ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಮೇಲಿನ ಇಡಿ ದಾಳಿಯನ್ನು ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ಕರೆದಿದ್ದಾರೆ. ದಾಳಿಯಲ್ಲಿ ಸಿಕ್ಕ ಹಣಕ್ಕೆ ಮತ್ತು ವಿದೇಶಿ ಕಂಪನಿ ನೋಂದಣಿಗೆ ಸ್ಪಷ್ಟನೆ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು: "ಕೇಂದ್ರದ ಬಿಜೆಪಿ ಸರ್ಕಾರವು ಪ್ರತಿಪಕ್ಷ ನಾಯಕರನ್ನೇ ಗುರಿಯಾಗಿಸಿಕೊಂಡು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡುವುದು ಹೊಸದೇನಲ್ಲ," ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಮೇಲಿನ ಇಡಿ (ED) ದಾಳಿ ಹಾಗೂ ವಿದೇಶಿ ಹೂಡಿಕೆ ಆರೋಪಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಹಲವು ವಿಷಯಗಳನ್ನು ಸ್ಪಷ್ಟಪಡಿಸಿದರು.

ಕೇಂದ್ರದಿಂದ ವಿರೋಧ ಪಕ್ಷಗಳ ಟಾರ್ಗೆಟ್

"ಕೇವಲ ಕಾಂಗ್ರೆಸ್ ನಾಯಕರನ್ನೇ ಏಕೆ ಗುರಿಯಾಗಿಸಲಾಗುತ್ತಿದೆ? ಬಿಜೆಪಿಯ ನಾಯಕರ ಮೇಲೆ ಏಕೆ ದಾಳಿಗಳು ನಡೆಯುತ್ತಿಲ್ಲ? ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಕಾಲದಿಂದಲೂ ಕಾಂಗ್ರೆಸ್ ನಾಯಕರನ್ನು ರಾಜಕೀಯವಾಗಿ ಕುಗ್ಗಿಸುವ ಯತ್ನ ನಡೆಯುತ್ತಲೇ ಬಂದಿದೆ. ಈ ಹಿಂದೆ ಮಾಜಿ ಸಚಿವ ನಾಗೇಂದ್ರ ಅವರನ್ನೂ ಟಾರ್ಗೆಟ್ ಮಾಡಲಾಗಿತ್ತು. ನಾವು ವಾಲ್ಮೀಕಿ ನಾಯಕ ಸಮುದಾಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದಿರುವುದೇ ಕೆಲವರಿಗೆ ನುಂಗಲಾರದ ತೂತಾಗಿದೆ. ಆದರೆ, ಇಡಿ ದಾಳಿ ವಿಚಾರದಲ್ಲಿ ನಾನು ಯಾವುದೇ ಜಾತಿ ಕಾರ್ಡ್ ಬಳಸುವುದಿಲ್ಲ. ಸಾರ್ವಜನಿಕ ಜೀವನದಲ್ಲಿದ್ದಾಗ ಇಂತಹ ಆರೋಪಗಳಿಂದ ಮುಕ್ತರಾಗುವುದು ನಮ್ಮ ಕರ್ತವ್ಯ" ಎಂದರು.

ಎರಡು ಕೋಟಿ ರೂಪಾಯಿ ಮತ್ತು ವ್ಯವಹಾರದ ಸ್ಪಷ್ಟನೆ

ದಾಳಿಯ ವೇಳೆ ಸಿಕ್ಕ ಹಣದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, "ಸಿಕ್ಕಿರುವ ಎರಡು ಕೋಟಿ ರೂಪಾಯಿ ಹಣದ ಮೂಲ ಸಂಪೂರ್ಣವಾಗಿ ನಮ್ಮದೇ ಆಗಿದೆ. ನಮ್ಮ ಸಮ್ಮಿಶ್ರ ಉದ್ಯಮದಲ್ಲಿ ವರ್ಷಕ್ಕೆ ಸುಮಾರು 2,000 ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಹೀಗಾಗಿ ಈ ಹಣದ ಬಗ್ಗೆ ಯಾವುದೇ ಗೊಂದಲವಿಲ್ಲ. ನನ್ನ ಮಗ ಮತ್ತು ಮಗಳ ಹೆಸರಿನಲ್ಲಿ ಆಫ್ರಿಕಾದಲ್ಲಿ ನೋಂದಾಯಿತ ಕಂಪನಿಯಿರುವುದು ನಿಜ. ಆದರೆ, ಅಲ್ಲಿ ಇನ್ನೂ ಯಾವುದೇ ವಹಿವಾಟು ಆರಂಭವಾಗಿಲ್ಲ. ಐಟಿ ಇಲಾಖೆಗೆ ಈಗಾಗಲೇ ಎಲ್ಲಾ ದಾಖಲೆಗಳನ್ನು ಸಲ್ಲಿಸಲಾಗಿದೆ. ಇಡಿ ತನಿಖಾಧಿಕಾರಿಗಳು ನೋಟಿಸ್ ನೀಡಿದಾಗ ಅವರಿಗೂ ಅಗತ್ಯ ದಾಖಲೆಗಳನ್ನು ಒದಗಿಸಿ ಸೂಕ್ತ ಉತ್ತರ ನೀಡುತ್ತೇನೆ," ಎಂದು ತಿಳಿಸಿದರು.

ವಿದೇಶಿ ಮೈನಿಂಗ್ ಮತ್ತು ಹೂಡಿಕೆ ಯೋಜನೆ

"ನನಗೆ ವಿದೇಶಗಳಲ್ಲಿ ಮೈನಿಂಗ್ ಮತ್ತು ಟ್ರೇಡಿಂಗ್ ಮಾಡುವ ಆಸಕ್ತಿಯಿದೆ. ಕಳೆದೆಂಟು-ಹತ್ತು ವರ್ಷಗಳಿಂದ ಹೂಡಿಕೆಗಾಗಿ ವಿವಿಧ ದೇಶಗಳನ್ನು ಪರಿಶೀಲಿಸುತ್ತಿದ್ದೇನೆ. ಆದರೆ, ಇಲ್ಲಿಯವರೆಗೆ ಯಾವುದೇ ಒಪ್ಪಂದ ಫೈನಲ್ ಆಗಿಲ್ಲ ಅಥವಾ ಹೂಡಿಕೆ ಮಾಡಿಲ್ಲ. ಮಾತುಕತೆ ಹಂತದಲ್ಲಿದ್ದಾಗಲೇ ಹೂಡಿಕೆ ಮುಗಿದಿದೆ ಎಂದು ಬಿಂಬಿಸಲಾಗುತ್ತಿದೆ," ಎಂದು ಸ್ಪಷ್ಟಪಡಿಸಿದರು.

ಪಕ್ಷದ ಬೆಂಬಲ ಮತ್ತು ಆಂತರಿಕ ಸಂಚಿನ ಶಂಕೆ

"ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ನಾಯಕರು ನನ್ನೊಂದಿಗೆ ಮಾತನಾಡಿದ್ದಾರೆ. ಸಿಎಂ ಅವರು ನಿನ್ನೆ ರಾತ್ರಿ ಭೇಟಿಯಾಗಿ ಧೈರ್ಯ ತುಂಬಿದ್ದು, ಈ ಪ್ರಕರಣವನ್ನು ಒಗ್ಗಟ್ಟಿನಿಂದ ಮತ್ತು ಕಾನೂನಾತ್ಮಕವಾಗಿ ಎದುರಿಸೋಣ ಎಂದು ಹೇಳಿದ್ದಾರೆ. ಈ ದೂರು ಸ್ವಪಕ್ಷದವರಿಂದ ಬಂದಿದೆಯೇ ಅಥವಾ ವಿರೋಧಿಗಳಿಂದ ಬಂದಿದೆಯೇ ಎಂಬುದನ್ನು ಶೀಘ್ರದಲ್ಲೇ ಪತ್ತೆ ಹಚ್ಚುತ್ತೇನೆ. ಇನ್ನು, ಬಿಜೆಪಿಯಿಂದ ನನಗ ಯಾವುದೇ ಆಫರ್ ಬಂದಿಲ್ಲ," ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.