ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ 400 ರೂಪಾಯಿ ಸಮೀಪಿಸಿದ್ದು, ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಡಾಲರ್ ಕೊರತೆ, ಐಎಂಎಫ್ ಷರತ್ತುಗಳು ಮತ್ತು ಸಾಲದ ಹೊರೆಯಿಂದಾಗಿ ಈ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ತಾಂತ್ರಿಕವಾಗಿ ದೇಶ ದಿವಾಳಿಯಾಗಿಲ್ಲದಿದ್ದರೂ, ಹಣದುಬ್ಬರದಿಂದಾಗಿ ಜನರ ಪರಿಸ್ಥಿತಿ ಶೋಚನೀಯವಾಗಿದೆ.

ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ 400 ರೂಪಾಯಿ ಹತ್ತಿರ ಬಂದಿದೆ. ಇದರಿಂದ ಅಲ್ಲಿನ ಜನ ಕಂಗಾಲಾಗಿದ್ದಾರೆ. ಅಸಲಿಗೆ ಪಾಕಿಸ್ತಾನದಲ್ಲಿ ತೈಲ ಬೆಲೆ ಇಷ್ಟೊಂದು ಏರಿಕೆಯಾಗಲು ಕಾರಣವೇನು? ಪಾಕ್ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆಯಾ? ಆ ದೇಶ ನಿಜಕ್ಕೂ ದಿವಾಳಿಯಾಗಿದೆಯಾ?

ಪಾಕಿಸ್ತಾನದಲ್ಲಿ ಸಾಮಾನ್ಯ ಜನರಿಗೆ ಒಂದು ಲೀಟರ್ ಪೆಟ್ರೋಲ್ ಕೊಳ್ಳುವುದು ದೊಡ್ಡ ಹೊರೆಯಾಗಿದೆ. ಅಲ್ಲಿ ಪೆಟ್ರೋಲ್ ಬೆಲೆ ಬರೋಬ್ಬರಿ 400 ರೂ. ಹತ್ತಿರ ಹೋಗಿದೆ. ಈ ಸುದ್ದಿ ಕೇಳಿದ ತಕ್ಷಣ ಪಾಕಿಸ್ತಾನ ಅಧಿಕೃತವಾಗಿ ದಿವಾಳಿಯಾಯ್ತಾ ಅನ್ನೋ ಚರ್ಚೆ ಶುರುವಾಗಿದೆ. ಅಸಲಿಗೆ ಪಾಕ್‌ನಲ್ಲಿ ಏನಾಗ್ತಿದೆ? ಈ ಪರಿಸ್ಥಿತಿ ಯಾಕೆ ಬಂತು? ಅಧಿಕೃತವಾಗಿ ದಿವಾಳಿಯಾಗಿಲ್ಲ ಅಂದರೂ, ಪಾಕಿಸ್ತಾನ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದೆ. ಸದ್ಯ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 389.14 ರೂ. ನಿಂದ 393.75 ರೂ. ಆಸುಪಾಸಿನಲ್ಲಿದೆ. ಹೈಸ್ಪೀಡ್ ಡೀಸೆಲ್ ಬೆಲೆ ಏಕಾಏಕಿ 422 ರೂ. ದಾಟಿದೆ.

ಪೆಟ್ರೋಲ್ ಬೆಲೆ ಇಷ್ಟೊಂದು ಏರಿಕೆಯಾಗಲು ಕಾರಣವೇನು?

1. ಗ್ಲೋಬಲ್ ಕ್ರೂಡ್ ಆಯಿಲ್ ಶಾಕ್: ಗಲ್ಫ್ ಮತ್ತು ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಹಾಗೂ ಹಡಗು ಮಾರ್ಗಗಳ ವ್ಯತ್ಯಯದಿಂದ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಹೆಚ್ಚಾಗಿದೆ. ಪಾಕಿಸ್ತಾನ ಆಮದನ್ನೇ ನೆಚ್ಚಿಕೊಂಡಿರುವುದರಿಂದ ಇದರ ನೇರ ಹೊಡೆತ ಬಿದ್ದಿದೆ.

2. ಡಾಲರ್ ಕೊರತೆ: ಪಾಕಿಸ್ತಾನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಕೊಟ್ಟು ಕಚ್ಚಾ ತೈಲ ಖರೀದಿಸುತ್ತದೆ. ಆದರೆ ಸ್ಥಳೀಯರಿಂದ ರೂಪಾಯಿಯಲ್ಲಿ ಹಣ ವಸೂಲಿ ಮಾಡುತ್ತದೆ. ತೈಲ ಬೆಲೆ ಏರಿದಾಗ ಹೆಚ್ಚು ಡಾಲರ್ ಬೇಕಾಗುತ್ತದೆ. ಇದು ಪಾಕ್ ವಿದೇಶಿ ವಿನಿಮಯ ಮೀಸಲಿನ ಮೇಲೆ ತೀವ್ರ ಒತ್ತಡ ತಂದಿದೆ.

3. ತೆರಿಗೆ ಮತ್ತು ಲೆವಿ: ಅಂತಾರಾಷ್ಟ್ರೀಯ ಬೆಲೆ ಮಾತ್ರವಲ್ಲದೆ, ಪಾಕಿಸ್ತಾನ ಸರ್ಕಾರ ಒಂದು ಲೀಟರ್ ಪೆಟ್ರೋಲ್ ಮೇಲೆ ಸುಮಾರು 114 ರೂ. ತೆರಿಗೆ ಮತ್ತು ಪೆಟ್ರೋಲಿಯಂ ಡೆವಲಪ್‌ಮೆಂಟ್ ಲೆವಿ ವಸೂಲಿ ಮಾಡುತ್ತಿದೆ.

4. ಸಾಲದ ಹೊರೆ: ಜೂನ್ 2025ರ ಹೊತ್ತಿಗೆ ಪಾಕಿಸ್ತಾನ 80.52 ಟ್ರಿಲಿಯನ್ ರೂ. ಸಾರ್ವಜನಿಕ ಸಾಲದ ಸುಳಿಯಲ್ಲಿ ಸಿಲುಕಿದೆ. ಇದು ಅವರ ಜಿಡಿಪಿಯ ಶೇ. 70.7 ರಷ್ಟಿದೆ.

5. ವಿದೇಶಿ ನಿಧಿಯ ಮೇಲಿನ ಅವಲಂಬನೆ: ಪಾಕಿಸ್ತಾನ ಸದ್ಯ 7 ಬಿಲಿಯನ್ ಡಾಲರ್ ಐಎಂಎಫ್ (IMF) ಪ್ರೋಗ್ರಾಮ್ ಅಡಿಯಲ್ಲಿ ನಡೆಯುತ್ತಿದೆ. ಐಎಂಎಫ್ ಷರತ್ತುಗಳ ಪ್ರಕಾರ ಸಬ್ಸಿಡಿಗಳನ್ನು ತೆಗೆದುಹಾಕಿದ್ದರಿಂದ ಬೆಲೆ ಮತ್ತಷ್ಟು ಹೆಚ್ಚಾಗಿದೆ.

ಪಾಕಿಸ್ತಾನ ನಿಜಕ್ಕೂ ದಿವಾಳಿಯಾಗಿದೆಯಾ?

ತಾಂತ್ರಿಕವಾಗಿ ಹೇಳಬೇಕೆಂದರೆ, ಇಲ್ಲ. ಒಂದು ದೇಶ ತಾನು ತಂದ ವಿದೇಶಿ ಸಾಲ ತೀರಿಸಲಾಗದೆ ಕೈ ಎತ್ತಿದರೆ ಅದನ್ನು 'ಸಾವರಿನ್ ಡಿಫಾಲ್ಟ್' ಅಥವಾ ದಿವಾಳಿ ಅಂತಾರೆ. ಪಾಕಿಸ್ತಾನ ಇನ್ನೂ ಆ ಹಂತಕ್ಕೆ ಹೋಗಿಲ್ಲ. ಐಎಂಎಫ್, ಚೀನಾ, ಸೌದಿ ಅರೇಬಿಯಾ ಮತ್ತು ಯುಎಇಯಂತಹ ಮಿತ್ರ ರಾಷ್ಟ್ರಗಳು ನೀಡುತ್ತಿರುವ ಬೇಲ್-ಔಟ್ ಫಂಡ್ ಹಾಗೂ ಸಾಲದ ಮರು-ಹೊಂದಾಣಿಕೆಯಿಂದ ಪಾಕಿಸ್ತಾನ ಸದ್ಯಕ್ಕೆ ಬಚಾವ್ ಆಗಿದೆ.

ಸೆಪ್ಟೆಂಬರ್ 2026ರ ಹೊತ್ತಿಗೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಬಳಿ ಸುಮಾರು 23.72 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಮೀಸಲು ಇದೆ. ಹಾಗಾಗಿ ಆ ದೇಶ ಸೇಫ್ ಅಂತ ಹೇಳಲಾಗದಿದ್ದರೂ, ಅಧಿಕೃತವಾಗಿ ದಿವಾಳಿಯಾಗಿಲ್ಲ ಅಂತ ಅರ್ಥ ಮಾಡಿಕೊಳ್ಳಬಹುದು.

ಸಾಮಾನ್ಯ ಜನರಿಗೆ ಇದು ದಿವಾಳಿಯಂತೆಯೇ ಅನಿಸುತ್ತಿರುವುದು ಯಾಕೆ?

• ಭಾರಿ ಸಾಲದ ಜೊತೆಗೆ ಸಾಲದ ಮೇಲಿನ ಬಡ್ಡಿ ಪಾವತಿ ಹೆಚ್ಚಾಗುತ್ತಲೇ ಇದೆ.

• ವಿದೇಶಿ ಕರೆನ್ಸಿ ಕೊರತೆಯಿಂದ ಐಎಂಎಫ್ ಮೊರೆ ಹೋಗಿದ್ದರಿಂದ ಆರ್ಥಿಕ ನಿರ್ಬಂಧಗಳು ಹೆಚ್ಚಾಗಿವೆ.

• ಐಎಂಎಫ್ ನಿಯಮಗಳ ಪ್ರಕಾರ ಪೆಟ್ರೋಲ್ ಮತ್ತು ಕರೆಂಟ್ ಮೇಲಿನ ತೆರಿಗೆ ಏರಿಕೆ ಮುಂದುವರಿದಿದೆ.

• ಇಂಧನ ಬೆಲೆ ಏರಿಕೆಯಿಂದ ಸಾರಿಗೆ ವೆಚ್ಚ ದುಬಾರಿಯಾಗಿದೆ. ಇದು ನೇರವಾಗಿ ಜನರ ಮೇಲೆ ಪ್ರಭಾವ ಬೀರುತ್ತಿದೆ.

• ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿ ತೀವ್ರ ಹಣದುಬ್ಬರ ಸೃಷ್ಟಿಯಾಗಿದೆ.

ಈ ಪರಿಸ್ಥಿತಿಗಳಿಂದ ಸಾಮಾನ್ಯ ಜನರ ಜೇಬು ಖಾಲಿಯಾಗುತ್ತಿರುವುದರಿಂದ ಪಾಕಿಸ್ತಾನ ದಿವಾಳಿಯಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಈ ಪೆಟ್ರೋಲ್ ಬೆಲೆ ಏರಿಕೆಯ ಬಿಸಿ ಕೇವಲ ವಾಹನ ಸವಾರರಿಗೆ ಮಾತ್ರವಲ್ಲ, ಇಡೀ ಆರ್ಥಿಕ ವ್ಯವಸ್ಥೆಯ ಮೇಲೆ ಬಿದ್ದಿದೆ. ಬಸ್ ಮತ್ತು ಆಟೋ ದರಗಳು ದುಬಾರಿಯಾಗಿವೆ. ತರಕಾರಿ ಹಾಗೂ ದಿನಬಳಕೆ ವಸ್ತುಗಳ ಸಾಗಾಟ ವೆಚ್ಚ ಹೆಚ್ಚಾಗಿದ್ದರಿಂದ ಹಣದುಬ್ಬರ ಮಿತಿಮೀರಿದೆ. ವ್ಯಾಪಾರ ಮಾಡುವುದೇ ಕಷ್ಟವಾಗಿದೆ. ದ್ವಿಚಕ್ರ ವಾಹನಗಳು ಮತ್ತು ಆಟೋಗಳಿಗೆ ಸರ್ಕಾರ ಲೀಟರ್‌ಗೆ 100 ರೂ. ವರೆಗೆ ತಾತ್ಕಾಲಿಕ ಸಬ್ಸಿಡಿ ಘೋಷಿಸಿದರೂ, ಅದು ಏನೇನೂ ಸಾಲುತ್ತಿಲ್ಲ.

ತೀವ್ರ ಸಾಲದ ಹೊರೆ, ಡಾಲರ್ ಕೊರತೆ, ವಿದೇಶಿ ನಿಧಿಯ ಮೇಲಿನ ಅವಲಂಬನೆ ಮತ್ತು ಗ್ಲೋಬಲ್ ಆಯಿಲ್ ಬಿಕ್ಕಟ್ಟು ಎಲ್ಲವೂ ಸೇರಿ ಪಾಕಿಸ್ತಾನಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿವೆ. ತೆರಿಗೆ ಸಂಗ್ರಹ ಹೆಚ್ಚಿಸಿ, ಇಂಧನ ವಲಯವನ್ನು ಸರಿಪಡಿಸದಿದ್ದರೆ ಪಾಕಿಸ್ತಾನಕ್ಕೆ ಮುಂದಿನ ದಿನಗಳಲ್ಲಿ ಇಂಧನ ಬಿಕ್ಕಟ್ಟು ತಪ್ಪಿದ್ದಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಸದ್ಯಕ್ಕಂತೂ ಪಾಕ್ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವುದು ಕಷ್ಟ ಅಂತಾನೇ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.