಟ್‌ವರ್ಕ್ ಕಾಮಗಾರಿಗಳು ಹಾಗೂ ಇತರ ಆಂತರಿಕ ವಿನ್ಯಾಸಗಳಿಗೆ (Interior modifications) ಅಂದಾಜು 10 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು.

ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬಿಎಂಟಿಸಿ ಕಟ್ಟಡಗಳ ಆಯ್ಕೆಯನ್ನು ಬದಿಗಿಟ್ಟು, ಒಂದೇ ಸ್ಥಳವನ್ನು ಹುಡುಕಲು ನಿರ್ಧರಿಸಲಾಗಿದೆ. ಈ ಮಧ್ಯೆ, ಕಚೇರಿ ನಿರ್ವಹಣೆಗಾಗಿ ತನ್ನದೇ ಆದ ಸ್ವಂತ ವಾಣಿಜ್ಯ ಸಂಕೀರ್ಣಗಳು ಅಥವಾ ಇಂದಿರಾನಗರದಲ್ಲಿರುವ 'ಕೆಯುಐಡಿಎಫ್‌ಸಿ' (KUIDFC) ಸಂಕೀರ್ಣವನ್ನು ಬಳಸಿಕೊಳ್ಳುವ ಬಗ್ಗೆಯೂ ಬಿಡಿಎ ಚಿಂತನೆ ನಡೆಸುತ್ತಿದೆ.

ಸರ್ಕಾರದ ಅನುಮತಿಗೆ ಕಾಯುತ್ತಿರುವ ಪ್ರಾಧಿಕಾರ

ಕುಮಾರ ಪಾರ್ಕ್ ವೆಸ್ಟ್‌ನಲ್ಲಿರುವ ತನ್ನ ಹಾಲಿ ಪ್ರಧಾನ ಕಚೇರಿಯನ್ನು ನೆಲಸಮಗೊಳಿಸಲು ಬಿಡಿಎ ಇನ್ನು ಸಹ ರಾಜ್ಯ ಸರ್ಕಾರದಿಂದ ಅಧಿಕೃತ ಅನುಮತಿಯನ್ನು ಪಡೆದುಕೊಂಡಿಲ್ಲ. ಹಾಲಿ ಜಾಗದಲ್ಲಿ ಬಹುಮಹಡಿಯ ನೂತನ ಕಚೇರಿಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಆದಾಗ್ಯೂ, ಉತ್ತಮ ಸ್ಥಿತಿಯಲ್ಲಿರುವ ಹಾಲಿ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

"ಇದು ರಿಯಲ್ ಎಸ್ಟೇಟ್ ಹಿತಾಸಕ್ತಿಯ ಯೋಜನೆ": ಬಿ.ಎಂ. ಶಿವಶಂಕರ್ ಆರೋಪ

ಜಯಪ್ರಕಾಶ್ ನಾರಾಯಣ ವಿಚಾರ್ ವೇದಿಕೆಯ ಅಧ್ಯಕ್ಷ ಬಿ.ಎಂ. ಶಿವಶಂಕರ್ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, "ಪ್ರಸ್ತುತ ಬಿಡಿಎ ಪ್ರಧಾನ ಕಚೇರಿ ಇರುವ ಸುಮಾರು 2.5 ಎಕರೆ ಜಾಗವು ಮೂಲತಃ 1945 ರಲ್ಲಿ ಸ್ಥಾಪನೆಯಾಗಿದ್ದ 'ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್' (CITB) ಗೆ ಸೇರಿದ ಐತಿಹಾಸಿಕ ತಾಣವಾಗಿದೆ. ಇದು ಆಧುನಿಕ ಬೆಂಗಳೂರಿನ ಇತಿಹಾಸದ ಭಾಗವಾಗಿರುವ ಪರಂಪರೆಯ ತಾಣ" ಎಂದು ಹೇಳಿದ್ದಾರೆ.

ಅಲ್ಲದೆ, ಈ ಕಟ್ಟಡ ನೆಲಸಮ ಯೋಜನೆಯ ಹಿಂದೆ ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿರುವ ಶಂಕೆಯಿದೆ ಎಂದು ಆರೋಪಿಸಿರುವ ಅವರು, ಇತ್ತೀಚಿನ ವರ್ಷಗಳಲ್ಲಷ್ಟೇ ಅಧ್ಯಕ್ಷರ ಕೊಠಡಿ ಮತ್ತು ಗ್ಲಾಸ್‌ಹೌಸ್ ಸೇರಿದಂತೆ ಪ್ರಧಾನ ಕಚೇರಿಯ ವಿವಿಧ ಸ್ಥಳಗಳ ನವೀಕರಣಕ್ಕಾಗಿ ಬಿಡಿಎ ಕೋಟ್ಯಂತರ ರೂಪಾಯಿ ಹಣವನ್ನು ಪೋಲು ಮಾಡಿದೆ ಎಂದು ಬೆಟ್ಟು ಮಾಡಿಕೊಟ್ಟಿದ್ದಾರೆ.

ಆಯುಕ್ತ ಪಿ. ಮಣಿವಣ್ಣನ್ ಸ್ಪಷ್ಟನೆ

ಮರುಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಕಳವಳಗಳಿಗೆ ಸ್ಪಷ್ಟನೆ ನೀಡಿರುವ ಬಿಡಿಎ ಆಯುಕ್ತ ಪಿ. ಮಣಿವಣ್ಣನ್, ಪ್ರಸ್ತಾವನೆಯು ಇನ್ನು ಪ್ರಾರಂಭಿಕ ಹಂತದಲ್ಲಿದೆ ಎಂದು ತಿಳಿಸಿದ್ದಾರೆ. "ನಾವು 30 ಮಹಡಿಗಳ ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ಇನ್ನು ಅಂತಿಮಗೊಳಿಸಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.