ನಿಜ್ಜರ್ ಹತ್ಯೆ ಕೆನಡಾ ತನಿಖೆಗೆ ಸಹಕರಿಸಿ, ಭಾರತಕ್ಕೆ ಅಮೆರಿಕ ಒತ್ತಾಯ
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಕೆನಡಾ ನಡೆಸುತ್ತಿರುವ ತನಿಖೆಗೆ ಸಹಕರಿಸುವಂತೆ ಅಮೆರಿಕವು ಭಾರತಕ್ಕೆ ಒತ್ತಾಯ ಮಾಡಿದೆ. ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಅಮೆರಿಕದ ವಿದೇಶಾಂಗ ಸಚಿವ ನೇರವಾಗಿ ಈ ಬಗ್ಗೆ ಒತ್ತಾಯಿಸಿದ್ದಾರೆ.

ವಾಷಿಂಗ್ಟನ್ (ಸೆ.30): ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ ಸಂಬಂಧ ಕೆನಡಾ ನಡೆಸುತ್ತಿರುವ ತನಿಖೆಗೆ ಸಹಕರಿಸುವಂತೆ ಅಮೆರಿಕ ಮತ್ತೆ ಭಾರತಕ್ಕೆ ಒತ್ತಾಯ ಮಾಡಿದೆ. ಹಾಲಿ ಅಮೆರಿಕ ಭೇಟಿ ಕೈಗೊಂಡಿರುವ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ಈ ಒತ್ತಾಯ ಮಾಡಿದ್ದಾರೆ. ಆದರೆ ಜೈಶಂಕರ್ ಅವರು, ಕೆನಡಾ ಉಗ್ರರ ಪೋಷಣೆ ಮಾಡುತ್ತಿದೆ ಎಂದು ಬ್ಲಿಂಕನ್‌ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ.
ಉಭಯ ದೇಶಗಳ ವಿದೇಶಾಂಗ ಸಚಿವರ ಭೇಟಿ ಬಳಿಕ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ಕೆನಡಾ ವಿಷಯ ಪ್ರಸ್ತಾಪಿಸಿದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಆದರೂ ಅನೌಪಚಾರಿಕವಾಗಿ ಜೈಶಂಕರ್ ಹಾಗೂ ಬ್ಲಿಂಕನ್ ನಡುವೆ ಚರ್ಚೆ ನಡೆದಿದೆ. ಖುದ್ದು ಜೈಶಂಕರ್ ಹಾಗೂ ಅಮೆರಿಕ ಸರ್ಕಾರದ ಮೂಲಗಳು ಇದನ್ನು ಖಚಿತಪಡಿಸಿವೆ.
ಭಾರತದ ಜೊತೆ ನಿಕಟ ಸಂಬಂಧಕ್ಕೆ ಬದ್ಧ, ಅಬ್ಬರದ ನಂತರ ಕೊಂಚ ತಣ್ಣಗಾದ ಕೆನಡಾ ಪ್ರಧಾನಿ ಟ್ರುಡೋ
ಈ ಬಗ್ಗೆ ಜೈಶಂಕರ್ ಶುಕ್ರವಾರ ಸಂಜೆ ಮಾಹಿತಿ ನೀಡಿ, ‘ಭಾರತ-ಕೆನಡಾ ಸಂಬಂಧದ ಬಗ್ಗೆ ಚರ್ಚಿಸಿದೆವು. ಈ ವೇಳೆ ಕೆನಡಾದಲ್ಲಿ ನಡೆದ ಖಲಿಸ್ತಾನಿ ಚಟುವಟಿಕೆಗಳ ಬಗ್ಗೆ ನಾನು ಬ್ಲಿಂಕನ್‌ಗೆ ಮಾಹಿತಿ ನೀಡಿದೆ. ಅಲ್ಲದೆ, ಕೆನಡಾ ಪ್ರಧಾನಿ ಮಾಡಿದ ಆರೋಪಗಳು ನಿರಾಧಾರ ಎಂದೂ ಹೇಳಿದೆ’ ಎಂದಿದ್ದಾರೆ.
ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಸ್ವತಃ ಅಮೆರಿಕವೇ ಕೆನಡಾಕ್ಕೆ ರಹಸ್ಯ ಮಾಹಿತಿ ನೀಡಿತ್ತು. ಜೊತೆಗೆ ಖಲಿಸ್ತಾನಿ ನಾಯಕರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕದಲ್ಲಿನ ಹಲವು ಖಲಿಸ್ತಾನಿಗಳಿಗೆ ಅಮೆರಿಕದ ಗುಪ್ತಚರ ಸಂಸ್ಥೆ ಎಫ್‌ಬಿಐ ಮುನ್ನೆಚ್ಚರಿಕೆ ನೀಡಿತ್ತು, ಇದರ ಬೆನ್ನಲ್ಲೇ ಜೈಶಂಕರ್-ಬ್ಲಿಂಕನ್ ಭೇಟಿ ನಡೆದಿದೆ.
ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಬಹಿರಂಗ ಆರೋಪ ಮಾಡಿದ ಬಳಿಕ ಹಲವು ಬಾರಿ, ಇದೊಂದು ಕಳವಳಕಾರಿ ಬೆಳವಣಿಗೆ. ಈ ಕುರಿತು ತನಿಖೆಗೆ ಸಹಕರಿಸುವಂತೆ ನಾವು ಭಾರತವನ್ನು ಆಗ್ರಹಿಸುತ್ತೇವೆ ಎಂದು ಅಮೆರಿಕ ಹೇಳಿಕೊಂಡೇ ಬಂದಿತ್ತು.
ಡ್ರಗ್ಸ್ ವಹಿವಾಟು ಸಂಬಂಧ ರಾಹತ್, ನಿಜ್ಜರ್ ವೈಷಮ್ಯ
ಅದರ ಬೆನ್ನಲ್ಲೇ ನಡೆದ ಉಭಯ ದೇಶಗಳ ವಿದೇಶಾಂಗ ಸಚಿವರ ನಡುವೆ ನಡೆದ ಭೇಟಿಯ ವೇಳೆ ಅಮೆರಿಕ ಮತ್ತೆ ಅಂಥದ್ದೇ ಒತ್ತಾಯ ಮಾಡಿದೆ ಎಂದು ವರದಿಯಾಗಿದೆ. ಆದರೆ ಭೇಟಿ ಬಳಿಕ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ಕೆನಡಾ ವಿಷಯ ಪ್ರಸ್ತಾಪಿಸಿದ ಮಾಹಿತಿ ನೀಡಿಲ್ಲ. ಮತ್ತೊಂದೆಡೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಮತ್ತು ಶೀಘ್ರವೇ ನಡೆಯಲಿರುವ 2*2 ನಾಯಕರ ಸಭೆ ಕುರಿತಂತೆ ಚರ್ಚೆ ನಡೆಸಲಾಯಿತು ಎಂದು ವಿದೇಶಾಂಗ ಸಚಿವ ಜೈಶಂಕರ್ ಮಾಹಿತಿ ನೀಡಿದ್ದಾರೆ.
ಈ ಸಭೆಗೂ ಮುನ್ನ ಕೆನಡಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಕೆನಡಾ ಪ್ರಧಾನಿ ಟ್ರುಡೋ, ಭಾರತದ ಜೊತೆಗಿನ ಮಾತುಕತೆ ವೇಳೆ ನಿಜ್ಜರ್ ಹತ್ಯೆ ವಿಷಯವನ್ನು ಪ್ರಸ್ತಾಪಿಸುವುದಾಗಿ ಬ್ಲಿಂಕನ್ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.