ಇಂಡಿಯಾ ಗೆದ್ದರೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣ: ಮಲ್ಲಿಕಾರ್ಜುನ ಖರ್ಗೆ
‘ಕಾಂಗ್ರೆಸ್ ಎಂದಿಗೂ ಮಾಡದ ಕೆಲಸಗಳ ಬಗ್ಗೆ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ. ನಾವು ಯಾರ ಮೇಲೂ ಬುಲ್ಡೋಜರ್ ಬಳಸಿಲ್ಲ. ಸುಳ್ಳು ಹೇಳುವುದು ಮತ್ತು ಜನರನ್ನು ಪ್ರಚೋದಿಸುವ ಅಭ್ಯಾಸವನ್ನು ಮೋದಿ ಹೊಂದಿದ್ದಾರೆ. ಮೋದಿ ಭಾಷಣವು ವಿಭಜನೆ ಮತ್ತು ಪ್ರಚೋದಿಸುವ ಉದ್ದೇಶದಿಂದ ಕೂಡಿದೆ. ಇಂತಹ ಪ್ರಧಾನಿಯನ್ನು ನಾನೆಂದೂ ನೋಡಿಲ್ಲ’ ಎಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಮುಂಬೈ(ಮೇ.19): ‘ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಅಯೋಧ್ಯೆ ರಾಮಮಂದಿರಕ್ಕೆ ಬುಲ್ಡೋಜರ್ ಹತ್ತಿಸಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇಂಡಿಯಾ ಕೂಟದ ಇತರ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ‘ನಾವು ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಗೆ ಬದ್ಧರಾಗಿದ್ದೇವೆ. ಬುಲ್ಡೋಜರ್ ಹತ್ತಿಸುವುದು ಬಿಜೆಪಿ ಸಂಸ್ಕೃತಿಯೇ ವಿನಾ ಕಾಂಗ್ರೆಸ್‌ನದ್ದಲ್ಲ. ದೇಶ ಸಂವಿಧಾನದ ಅನುಸಾರ ನಡೆಯಲಿದೆ’ ಎಂದಿದ್ದಾರೆ.
ಮುಂಬೈನಲ್ಲಿ ಜಂಟಿ ಸುದ್ದಿಯಲ್ಲಿ ಮಾತನಾಡಿದ ಖರ್ಗೆ, ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು, ‘ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ವಿರೋಧ ಪಕ್ಷವು ರಾಮ ಮಂದಿರವನ್ನು ಬುಲ್ಡೋಜ್ ಮಾಡುತ್ತದೆ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳ ಕೋಟಾವನ್ನು ಮುಸ್ಲಿಮರಿಗೆ ಹಂಚುತ್ತದೆ ಮತ್ತು ಕಾಶ್ಮೀರದ 370ನೇ ವಿಧಿ ಮರುಸ್ಥಾಪಿಸುತ್ತದೆ’ ಎಂಬ ಪ್ರಧಾನಿ ಮೋದಿಯವರ ಆರೋಪಗಳಿಗೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್-ಇಂಡಿಯಾ ಕೂಟ ಚೆನ್ನಾಗಿದೆ; ಉ.ಪ್ರದೇಶದಲ್ಲಿ 40 ಸೀಟು ಗೆಲ್ಲುತ್ತೇವೆ: ಡಿಕೆ ಶಿವಕುಮಾರ ವಿಶ್ವಾಸ
ಮಂದಿರ ಕೆಡವಲ್ಲ, ಕಟ್ತೇವೆ:
ಖರ್ಗೆ ಮಾತನಾಡಿ, ‘ಕಾಂಗ್ರೆಸ್ ಎಂದಿಗೂ ಮಾಡದ ಕೆಲಸಗಳ ಬಗ್ಗೆ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ. ನಾವು ಯಾರ ಮೇಲೂ ಬುಲ್ಡೋಜರ್ ಬಳಸಿಲ್ಲ. ಸುಳ್ಳು ಹೇಳುವುದು ಮತ್ತು ಜನರನ್ನು ಪ್ರಚೋದಿಸುವ ಅಭ್ಯಾಸವನ್ನು ಮೋದಿ ಹೊಂದಿದ್ದಾರೆ. ಮೋದಿ ಭಾಷಣವು ವಿಭಜನೆ ಮತ್ತು ಪ್ರಚೋದಿಸುವ ಉದ್ದೇಶದಿಂದ ಕೂಡಿದೆ. ಇಂತಹ ಪ್ರಧಾನಿಯನ್ನು ನಾನೆಂದೂ ನೋಡಿಲ್ಲ’ ಎಂದು ಹೇಳಿದರು.
ಇದೇ ವೇಳೆ, ಉದ್ಧವ್ ಠಾಕ್ರೆ ಮಾತನಾಡಿ, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಇಂಡಿಯಾ ಒಕ್ಕೂಟದ ಸರ್ಕಾರ ಪೂರ್ಣಗೊಳಿಸಲಿದೆ’ ಎಂದರು. ಇದಕ್ಕೆ ದನಿಗೂಡಿಸಿದ ಶರದ್ ಪವಾರ್ ಅವರು, ‘ದೇವಾಲಯಗಳನ್ನು ಮಾತ್ರವಲ್ಲ, ಎಲ್ಲಾ ಧರ್ಮಗಳ ಪೂಜಾ ಸ್ಥಳಗಳನ್ನು ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯ’ ಎಂದು ಹೇಳಿದರು.
ಮೀಸಲು ರದ್ದಿಲ್ಲ:
ಇದೇ ವೇಳೆ, ಎಸ್ಸಿ ಎಸ್ಟಿ ಮೀಸಲನ್ನು ಮುಸ್ಲಿಮರಿಗೆ ಹಂಚುತ್ತಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ‘ಸಂವಿಧಾನದ ಆಶಯದಂತೆ ಮೀಸಲಾತಿ ಉಳಿಯುತ್ತದೆ’ ಎಂದು ಸ್ಪಷ್ಟಪಡಿಸಿದರು. ಇನ್ನು 370ನೇ ವಿಧಿಯ ಕುರಿತು ತಮ್ಮಕಾಂಗ್ರೆಸ್ ನಿಲುವಿನ ಕುರಿತು ಕೇಳಿದ ಪ್ರಶ್ನೆಗೆ, ‘ನಾನು ಮೋದಿಗೆ ಉತ್ತರಿಸುವವನಲ್ಲ, ನಮ್ಮ ಪ್ರಣಾಳಿಕೆಯಲ್ಲಿ ನಾವು ಭರವಸೆ ನೀಡಿದ್ದನ್ನು ನಾವು ಜಾರಿಗೊಳಿಸುತ್ತೇವೆ. ಮೋದು ಹೋದಲ್ಲೆಲ್ಲಾ ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ, ಸಮಾಜವನ್ನು ವಿಭಜಿಸುವ ಮಾತನಾಡುತ್ತಾರೆ’ ಎಂದು ಕಿಡಿಕಾರಿದರು.
ಪ್ರಣಾಳಿಕೆಗೆ ಮಾವೋವಾದಿಗಳ ಹಣೆಪಟ್ಟಿ ಹಚ್ಚಿರುವ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿ, ‘ಮೋದಿ ಸಲಹೆಗಾರರು ಯಾರು ಎಂದು ಗೊತ್ತಿಲ್ಲ. ಇದು ನಗು ತರಿಸುತ್ತದೆ. ಪ್ರತಿ ಬಾರಿಯೂ ಎಲ್ಲ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ’ ಎಂದರು.
ಇಂಡಿಯಾ ಕೂಟ ಗೆದ್ರೆ 10 ಕೆಜಿ ಉಚಿತ ಪಡಿತರ: ಮಲ್ಲಿಕಾರ್ಜುನ ಖರ್ಗೆ
ನಮ್ಮಲ್ಲಿ ಅನೇಕ ಪ್ರಧಾನಿ ಮುಖ:
‘ಇಂಡಿಯಾ ಮೈತ್ರಿಕೂಟವು ಹಲವಾರು ಪ್ರಧಾನ ಮಂತ್ರಿ ಮುಖಗಳನ್ನು ಹೊಂದಿದೆ. ನಾವು ಬಹುಮತ ಪಡೆದಾಗ ಯಾರನ್ನು ಆಯ್ಕೆ ಮಾಡಬೇಕೆಂದು ನಾವು ನಿರ್ಧರಿಸಿದ್ದೇವೆ ಆದರೆ ಬಿಜೆಪಿಯು ಒಬ್ಬರನ್ನು ಮಾತ್ರ ಹೊಂದಿದೆ ಮತ್ತು ಅದು ಸಹ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಉದ್ಧವ್ ಠಾಕ್ರೆ ಅವರು ಮೋದಿ ಬಗ್ಗೆ ಲೇವಡಿ ಮಾಡಿದರು. ಜೂನ್ 4 ರಂದು ‘ಜುಮ್ಲಾ ಯುಗ’ ಕೊನೆಗೊಳ್ಳಲಿದೆ ಮತ್ತು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ ‘ಅಚ್ಛೇ ದಿನ್’ ಬರುತ್ತದೆ ಠಾಕ್ರೆ ಹೇಳಿದರು.
ನಾಳೆ ಆರೆಸ್ಸೆಸ್ಸನ್ನೂ ನಕಲಿ ಅಂತಾರೆ:
ಇದೇ ವೇಳೆ, ನಕಲಿ ಶಿವಸೇನೆ ಎಂದು ತಮ್ಮನ್ನು ಜರಿದ ಮೋದಿ ಬಗ್ಗೆ ಕಿಡಿಕಾರಿದ ಠಾಕ್ರೆ ಅವರು, ‘ನಾಳೆ ಆರೆಸ್ಸೆಸ್ಸನ್ನೂ ಇವರು ನಕಲಿ ಸಂಘ, ತಮ್ಮದೇ ಅಸಲಿ ಎಂದು ಕರದರೂ ಅಚ್ಚರಿಯಿಲ್ಲ. ಏಕೆಂದರೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸಂದರ್ಶನವೊಂದರಲ್ಲಿ ‘ಆರೆಸ್ಸೆಸ್, ಬಿಜೆಪಿಯ ಸೈದ್ಧಾಂತಿಕ ಮುಖ ಮಾತ್ರ. ಬಿಜೆಪಿ ತನ್ನದೇ ಆದ ಕೆಲಸ ಮಾಡುತ್ತದೆ ಎಂದು ಆರೆಸ್ಸೆಸ್ಸನ್ನು ನಿರ್ಲಕ್ಷಿಸುವ ಯತ್ನ ಮಾಡಿದ್ದರು’ ಎಂದು ಆರೋಪಿಸಿದರು.