ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳಲ್ಲಿರುವ ಸಹಜ ಕ್ರೀಡಾ ಪ್ರತಿಭೆಯನ್ನು ವಿವರಿಸುತ್ತಾರೆ. ಈ ಪ್ರತಿಭೆಗಳನ್ನು ಗುರುತಿಸಿ, 'ಖೇಲೋ ಇಂಡಿಯಾ' ದಂತಹ ಯೋಜನೆಗಳ ಮೂಲಕ ಸೂಕ್ತ ತರಬೇತಿ ಮತ್ತು ಸೌಲಭ್ಯಗಳನ್ನು ಒದಗಿಸುವುದರ ಮಹತ್ವವನ್ನು ಅವರು ಒತ್ತಿಹೇಳುತ್ತಾರೆ.
-ದ್ರೌಪದಿ ಮುರ್ಮು, ಭಾರತದ ರಾಷ್ಟ್ರಪತಿ.
ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಅರಣ್ಯ ಪ್ರದೇಶಗಳಲ್ಲಿ ಮಕ್ಕಳು ಹೆಚ್ಚಿನ ಸಮಯವನ್ನು ಹೊರಾಂಗಣದಲ್ಲಿ, ಪ್ರಕೃತಿಯ ಮಡಿಲಿನಲ್ಲಿ ಕಳೆಯುತ್ತಾರೆ ಎಂಬುದನ್ನು ನಾನು ಗಮನಿಸಿದ್ದೇನೆ. ಆಟವಾಡಲು ಅವರು ಸರಳ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ನೆಲದ ಮೇಲೆ ಗೆರೆಗಳನ್ನು ಎಳೆದು, ಆಕಾರಗಳನ್ನು ರಚಿಸಿ ಆಟದ ಅಖಾಡಗಳನ್ನು ತಯಾರಿಸುತ್ತಾರೆ. ಒಣಗಿದ ಹಣ್ಣಿನ ಬೀಜಗಳನ್ನು ಪಗಡೆ ಮತ್ತು ಚಿಕ್ಕ ತುಂಡುಗಳಾಗಿ ಬಳಸುತ್ತಾರೆ. ಒಣ ಎಲೆಗಳು, ಮರದ ಬೇರುಗಳು ಮತ್ತು ಹಳೆಯ ಬಟ್ಟೆಯ ತುಂಡುಗಳಿಂದ ಚೆಂಡುಗಳನ್ನು ತಯಾರಿಸುತ್ತಾರೆ. ಬಿದಿರನ್ನು ಬಳಸಿ ಅವರು ಹಾಕಿ ಮತ್ತು ಫುಟ್ಬಾಲ್ ಗೋಲ್‌ಪೋಸ್ಟ್‌ಗಳನ್ನು ನಿರ್ಮಿಸುತ್ತಾರೆ. ಹೀಗೆ ವಿವಿಧ ನೈಸರ್ಗಿಕ ವಸ್ತುಗಳನ್ನು ಬಳಸಿ ತಮ್ಮದೇ ಆದ ಕ್ರೀಡಾ ಜಗತ್ತನ್ನು ಸೃಷ್ಟಿಸಿಕೊಳ್ಳುತ್ತಾರೆ. ಅನೇಕ ಮಕ್ಕಳು ಚಪ್ಪಲಿ ಅಥವಾ ಜೆರ್ಸಿ (ಒಳಗವಚ) ಇಲ್ಲದೆಯೇ ಉತ್ಸಾಹದಿಂದ ಆಟವಾಡುತ್ತಾರೆ. ಕೆರೆ ಮತ್ತು ಸರೋವರಗಳಲ್ಲಿ ಮಕ್ಕಳು ಸಾಕಷ್ಟು ಈಜಾಡುತ್ತಾರೆ.
ಈಗ ಲಭ್ಯವಿರುವ ತರಬೇತಿ ಮತ್ತು ಸಂಪನ್ಮೂಲಗಳ ಸಹಾಯದಿಂದ ಈಜುವ ತನ್ನ ಸಹಜ ಪ್ರತಿಭೆಯನ್ನು ಗೌರವಿಸುತ್ತಾ, ಇದೇ ಸಹಜ ಈಜು ಪ್ರತಿಭೆಯನ್ನು, ಇಂದು ಲಭ್ಯವಿರುವ ತರಬೇತಿ ಮತ್ತು ಸಂಪನ್ಮೂಲಗಳ ಸಹಾಯದಿಂದ ಮತ್ತಷ್ಟು ಅಭಿವೃದ್ಧಿಗೊಳಿಸಿಕೊಂಡ ಒಡಿಶಾದ ಜಾಜ್ಪುರ ಜಿಲ್ಲೆಯ ನಿವಾಸಿಯಾದ 15 ವರ್ಷದ ಬಾಲಕಿ ಅಂಜಲಿ ಮುಂಡಾ, ಉದ್ಘಾಟನಾ ‘ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್ 2026’ರ ಮೊದಲ ದಿನವೇ ಮೂರು ಚಿನ್ನದ ಪದಕಗಳನ್ನು ಗೆದ್ದು ಇಡೀ ದೇಶದ ಯುವಜನತೆಗೆ ಸ್ಫೂರ್ತಿ ನೀಡಿದ್ದಾಳೆ.
ಬಿಲ್ಲು-ಬಾಣದ ಒಲವು:
ಬುಡಕಟ್ಟು ಜನರಿಗೆ ಬಿಲ್ಲು-ಬಾಣದ ಕ್ರೀಡೆಯ ಮೇಲೆ ಸಹಜ ಒಲವಿದೆ. 1855ರಲ್ಲಿ ಸಂತಾಲ್ ಸಮುದಾಯ, ಶೋಷಣೆಯ ವಿರುದ್ಧ ತೀವ್ರ ಹೋರಾಟ ನಡೆಸಿತ್ತು, ಇದನ್ನು ‘ಸಂತಾಲ್ ಹೂಲ್’ ಎಂದು ಅಮರಗೊಳಿಸಲಾಗಿದೆ. ಆಧುನಿಕ ಶಸ್ತ್ರಾಸ್ತ್ರ ಹೊಂದಿದ್ದ ಬ್ರಿಟಿಷ್ ಪಡೆಗಳು ಆ ದಂಗೆಯನ್ನು ಅಡಗಿಸಿದರೂ, ತಮ್ಮ ವಿವರಣೆಗಳಲ್ಲಿ ಸಂತಾಲ್ ವೀರರ ಯುದ್ಧ ಕೌಶಲ್ಯ, ವಿಶೇಷವಾಗಿ ಬಿಲ್ಲು-ಬಾಣ ವಿದ್ಯೆಯ ಬಗ್ಗೆ ಬ್ರಿಟಿಷರು ವಿಶೇಷ ಉಲ್ಲೇಖ ಮಾಡಿದ್ದಾರೆ. ಜಾರ್ಖಂಡ್‌ನ ಊರಿ-ಮಾರಿ ಗ್ರಾಮದಲ್ಲಿ ಇರುವ ‘ಸಂತಾಲ್ ಹೂಲ್’ನ ವೀರ ನಾಯಕರಾದ ಹಾಗೂ ಅಮರ ಸಹೋದರರು ಸಿಧೋ-ಕಾನ್ಹು ಮತ್ತು ಚಾಂದ್-ಭೈರವ್ ಹಾಗೂ ವೀರ ಸಹೋದರಿಯರಾದ ಫೂಲೋ-ಝಾನೋ ಅವರ ಪ್ರತಿಮೆಗಳನ್ನು ರಾಜ್ಯಪಾಲರಾಗಿದ್ದ, ನನ್ನ ಅಧಿಕಾರಾವಧಿಯಲ್ಲಿ ಅನಾವರಣಗೊಳಿಸುವ ಸೌಭಾಗ್ಯ ನನಗೆ ದೊರೆತಿತ್ತು. ಭಾರತದ ಪ್ರತಿಯೊಂದು ಮಗುವಿಗೂ ಶ್ರೇಷ್ಠ ಬಿಲ್ಲುಗಾರ ಎಂದು ಆರಾಧಿಸಲ್ಪಡುವ ಏಕಲವ್ಯನ ಮಹಾನತೆಯ ಬಗ್ಗೆ ಗೊತ್ತಿದೆ. ಏಕಲವ್ಯ ಪ್ರತಿಯೊಬ್ಬ ಭಾರತೀಯನಿಗೆ, ವಿಶೇಷವಾಗಿ ಬುಡಕಟ್ಟು ಸಮುದಾಯಗಳಿಗೆ ಸ್ಫೂರ್ತಿಯ ಸಂಕೇತವಾಗಿದ್ದಾರೆ. ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಸ್ಥಾಪಿಸಲಾದ ‘ಸ್ಪೋರ್ಟ್ಸ್ ಎಕ್ಸಲೆನ್ಸ್ ಸೆಂಟರ್ಸ್’ ಮಕ್ಕಳಿಗೆ ಆಧುನಿಕ ಕ್ರೀಡಾ ಸೌಲಭ್ಯ ಮತ್ತು ವಿಧಾನಗಳನ್ನು ಒದಗಿಸುತ್ತಿವೆ. ಅದೇ ರೀತಿ, ಶಾಲಾ ವ್ಯವಸ್ಥೆಯ ಜೊತೆ ಬೇರೆಡೆ ಇರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡುವ ಯೋಜನೆಗಳನ್ನು ಸಹ ಜಾರಿಗೆ ತರಲಾಗುತ್ತಿದೆ.
ಗೆಳತಿಗಾಗಿ ನನ್ನ ಸೋಲು:
ನನ್ನ ವೈಯಕ್ತಿಕ ಪ್ರಯತ್ನಗಳ ಮೂಲಕ ನನ್ನ ಹಳ್ಳಿಯಲ್ಲಿ ಹಿಂದುಳಿದ ವರ್ಗಗಳ ಮಕ್ಕಳಿಗಾಗಿ ವಸತಿ ಶಾಲೆಯೊಂದನ್ನು ಸ್ಥಾಪಿಸಲಾಗಿದೆ. ಈ ಕಿರು ಉಪಕ್ರಮದ ಭಾಗವಾಗಿ ಶಾಲಾ ಆವರಣದಲ್ಲಿ ಬಿಲ್ಲು-ಬಾಣ ತರಬೇತಿಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಸರ್ಕಾರದ ಉಪಕ್ರಮಗಳ ಜೊತೆಗೆ, ಸಣ್ಣ ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನಗಳು, ಬುಡಕಟ್ಟು ಮಕ್ಕಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಬೆಳೆಸಲು ನೆರವಾಗುತ್ತವೆ.
ನನ್ನ ಗ್ರಾಮದಲ್ಲಿನ ಇತರ ಬುಡಕಟ್ಟು ಮಕ್ಕಳಂತೆ, ಈಜು ಸೇರಿದಂತೆ, ವ್ಯಾಯಾಮ ಮತ್ತು ಕ್ರೀಡೆಗಳ ಬಗ್ಗೆ ನನಗೂ ಬಹಳ ಆಸಕ್ತಿ ಇತ್ತು. ಶಾಲಾ ಕ್ರೀಡಾ ಸ್ಪರ್ಧೆಗಳಲ್ಲಿ ನಾನು ಸಾಮಾನ್ಯವಾಗಿ ಪ್ರಥಮ ಸ್ಥಾನ ಪಡೆಯುತ್ತಿದ್ದೆ. ಒಮ್ಮೆ ಒಂದು ಸ್ಪರ್ಧೆಯಲ್ಲಿ ನನ್ನ ಗೆಳತಿಗೆ ಮೊದಲ ಬಹುಮಾನ ಗೆಲ್ಲುವ ಸಂತೋಷ ದೊರೆಯಲಿ ಎಂದು ನಾನು ಉದ್ದೇಶಪೂರ್ವಕವಾಗಿ ಹಿಂದೆ ಸರಿದೆ. ಕ್ರೀಡೆಯು ತಂಡದ ಮನೋಭಾವವನ್ನು ಬೆಳೆಸುತ್ತದೆ ಮತ್ತು ಸಾಮಾಜಿಕ ಬಾಂಧವ್ಯವನ್ನು ಬಲಪಡಿಸುತ್ತದೆ. ಸಾಮಾನ್ಯವಾಗಿ ಆಟದ ಮೈದಾನದಲ್ಲಿ ತೀವ್ರ ಪ್ರತಿಸ್ಪರ್ಧೆ ತೋರಿಸುವ ಆಟಗಾರರು ಮೈದಾನದ ಹೊರಗೆ ಉತ್ತಮ ಸ್ನೇಹಿತರಾಗಿರುತ್ತಾರೆ ಎಂಬುದನ್ನು ಗಮನಿಸಬಹುದು.
ನನ್ನ ಅಣ್ಣ ಉತ್ತಮ ಫುಟ್ಬಾಲ್ ಆಟಗಾರನಾಗಿದ್ದ, ಆದರೆ ತೀವ್ರ ಗಾಯದಿಂದಾಗಿ ಕ್ರೀಡೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ನನ್ನ ಕುಟುಂಬದ ಇತರ ಹಲವು ಸದಸ್ಯರು ವಿವಿಧ ಕ್ರೀಡೆಗಳಲ್ಲಿ ಶ್ರೇಷ್ಠತೆ ಮೆರೆದಿದ್ದಾರೆ. ಬುಡಕಟ್ಟು ಕುಟುಂಬಗಳಲ್ಲಿ ಕ್ರೀಡೆಯ ಒಂದು ಸಜೀವ ಸಂಪ್ರದಾಯ ಇದೆ ಎಂಬುದನ್ನು ತಿಳಿಸಲು ನಾನು ಈ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ಅವರಲ್ಲಿ ಅಪಾರ ಪ್ರತಿಭೆ, ಶಕ್ತಿ, ಆಸಕ್ತಿ ಮತ್ತು ಶ್ರೇಷ್ಠತೆ ಸಾಧಿಸುವ ಛಲವಿದೆ. ಇಂಥ ಪ್ರತಿಭೆಯನ್ನು ಸೌಲಭ್ಯ ಮತ್ತು ತರಬೇತಿಯ ಮೂಲಕ ಪೋಷಿಸಿದರೆ, ಕ್ರೀಡೆಯು ಅವರಿಗೆ ಕೇವಲ ಮನರಂಜನೆ ಮತ್ತು ಸಾಮಾಜಿಕ ಸಂಪರ್ಕದ ಮಾಧ್ಯಮವಾಗಿ ಉಳಿಯದೆ, ಜೀವನದಲ್ಲಿ ಮುನ್ನಡೆಯಲು, ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಸಾಮಾಜಿಕ ಗೌರವ ಗಳಿಸಲು ಒಂದು ದಾರಿಯಾಗುತ್ತದೆ. ಈ ಸಂದರ್ಭದಲ್ಲಿ, 2018ರಿಂದ ರಾಜ್ಯ ಸರ್ಕಾರಗಳು ಮತ್ತು ಕೆಲ ಕ್ರೀಡಾ ಸಂಘಟನೆಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿದ ‘ಖೇಲೋ ಇಂಡಿಯಾ’ ಅಭಿಯಾನ ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ.
ಕೆಲ ವರ್ಷಗಳ ಹಿಂದಿನವರೆಗೂ ನಮ್ಮ ದೇಶದಲ್ಲಿ ಉತ್ತಮ ಕ್ರೀಡಾ ಸೌಲಭ್ಯಗಳು ಕೇವಲ ದೊಡ್ಡ ನಗರಗಳಲ್ಲಿ ಮಾತ್ರ ಲಭ್ಯವಿದ್ದವು, ಆದರೆ ಗ್ರಾಮೀಣ ಮತ್ತು ಅರಣ್ಯ ಪ್ರದೇಶಗಳು ಪ್ರತಿಭಾವಂತ ಆಟಗಾರರಿಂದ ತುಂಬಿವೆ. ಬುಡಕಟ್ಟು ಪ್ರದೇಶಗಳಲ್ಲಿ ಕ್ರೀಡಾ ಅಕಾಡೆಮಿಗಳು ಮತ್ತು ತರಬೇತಿ ಕೇಂದ್ರಗಳು ಇರಲಿಲ್ಲ. ಈಗ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಮಕ್ಕಳ ಕ್ರೀಡೆಗೆ ವಿಶೇಷ ಗಮನ ನೀಡುವುದರಿಂದ ಹಿಡಿದು ‘ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್’ ನಂತಹ ಉಪಕ್ರಮಗಳವರೆಗೆ, ಬುಡಕಟ್ಟು ಕ್ರೀಡಾಪಟುಗಳಿಗೆ ತರಬೇತಿ ನೀಡಲು ಮತ್ತು ಅವರ ಕೌಶಲ್ಯಗಳಿಗೆ ಪ್ರೋತ್ಸಾಹ ನೀಡಲು ಹಲವಾರು ಚಟುವಟಿಕೆಗಳು ನಡೆಯುತ್ತಿವೆ.
ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ:
ನನ್ನ ವಿದ್ಯಾರ್ಥಿ ದಿನಗಳಲ್ಲಿ ಐದು ಅಥವಾ ಆರು ಹಳ್ಳಿಗಳ ಜನರು ಒಟ್ಟಾಗಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದ ವಿಷಯ ನನಗೆ ಈಗಲೂ ನೆನಪಿದೆ. ಕೆಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳು ಕೂಡ ಬುಡಕಟ್ಟು ಪ್ರದೇಶಗಳಲ್ಲಿ ಕ್ರೀಡೆಯನ್ನು ಉತ್ತೇಜಿಸಿವೆ. ಆದರೆ ಇಂತಹ ಗ್ರಾಮೀಣ ಸ್ಪರ್ಧೆಗಳಲ್ಲಿ ಭಾಗವಹಿಸುವ ಉತ್ತಮ ಆಟಗಾರರು ಸಹ, ಗ್ರಾಮೀಣ ಮಟ್ಟಕ್ಕಿಂತ ಮೇಲೇರಲು ಸಾಧ್ಯವಾಗುತ್ತಿರಲಿಲ್ಲ. ಈ ಪರಿಸ್ಥಿತಿಯನ್ನು ಬದಲಾಯಿಸಲು ಕಳೆದ ಕೆಲ ವರ್ಷಗಳಲ್ಲಿ ಅನೇಕ ಶ್ಲಾಘನೀಯ ಪ್ರಯತ್ನಗಳು ನಡೆದಿವೆ. ಈ ಪ್ರಯತ್ನಗಳಿಗೆ ಮತ್ತಷ್ಟು ಚಾಲನೆ ನೀಡಲು ‘ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್ 2026’ ಅನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಆಯೋಜನೆಯ ಪ್ರಕ್ರಿಯೆಯಲ್ಲಿ ತಳಮಟ್ಟದ ಬುಡಕಟ್ಟು ಆಟಗಾರರನ್ನು ಗುರುತಿಸಿ ಅವರಿಗೆ ಕ್ರೀಡಾ ಸೌಲಭ್ಯ ಮತ್ತು ತರಬೇತಿ ನೀಡಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಟಗಾರರು ಈ ರಾಷ್ಟ್ರೀಯ ಬುಡಕಟ್ಟು ಕ್ರೀಡಾ ಕೂಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಆಟಗಾರರ ಸಹಜ ಪ್ರತಿಭೆಯ ಆಧಾರದ ಮೇಲೆ ಭಾರತ 1928ರಲ್ಲಿ ಹಾಕಿಯಲ್ಲಿ ಮೊದಲ ಒಲಿಂಪಿಕ್ ಚಿನ್ನದ ಪದಕ ಸಾಧಿಸಿತು. ಆ ವಿಜಯದಲ್ಲಿ ಬುಡಕಟ್ಟು ಸಮುದಾಯದ ಆಟಗಾರರ ಪ್ರಮುಖ ಕೊಡುಗೆ ಇತ್ತು. ಅಂದಿನಿಂದ ಇಂದಿನವರೆಗೆ ದಿಲೀಪ್ ಟಿರ್ಕಿ, ಸುಬೋಧ್ ಲಕ್ರಾ ಮತ್ತು ಸಲೀಮ ತೇತೆಯಂತಹ ಹಾಕಿ ತಾರೆಗಳು ಭಾರತದ ಪುರುಷ ಮತ್ತು ಮಹಿಳಾ ತಂಡಗಳನ್ನು ತಮ್ಮ ಪ್ರತಿಭೆಯಿಂದ ಶ್ರೀಮಂತಗೊಳಿಸುವುದನ್ನು ಮುಂದುವರೆಸಿದ್ದಾರೆ.
ಭಾರತ ಸರ್ಕಾರದ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮ ‘ಖೇಲೋ ಇಂಡಿಯಾ’ ಅಡಿಯಲ್ಲಿ ಸ್ಥಳೀಯ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಎಲ್ಲ ಭೌಗೋಳಿಕ ಪ್ರದೇಶಗಳು, ಸಾಮಾಜಿಕ ವರ್ಗಗಳು ಮತ್ತು ಸಂಸ್ಥೆಗಳಿಗೆ ಸೂಕ್ತ ಕ್ರೀಡಾ ಪರಿಸರ ವ್ಯವಸ್ಥೆ ಒದಗಿಸಲು ಸಮಗ್ರ ಪ್ರಯತ್ನಗಳು ನಡೆಯುತ್ತಿವೆ. ಈ ಕಾರ್ಯಕ್ರಮದಡಿ ಕ್ರೀಡೆಯಲ್ಲಿ ಹುಡುಗಿಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಜಾರಿಗೊಳಿಸಲಾಗುತ್ತಿರುವ ‘ಅಸ್ಮಿತಾ’ ಯೋಜನೆ ನಮ್ಮ ಬುಡಕಟ್ಟು ಹೆಣ್ಣು ಮಕ್ಕಳ ಸಾಮರ್ಥ್ಯವನ್ನೂ ವಿಕಸಿತಗೊಳಿಸುತ್ತಿದೆ. ‘ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್ 2026’ ನಿರ್ಮಿಸಿದ ಈ ಉತ್ಸಾಹ ಮತ್ತು ವೇಗವನ್ನು ನಿರಂತರ ಬಲಪಡಿಸುತ್ತ, ಬುಡಕಟ್ಟು ಕ್ರೀಡಾಪಟುಗಳನ್ನು ತಡೆಯಿಲ್ಲದೆ ಪ್ರೋತ್ಸಾಹಿಸಿದರೆ, ಭಾರತವನ್ನು ಜಾಗತಿಕ ಕ್ರೀಡಾ ಮಹಾಶಕ್ತಿಯನ್ನಾಗಿ ನಿರ್ಮಿಸಲು ಸಾಧ್ಯವಾಗುವ ಆಟಗಾರರ ಒಂದು ದೊಡ್ಡ ತಂಡ ಸೃಷ್ಟಿಯಾಗಲಿದೆ.
ಕಳೆದ ಕೆಲ ತಿಂಗಳುಗಳಲ್ಲಿ ನಡೆದ ಬಸ್ತರ್ ಮತ್ತು ಸರ್ಗುಜಾ ಒಲಿಂಪಿಕ್ಸ್‌ನಲ್ಲಿ ಏಳು ಲಕ್ಷಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದಾರೆ. ಅವರಲ್ಲಿ ನಕ್ಸಲ್ ಹಾದಿ ತ್ಯಜಿಸಿ ಕ್ರೀಡೆಯ ಸಕಾರಾತ್ಮಕ ದಾರಿ ಆರಿಸಿಕೊಂಡ ಕೆಲ ಯುವಕರೂ ಇದ್ದಾರೆ. ಕ್ರೀಡೆಯ ಮೂಲಕ ಯುವಜನರ ಶಕ್ತಿ ಸಕಾರಾತ್ಮಕ ಅಭಿವ್ಯಕ್ತಿ ಪಡೆಯುತ್ತದೆ. ಯುವಜನರಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಅಭಿವೃದ್ಧಿಪಡಿಸುವ ಸರ್ಕಾರದ ಪ್ರಯತ್ನಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಉತ್ತಮ ಫಲ ನೀಡಲು ಪ್ರಾರಂಭಿಸಿವೆ.
ಬುಡಕಟ್ಟು ಸಮುದಾಯಗಳು ಸೇರಿದಂತೆ ನಮ್ಮ ಯುವಜನರ ಕ್ರೀಡಾ ಪ್ರತಿಭೆ ನಮ್ಮ ರಾಷ್ಟ್ರಕ್ಕೆ ಅಮೂಲ್ಯ ಸಾಮಾಜಿಕ ಬಂಡವಾಳವಾಗಿದೆ. ಈ ಅಮೂಲ್ಯ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ನಮ್ಮ ದೇಶ ಕ್ರೀಡಾ ಕ್ಷೇತ್ರದಲ್ಲಿ ಅನೇಕ ಗೌರವಾನ್ವಿತ ಶ್ರೇಷ್ಠತೆಯ ಮಾನದಂಡಗಳನ್ನು ಸ್ಥಾಪಿಸಲಿದೆ ಎಂಬ ವಿಶ್ವಾಸ ನನಗಿದೆ. ಈ ನಂಬಿಕೆಯೊಂದಿಗೆ ನನ್ನ ಸಂದೇಶ: ಖೇಲೋ ಇಂಡಿಯಾ! ಖೂಬ್ ಖೇಲೋ ಇಂಡಿಯಾ!


