Bad evil eye : ಕೆಲವರ ಕಣ್ಣು ಕೆಟ್ಟದಾಗಿರುತ್ತೆ, ಅವರು ನೋಡ್ತಿದ್ದಂತೆ ದೃಷ್ಟಿ ಬೀಳುತ್ತೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಈ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸುಲಭ ಉಪಾಯ ಇಲ್ಲಿದೆ.

ಕೆಟ್ಟ ದೃಷ್ಟಿ ಬೀಳಬಾರದು ಎನ್ನುವ ಕಾರಣಕ್ಕೆ ಸಾಮಾನ್ಯವಾಗಿ ಮಕ್ಕಳ ಹಣೆಗೆ, ಕಿವಿಯ ಹಿಂದೆ ಅಥವಾ ಕೆನ್ನೆಗೆ ಕಪ್ಪು ಕಾಜಲ್ ಇಡುವುದನ್ನು ನೀವು ನೋಡಿರಬಹುದು. ಜೊತೆಗೆ ಕಾಲಿಗೂ ಕಪ್ಪು ದಾರ ಕಟ್ಟುತ್ತಾರೆ. ಆದರೆ ಈ ಬಾರಿ ಹೇಳಲಾಗುತ್ತಿರುವ ವಿಧಾನ ಸ್ವಲ್ಪ ವಿಭಿನ್ನವಾಗಿದೆ.

ಪಾದದ ಕೆಳಭಾಗದಲ್ಲಿ ಕಾಜಲ್

ಕೆಟ್ಟ ದೃಷ್ಟಿ ತಗುಲಬಾರದು, ಶುರು ಮಾಡಿದ ಕೆಲಸ ಅರ್ಧಕ್ಕೆ ನಿಲ್ಲಬಾರದು, ಜೀವನದಲ್ಲಿ ಎಲ್ಲವೂ ಸುಗಮವಾಗಿ ಸಾಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಅದಕ್ಕಾಗಿಯೇ ನಮ್ಮಲ್ಲಿ ಹಲವರು ಕಪ್ಪು ದಾರ ಕಟ್ಟುವುದು, ಕಪ್ಪು ಕಾಜಲ್ ಇಡುವುದು ಸೇರಿದಂತೆ ಹಲವು ರೀತಿಯ ಪರಿಹಾರಗಳನ್ನು ಮಾಡುತ್ತಾರೆ. ಟ್ಯಾರೋ ರೀಡರ್ ಸಾಕ್ಷಿ ಸಿಂಘಲ್ ಹೇಳುವ ಪ್ರಕಾರ, ಕೆಟ್ಟ ದೃಷ್ಟಿಯಿಂದ ರಕ್ಷಣೆ ಪಡೆಯಲು ನೀವು ಪಾದದ ಕೆಳ ಭಾಗದಲ್ಲಿ ನೀವು ಕಾಜಲ್‌ ಇಡಬೇಕು. ಮಕ್ಕಳಷ್ಟೇ ಅಲ್ಲ, ಮಹಿಳೆಯರು ಮತ್ತು ಪುರುಷರೂ ಇದನ್ನು ಅನುಸರಿಸಬಹುದು.

ಏನು ಮಾಡ್ಬೇಕು?

ಪ್ರತಿದಿನ ಸ್ವಲ್ಪ ಕಾಜಲ್ ಅಥವಾ ಕಪ್ಪನ್ನು ರಿಂಗ್ ಫಿಂಗರ್ ನಿಂದ ತೆಗೆದುಕೊಂಡು ಪಾದಕ್ಕೆ ಹಚ್ಚಬೇಕು. ಪಾದದ ಮಧ್ಯಭಾಗದ ತಳದಲ್ಲಿ ಸಣ್ಣದಾಗಿ ಕಾಜಲ್ ಇಡಬೇಕು. ಇದು ಹೊರಗಿನಿಂದ ಎಲ್ಲರಿಗೂ ಸುಲಭವಾಗಿ ಕಾಣುವುದಿಲ್ಲ. ಹಾಗಾಗಿ ಅನೇಕರು ಈ ವಿಧಾನವನ್ನು ಫಾಲೋ ಮಾಡ್ತಾರೆ.

ಹೊಸ ಕೆಲಸ ಆರಂಭಿಸುವಾಗ

ಹೊಸ ಕೆಲಸ, ಹೊಸ ಪ್ರಾಜೆಕ್ಟ್ ಅಥವಾ ಹೊಸ ಪ್ರಯತ್ನ ಆರಂಭಿಸುವ ಮುನ್ನ ಕಾಜಲ್ ಇಡುವುದರಿಂದ ಕೆಟ್ಟ ದೃಷ್ಟಿಯಿಂದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ಈಗಾಗಲೇ ಶುರುಮಾಡಿರುವ ಕೆಲಸಗಳಲ್ಲಿ ಅಡೆತಡೆಗಳು ಎದುರಾಗುತ್ತಿದ್ದರೆ, ಈ ವಿಧಾನವನ್ನು 21 ದಿನಗಳ ಕಾಲ ನಿರಂತರವಾಗಿ ಅನುಸರಿಸಿ ಬದಲಾವಣೆ ಗಮನಿಸಬಹುದು. ನಿಮ್ಮ ಪಾದಕ್ಕೆ ಪ್ರತಿ ದಿನ ಕಾಜಲ್‌ ಹಚ್ಚುತ್ತ ಬರಬೇಕು.

21 ದಿನಗಳ ಕಾಲ ಏಕೆ?

ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಪದ್ಧತಿಗಳಲ್ಲಿ 21 ದಿನಗಳ ಕಾಲ ಯಾವುದಾದರೂ ಒಂದು ಅಭ್ಯಾಸವನ್ನು ನಿರಂತರವಾಗಿ ಮಾಡುವುದಕ್ಕೆ ವಿಶೇಷ ಮಹತ್ವ ನೀಡಲಾಗುತ್ತದೆ. ಅದಕ್ಕಾಗಿಯೇ ಈ ಕಾಜಲ್ ವಿಧಾನವನ್ನೂ 21 ದಿನಗಳ ಕಾಲ ಪಾಲಿಸುವಂತೆ ಹೇಳಲಾಗಿದೆ.

ಕಾಜಲ್‌ ಗೆ ಇಷ್ಟೊಂದು ಮಹತ್ವ ಏಕೆ?

ನಮ್ಮ ಸಂಪ್ರದಾಯದಲ್ಲಿ ಕಪ್ಪು ಬಣ್ಣವನ್ನು ಕೆಟ್ಟ ದೃಷ್ಟಿ ಅಥವಾ ನಕಾರಾತ್ಮಕತೆಯನ್ನು ದೂರ ಮಾಡುವ ಸಂಕೇತವಾಗಿ ಕೆಲವರು ನೋಡುತ್ತಾರೆ. ಮಕ್ಕಳಿಗೆ ಕಪ್ಪು ಚುಕ್ಕೆ ಇಡುವುದು, ವಾಹನಗಳಿಗೆ ಕಪ್ಪು ದಾರ ಕಟ್ಟುವುದು, ಮನೆ ಬಾಗಿಲಿಗೆ ದೃಷ್ಟಿ ಬೊಂಬೆ ಹಾಕುವುದು ಹೀಗೆ ಹಲವು ಆಚರಣೆಗಳು ಇದಕ್ಕೆ ಸಂಬಂಧಿಸಿವೆ. ಇನ್ನೂ ಕೆಲವರು ಹೊಸ ಮನೆಗೆ ಪ್ರವೇಶಿಸುವಾಗ ಅಥವಾ ಹೊಸ ವಾಹನ ಖರೀದಿಸಿದಾಗ ದೃಷ್ಟಿ ತಾಗಬಾರದು ಎಂದು ವಿವಿಧ ರೀತಿಯ ಆಚರಣೆಗಳನ್ನು ಮಾಡುತ್ತಾರೆ.