ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೂಷ್ ಮಾಫಿ ಸಾಕ್ಷಿಯಾಗುವುದನ್ನು ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿಹಿಡಿದಿರುವ ಕೋರ್ಟ್, ಸಹ-ಆರೋಪಿಗೆ ಇದನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು (ಸೆ.23): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಎ-2 ಆರೋಪಿ, ನಟ ದರ್ಶನ್ ತೂಗುದೀಪ ಅವರಿಗೆ ಹೈಕೋರ್ಟ್‌ನಲ್ಲಿ ಮತ್ತೆ ಭಾರಿ ಹಿನ್ನಡೆಯಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೂಷ್ (A-14) 'ಮಾಫಿ ಸಾಕ್ಷಿ' (Approver) ಆಗಿ ಬದಲಾಗುವುದನ್ನು ಹಾಗೂ ಸೆಷನ್ಸ್ ಕೋರ್ಟ್ ನೀಡಿರುವ ಅಂಗೀಕಾರವನ್ನು ಪ್ರಶ್ನಿಸಿ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ವಿಚಾರಣಾ ನ್ಯಾಯಾಲಯದ (59ನೇ ಸಿಸಿಹೆಚ್ ಕೋರ್ಟ್) ಆದೇಶದಲ್ಲಿ ಯಾವುದೇ ಕಾನೂನುಬಾಹಿರತೆ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿಹಿಡಿದು ತೀರ್ಪು ಪ್ರಕಟಿಸಿದೆ.

ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ

ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಹಷ್ಮತ್ ಪಾಷಾ, ಪ್ರದೂಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆ ಹಾಗೂ ಜೈಲಿನಲ್ಲಿ ಆತ ನಡೆಸಿದ ಚಟುವಟಿಕೆಗಳ ಕುರಿತು ಹಲವು ಗಂಭೀರ ಆಕ್ಷೇಪಗಳನ್ನು ಎತ್ತಿದರು. ಪ್ರದೂಷ್ ಜೈಲಿನಲ್ಲಿ ಕಾನೂನುಬಾಹಿರವಾಗಿ, ಸೀಕ್ರೇಟ್ ಆಗಿ ಮೊಬೈಲ್ ಫೋನ್ ಬಳಸಿದ್ದಾನೆ. ಬಿಡುಗಡೆಯಾದ ವಿಚಾರಣಾಬಂಧಿಯೊಬ್ಬರ ಹೆಸರಲ್ಲಿದ್ದ ಫೋನ್ ಹಾಗೂ ಬೇರೆ ಬಂಧಿಯ ಅವಕಾಶವನ್ನು ಬಳಸಿಕೊಂಡು 2026ರ ಜುಲೈ 27 ರಿಂದಲೂ ಆತ ತನ್ನ ಪತ್ನಿಯೊಂದಿಗೆ ಮಾತನಾಡಿದ್ದಾನೆ.

ಪತ್ನಿ ಹಲವರೊಂದಿಗೆ ಮಾತನಾಡಿದ ಬಳಿಕ, ಕೆಲವು ವ್ಯಕ್ತಿಗಳ ಪ್ರಚೋದನೆಗೆ ಒಳಗಾಗಿ ಪ್ರದೂಷ್ ಸೀಕ್ರೇಟ್ ಆಗಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾನೆ. 10ನೇ ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಗೆ ಅರ್ಜಿ ಸಲ್ಲಿಸಿದ್ದರೂ ಅದನ್ನು ಪರಿಗಣಿಸದೆ, ಕೇವಲ ಪ್ರದೂಷ್ ಅರ್ಜಿಯನ್ನು ಮಾತ್ರ ಪರಿಗಣಿಸಲಾಗಿದೆ. ಪ್ರದೂಷ್ ವಿರುದ್ಧ ಬೇರೆ ಕೇಸ್‌ಗಳಿಲ್ಲ, ಆತ ಎಂಬಿಎ ಓದಿದ್ದಾನೆ ಎಂದು ಪ್ರೊಸಿಜರ್ ಅಗತ್ಯವಿಲ್ಲದಿದ್ದರೂ ಪೊಲೀಸರು ವರದಿ ನೀಡಿದ್ದು, ಈ ವರದಿಗಳಿಂದ ವಿಚಾರಣಾ ನ್ಯಾಯಾಲಯ ಪ್ರಭಾವಿತಗೊಂಡು ಮಾಫಿ ಸಾಕ್ಷಿಗೆ ಅಂಗೀಕಾರ ನೀಡಿದೆ. ಸೂಕ್ತ ಆಧಾರಗಳಿಲ್ಲದೆ ಪ್ರಾಸಿಕ್ಯೂಷನ್ ಮಾಫಿ ಸಾಕ್ಷಿಗೆ ಅನುಮತಿ ನೀಡಿದೆ. ಮುಖ್ಯ ಆರೋಪಿಯಾಗಿ ಅಪರಾಧ ಮಾಡಿರುವ ಪ್ರದೂಷ್‌ನನ್ನು ನಿರ್ದೋಷಿ ಮಾಡಬಾರದು ಎಂದು ಹೇಳಿದರು.

ವಾದದ ವೇಳೆ ನ್ಯಾಯಪೀಠದ ಅಭಿಪ್ರಾಯಗಳು

ಹಷ್ಮತ್ ಪಾಷಾ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ವಿಚಾರಣೆಯ ವೇಳೆ ಹಲವು ಪ್ರಮುಖ ಕಾನೂನಾತ್ಮಕ ಸ್ಪಷ್ಟನೆಗಳನ್ನು ನೀಡಿದರು. ಯಾವುದೇ ಆರೋಪಿ ಮಾಫಿ ಸಾಕ್ಷಿಯಾದಾಗ ಸಹ-ಆರೋಪಿಗಳಿಗೆ ಆತನನ್ನು ಪಾಟೀಸವಾಲು (ಕ್ರಾಸ್ ಎಕ್ಸಾಮಿನ್) ಮಾಡುವ ಸಂಪೂರ್ಣ ಅಧಿಕಾರವಿದೆ. ಆತ ನಂಬಲರ್ಹನೇ? ಆತನ ಪಾತ್ರವೇನು? ಆತನ ವಿಶ್ವಾಸಾರ್ಹತೆ ಎಷ್ಟಿದೆ? ಎಂಬ ಪ್ರತಿಯೊಂದು ಅಂಶವನ್ನೂ ನೀವು ಪಾಟೀಸವಾಲಿನಲ್ಲಿ ಕೇಳಿ ಪ್ರಶ್ನಿಸಬಹುದು ಎಂದರು.

ಇನ್ನು ಗಂಡ-ಹೆಂಡತಿ ಅಥವಾ ವಕೀಲರ ಜೊತೆ ಮಾತನಾಡಿದರೆ ಅದರಲ್ಲಿ ತಪ್ಪೇನಿದೆ? ಮೂರು ನಂಬರ್‌ಗಳಿಗೆ ಮಾತ್ರ ಮಾತನಾಡಲು ಅವಕಾಶವಿದ್ದು, ವಕೀಲರ ನಂಬರ್ ಎಂದು ಪತ್ನಿ ಜೊತೆ ಮಾತನಾಡಿದ್ದಾನೆ ಅಷ್ಟೇ. ಬೇರೆಯವರ ಚಿತಾವಣೆ ಇದೆ ಎಂಬ ವರದಿ ಎಲ್ಲೂ ಇಲ್ಲ. ನೀವು ಇದೆಲ್ಲವನ್ನೂ ಕ್ರಾಸ್ ಎಕ್ಸಾಮಿನೇಷನ್‌ನಲ್ಲೇ ಪ್ರಶ್ನಿಸಬಹುದಲ್ಲವೇ? ಎಂದರು.

ತನಿಖಾ ಹಂತದಲ್ಲಾಗಲಿ ಅಥವಾ ಟ್ರಯಲ್ ಹಂತದಲ್ಲಾಗಲಿ ಯಾವುದೇ ಆರೋಪಿ ಸ್ವತಃ ಅಥವಾ ಪ್ರಾಸಿಕ್ಯೂಷನ್ ಮೂಲಕ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಬಹುದು. ಈ ವಿಚಾರದಲ್ಲಿ ಸಹ-ಆರೋಪಿಗೆ ಪ್ರಶ್ನಿಸುವ ಅಥವಾ ತಡೆಯುವ ಹಕ್ಕಿಲ್ಲ. ಈ ಹಿಂದೆ ನೀಡಿದ್ದ ಹೈಕೋರ್ಟ್ ಆದೇಶವನ್ನು ನೀವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿಲ್ಲ ಎಂದರು.

ಎಸ್ಪಿಪಿ ಪ್ರಸನ್ನ ಕುಮಾರ್ ಹಾಗೂ ಪ್ರದೂಷ್ ಪರ ವಕೀಲ ದಿವಾಕರ್ ವಾದ

ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿ, ನಮ್ಮ ಕೇಸ್ ಮತ್ತು ಪ್ರಾಸಿಕ್ಯೂಷನ್ ಸಾಕ್ಷಿಗಳು ಅತ್ಯಂತ ಪ್ರಬಲವಾಗಿವೆ. ಮಾಫಿ ಸಾಕ್ಷಿ ಇಲ್ಲದಿದ್ದರೂ ಪ್ರಕರಣವನ್ನು ಸಾಬೀತುಪಡಿಸುವಷ್ಟು ಸಾಕ್ಷ್ಯಗಳಿವೆ. ವಿಚಾರಣಾ ನ್ಯಾಯಾಲಯದ ನಿರ್ದೇಶನ ಮತ್ತು ಮನವಿಯ ಮೇರೆಗೆ ನಾವು ಒಪ್ಪಿಗೆ ಮೆಮೋ ಸಲ್ಲಿಸಿದ್ದೇವೆ ಹೊರತು ಕೇಸ್ ವೀಕ್ ಆಗಿ ಅಲ್ಲ" ಎಂದರು.

ಪ್ರದೂಷ್ ಪರ ವಕೀಲ ದಿವಾಕರ್ ವಾದ ಮಂಡಿಸಿ, ವಿಚಾರಣೆ ವಿಳಂಬ ಮಾಡುವ ಉದ್ದೇಶದಿಂದ ದರ್ಶನ್ ಪರ ವಕೀಲರು ಪದೇ ಪದೇ ಅರ್ಜಿ ಸಲ್ಲಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿದಾಗಲೂ ನ್ಯಾಯಮೂರ್ತಿಗಳು 'ನಿಮ್ಮ ತಪ್ಪಿಲ್ಲದಿದ್ದರೆ ಅಪ್ರೂವರ್ ಆಗಿ' ಎಂದು ಹೇಳಿದ್ದರು. ಜೈಲು ಕೈಪಿಡಿ ನಿಯಮದಂತೆಯೇ ದೂರವಾಣಿಯಲ್ಲಿ ಮಾತನಾಡಲಾಗಿದೆ" ಎಂದು ವಾದಿಸಿದರು.

ಹೈಕೋರ್ಟ್ ನೀಡಿದ ಅಂತಿಮ ಆದೇಶದ ಪ್ರಮುಖ ಅಂಶಗಳು

ಎಲ್ಲಾ ಕಡೆಯ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಪೀಠವು ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶ ಬರೆಸಿತು. 59ನೇ ಸಿಸಿಹೆಚ್ ಕೋರ್ಟ್ ಪ್ರದೂಷ್ ಅವರನ್ನು ಮಾಫಿ ಸಾಕ್ಷಿಯಾಗಿ ಅಂಗೀಕರಿಸಿ ಹೊರಡಿಸಿರುವ ಆದೇಶ ಸಂಪೂರ್ಣ ಕಾನೂನುಬದ್ಧವಾಗಿದ್ದು, ಇದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ಒಬ್ಬ ಆರೋಪಿ ಮಾಫಿ ಸಾಕ್ಷಿ (ಅಪ್ರೂವರ್) ಆಗುವುದನ್ನು ಪ್ರಶ್ನಿಸುವ ಶಾಸನಬದ್ಧ ಹಕ್ಕು ಯಾವುದೇ ಸಹ-ಆರೋಪಿಗೆ (Co-accused) ಇರುವುದಿಲ್ಲ. ಮಾಫಿ ಸಾಕ್ಷಿ ಪ್ರದೂಷ್ ಸಾಕ್ಷ್ಯ ನೀಡಲು ಬಂದಾಗ ದರ್ಶನ್ ಪರ ವಕೀಲರು ಆತನ ವಿಶ್ವಾಸಾರ್ಹತೆ (Credibility), ಮೊಬೈಲ್ ಬಳಕೆ, ಹಾಗೂ ಹೇಳಿಕೆಯ ಪ್ರತಿಯೊಂದು ಅಂಶವನ್ನೂ ಕ್ರಾಸ್ ಎಕ್ಸಾಮಿನೇಷನ್‌ನಲ್ಲಿ ಪ್ರಶ್ನಿಸಲು ಪೂರ್ಣ ಅವಕಾಶವಿದೆ ಎಂದರು.

ಇನ್ನು ಪ್ರದೂಷ್ ಸಾಕ್ಷಿ ನುಡಿಯುವ ಸಂದರ್ಭದಲ್ಲಿ ದರ್ಶನ್ ಕೋರ್ಟ್‌ನಲ್ಲಿ ಹಾಜರಿರಲು ಈಗಾಗಲೇ ಅವಕಾಶ ಕಲ್ಪಿಸಿ ಆದೇಶ ಮಾಡಲಾಗಿದೆ. ಈ ತೀರ್ಪಿನ ಮೂಲಕ ವಿಚಾರಣಾ ನ್ಯಾಯಾಲಯದಲ್ಲಿ ಪ್ರದೂಷ್ ಮಾಫಿ ಸಾಕ್ಷಿಯಾಗಿ ಸಾಕ್ಷ್ಯ ನುಡಿಯುವುದು ಅಧಿಕೃತವಾಗಿ ಖಚಿತಗೊಂಡಂತಾಗಿದೆ.