ಜೆಎಸ್‌ಡಬ್ಲ್ಯು ಸಮೂಹವು 'ಆ್ಯಂಪ್‌ಸ್ಟಾರ್' ಎಂಬ ಹೊಸ ಬ್ರ್ಯಾಂಡ್ ಮೂಲಕ ವಾಣಿಜ್ಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಪ್ರವೇಶಿಸಿದೆ. ಮಹಾರಾಷ್ಟ್ರದಲ್ಲಿ ₹2500 ಕೋಟಿ ಹೂಡಿಕೆಯೊಂದಿಗೆ 90 ಎಕರೆ ವಿಸ್ತೀರ್ಣದ ಬೃಹತ್ ಇವಿ ಉತ್ಪಾದನಾ ಘಟಕವನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ವಾರ್ಷಿಕ 15,000 ಎಲೆಕ್ಟ್ರಿಕ್ ಬಸ್‌ಗಳು ಮತ್ತು ಟ್ರಕ್‌ಗಳನ್ನು ತಯಾರಿಸುವ ಗುರಿ ಹೊಂದಲಾಗಿದೆ.
ಸ್ಪಂದನ್ ಕಣಿಯಾರ್
ಮುಂಬೈ: ಜೆಎಸ್‌ಡಬ್ಲ್ಯು ಸಮೂಹದ ಕಮರ್ಷಿಯಲ್ ಎಲೆಕ್ಟ್ರಿಕ್ ವಾಹನ ಸಂಸ್ಥೆಯಾದ ಜೆಎಸ್‌ಡಬ್ಲ್ಯು ಗ್ರೀನ್‌ಟೆಕ್ ಲಿಮಿಟೆಡ್, ಭಾರತದಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಮತ್ತು ಟ್ರಕ್‌ಗಳನ್ನು ವಿನ್ಯಾಸಗೊಳಿಸಲು, ತಯಾರಿಸಲು ಮತ್ತು ಮಾರಾಟ ಮಾಡಲು ಆ್ಯಂಪ್‌ಸ್ಟಾರ್(AMPSTAR) ಎಂಬ ಹೊಸ ಬ್ರ್ಯಾಂಡ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಮೂಲಕ ಜೆಎಸ್‌ಡಬ್ಲ್ಯು ಸಮೂಹವು ವಾಣಿಜ್ಯ ಸಾರಿಗೆ ರಂಗಕ್ಕೆ ಪ್ರವೇಶಿಸಿದೆ.
ಮಂಗಳವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮೂಹದ ಅಧ್ಯಕ್ಷ ಸಜ್ಜನ್ ಜಿಂದಾಲ್ ಹೊಸದಾಗಿ ವಿನ್ಯಾಸಗೊಳಿಸಿರುವ ಟ್ರಕ್ ಹಾಗೂ ಬಸ್ ಅನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಜ್ಜನ್ ಜಿಂದಾಲ್, ‘ಎಲೆಕ್ಟ್ರಿಕ್ ವಾಣಿಜ್ಯ ಸಾರಿಗೆಗೆ ಕಾಲಿಡುವುದು ದೇಶ ಸೇವೆಯ ಒಂದು ಭಾಗ. ಆಮದು ಮಾಡಿಕೊಳ್ಳುವ ಇಂಧನದ ಬದಲಿಗೆ ಭಾರತದಲ್ಲೇ ಉತ್ಪಾದನೆಯಾಗುವ ವಿದ್ಯುತ್‌ನಿಂದ ದೇಶದ ಜನರನ್ನು ಮತ್ತು ಸರಕುಗಳನ್ನು ಸಾಗಿಸುವುದು ನಮ್ಮ ಮುಖ್ಯ ಉದ್ದೇಶ’ ಎಂದರು.
90 ಎಕರೆಯಲ್ಲಿ ಘಟಕ
ಜೆಎಸ್‌ಡಬ್ಲ್ಯು ಗ್ರೂಪ್ ಈ ಯೋಜನೆಗಾಗಿ ₹2500 ಕೋಟಿ ಆರಂಭಿಕ ಹೂಡಿಕೆ ಮಾಡಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ (ಔರಂಗಾಬಾದ್)ದಲ್ಲಿ 90 ಎಕರೆ ಜಾಗದಲ್ಲಿ, ಭಾರತದ ಅತಿದೊಡ್ಡ ಸಂಯೋಜಿತ ಇವಿ ಉತ್ಪಾದನಾ ಘಟಕವನ್ನು ನಿರ್ಮಿಸಲಾಗುತ್ತಿದೆ. ಈ ಉತ್ಪಾದನಾ ಘಟಕವು ವಾರ್ಷಿಕ 15000 ಎಲೆಕ್ಟ್ರಿಕ್ ಬಸ್‌ಗಳು ಮತ್ತು ಟ್ರಕ್‌ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಬಸ್ ತಯಾರಿಕೆಯಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಪ್ರೀ-ಟ್ರೀಟ್‌ಮೆಂಟ್ ಮತ್ತು ಎಲೆಕ್ಟ್ರೋ-ಡಿಪೋಸಿಷನ್ (ಪಿಟಿ-ಇಡಿ) ತಂತ್ರಜ್ಞಾನ, ಸ್ವಯಂಚಾಲಿತ ಟ್ರಕ್-ಕ್ಯಾಬಿನ್ ಲೈನ್ ಹಾಗೂ ಬ್ಯಾಟರಿ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.
ವಾಹನಗಳು 150 ಕೆವಿಯಿಂದ 500 ಕೆವಿವರೆಗಿನ ಸಾಮರ್ಥ್ಯದಲ್ಲಿ ಲಭ್ಯವಿರುತ್ತವೆ. 7 ಮೀ.ನಿಂದ 18 ಮೀ. ಉದ್ದದ ಬಸ್‌ಗಳನ್ನು ನಗರ ಸಾರಿಗೆ, ಶಾಲಾ ವಾಹನಗಳು, ಸಿಬ್ಬಂದಿ ಸಾರಿಗೆ ಮತ್ತು ಅಂತರನಗರ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ವಿವಿಧ ರಾಜ್ಯಗಳಲ್ಲಿ ನಗರ, ಅಂತರ ನಗರ ಸಾರಿಗೆ ಸೇವೆ ಒದಗಿಸಲು ಸ್ಥಳೀಯ ಸರ್ಕಾರಗಳನ್ನು ಸಂಪರ್ಕಿಸಲು ಸಂಸ್ಥೆ ಉದ್ದೇಶಿಸಿದೆ.
ಇ-ಟ್ರಕ್‌ಗಳು
ಆರಂಭಿಕವಾಗಿ 55-ಟನ್ ಸಾಮರ್ಥ್ಯದ ಟ್ರ್ಯಾಕ್ಟರ್-ಟ್ರೇಲರ್ ಬಿಡುಗಡೆಯಾಗಲಿದ್ದು, ಮುಂಬರುವ ದಿನಗಳಲ್ಲಿ ಟಿಪ್ಪರ್‌ಗಳು ಮತ್ತು ಫಿಕ್ಸ್ಡ್-ಬಾಡಿ ಡಂಪರ್‌ಗಳು ಸಹ ಲಭ್ಯವಾಗಲಿವೆ. ಡ್ರೈವ್‌ಟ್ರೇನ್ ತಂತ್ರಜ್ಞಾನ, ಸಾಫ್ಟ್‌ವೇರ್ ಮತ್ತು ಆಲ್ಗಾರಿದಮ್‌ಗಳನ್ನು ಭಾರತೀಯ ರಸ್ತೆ ಹಾಗೂ ವಾತಾವರಣಕ್ಕೆ ತಕ್ಕಂತೆ ಜೆಎಸ್‌ಡಬ್ಲ್ಯು ಸಂಸ್ಥೆಯೇ ಅಭಿವೃದ್ಧಿಪಡಿಸಿದೆ. ಡಬಲ್ ಕೂಲಿಂಗ್ ಬ್ಯಾಟರಿ ವ್ಯವಸ್ಥೆ ಮತ್ತು ಬಲವಾದ ಮೊನೊಕಾಕ್ ಚಾಸಿಸ್ ಅಳವಡಿಸಲಾಗಿದೆ.
ವಹಿವಾಟಿನ ಮಾದರಿಗಳು
ನೇರ ಖರೀದಿ, ಲೀಸಿಂಗ್, ಮತ್ತು ಬ್ಯಾಟರಿ ಆ್ಯಸ್ ಎ ಸರ್ವಿಸ್ (ಬಿಎಎಸ್) ಮಾದರಿಗಳ ಜೊತೆಗೆ ಚಾರ್ಜಿಂಗ್ ಮೂಲಸೌಕರ್ಯ ಹಾಗೂ ಮಾರಾಟ ನಂತರ ಗ್ರಾಹಕರಿಗೆ ಬೆಂಬಲ ನೀಡುವ ವ್ಯವಸ್ಥೆಯನ್ನು ಈ ಯೋಜನೆ ಒಳಗೊಂಡಿರಲಿದೆ. ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲ್ಯು ಸಮೂಹದ ಪಾರ್ಥ್ ಜಿಂದಾಲ್, ಜೆಎಸ್‌ಡಬ್ಲ್ಯು ಗ್ರೀನ್‌ಟೆಕ್ ಸಂಸ್ಥೆಯ ಸಿಇಒ ಸುಮಿತ್ ಮಿತ್ತಲ್ ಇದ್ದರು.


