ಪೂರ್ವ ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು ಅರ್ಧದಷ್ಟು ಪಿಜಿಗಳು ಅಕ್ರಮವಾಗಿವೆ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಲಾಗಿದೆ. ಇದರ ಬೆನ್ನಲ್ಲೇ, ಪಿಜಿಗಳ ಸುರಕ್ಷತೆ ಮತ್ತು ನಿಯಂತ್ರಣಕ್ಕಾಗಿ ಹೈಕೋರ್ಟ್ 81 ಅಂಶಗಳ ಸಮಗ್ರ ಮಾರ್ಗಸೂಚಿಯನ್ನು ಪ್ರಕಟಿಸಿದೆ. ನಿಯಮ ಉಲ್ಲಂಘಿಸುವ ಪಿಜಿಗಳನ್ನು ಮುಚ್ಚಿಸಲು ಮತ್ತು ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು: ರಾಜಧಾನಿಯ ಪ್ರಮುಖ ಟೆಕ್ ಕಾರಿಡಾರ್ ಆಗಿರುವ ಪೂರ್ವ ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು ಅರ್ಧದಷ್ಟು ಖಾಸಗಿ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹಗಳು ಸಂಪೂರ್ಣವಾಗಿ ಅಕ್ರಮವಾಗಿ ನಡೆಯುತ್ತಿವೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಪೂರ್ವ ಬೆಂಗಳೂರು ಒಂದರಲ್ಲೇ ಇರುವ ಒಟ್ಟು 5,000 ಪಿಜಿಗಳ ಸುಮಾರು 2,500 ಸಂಸ್ಥೆಗಳು ಲೈಸನ್ಸ್, ಕಟ್ಟಡ ಯೋಜನಾ ಅನುಮೋದನೆ ಹಾಗೂ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.

ಕಠಿಣ ಕ್ರಮದ ಎಚ್ಚರಿಕೆ:

ನಿಯಮ ಉಲ್ಲಂಘಿಸಿರುವ ಪ್ರತಿಯೊಂದು ಪಿಜಿ ಮಾಲೀಕರಿಗೂ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗುತ್ತಿದೆ. ಹೈಕೋರ್ಟ್ ಹಾಗೂ ಸಂಬಂಧಪಟ್ಟ ಸಿವಿಲ್ ನ್ಯಾಯಾಲಯಗಳಲ್ಲಿ ‘ಕ್ಯಾವಿಯಟ್’ ಅರ್ಜಿಗಳನ್ನು ಸಲ್ಲಿಸಲಾಗುತ್ತಿದ್ದು, ನಿಯಮಾನುಸಾರ ವಿಚಾರಣೆ ನಡೆಸಿದ ಬಳಿಕ ಕಾನೂನುಬಾಹಿರವಾಗಿ ನಡೆಯುತ್ತಿರುವ ಪಿಜಿಗಳನ್ನು ತಕ್ಷಣವೇ ಮುಚ್ಚಿಸಲಾಗುವುದು. ಅಗತ್ಯ ಬಿದ್ದರೆ ಅಕ್ರಮ ಕಟ್ಟಡ ಭಾಗಗಳನ್ನು ಕೆಡವಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರದ ವಕೀಲರು ಕೋರ್ಟ್‌ ಗೆ ಮಾಹಿತಿ ನೀಡಿದ್ದಾರೆ.

ಹೈಕೋರ್ಟ್‌ನಿಂದ 81 ಮಹತ್ವದ ನಿರ್ದೇಶನಗಳು:

ನಗರದಾದ್ಯಂತ ಇರುವ ಪಿಜಿಗಳ ಸುರಕ್ಷತೆ, ತಪಾಸಣೆ ಮತ್ತು ನಿಯಂತ್ರಣದ ಕುರಿತು ಸುದೀರ್ಘ ಮಧ್ಯಂತರ ಆದೇಶ ಹೊರಡಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ಬರೋಬ್ಬರಿ 81 ಅಂಶಗಳನ್ನೊಳಗೊಂಡ ಸಮಗ್ರ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ನಿಯಮಗಳು ಪಿಜಿ ನಿವಾಸಿಗಳ ಜೀವ, ಆರೋಗ್ಯ, ಸುರಕ್ಷತೆ ಹಾಗೂ ನೆರೆಹೊರೆಯವರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶವನ್ನು ಹೊಂದಿವೆ.

ಹೈಕೋರ್ಟ್‌ ಆದೇಶದ ಪ್ರಮುಖ ಅಂಶಗಳು:

  • ಪರವಾನಗಿ ನೀಡುವುದು ಒಂದು ಬಾರಿಯ ಪ್ರಕ್ರಿಯೆಯಾಗಬಾರದು. ಸ್ಥಳೀಯಾಡಳಿತವು ಪಿಜಿಗಳ ಗುರುತಿಸುವಿಕೆ, ನಿರಂತರ ತಪಾಸಣೆ ಮತ್ತು ನಿಯಮ ಪಾಲನೆಯ ಜಾರಿಗೆ ಶಾಶ್ವತ ವ್ಯವಸ್ಥೆ ರೂಪಿಸಬೇಕು.
  • ಕೇವಲ ಕಟ್ಟಡದ ಹೆಸರನ್ನು ನೋಡದೆ, ಅಲ್ಲಿ ವಾಸ್ತವದಲ್ಲಿ ನಡೆಯುತ್ತಿರುವ ವಸತಿ ಚಟುವಟಿಕೆಯ ನೈಜ ಸ್ವರೂಪವನ್ನು ಅಧಿಕಾರಿಗಳು ಪರಿಶೀಲಿಸಬೇಕು.
  • ಕಟ್ಟಡದ ಮಾಲೀಕರು, ಪಿಜಿ ನಿರ್ವಾಹಕರು ಮತ್ತು ದೈನಂದಿನ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿಗಳು ಕಾನೂನುಬದ್ಧ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಲೀಕತ್ವ ಮತ್ತು ನಿರ್ವಹಣೆ ಬೇರೆ ಬೇರೆಯಾಗಿದ್ದರೆ, ಕರಾರು ಪತ್ರದಲ್ಲಿ ಪ್ರತಿಯೊಬ್ಬರ ವಿವರ ಸ್ಪಷ್ಟವಾಗಿರಬೇಕು.
  • ಅನುಮತಿಸಲಾದ ಸಂಖ್ಯೆಗೆ ಮಾತ್ರ ಪ್ರವೇಶ ನೀಡಬೇಕು. ಸಿಸಿಟಿವಿ ಕ್ಯಾಮೆರಾ, ಅಗ್ನಿಶಾಮಕ ಉಪಕರಣಗಳು ಹಾಗೂ ನೈರ್ಮಲ್ಯ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ನಿರ್ವಾಹಕರೇ ಖಾತರಿಪಡಿಸಿಕೊಳ್ಳಬೇಕು.
  • ಅನುಮೋದಿತ ಕಟ್ಟಡ ನಕ್ಷೆಗೆ ವಿರುದ್ಧವಾಗಿ ನಿರ್ಮಿಸಲಾದ ಅಕ್ರಮ ಮಹಡಿಗಳು, ಟೆರೇಸ್ ಕೊಠಡಿಗಳು, ಪಾರ್ಟಿಷನ್ ಗಳು, ಪಾರ್ಕಿಂಗ್ ಮತ್ತು ಬಾಲ್ಕನಿಗಳ ದುರ್ಬಳಕೆ ಹಾಗೂ ಮಿತಿಮೀರಿದ ಜನಸಾಂದ್ರತೆಯ ಬಗ್ಗೆ ತಪಾಸಣೆ ವೇಳೆ ವಿಶೇಷ ಗಮನ ಹರಿಸಬೇಕು.

ಅಧಿಕಾರಿಗಳ ಬೇಜವಾಬ್ದಾರಿಗೆ ಕಟ್ಟುನಿಟ್ಟಿನ ಎಚ್ಚರಿಕೆ:

ಪಿಜಿಗಳಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಮುಂದೆ ಸಂಭವಿಸುವ ಯಾವುದೇ ಅಹಿತಕರ ಘಟನೆ ಅಥವಾ ಅನಾಹುತಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮಾಲೀಕರೇ ನೇರ ವೈಯಕ್ತಿಕ ಹೊಣೆಗಾರರಾಗುತ್ತಾರೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿದೆ.