ಎಚ್-1ಬಿ ವೀಸಾ ಆಕಾಂಕ್ಷಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಲು ಮುಂದಾಗಿರುವ ಅಮೆರಿಕದ ಟ್ರಂಪ್ ಸರ್ಕಾರ, ಅದಕ್ಕಾಗಿ ಈಗಾಗಲೇ ನಿಗದಿಯಾಗಿದ್ದ ಭಾರತೀಯರ ಸಂದರ್ಶನವನ್ನು ಇದ್ದಕ್ಕಿದ್ದಂತೆ ರದ್ದು ಮಾಡಿದೆ. ಇದರಿಂದ ಅರ್ಜಿದಾರರ ಅಮೆರಿಕದ ಕನಸು 5 ತಿಂಗಳು ಮುಂದೂಡಿಕೆ ಆದಂತಾಗಿದೆ.
ನವದೆಹಲಿ: ಎಚ್-1ಬಿ ವೀಸಾ ಆಕಾಂಕ್ಷಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಲು ಮುಂದಾಗಿರುವ ಅಮೆರಿಕದ ಟ್ರಂಪ್ ಸರ್ಕಾರ, ಅದಕ್ಕಾಗಿ ಈಗಾಗಲೇ ನಿಗದಿಯಾಗಿದ್ದ ಭಾರತೀಯರ ಸಂದರ್ಶನವನ್ನು ಇದ್ದಕ್ಕಿದ್ದಂತೆ ರದ್ದು ಮಾಡಿದೆ. ಇದರಿಂದ ಅರ್ಜಿದಾರರ ಅಮೆರಿಕದ ಕನಸು 5 ತಿಂಗಳು ಮುಂದೂಡಿಕೆ ಆದಂತಾಗಿದ್ದು, ಭಾರೀ ವಿರೋಧಕ್ಕೆ ಕಾರಣವಾಗಿದೆ.
ಡಿ.15ರ ನಂತರ ಸಂದರ್ಶನ ನಿಗದಿಯಾಗಿದ್ದವರಿಗೆಲ್ಲಾ ಇ-ಮೇಲ್ ಕಳಿಸಲಾಗಿದ್ದು, ಮುಂದಿನ ವರ್ಷದ ಮಾರ್ಚ್ ಅಥವಾ ಮೇ ಬಳಿಕ ಮತ್ತೆ ಸಂದರ್ಶನ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಎಷ್ಟು ಜನರ ಸಂದರ್ಶನ ಮುಂದೂಡಿಕೆ ಆಗಿದೆ ಎಂಬುದರ ನಿಖರ ಸಂಖ್ಯೆ ಬಹಿರಂಗವಾಗಿಲ್ಲ. ಎಚ್-1ಬಿ ಮಾತ್ರವಲ್ಲದೆ, ಎಚ್-4 ಸೇರಿದಂತೆ ಇತರೆ ವೀಸಾಗಳ ಸಂದರ್ಶನಗಳೂ ಮುಂದೂಡಿಕೆಯಾಗಿವೆ. ತಾತ್ಕಾಲಿಕ ವೀಸಾ ಪಡೆದು ಅಮೆರಿಕಕ್ಕೆ ಹೋಗಿ, ಈಗ ಸಂದರ್ಶನಕ್ಕಾಗಿ ಭಾರತಕ್ಕೆ ಬಂದಿರುವವರಿಗೆ ವಾಪಸ್ ಅಮೆರಿಕಕ್ಕೆ ಹೋಗಲು ಇದರಿಂದ ತೊಂದರೆಯಾಗಲಿದೆ.
ಕಾರಣವೇನು?:
ಅರ್ಜಿದಾರರು ಅಮೆರಿಕ ವಿರೋಧಿ ಮನಃಸ್ಥಿತಿಯನ್ನು ಹೊಂದಿಲ್ಲವೇ? ಅವರ ಸ್ಥಾನಮಾನ ಇಲ್ಲಿನ ಬದುಕಿಗೆ ಹೊಂದಿಕೆಯಾಗುತ್ತದೆಯೇ? ಅವರಿಂದ ದೇಶ ಭದ್ರತೆಗೆ ಅಪಾಯವಿಲ್ಲವೇ? ಎಂಬುದನ್ನೆಲ್ಲಾ ಪರಿಶೀಲಿಸುವ ಸಲುವಾಗಿ, ಎಲ್ಲಾ ಎಚ್-1ಬಿ ಹಾಗೂ ಎಚ್-4 ವೀಸಾ ಅರ್ಜಿದಾರರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಇತ್ತೀಷೆಗಷ್ಟೇ ಅಮೆರಿಕ ಘೋಷಿಸಿತ್ತು.
ಇದೀಗ ಆ ಖಾತೆಗಳಲ್ಲಿ ಆಕಾಂಕ್ಷಿಗಳು ಮಾಡಿರುವ ಪೋಸ್ಟ್, ಕಾಮೆಂಟ್, ಹಿಂಬಾಲಿಸುತ್ತಿರುವವರು ಇತ್ಯಾದಿಗಳನ್ನು ಪರಿಶೀಲಿಸಲಾಗುವುದು. ಈ ಪ್ರಕ್ರಿಯೆಗೆ ಅನುಕೂಲವಾಗುವಂತೆ, ಅದರ ನಂತರದ ಹಂತವಾದ ಸಂದರ್ಶನವನ್ನು ಮುಂದೂಡಲಾಗಿದೆ. ಸೋಷಿಯಲ್ ಮೀಡಿಯಾ ಟೆಸ್ಟ್‌ನಲ್ಲಿ ಅನರ್ಹರಾದರೆ, ಸಂದರ್ಶನದ ಅವಕಾಶವನ್ನೂ ಕಳೆದುಕೊಳ್ಳುವ ಆತಂಕವಿದೆ.
ಭಾರತದ ಯುಪಿಐ ವಿಶ್ವದ ನಂ.1 ತತ್‌ಕ್ಷಣದ ಪಾವತಿ ವ್ಯವಸ್ಥೆ: ಐಎಂಎಫ್ ವರದಿ
ನವದೆಹಲಿ: ಭಾರತದ ಏಕೀಕೃತ ಪಾವತಿ ಇಂಟರ್‌ಫೇಸ್ (ಯುಪಿಐ) ಜಗತ್ತಿನ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಚಿಲ್ಲರೆ ಪಾವತಿ ವ್ಯವಸ್ಥೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಗುರುತಿಸಿದೆ.ಪ್ರೈಮ್ ಟೈಮ್ ಫಾರ್ ರಿಯಲ್ ಟೈಮ್ - 2024 ಎನ್ನುವ ವರದಿ ಪ್ರಕಾರ ಜಾಗತಿಕ ನೈಜ ಸಮಯದ ಪಾವತಿ ವಹಿವಾಟಿನಲ್ಲಿ ಯುಪಿಐ ಪಾಲು ಶೇ.49ರಷ್ಟಿದೆ. 129 ಶತಕೋಟಿ ವಹಿವಾಟು ನಡೆಸಿ ಭಾರತ ಮೊದಲ ಸ್ಥಾನದಲ್ಲಿದೆ. ತ್ವರಿತ ಪಾವತಿಯಲ್ಲಿ ಬ್ರೆಜಿಲ್, ಥಾಯ್ಲೆಂಡ್, ಚೀನಾ ನಂತರದ ಸ್ಥಾನದಲ್ಲಿದೆ. ಈ ತಿಂಗಳ ಆರಂಭದಲ್ಲಿಯೇ ಭಾರತದಲ್ಲಿ ಯುಪಿಐ ವಹಿವಾಟು ದಾಖಲೆಯೊಂದನ್ನು ಬರೆದಿತ್ತು. ಡಿಸೆಂಬರ್ ಮೊದಲ ವಾರದಲ್ಲಿಯೇ ಸರಾಸರಿ ಅಂದಾಜು ನಿತ್ಯ 70 ಕೋಟಿ ವಹಿವಾಟು ನಡೆಸಿತ್ತು.
ಮೈಕ್ರೋಸಾಫ್ಟ್, ಅಮೆಜಾನ್ ₹ 4.5 ಲಕ್ಷ ಕೋಟಿ ಹೂಡಿಕೆ ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ
ನವದೆಹಲಿ: ಇ-ಕಾಮರ್ಸ್ ದೈತ್ಯ ಅಮೆಜಾನ್ ಹಾಗೂ ಟೆಕ್ ದೈತ್ಯ ಮೈಕ್ರೋಸಾಫ್ಟ್ ಕಂಪನಿಗಳು ಭಾರತದಲ್ಲಿ ಭಾರೀ ಹೂಡಿಕೆ ಮಾಡಲು ಮುಂದಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಲ್ಲಿ ಭೇಟಿಯಾದ ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಳ್ಲಾ 1.5 ಲಕ್ಷ ಕೋಟಿ ರು. ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಅದರ ಬೆನ್ನಲ್ಲೇ, ಅಮೆಜಾನ್ ಕೂಡ 3.1 ಲಕ್ಷ ಕೋಟಿ ರು.ಹೂಡಿಕೆಗೆ ತಯಾರಿ ನಡೆಸುತ್ತಿದೆ.
ಎಐ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮುಂದಿನ 4 ವರ್ಷದಲ್ಲಿ 1.5 ಲಕ್ಷ ಕೋಟಿ ರು. ಹೂಡಿಕೆ ಮಾಡಲು ಮುಂದಾಗಿರುವ ಮೈಕ್ರೋಸಾಫ್ಟ್, ಇದೇ ವರ್ಷದಲ್ಲಿ 26 ಸಾವಿರ ಕೋಟಿ ರು. ಹೂಡಿಕೆ ಮಾಡಿತ್ತು.ಪ್ರಸ್ತುತ ಕ್ವಿಕ್-ಕಾಮರ್ಸ್ ಅಮೆಜಾನ್, ದಿನ 5 ವರ್ಷಗಳಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಎಐ ಕ್ಷೇತ್ರಕ್ಕೂ ಕಾಲಿಡಲು ಸಿದ್ಧವಾಗುತ್ತಿದೆ. 2030ರ ವೇಳೆಗೆ ಎಐ ಹಾಗೂ ಸರಕುಸಾಗಣೆ ಮೂಲಸೌಕರ್ಯಗಳ ಮೇಲಿನ ಹೂಡಿಕೆಯಿಂದ 10 ಲಕ್ಷ ಉದ್ಯೋಗವನ್ನೂ ಸೃಷ್ಟಿಸುವುದಾಗಿ ಕಂಪನಿ ಹೇಳಿದೆ. 2010ರಿಂದ ಅಮೆಜಾನ್ ಭಾರತದಲ್ಲಿ 3.5 ಲಕ್ಷ ಕೋಟಿ ರು. ಹೂಡಿಕೆ ಮಾಡಿದೆ.
ಗೋವಾ ಪಬ್ ಮಾಲೀಕರ ಪಾಸ್‌ಪೋರ್ಟ್ ರದ್ದು ಮಾಡಿ: ರಾಜ್ಯ ಸರ್ಕಾರ
ನವದೆಹಲಿ: ಬೆಂಕಿಯ ಕೆನ್ನಾಲಗೆಗೆ 25 ಜನರನ್ನು ದೂಡಿದ್ದ ಗೋವಾದ ಪಬ್‌ನ ಮಾಲೀಕರಾದ ಲೂಥ್ರಾ ಸಹೋದರರ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅದನ್ನು ಪರಿಶೀಲಿಸುತ್ತಿದೆ.ಅತ್ತ ಘಟನೆಯ ಬಗ್ಗೆ ಪಬ್ ಸಿಬ್ಬಂದಿಯಿಂದ ಮಾಹಿತಿ ಸಿಗುತ್ತಿದ್ದಂತೆ ವಿಮಾನವೇರಿ ವಿದೇಶಕ್ಕೆ ಹಾರಿದ್ದ ಸೌರಭ್ ಲೂಥ್ರಾ ಮತ್ತು ಗೌರವ್ ಲೂಥ್ರಾ, ಬಂಧನದಿಂದ ತಪ್ಪಿಸಿಕೊಳ್ಳಲು ಅನಾರೋಗ್ಯದ ಕಾರಣ ನೀಡಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅವರ ಮನವಿಯನ್ನು ರೋಹಿಣಿ ಕೋರ್ಟ್ ತಿರಸ್ಕರಿಸಿದೆ.

