35 ವರ್ಷಗಳ ಹಿಂದೆ ತಂದೆ ಖರೀದಿಸಿದ್ದ ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿಯ ಷೇರಿನಿಂದ ಯುವಕನೊಬ್ಬ ₹80 ಕೋಟಿ ಒಡೆಯನಾಗಿದ್ದಾನೆ. 1990 ರಲ್ಲಿ ₹1 ಲಕ್ಷಕ್ಕೆ ಖರೀದಿಸಿದ್ದ ಷೇರಿನ ಮೌಲ್ಯ ಇಂದು ₹80 ಕೋಟಿಗೆ ಏರಿಕೆಯಾಗಿದೆ.

ನವದೆಹಲಿ (ಜೂ.9): ಸಾಮಾನ್ಯವಾಗಿ ಸೋಶಿಯಲ್‌ ಮೀಡಿಯಾಗಳಲ್ಲಿ ಲಾಂಗ್‌ ಟರ್ಮ್‌ ಇನ್ವೆಸ್ಟ್‌ಮೆಂಟ್‌ನ ಕಥೆಗಳನ್ನು ಕೇಳುತ್ತಲೇ ಇರುತ್ತವೆ. ಅಜ್ಜ-ಅಜ್ಜಿ, ತಂದೆ-ತಾಯಿ ತಮ್ಮ ಯೌವ್ವನದಲ್ಲಿ ಖರೀದಿ ಮಾಡಿಟ್ಟಿದ್ದ ಷೇರುಗಳ ಪತ್ರಗಳನ್ನು ಕಂಡುಕೊಳ್ಳುವ ಮಕ್ಕಳು, ಮೊಮ್ಮಕ್ಕಳು ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದನ್ನು ನೋಡಿದ್ದೇನೆ. ಈಗ ಅಂಥದ್ದೇ ಒಂದು ಘಟನೆಯಲ್ಲಿ 35 ವರ್ಷದ ಹಿಂದೆ ತಂದೆ ಖರೀದಿ ಮಾಡಿಟ್ಟಿದ್ದ ಷೇರಿನಿಂದ ಯುವಕನೊಬ್ಬ ರಾತ್ರೋರಾತ್ರಿ ಬರೋಬ್ಬಿ 80 ಕೋಟಿ ರೂಪಾಯಿ ಒಡೆಯನಾಗಿದ್ದಾನೆ.

ಈತನ ಸ್ಟೋರಿ ಸೋಶಿಯಲ್‌ ಮೀಡಿಯಾ ವೇದಿಕೆ ರೆಡಿಟ್‌ನಲ್ಲಿ ವೈರಲ್‌ ಆಗಿದೆ. ಇತ್ತೀಚೆಗೆ ತಮ್ಮ ತಂದೆ 1990ರಲ್ಲಿ 1 ಲಕ್ಷ ರೂಪಾಯಿಗೆ ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿಯ ಷೇರು ಖರೀದಿ ಮಾಡಿದ್ದ ಪತ್ರವನ್ನು ಕಂಡುಕೊಂಡಿದ್ದಾರೆ. ಅಂದಾಜು ಮೂರು ದಶಕಗಳ ಕಾಲ ಇದರ ಬಗ್ಗೆ ಮಾಹಿತಿಯೇ ಇದ್ದಿರಲಿಲ್ಲ. ಇತ್ತೀಚೆಗೆ ಇದರ ಪತ್ರಗಳು ಮಗನಿಗೆ ಸಿಕ್ಕಿದ್ದು, ಅಂದು ಹೂಡಿಕೆ ಮಾಡಿದ್ದ ಒಂದು ಲಕ್ಷ ಇಂದು ಅಂದಾಜು 80 ಕೋಟಿ ರೂಪಾಯಿ ಅಗಿ ಬದಲಾಗಿದೆ.

Scroll to load tweet…

ಹೂಡಿಕೆದಾರ ಸೌರವ್‌ ದತ್ತಾ ಈ ಸುದ್ದಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ರೆಡಿಟ್‌ ಯೂಸರ್‌ ಒಬ್ಬರಿಗೆ ತಮ್ಮ ಮಾಹಿತಿಯ ಕ್ರೆಡಿಟ್‌ ನೀಡಿದ್ದಾರೆ. 'ರೆಡಿಟ್‌ನಲ್ಲಿ ಈ ಸುದ್ದಿಯನ್ನು ನಾನು ನೋಡಿದೆ. ಈತನ ತಂದೆ 1990ಯಲ್ಲಿ 1 ಲಕ್ಷ ರೂಪಾಯಿಗೆ ಜೆಎಸ್‌ಡಬ್ಲ್ಯು ಷೇರು ಖರೀದಿ ಮಾಡಿದ್ದರು. ಇಂದಿಗೆ ಅದರ ಮೌಲ್ಯ 80 ಕೋಟಿ ರೂಪಾಯಿ ಆಗಿದೆ.ಸರಿಯಾದ ಸಮಯದಲ್ಲಿ ಖರೀದಿ ಮಾಡಿ, 30 ವರ್ಷದ ನಂತರ ಮಾರಾಟ ಮಾಡಿದರೆ ಆಗುವ ಲಾಭ ಇದು' ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಎಕ್ಸ್‌ನಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ಅನೇಕ ಯೂಸರ್‌ಗಳು Reddit ಯೂಸರ್‌ಅನ್ನು ಅಭಿನಂದಿಸಿದ್ದು, ಯಶಸ್ವಿ ಖರೀದಿ ಮತ್ತು ಹೋಲ್ಡಿಂಗ್‌ ತಂತ್ರಗಳ ಬಗ್ಗೆ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡರು.

'ಸ್ಟಾಕ್‌ ವಿಭಜನೆ, ಬೋನಸ್‌ ಮತ್ತು ಡಿವಿಡೆಂಡ್‌ಗಳು ದಿನಗಳು ಕಳೆದ ಹಾಗೆ ಹೇಗೆ ಲಾಭ ಮಾಡುತ್ತದೆ ಎಂದು ಜನರು ಅರ್ಥ ಮಾಡಿಕೊಳ್ಳಲು ಕೂಡ ಸಾಧ್ಯವಿಲ್ಲ. ಇದು ನಿಜಕ್ಕೂ ಮ್ಯಾಜಿಕಲ್‌' ಎಂದು ಅನ್ಹದ್‌ ಅರೋರಾ ಬರೆದುಕೊಂಡಿದ್ದಾರೆ. 'ನಿಜವಾದ ಮ್ಯಾಜಿಕ್‌ ಮತ್ತು ದೀರ್ಘಕಾಲದ ಹೋಲ್ಡಿಂಗ್‌ನ ಪವರ್‌ ಇದು' ಎಂದು ದತ್ತಾ ಎನ್ನುವವರು ಪ್ರತಿಕ್ರಿಯೆ ನೀಡಿದ್ದಾರೆ. 'ಈಗ ನೀವು ನಿವೃತ್ತಿಯಾಗಿ ನಿಮ್ಮ ಇಡೀ ಜೀವನವನ್ನು ನೆಮ್ಮದಿಯಿಂದ ಕಳೆಯಬಹುದು. ಇದರಿಂದ ಒಂದು ಒಳ್ಳೆಯ ಉದ್ಯಮ ಕೂಡ ಆರಂಭಿಸಬಹುದು. ನಿಮಗೆ ದೊಡ್ಡ ಅಭಿನಂದನೆಗಳು' ಎಂದು ಹೇಳಿದ್ದಾರೆ.

ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಭಾರತದ ಪ್ರಮುಖ ಉಕ್ಕು ತಯಾರಕ ಸಂಸ್ಥೆಯಾಗಿದ್ದು, ಮಾರುಕಟ್ಟೆಯಲ್ಲಿ ತನ್ನ ಬಲವಾದ ಪ್ರಾಬಲ್ಯಕ್ಕೆ ಹೆಸರುವಾಸಿಯಾಗಿದೆ. ಪ್ರಸ್ತುತ, ಕಂಪನಿಯ ಷೇರು ಬೆಲೆ ಸುಮಾರು 1,004.90 ರೂ.ಗಳಾಗಿದ್ದು, ಮಾರುಕಟ್ಟೆ ಬಂಡವಾಳೀಕರಣ 2.37 ಟ್ರಿಲಿಯನ್ ರೂ.ಗಳಾಗಿದೆ. ಕಂಪನಿಯ ಷೇರುಗಳು ನಿರಂತರವಾಗಿ ಗಣನೀಯ ಬೆಳವಣಿಗೆ ಕಂಡಿದೆ. ತಾಳ್ಮೆಯಿಂದ ಈ ಕಂಪನಿಯಲ್ಲಿ ಹೂಡಿಕೆ ಮಾಡಿದವರಿಗೆ ಭಾರೀ ಲಾಭ ಮಾಡಿಕೊಟ್ಟಿದೆ.

ಇತ್ತೀಚೆಗೆ ಚಂಡೀಗಢದ ರತನ್‌ ಧಿಲ್ಲೋನ್ ಎಂಬ ವ್ಯಕ್ತಿ 1988 ರಲ್ಲಿ ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ 30 ಷೇರುಗಳಿಗೆ ಭೌತಿಕ ಪ್ರಮಾಣಪತ್ರವನ್ನು ಕಂಡುಕೊಂಡಿದ್ದರು. ಧಿಲ್ಲೋನ್, ಷೇರು ಮಾರುಕಟ್ಟೆ ಜ್ಞಾನದ ಕೊರತೆಯಿಂದ, ಎಕ್ಸ್‌ನಲ್ಲಿ ಇದರ ಬಗ್ಗೆ ಮಾಹಿತಿ ಪಡೆಯಲು ಯತ್ನಿಸಿದ್ದರು. ತಮ್ಮಲ್ಲಿದ್ದ ರಿಲಯನ್ಸ್‌ ಷೇರಿನ ಪತ್ರವನ್ನೂ ಅವರು ಹಂಚಿಕೊಂಡಿದ್ದರು. ಎಕ್ಸ್‌ ಯೂಸರ್ ಒಬ್ಬರು ಮೂರು ಷೇರು ವಿಭಜನೆಗಳು ಮತ್ತು ಎರಡು ಬೋನಸ್‌ಗಳನ್ನು ಪರಿಗಣಿಸಿ, ಮೂಲ 30 RIL ಷೇರುಗಳು ಈಗ 960 ಷೇರುಗಳಾಗುತ್ತವೆ, ಇದರ ಮೌಲ್ಯ ಸುಮಾರು ₹11.88 ಲಕ್ಷ ಎಂದು ಅಂದಾಜಿಸಿದ್ದರು.