ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಭಾರತಕ್ಕೆ ಮತ್ತೆ ನೇರ ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನದ ಪಾಲಿನ ನೀರನ್ನು ಪಡೆಯಲು ಯತ್ನಿಸಿದರೆ ಕೈ ಕತ್ತರಿಸುವುದಾಗಿ ಉದ್ಧಟತನದ ಹೇಳಿಕೆ ನೀಡಿದ್ದು, ಈ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಆಪರೇಷನ್ ಸಿಂದೂರ್ ವೇಳೆ ಭಾರತದ ಪರಾಕ್ರಮಕ್ಕೆ ನುಜ್ಜುಗುಜ್ಜಾಗಿದ್ದ ಪಾಕಿಸ್ತಾನ ಯುದ್ಧ ನಿಲ್ಲಿಸುವಂತೆ ಅಮೆರಿಕದ ಕಾಲಿಗೆರಗಿದ್ದ ವಿಷಯ ಗೊತ್ತೇ ಇದೆ. ಆದರೆ ನಾಯಿ ಬಾಲ ಯಾವತ್ತೂ ಡೊಂಕೇ ಅನ್ನುವ ರೀತಿ ಪಾಕಿಸ್ತಾನ ಮತ್ತೆ ಭಾರತದ ವಿರುದ್ಧ ಬೆದರಿಕೆ ಹಾಕಿದೆ.
ಕೈ ಕತ್ತರಿಸುತ್ತೇವೆ ಎಂದ ಪಾಕ್ ಸಚಿವ!
ಹೌದು ಸಿಂಧೂ ಜಲ ಒಪ್ಪಂದ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತೊಮ್ಮೆ ಭಾರತಕ್ಕೆ ನೇರ ಬೆದರಿಕೆ ಹಾಕಿದೆ. ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್ ಇಂಥ ಉದ್ಧಟತನದ ಹೇಳಿಕೆ ನೀಡಿದ್ದಾನೆ. 'ಸಿಂಧೂ ಜಲ ಒಪ್ಪಂದ(IWT)ದ ಅಡಿಯಲ್ಲಿ ಇಸ್ಲಾಮಾಬಾದ್‌ನ ಪಾಲನ್ನು ಪಡೆಯಲು ಪ್ರಯತ್ನಿಸುವವ ಕೈ ಕತ್ತರಿಸುತ್ತೇವೆ' ಎಂದು ಭಾರತಕ್ಕೆ ನೇರ ಬೆದರಿಕೆ ಹಾಕಿದ್ದಾನೆ.
ಇತ್ತೀಚೆಗೆ ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್ ಜೊತೆಗೂಡಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಮಾತಾಡಿದ ಮಲಿಕ್, 'ಭಾರತ ಪಾಕಿಸ್ತಾನದ ನೀರಿನ ಸರಬರಾಜನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಇಸ್ಲಾಮಾಬಾದ್‌ನ ಪಾಲಿನ ನೀರಿನ ಹಕ್ಕುಗಳಿಗೆ ಬೆದರಿಕೆ ಹಾಕಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಭಾರತದ ಪ್ರಧಾನಿ ಹೇಳ್ತಾರೆ, 'ಪಾಕಿಸ್ತಾನಕ್ಕೆ ಒಂದು ಹನಿ ನೀರು ಬಿಡೋದಿಲ್ಲ' ಎಂದು. ಆದರೆ ನಮ್ಮ ಪಾಲಿನ ನೀರನ್ನು ಕೇಳುವವರ ಕೈಗಳನ್ನೇ ಕತ್ತರಿಸುತ್ತೇವೆ' ಎಂದು ಹೇಳಿರುವುದಾಗಿ 'ಡಾನ್' ಪತ್ರಿಕೆ ವರದಿ ಮಾಡಿದೆ. ಡಾನ್ ಪತ್ರಿಕೆಯಷ್ಟೇ ಅಲ್ಲ, ಪಾಕಿಸ್ತಾನದ ಟಿವಿ 24NewsHD ಸೇರಿದಂತೆ ಕೆಲವು ಪಾಕಿಸ್ತಾನ ಮಾಧ್ಯಮಗಳಲ್ಲಿ ಈ ಹೇಳಿಕೆ ಬಗ್ಗೆ ವರದಿ ಮಾಡಿವೆ.
ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಹಿತಿ ಸಚಿವ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನಕ್ಕೆ ತನ್ನ ಪಾಲಿನ ನೀರನ್ನು ಕಾಪಾಡಿಕೊಳ್ಳುವ ಸಾಮರ್ಥ್ಯವಿದೆ. ಪಾಕಿಸ್ತಾನದ ಪಾಲಿನ ನೀರನ್ನು ತಡೆಯಲು ಭಾರತಕ್ಕೆ ಅವಕಾಶ ನೀಡುವುದಿಲ್ಲ. ಸಿಂಧೂ ಜಲ ಒಪ್ಪಂದ ಕಾನೂನು ಬದ್ಧವಾಗಿದೆ, ಅದನ್ನು ಅಮಾನತ್ತುಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಸಿಂಧು ಜಲ ಒಪ್ಪಂದ ಕುರಿತು ಪಾಕಿಸ್ತಾನದಲ್ಲಿ ವಿಚಾರ ಸಂಕಿರಣ:
ಸಿಂಧೂ ಜಲ ಒಪ್ಪಂದದ ಕುರಿತು ಇಸ್ಲಾಮಾಬಾದ್‌ನಲ್ಲಿ ಇಂದು (ಮಂಗಳವಾರ) ಮೊದಲ ಅಂತರರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ ಎಂದು ಪಾಕಿಸ್ತಾನದ ಸಚಿವರು ಘೋಷಿಸಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸಲು ಕಾನೂನು ತಜ್ಞರು, ಜಲ ತಜ್ಞರು ಮತ್ತು ವಿದೇಶಿ ಪ್ರತಿನಿಧಿಗಳು ಈಗಾಗಲೇ ಪಾಕಿಸ್ತಾನಕ್ಕೆ ಆಗಮಿಸಿದ್ದಾರೆ ಎಂದು ತರಾರ್ ಹೇಳಿದ್ದಾರೆ.


