ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ, ಸ್ವತಃ ದೋಸೆ ಮತ್ತು ಫಿಲ್ಟರ್ ಕಾಫಿ ತಯಾರಿಸಿ ಅಚ್ಚರಿ ಮೂಡಿಸಿದ್ದಾರೆ. ಈ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವರ ಸರಳತೆಗೆ ಮೆಚ್ಚುಗೆಯ ಜೊತೆಗೆ ನೈರ್ಮಲ್ಯದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಬೆಂಗಳೂರು (ಸೆ.23): ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಿಲಿಕಾನ್ ಸಿಟಿ ಬೆಂಗಳೂರಿನ ಆಹಾರ ಪ್ರಿಯರಿಗೆ ಅಚ್ಚರಿ ಮೂಡಿಸಿದ್ದಾರೆ. ನಗರದ ಅತ್ಯಂತ ಜನಪ್ರಿಯ 'ದಿ ರಾಮೇಶ್ವರಂ ಕೆಫೆ'ಗೆ (The Rameshwaram Cafe) ಭೇಟಿ ನೀಡಿದ್ದ ಸಚಿವರು, ಸಾಮಾನ್ಯ ಗ್ರಾಹಕರಂತೆ ತಿಂಡಿ ತಿಂದು ಹೋಗುವ ಬದಲು ನೇರವಾಗಿ ಅಡುಗೆ ಕೋಣೆಗೆ (Kitchen) ಇಳಿದು ಸ್ವತಃ ದೋಸೆ ಹೊಯ್ಯುವ ಮತ್ತು ಫಿಲ್ಟರ್ ಕಾಫಿ ಸಿದ್ಧಪಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಈ ವಿಶಿಷ್ಟ ಭೇಟಿಯ ವೀಡಿಯೊಗಳನ್ನು ಸಚಿವ ಸಿಂಧಿಯಾ ಅವರೇ ತಮ್ಮ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದು, ಪ್ರಸ್ತುತ ಭಾರಿ ವೈರಲ್ ಆಗುತ್ತಿವೆ. ಕೌಂಟರ್‌ನ ಹಿಂಭಾಗಕ್ಕೆ ತೆರಳಿದ ಸಚಿವರು, ಅಡುಗೆ ಸಿಬ್ಬಂದಿಯೊಂದಿಗೆ ಅತ್ಯಂತ ಆತ್ಮೀಯವಾಗಿ ಸಂವಹನ ನಡೆಸಿದ್ದಾರೆ.

ಕಾವಲಿ ಹಿಡಿದು ದೋಸೆ ಹಾಕಿ ಗ್ರಾಹಕರಿಗೆ ನೀಡಿದ ಸಚಿವ

ಬಿಳಿ ಬಣ್ಣದ ಕುರ್ತಾ ಧರಿಸಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಮೊದಲಿಗೆ ಕೆಫೆಯ ಶೆಫ್‌ಗಳೊಂದಿಗೆ ಮಾತುಕತೆ ನಡೆಸಿದರು. ಬಳಿಕ ಕಾದ ಹೆಂಚಿನ (Griddle/Tawa) ಜವಾಬ್ದಾರಿಯನ್ನು ತಾವೇ ವಹಿಸಿಕೊಂಡರು. ಸುತ್ತಲೂ ಅಡುಗೆ ಸಿಬ್ಬಂದಿ ಕುತೂಹಲದಿಂದ ವೀಕ್ಷಿಸುತ್ತಿರುವಾಗ ಕಾವಲಿಯ ಮೇಲೆ ದೋಸೆ ಹಿಟ್ಟನ್ನು ಸುರಿದು, ವೃತ್ತಾಕಾರದಲ್ಲಿ ಸಮನಾಗಿ ಹರಡಲು ಪ್ರಯತ್ನಿಸಿದರು. ದೋಸೆಯನ್ನು ಹದವಾಗಿ ಬೇಯಿಸಿದ ನಂತರ, ಅದನ್ನು ಚಟ್ನಿಗಳೊಂದಿಗೆ ಪ್ಲೇಟ್‌ಗೆ ಹಾಕಿ ಕೌಂಟರ್‌ನಲ್ಲಿದ್ದ ಗ್ರಾಹಕರೊಬ್ಬರಿಗೆ ಸ್ವತಃ ಬಡಿಸಿದರು. ಇದೇ ವೇಳೆ ಕೆಫೆಯ ಸಿಬ್ಬಂದಿಯನ್ನು ಪ್ರಶಂಸಿಸಿದ ಸಚಿವರು, "ಹೇಗಿದ್ದೀರಾ? ಚೆನ್ನಾಗಿದ್ದೀರಾ? ನೀವೆಲ್ಲರೂ ನಿಜಕ್ಕೂ ಅತ್ಯುತ್ತಮ ಕೆಲಸ ಮಾಡುತ್ತಿದ್ದೀರಿ" ಎಂದು ಶ್ಲಾಘಿಸಿದರು.

"ಕೌಂಟರ್‌ನಿಂದ ನೋಡಿದಷ್ಟು ದೋಸೆ ಮಾಡೋದು ಸುಲಭವಲ್ಲ!":

ತಮ್ಮ ಈ ವಿಶಿಷ್ಟ ಅನುಭವದ ವೀಡಿಯೊ ತುಣುಕುಗಳನ್ನು ಹಂಚಿಕೊಂಡ ಸಿಂಧಿಯಾ, "ರಾಮೇಶ್ವರಂ ಕೆಫೆಗೆ ಭೇಟಿ ನೀಡಿದಾಗ ಅಲ್ಲಿನ ಅಡುಗೆಮನೆಯೊಳಗೆ ನಡೆಯುವ ಜಾದೂವನ್ನು ಹತ್ತಿರದಿಂದ ನೋಡುವ ಆಸೆಯನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, "ಇಲ್ಲಿನ ಅದ್ಭುತ ಶೆಫ್‌ಗಳ ಮಾರ್ಗದರ್ಶನದಲ್ಲಿ ದೋಸೆ ಹಾಕಲು ಪ್ರಯತ್ನಿಸಿದೆ. ಆದರೆ ಕೌಂಟರ್‌ನ ಆಚೆಯಿಂದ ನೋಡಿದಷ್ಟು ದೋಸೆ ಮಾಡುವುದು ಸುಲಭವಲ್ಲ, ಅದರ ಹಿಂದೆ ದೊಡ್ಡ ಶ್ರಮವಿದೆ ಎಂಬುದು ಸ್ಪಷ್ಟವಾಯಿತು" ಎಂದು ಸಚಿವರು ಒಪ್ಪಿಕೊಂಡಿದ್ದಾರೆ.

ದೋಸೆ ಜೊತೆಗೆ ದಕ್ಷಿಣ ಭಾರತದ ಫಿಲ್ಟರ್ ಕಾಫಿ ಸವಿ

ದೋಸೆ ತಯಾರಿಕೆ ಮಾತ್ರವಲ್ಲದೆ ದಕ್ಷಿಣ ಭಾರತದ ಮತ್ತೊಂದು ಪ್ರಸಿದ್ಧ ಪಾನೀಯವಾದ 'ಫಿಲ್ಟರ್ ಕಾಫಿ' ಮಾಡಿ ಸಿಂಧಿಯಾ ಕೈಚಳಕ ತೋರಿಸಿದರು. ಮತ್ತೊಂದು ವೀಡಿಯೊದಲ್ಲಿ, ದಕ್ಷಿಣ ಭಾರತೀಯ ಶೈಲಿಯಲ್ಲಿ ಕಾಫಿಯನ್ನು ಎರಡು ಲೋಟಗಳ ನಡುವೆ ಮೇಲಿನಿಂದ ಕೆಳಗೆ ಎರೆಯುವ (Pouring Technique) ಮೂಲಕ ನೊರೆ ತರಿಸುವ ಸಾಂಪ್ರದಾಯಿಕ ವಿಧಾನವನ್ನು ಸಚಿವರು ಪ್ರಯತ್ನಿಸಿದರು. ಸಿಬ್ಬಂದಿಯೊಬ್ಬರು ಸಚಿವರಿಗೆ ಈ ಬಗ್ಗೆ ಮಾರ್ಗದರ್ಶನ ನೀಡಿದರು. ಕಾಫಿ ನೊರೆ ತರಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಸಿಂಧಿಯಾ, "ನನ್ನ ಫಿಲ್ಟರ್ ಕಾಫಿ ಕಾಂಪ್ಲಿಮೆಂಟ್, ತೀರ ಕಚ್ಚಾ ಹಾಗೂ ಸರಿಯಾದ ಶೈಲಿಯಲ್ಲಿ ಸಿದ್ಧವಾಯಿತು!" ಎಂದು ಶೀರ್ಷಿಕೆ ನೀಡಿದ್ದಾರೆ.

ಸಿಂಧಿಯಾ ವೀಡಿಯೊಗೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರಪ್ರತಿಕ್ರಿಯೆ

ಈ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಭಿನ್ನ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಸಚಿವರ ಸರಳತೆ ಮತ್ತು ಪ್ರಯತ್ನವನ್ನು ಶ್ಲಾಘಿಸಿದರೆ, ಇನ್ನು ಕೆಲವರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ: ಯೂಸರ್‌ ಒಬ್ಬರು ತಮಾಷೆಯಾಗಿ, "ರಾಮೇಶ್ವರಂ ಕೆಫೆಯ ದೋಸೆಯ ಜಾದೂ ಇರೋದು ಹಿಟ್ಟಿನಲ್ಲಲ್ಲ, ಅವರು ಹಾಕೋ ತುಪ್ಪದಲ್ಲಿ!" ಎಂದು ಕಮೆಂಟ್ ಮಾಡಿದ್ದಾರೆ.

ಇನ್ನು ಕೆಲವರು ಅಡುಗೆಮನೆಯ ನೈರ್ಮಲ್ಯ ಹಾಗೂ ಶುಚಿತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಆಹಾರವನ್ನು ಸ್ಪರ್ಶಿಸುವಾಗ ಕನಿಷ್ಠ ಗ್ಲೌಸ್ (Gloves) ಹಾಗೂ ತಲೆಗೆ ಕ್ಯಾಪ್ (Cap) ಧರಿಸಬೇಕಿತ್ತು. ನಿಯಮಗಳ ಪ್ರಕಾರ ಇದಕ್ಕೆ ಅವಕಾಶವಿಲ್ಲ" ಎಂದು ಹಲವರು ಪ್ರಶ್ನಿಸಿದ್ದಾರೆ.

ಬೆಂಗಳೂರು ಮೂಲದ ಮತ್ತೊಬ್ಬ ನೆಟ್ಟಿಗ, "ಇದು ನಮ್ಮ ಓಣಿಯ ಮೂಲೆಗಳಲ್ಲಿ ಸಿಗುವ ಸಾಮಾನ್ಯ ಹೋಟೆಲ್‌ಗಳಲ್ಲೊಂದು. ಅತಿಯಾದ ಹೈಪ್ ನೀಡಲಾಗಿದೆ ಮತ್ತು ದರ ಕೂಡ ಹೆಚ್ಚಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಸಚಿವರ ಈ ಬೆಂಗಳೂರು ಭೇಟಿ ಮತ್ತು ರಾಮೇಶ್ವರಂ ಕೆಫೆಯ ದೋಸೆ ಪ್ರಯೋಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.