ಮತ್ತೆ ಕೋವಿಡ್ ಸ್ಫೋಟ, 25,900 ಕೇಸ್ ದಾಖಲಾದ ಬೆನ್ನಲ್ಲೇ ಮಾಸ್ಕ್ ಕಡ್ಡಾಯಗೊಳಿಸಿದ ಸಿಂಗಾಪುರ!
ಕೋವಿಡ್ ಮತ್ತೆ ಅಬ್ಬರಿಸಲು ಆರಂಭಿಸಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಒಮಿಕ್ರಾನ್ ತಳಿ ಪತ್ತೆಯಾಗಿದೆ.ಅತ್ತ ಸಿಂಗಾಪುರದಲ್ಲಿ ಕೋವಿಡ್ ಸ್ಫೋಟಗೊಂಡಿದೆ. ಬರೋಬ್ಬರಿ 25,900 ಪ್ರಕರಣ ಪತ್ತೆಯಾದ ಬೆನ್ನಲ್ಲೇ ಮಾಸ್ಕ್ ಜಾರಿಗೊಳಿಸಿದೆ.
ಸಿಂಗಾಪುರ(ಮೇ.18) ಹಲವು ದೇಶಗಳಲ್ಲಿ ಮತ್ತೆ ಕೋವಿಡ್ ಪ್ರಕರಣ ಕಾಣಿಸಿಕೊಂಡಿದೆ. ಭಾರತದ ಮಹಾರಾಷ್ಟ್ರದಲ್ಲಿ 91 ಕೋವಿಡ್ ಒಮಿಕ್ರಾನ್ ಪ್ರಕರಣ ದಾಖಲಾಗಿದೆ. ವಿದೇಶಗಳಲ್ಲೂ ಕೋವಿಡ್ ಹೊಸ ತಳಿಗಳು ಸ್ಫೋಟಗೊಂಡಿದೆ. ಇದೀಗ ಸಿಂಗಾಪುರದಲ್ಲಿ ಕೋವಿಡ್ ಮತ್ತೊಂದು ಅಲೆ ಸೃಷ್ಟಿಯಾಗಿದೆ. ಬರೋಬ್ಬರಿ 25,900 ಕೋವಿಡ್ ಕೇಸ್ ಪತ್ತೆಯಾಗಿದೆ. ಆತಂಕ ಹೆಚ್ಚಾದ ಬೆನ್ನಲ್ಲೇ ಸಿಂಗಾಪುರ ಸರ್ಕಾರ ಮಾಸ್ಕ್ ಧರಿಸಲು ಸೂಚನೆ ನೀಡಿದೆ.
ಮೇ 5 ರಿಂದ 11ರ ವರೆಗೆ ಸಿಂಗಾಪುರದಲ್ಲಿ 25,900 ಕೋವಿಡ್ ಪ್ರಕರಣ ದಾಖಲಾಗಿದೆ. ಕೋವಿಡ್ ಮಾರ್ಗಸೂಚಿಯನ್ನು ಸಿಂಗಾಪುರ ಸರ್ಕಾರ ನೀಡಿದೆ. ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು, ಜಸಂದಣಿಯಿಂದ ದೂರವಿರುವುದು, ಅನಾರೋಗ್ಯ, ಕೋವಿಡ್ ಲಕ್ಷಣ ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ವೈದ್ಯರು, ಆಸ್ಪತ್ರೆಯಲ್ಲಿ ಸಂಪರ್ಕಿಸಲು ಸೂಚಿಸಿದೆ.
ಭಾರತದಲ್ಲಿ ದಿಢೀರ್ ಆತಂಕ ಹೆಚ್ಚಿಸಿದ ಕೋವಿಡ್ ಒಮಿಕ್ರಾನ್, ಮಹಾರಾಷ್ಟ್ರದಲ್ಲಿ 91 ಕೇಸ್ ಪತ್ತೆ!
ಸಿಂಗಾಪುರದಲ್ಲಿ ಕೋವಿಡ್ ಅಲೆ ಕಾಣಿಸಿಕೊಂಡಿದೆ. ಕಳೆದ ಒಂದು ವಾರದಲ್ಲಿ ಪ್ರಕರಣ ಗಣನೀಯವಾಗಿ ಏರಿಕೆಯಾಗಿದೆ. ಮುಂದಿನ 2 ರಿಂದ ನಾಲ್ಕು ವಾರದಲ್ಲಿ ಸಿಂಗಾಪುರದಲ್ಲಿ ಗರಿಷ್ಠ ಕೋವಿಡ್ ಪ್ರಕರಣ ದಾಖಲಾಗಲಿದೆ ಎಂದು ಸಿಂಗಾಪುರ ಸಚಿವ ಆನ್ಗ್ ಯೇ ಹೇಳಿದ್ದಾರೆ. ಜೂನ್ ಮಧ್ಯದ ವೇಳೆ ಸಿಂಗಾಪುರದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಮೇ 05ಕ್ಕೆ ಸಿಂಗಾಪುರದಲ್ಲಿ 13,700 ಕೋವಿಡ್ ಪ್ರಕರಣ ದಾಖಲಾಗಿತ್ತು. ಈ ಪೈಕಿ ಆಸ್ಪತ್ರೆ ದಾಖಲಾಗಿರುವ ಪ್ರಕರಣವೂ ಏರಿಕೆಯಾಗುತ್ತಿದೆ. 181 ಮಂದಿ ಕೋವಿಡ್‌ನಿಂದ ಆಸ್ಪತ್ರೆ ದಾಖಲಾಗಿದ್ದರು, ಇದೀಗ ಈ ಸಂಖ್ಯೆ 250ಕ್ಕೆ ಏರಿಕೆಯಾಗಿದೆ. ಗಂಭೀರ ಸ್ಥಿತಿಯಲ್ಲಿ ಐಸಿಯು ದಾಖಲಾಗಿರುವ ಸಂಖ್ಯೆ ಕೇವಲ 3 ಮಾತ್ರ.
60 ವರ್ಷ ಮೇಲ್ಪಟ್ಟ, ಅನಾರೋಗ್ಯದಿಂದ ಕೂಡಿರುವ ವ್ಯಕ್ತಿಗಳು ಹೆಚ್ಚು ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ.ಇದೇ ವೇಳೆ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲು ಸಿಂಗಾಪುರ ಸರ್ಕಾರ ಸೂಚಿಸಿದೆ. ಕಳೆದ 12 ತಿಂಗಳಿನಿಂದ ಲಸಿಕೆ ಪಡೆಯದೇ ಇದ್ದರೆ ಬೂಸ್ಟರ್ ಡೋಸ್ ಪಡೆಯಲು ಸರ್ಕಾರ ಸೂಚಿಸಿದೆ.
ಕೋವಿಶೀಲ್ಡ್ ಲಸಿಕೆ ದೂಷಿಸಬೇಡಿ, ಕಂಡುಹಿಡಿದವರಿಗೊಂದು ಥ್ಯಾಂಕ್ಸ್ ಹೇಳಿ: ಡಾ. ಸಿ ಎನ್ ಮಂಜುನಾಥ್
ಪರಿಸ್ಥಿತಿ ನಿಭಾಯಿಸಲು ಸರ್ಕಾರ ಸಮರ್ಥವಾಗಿದೆ. ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತವಹಿಸಿ, ಮಾಸ್ಕ್ ಧರಿಸಿ, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ.
ಇತ್ತ ಲಸಿಕೆಯಿಂದ ಅಡ್ಡಪರಿಣಾಮ ಕುರಿತು ವರದಿ ಬಹಿರಂಗವಾದ ಬಳಿಕ ಆತಂಕ ಹೆಚ್ಚಾಗಿದೆ. ಹೀಗಾಗಿ ಕೋವಿಡ್ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ಕೋವಿಡ್ ಅಲೆ ಕಾಣಿಸಿಕೊಂಡಿರುವುದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.