ಎಕ್ಸ್ ಜಾಲತಾಣದಲ್ಲಿ ತಮಿಳು ಮತ್ತು ಕನ್ನಡ ಯೂಸರ್ ನಡುವಿನ ವಾದದ ವೇಳೆ ಅನಾಮಧೇಯ ಖಾತೆಯೊಂದು ನಾಡದೇವಿ ಭುವನೇಶ್ವರಿಯನ್ನು ಅತ್ಯಂತ ಅಸಭ್ಯವಾಗಿ ನಿಂದಿಸಿದೆ. ಈ ಘಟನೆಯಿಂದ ತೀವ್ರ ಆಕ್ರೋಶಗೊಂಡಿರುವ ಕನ್ನಡಿಗರು, ಕಠಿಣ ಕ್ರಮ ಕೈಗೊಳ್ಳುವಂತೆ ಸೈಬರ್ ಪೊಲೀಸರನ್ನು ಆಗ್ರಹಿಸಿದ್ದಾರೆ.
ಬೆಂಗಳೂರು (ಸೆ.23): ಸೋಶಿಯಲ್ ಮೀಡಿಯಾ ವೇದಿಕೆ ಎಕ್ಸ್‌ನಲ್ಲಿ ಭಾಷೆ ಹಾಗೂ ಪ್ರಾದೇಶಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಡೆಯುವ ಅನಗತ್ಯ ವಾದ-ವಿವಾದಗಳು ಇದೀಗ ಮಿತಿಮೀರಿದ್ದು, ಕನ್ನಡ ನಾಡಿನ ನಾಡದೇವಿ 'ಭುವನೇಶ್ವರಿ'ಗೆ ತೀವ್ರ ರೀತಿಯಲ್ಲಿ ನಿಂದನೆ ಮಾಡಿ ಅವಮಾನಿಸಿರುವ ಘಟನೆ ಬೆಳಕಿಗೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅನಾಮಧೇಯ ಹಾಗೂ ದ್ವೇಷಪೂರಿತ ಖಾತೆಯೊಂದು ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಬಳಸಿ ಅತ್ಯಂತ ತುಚ್ಛ ಮತ್ತು ಅಸಭ್ಯ ಪದಗಳಿಂದ ನಿಂದಿಸಿ ಪೋಸ್ಟ್ ಮಾಡಿದ್ದು, ಈ ಘಟನೆಗೆ ಸಮಸ್ತ ಕನ್ನಡಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಎಕ್ಸ್' ವೇದಿಕೆಯಲ್ಲಿ ನಡೆದದ್ದೇನು?
ತಮಿಳು ಹಾಗೂ ಕನ್ನಡ ಯೂಸರ್ಸ್‌ಗಳ ನಡುವೆ ನಡೆಯುತ್ತಿದ್ದ ವಾದ-ವಿವಾದ ಒಂದರ ನಡುವೆ, 'Ramana Ramana' (@RamanaR99863436) ಹೆಸರಿನ 'ಎಕ್ಸ್' ಖಾತೆಯೊಂದು ಕರ್ನಾಟಕದ ನಕ್ಷೆ ಮತ್ತು ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರವಿರುವ ಫೋಟೋವನ್ನು ಪೋಸ್ಟ್ ಮಾಡಿ, ಅತ್ಯಂತ ಹೀನಾಯ ಹಾಗೂ ಅಸಭ್ಯವಾದ ಭಾಷೆಯಲ್ಲಿ ಪ್ರಶ್ನಿಸಿ ಪೋಸ್ಟ್ ಹಂಚಿಕೊಂಡಿದೆ.
ಇದನ್ನು ಗಮನಿಸಿದ 'Karnataka Bala' ಹಾಗೂ ಇತರ ಕನ್ನಡ ಪರ ಖಾತೆಗಳು ಮತ್ತು ಬಳಕೆದಾರರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. "ನಮ್ಮ ಕನ್ನಡ ತಾಯಿ ಭುವನೇಶ್ವರಿಯನ್ನೇ ಈ ಮಟ್ಟಕ್ಕೆ ನಿಂದಿಸುತ್ತಿರುವುದನ್ನು ನೋಡಿಯೂ ಸುಮ್ಮನಿರಲು ಸಾಧ್ಯವೇ?" ಎಂದು ಪ್ರಶ್ನಿಸಿರುವ ಕನ್ನಡಿಗರು, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಾಲತಾಣದಲ್ಲಿ ವ್ಯಾಪಕ ಆಂದೋಲನ ಆರಂಭಿಸಿದ್ದಾರೆ.
ಪ್ರತೀಕಾರದ ಜಗಳದಲ್ಲಿ ನಾಡದೇೇವಿಗೆ ಅಪಮಾನ
ವರದಿಗಳ ಪ್ರಕಾರ, ವಿವಿಧ ಭಾಷಿಕ ಖಾತೆಗಳ ನಡುವೆ ನಡೆಯುತ್ತಿದ್ದ ಆನ್‌ಲೈನ್ ಜಗಳ ಮತ್ತು ಪರಸ್ಪರ ಟ್ರೋಲ್‌ಗಳ ಸಿರೀಸ್ ರೂಪಾಂತರಗೊಂಡು ಅಂತಿಮವಾಗಿ ಕನ್ನಡದ ಅಸ್ಮಿತೆಯಾಗಿರುವ ಭುವನೇಶ್ವರಿ ದೇವಿಯನ್ನೇ ಗುರಿಯಾಗಿಸಿ ನಿಂದಿಸುವ ಮಟ್ಟಕ್ಕೆ ತಲುಪಿದೆ. ತಮಿಳುನಾಡಿನ 'ತಮಿಳ್ ತಾಯ್' (Tamil Thai) ಹಾಗೂ ಕನ್ನಡದ 'ಭುವನೇಶ್ವರಿ ದೇವಿ' ವಿಚಾರಗಳನ್ನು ಎಳೆದುತಂದು ಕೆಲವು ಕಿಡಿಗೇಡಿಗಳು ಪರಸ್ಪರ ನಿಂದನೆಯಲ್ಲಿ ತೊಡಗಿದ್ದಾರೆ.
ಆದರೆ, ಯಾವುದೇ ವ್ಯಕ್ತಿ ಅಥವಾ ಪ್ರಾದೇಶಿಕ ಜಗಳಕ್ಕೆ ಕನ್ನಡ ನಾಡಿನ ಮಾತೆಯನ್ನು ಎಳೆದುತಂದು, ಲೈಂಗಿಕಾತ್ಮಕ ಹಾಗೂ ಕೀಳು ಪದಗಳಿಂದ ನಿಂದಿಸಿರುವುದು ಕನ್ನಡಿಗರ ಮನಸ್ಸಿಗೆ ತೀವ್ರ ಆಘಾತ ಮತ್ತು ನೋವನ್ನುಂಟು ಮಾಡಿದೆ. "ನಾವು ಎಷ್ಟೇ ಸಹನೆಯಿಂದ ಇದ್ದರೂ, ನಮ್ಮ ನಾಡದೇವಿ ಹಾಗೂ ರಾಜ್ಯದ ಅಸ್ಮಿತೆಗೆ ಧಕ್ಕೆ ತಂದರೆ ಸಹಿಸಲು ಸಾಧ್ಯವಿಲ್ಲ" ಎಂದು ಹಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಸೈಬರ್ ಪೊಲೀಸರ ಕಠಿಣ ಕ್ರಮಕ್ಕೆ ಆಗ್ರಹ
ಕರ್ನಾಟಕದ ಕೋಟ್ಯಂತರ ಜನರ ಸಾಂಸ್ಕೃತಿಕ ಭಾವನೆಗೆ ಧಕ್ಕೆ ತಂದಿರುವ ಈ ಕಿಡಿಗೇಡಿ ಖಾತೆಯ ವಿರುದ್ಧ ಕರ್ನಾಟಕ ರಾಜ್ಯ ಪೊಲೀಸ್ (KSP) ಹಾಗೂ ಬೆಂಗಳೂರು ಸೈಬರ್ ಕ್ರೈಮ್ (Cyber Crime Police) ವಿಭಾಗ ತಕ್ಷಣವೇ ಎಫ್‌ಐಆರ್ (FIR) ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. "ಸೋಶಿಯಲ್ ಮೀಡಿಯಾದಲ್ಲಿ ಕುಳಿತು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಿಹ್ನೆಗಳನ್ನು, ನಾಡದೇವಿಯನ್ನು ನಿಂದಿಸುವ ಇಂತಹ ಪ್ರವೃತ್ತಿಗೆ ತಕ್ಷಣವೇ ಬ್ರೇಕ್ ಹಾಕಬೇಕು. ಈ ಅನಾಮಧೇಯ ಖಾತೆಯ ಹಿಂದಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಬೇಕು" ಎಂದು ಕನ್ನಡ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಒಕ್ಕೊರಲಿನಿಂದ ಒತ್ತಾಯಿಸುತ್ತಿದ್ದಾರೆ.


