ಬೆಂಗಳೂರು-ಮೈಸೂರು ನೈಸ್ ಯೋಜನೆಯು ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿದ್ದು, ಇದರಲ್ಲಿ ಸರ್ಕಾರವೇ ಶಾಮೀಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.

ಬೆಂಗಳೂರು (ಜು.30): ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (BMIC) ಅಥವಾ ನೈಸ್ (NICE) ಯೋಜನೆಯು ರಾಜ್ಯದ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಅತ್ಯಂತ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ಈ ಯೋಜನೆಯಲ್ಲಿ ನಡೆದಿರುವ ವಂಚನೆ ಮತ್ತು ಅಪರಾಧ ಕೃತ್ಯಗಳ ಕುರಿತು ತಜ್ಞರ ವಿಶೇಷ ತಂಡದಿಂದ ಸ್ವತಂತ್ರ ತನಿಖೆ ಹಾಗೂ ಕಂಪನಿಯ ಖಾತೆಗಳ 'ಫೋರೆನ್ಸಿಕ್ ಆಡಿಟ್' (Forensic Audit) ನಡೆಸುವುದು ಅಗತ್ಯವಾಗಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಆದರೆ, ಇಂತಹ ತನಿಖೆ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಹೈಕೋರ್ಟ್, "ಫ್ರೇಮ್‌ವರ್ಕ್ ಒಪ್ಪಂದದ (FWA) ನಿಯಮಗಳನ್ನು ಉಲ್ಲಂಘಿಸಿ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಸುವುದು, ಆಸ್ತಿಗಳನ್ನು ನಗದೀಕರಿಸಿಕೊಳ್ಳುವುದು, ಕೆರೆಗಳನ್ನು ಒಣಗಿಸುವುದು, ನಿಯಮ ಮೀರಿ ಭಾರಿ ಪ್ರಮಾಣದ ಟೋಲ್ ಸಂಗ್ರಹಿಸುವುದು ಹಾಗೂ ಪರಿಹಾರ ನೀಡದೆ ಭಾರಿ ಪ್ರಮಾಣದ ಭೂಮಿಯ ಮೇಲೆ ಹಿಡಿತ ಸಾಧಿಸಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಲಾಭ ಗಳಿಸಲು ಯೋಜನೆಯ ಪ್ರವರ್ತಕರಿಗೆ (ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ - NICE) ಸ್ವತಃ ರಾಜ್ಯ ಸರ್ಕಾರವೇ ಶಾಮೀಲಾಗಿ ಅವಕಾಶ ಮಾಡಿಕೊಟ್ಟಿದೆ" ಎಂದು ಚಾಟಿ ಬೀಸಿದೆ. "ನೈಸ್ ಯೋಜನೆಯು ರೈತರು ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಬಲಿ ಕೊಟ್ಟು, ಕೇವಲ ತನ್ನ ಪ್ರವರ್ತಕರಿಗೆ ಭಾರೀ ಪ್ರಮಾಣದಲ್ಲಿ ಲಾಭ ಮಾಡಿಕೊಡುವುದನ್ನು ಬಿಟ್ಟು ಬೇರೇನನ್ನೂ ಮಾಡಿಲ್ಲ" ಎಂದು ಪೀಠ ಹೇಳಿದೆ.

ಅಂತಿಮ ಅಧಿಸೂಚನೆ ಹೊರಡಿಸಿ 23 ವರ್ಷಗಳು ಕಳೆದರೂ ಕೆಐಎಡಿಬಿ (KIADB) ಭೂಮಾಲೀಕರಿಗೆ ಪರಿಹಾರ ಧನ (Award) ನಿಗದಿಪಡಿಸದ ಹಿನ್ನೆಲೆಯಲ್ಲಿ ಹಲವಾರು ಎಕರೆ ಭೂಸ್ವಾಧೀನವನ್ನು ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ಜುಲೈ 4, 2025 ರ ತೀರ್ಪನ್ನು ಪ್ರಶ್ನಿಸಿ ನೈಸ್ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸುವಾಗ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಟಿ.ಎಂ. ನಡಾಫ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ.

"ರೈತರ ಲೂಟಿ ಬಿಟ್ಟರೆ ನೈಸ್‌ನಲ್ಲಿ 'ನೈಸ್' ಅನಿಸುವಂತದ್ದು ಏನೂ ಇಲ್ಲ"

ಸಂವಿಧಾನದ ವಿಧಿ 300A ಅಡಿಯಲ್ಲಿ ಕಡ್ಡಾಯಗೊಳಿಸಲಾದ ಸೂಕ್ತ ಪರಿಹಾರವನ್ನು ನೀಡದೆ ರೈತರ ಭೂಮಿ ಮತ್ತು ತಲೆತಲಾಂತರಗಳ ಜೀವನೋಪಾಯವನ್ನು ಕಸಿದುಕೊಳ್ಳಲಾಗಿದೆ ಎಂಬುದನ್ನು ಹೊರತುಪಡಿಸಿದರೆ ಈ 'ನೈಸ್' (NICE) ಯೋಜನೆಯಲ್ಲಿ ನೈಸ್‌ ಅನ್ನಿಸುವಂತದ್ದು ಏನೂ ಇಲ್ಲ ಎಂದು ವಿಭಾಗೀಯ ಪೀಠ ಹೇಳಿದೆ.

ಈಗಾಗಲೇ ಸುಪ್ರೀಂ ಕೋರ್ಟ್ ಭೂಸ್ವಾಧೀನವನ್ನು ಎತ್ತಿಹಿಡಿದಿರುವುದರಿಂದ ಭೂಮಾಲೀಕರು ಮತ್ತೆ ಇದನ್ನು ಪ್ರಶ್ನಿಸುವಂತಿಲ್ಲ ಎಂಬ ನೈಸ್ ಸಂಸ್ಥೆಯ ವಾದವನ್ನು ಪೀಠ ತಳ್ಳಿಹಾಕಿದೆ. ಭೂಸ್ವಾಧೀನ ಅಧಿಸೂಚನೆ ಹೊರಡಿಸಿ ಎರಡು ದಶಕಗಳು ಕಳೆದರೂ ಹಾಗೂ ಫ್ರೇಮ್‌ವರ್ಕ್ ಒಪ್ಪಂದ ಮತ್ತು ಭೂಸ್ವಾಧೀನದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದು 15 ವರ್ಷಗಳಿಗಿಂತ ಹೆಚ್ಚು ಕಾಲವಾದರೂ ಪರಿಹಾರ ನೀಡದಿರುವುದನ್ನು ಮಾತ್ರವೇ ಭೂಮಾಲೀಕರು ಇಲ್ಲಿ ಪ್ರಶ್ನಿಸಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಇಂತಹ ಸುದೀರ್ಘ ವಿಳಂಬವು ಭೂಸ್ವಾಧೀನ ಪ್ರಕ್ರಿಯೆಯನ್ನು ಅಸಿಂಧುಗೊಳಿಸುತ್ತದೆ ಎಂದು ಹೇಳಿದ ಪೀಠ, ಏಕಸದಸ್ಯ ಪೀಠದ ತೀರ್ಪನ್ನು ಎತ್ತಿಹಿಡಿಯಿತು.

ಮುಂದುವರಿದು, "ಯೋಜನೆಯನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ರೂಪಿಸಲಾಗಿದ್ದರೂ, ಅದು ಯೋಜನೆಯ ಪ್ರವರ್ತಕರ ಖಾಸಗಿ ಹಿತಾಸಕ್ತಿಗಳನ್ನು ಮಾತ್ರ ಕಾಯ್ದಿದೆ. ಊಹಿಸಲೂ ಸಾಧ್ಯವಾಗದಷ್ಟು ಆಸ್ತಿಪಾಸ್ತಿಗಳನ್ನು ಮಾಡಿಕೊಳ್ಳಲು ಪ್ರವರ್ತಕರಿಗೆ ನೆರವಾಗಿದೆಯೇ ಹೊರತು, ಸಾರ್ವಜನಿಕರಿಗೆ ಯಾವುದೇ ರೀತಿಯ ಒಳಿತನ್ನಾಗಲಿ ಅಥವಾ ಸಾರ್ವಜನಿಕ ಉದ್ದೇಶವನ್ನಾಗಲಿ ಈ ಯೋಜನೆ ಈಡೇರಿಸಿಲ್ಲ" ಎಂದು ಪೀಠ ಖಾರವಾಗಿ ನುಡಿದಿದೆ.

ಸರ್ಕಾರ ಯೋಜನೆ ಪರಿಶೀಲನೆ ಅಥವಾ ರದ್ದು ಏಕೆ ಮಾಡುತ್ತಿಲ್ಲ?

ನೈಸ್ ಸಂಸ್ಥೆಯು ಎಸಗಿರುವ ಹಲವಾರು ಉಲ್ಲಂಘನೆಗಳನ್ನು ರಾಜ್ಯ ಸರ್ಕಾರವೇ ನ್ಯಾಯಾಲಯದ ಗಮನಕ್ಕೆ ತಂದಿರುವುದನ್ನು ಉಲ್ಲೇಖಿಸಿದ ಪೀಠ, "ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿ ಉದ್ಯೋಗ ಮತ್ತು ಪ್ರಗತಿಯ ಅವಕಾಶಗಳನ್ನು ಸೃಷ್ಟಿಸಲು ಕರ್ನಾಟಕದ ಎರಡು ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಮೈಸೂರು ನಡುವೆ ಸುಮಾರು 111 ಕಿ.ಮೀ ಎಕ್ಸ್‌ಪ್ರೆಸ್‌ವೇ ಮತ್ತು 5 ಉಪನಗರಗಳನ್ನು (Townships) ಅಭಿವೃದ್ಧಿಪಡಿಸುವ ತನ್ನ ಮೂಲ ಉದ್ದೇಶದಲ್ಲೇ ನೈಸ್ ಸಂಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಹೀಗಿದ್ದೂ, ರಾಜ್ಯ ಸರ್ಕಾರವು ಈ ಯೋಜನೆಯನ್ನು ಮರುಪರಿಶೀಲಿಸುತ್ತಿಲ್ಲ ಅಥವಾ ರದ್ದುಗೊಳಿಸುತ್ತಿಲ್ಲ ಏಕೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ" ಎಂದು ತೀವ್ರ ಬೇಸರ ವ್ಯಕ್ತಪಡಿಸಿದೆ.