Plane emergency landing on highway: ಹೆದ್ದಾರಿಯಲ್ಲಿ ಸಣ್ಣ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದೆ. ಈ ವೇಳೆ ಮುಂದೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಈ ಭಯಾನಕ ದೃಶ್ಯವು ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಕಾರಿಗೆ ಡಿಕ್ಕಿ ಹೊಡೆದ ವಿಮಾನ:
ಫ್ಲೋರಿಡಾ: ಸಣ್ಣ ವಿಮಾನವೊಂದು ಹೆದ್ದಾರಿಯಲ್ಲೇ ತುರ್ತು ಲ್ಯಾಂಡ್ ಆಗಿ ಕಾರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಮೆರಿಕಾದ ಫ್ಲೋರಿಡಾದ ಪ್ರಮುಖ ಹೆದ್ದಾರಿಯೊಂದರಲ್ಲಿ ಈ ಘಟನೆ ನಡೆದಿದೆ. ಸೋಮವಾರ ಫ್ಲೋರಿಡಾದ ಪ್ರಮುಖ ಹೆದ್ದಾರಿಯಲ್ಲಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿ ನಂತರ ಮುಂದೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪೂರ್ವ ಕರಾವಳಿಯಲ್ಲಿ ಸಾಗುವ ಪ್ರಮುಖ ಉತ್ತರ ದಕ್ಷಿಣ ಹೆದ್ದಾರಿಯಾದ ಇಂಟರ್‌ಸ್ಟೇಟ್ 95ರಲ್ಲಿ ಈ ಅಪಘಾತ ಸಂಭವಿಸಿದೆ. ಈ ಹೆದ್ದಾರಿಯಲ್ಲಿ ಪ್ರತಿದಿನವೂ ಸಾವಿರಾರು ವಾಹನಗಳು ಸಾಗುತ್ತವೆ.
ಹೀಗೆ ಹೆದ್ದಾರಿಯಲ್ಲಿ ತುರ್ತಾಗಿ ಇಳಿದ ಈ ವಿಮಾನದಲ್ಲಿ ಒರ್ಲ್ಯಾಂಡೊದ 27 ವರ್ಷದ ಪೈಲಟ್ ಮತ್ತು 27 ವರ್ಷದ ಪ್ರಯಾಣಿಕ ಇಬ್ಬರಿದ್ದರು. ಬೀಚ್‌ಕ್ರಾಫ್ಟ್ 55 ಹೆಸರಿನ ಈ ವಿಮಾನವು ಸಂಜೆ 5:45 ರ ಸುಮಾರಿಗೆ ಇದ್ದಕ್ಕಿದ್ದಂತೆ ಜನನಿಬಿಡ ದಕ್ಷಿಣ ದಿಕ್ಕಿನ ಲೇನ್‌ಗಳಿಗೆ ಇಳಿದು ಮುಂದೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿಮಾನ ಡಿಕ್ಕಿ ಹೊಡೆದ ಕಾರು 2023 ಟೊಯೋಟಾ ಕ್ಯಾಮ್ರಿ ಗಾಡಿ ಆಗಿದ್ದು, ಇದನ್ನು ಮಹಿಳೆಯೊಬ್ಬರು ಚಲಾಯಿಸುತ್ತಿದ್ದರು. ಕೂಡಲೇ ಅವರನ್ನು ಕಾರಿನಿಂದ ರಕ್ಷಿಸಿ ಚಿಕಿತ್ಸೆಗಾಗಿ ವಿಯೆರಾ ಆಸ್ಪತ್ರೆಗೆ ದಾಖಲಿಸಲಾಯ್ತು.
ಇದನ್ನೂ ಓದಿ: ಸಿದ್ದೇಶ್ವರ್ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಈ ದೃಶ್ಯ ಈ ಕಾರಿನ ಹಿಂದೆಯೇ ಪ್ರಯಾಣಿಸುತ್ತಿದ್ದ ಜೇಮ್ಸ್ ಕಾಫಿ ಹಾಗೂ ಅವರ ಮಗ ಪೀಟರ್ಸ್ ಅವರು ಚಲಾಯಿಸುತ್ತಿದ್ದ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ ವಿಮಾನವು ಕಾರಿಗೆ ಡಿಕ್ಕಿ ಹೊಡೆದು, ಮುಂದೆ ಸಾಗಿದ್ದು, ವಿಮಾನದಿಂದ ಬೆಂಕಿಯ ಕಿಡಿ ಏಳುವುದನ್ನು ಕಾಣಬಹುದಾಗಿದೆ. ಹಾಗೆಯೇ ವಿಮಾನದ ಕೆಳಗೆ ಸಿಲುಕಿದ ಕಾರು ಅತ್ತಿತ್ತ ಅಲುಗಾಡಿ ಹಾಗೆಯೇ ನಿಂತರೆ ವಿಮಾನ ರಸ್ತೆಯ ಒಂದು ಪಕ್ಕಕ್ಕೆ ರಸ್ತೆಗೆ ಮುಖ ಮಾಡಿ ಬಿದ್ದಿದೆ. ಆದರೆ ಈ ಘಟನೆಯಲ್ಲಿ ಯಾರಿಗೂ ದೊಡ್ಡ ಹಾನಿ ಆಗಿಲ್ಲ.
ಆ ಕ್ಷಣ ನನಗೆ ತುಂಬಾ ಭಯವಾಯಿತು, ಬೆಟ್ಟದ ಮೇಲೆ ಒಡ್ಡು ಇರುವುದರಿಂದ ನಾವಿಬ್ಬರೂ ಕೆಳಗೆ ಉರುಳಿ ಬೀಳಬಹುದೆಂದು ಭಾವಿಸಿದೆ ಎಂದು ಜೇಮ್ಸ್ ಅಲ್ಲಿನ ಫಾಕ್ಸ್ ನ್ಯೂಸ್‌ಗೆ ತಿಳಿಸಿದ್ದಾರೆ. ನಾವು ಸಾಯಬಹುದಿತ್ತು, ಅಥವಾ ಇನ್ನೂ ಏನೋ ಕೆಟ್ಟದಾಗಬಹುದಿತ್ತು ಆದರೆ ಹಾಗೆ ನಡೆಯದೇ ಇದ್ದಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದರು. ಅಪಘಾತದ ನಂತರ ಇಬ್ಬರು ಸ್ಥಳೀಯ ಪಾದ್ರಿಗಳಾದ ಆನಿ ಮತ್ತು ಬರ್ನಾರ್ಡ್ ವಿಗ್ಲೆಅವರು ಕಾರಿನಲ್ಲಿದ್ದ ಮಹಿಳೆಗೆ ಸಹಾಯ ಮಾಡಿದ್ದಾರೆ. ಆನಿ ವಿಗ್ಲೆ ವಾಹನದಿಂದ ಮಹಿಳೆಯನ್ನು ಹೊರ ತೆಗೆದಿದ್ದಾರೆ..
ಇದನ್ನೂ ಓದಿ : ದೈಹಿಕ ಸಂಬಂಧದ ನಂತರ ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್ ಕತೆ ಮುಗಿಸಿದ ವಿದ್ಯಾರ್ಥಿ
ನಂತರ ವಿಮಾನವನ್ನು ಹೆದ್ದಾರಿಯಿಂದ ಬೇರೆಡೆ ಸ್ಥಳಾಂತರಿಸಲು ಜ್ಯಾಕ್ಸ್ ಟೋವಿಂಗ್ ಅನ್ನು ತರಲಾಯ್ತು. ಕಂಪನಿಯು ಹೆದ್ದಾರಿಯೊಂದರಿಂದ ವಿಮಾನವನ್ನು ಹೊರತೆಗೆದಿದ್ದು ಇದೇ ಮೊದಲು ಎಂದು ಹೇಳಿದೆ. ಈ ಜೆಟ್‌ನಿಂದ ಇಂಧನ ಸೋರಿಕೆಯಾಗಿಲ್ಲ,ಇದು ಹೆಚ್ಚು ಗಂಭೀರ ಅನಾಹುತವನ್ನು ತಪ್ಪಿಸಿದೆ ಎಂದು ವರದಿಯಾಗಿದೆ. ಆದರೆ ತುರ್ತು ಲ್ಯಾಂಡಿಂಗ್‌ಗೆ ನಿಖರವಾದ ಕಾರಣವನ್ನು ದೃಢಪಡಿಸಲಾಗಿಲ್ಲವಾದರೂ, ಟೋವಿಂಗ್ ಕಂಪನಿಯು ವಿಮಾನವು ಇಂಧನ ಖಾಲಿಯಾಗಿರಬಹುದು ಎಂದು ಹೇಳಿದೆ. ಘಟನೆಯ ಬಗ್ಗೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತನಿಖೆ ನಡೆಸಲಿದೆ. ಫ್ಲೋರಿಡಾ ಹೆದ್ದಾರಿ ಪೆಟ್ರೋಲ್ ಸಂಸ್ಥೆಯೂ ಹೆದ್ದಾರಿಯಲ್ಲಿ ಸಂಭವಿಸಿದ ಈ ಅಪಘಾತ ಬಗ್ಗೆ ತನಿಖೆ ನಡೆಸಲಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.


