ಪಾಕಿಸ್ತಾನದ ಉಗ್ರರ ಅಡಗು ತಾಣಗಳ ಮೇಲೆ ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ವೈಮಾನಿಕ ದಾಳಿಯನ್ನೇ ಕಾಪಿ ಮಾಡಿದರೂ, ಪಾಕ್ ಫೇಲ್ ಆಗಿದೆ. ಈ ವೈಮಾನಿಕ ದಾಳಿಯಲ್ಲಿ ನಾಗರೀಕರ ಮನೆಗಳನ್ನು ಧ್ವಂಸ ಮಾಡಿದ್ದು, 40 ನಾಗರೀಕರ ಸಾವಾಗಿದೆ ಎಂದು ಅಪಘಾನಿಸ್ಥಾನ ಆಕ್ರೋಶ ಹೊರಹಾಕಿದೆ.
ಕಾಬೂಲ್: ಪಾಕಿಸ್ತಾನದಲ್ಲಿದ್ದ ಉಗ್ರರ ಅಡಗು ತಾಣಗಳ ಮೇಲೆ ಭಾರತ ಆಪರೇಷನ್ ಸಿಂಧೂರ್ ಏರ್‌ಸ್ಟ್ರೈಕ್ ಮಾದರಿಯನ್ನೇ ಕಾಪಿ ಮಾಡಿದ ಪಾಕಿಸ್ತಾನ, ಅಪಘಾನಿಸ್ತಾನ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿದ್ದು 40 ಸಾವು ಸಂಭವಿಸಿದೆ. ಆದರೆ, ಸತ್ತಿರುವುದು ಉಗ್ರರಲ್ಲ ನಾಗರೀಕರು ಎಂದು ಅಪಘಾನಿಸ್ಥಾನ ಆಕ್ರೋಶ ಹೊರಹಾಕಿದೆ.
ಭಾನುವಾರ ರಾತ್ರಿ ಪಾಕ್ ಗಡಿಗೆ ಹೊಂದಿಕೊಂಡಿರುವ ಅಫ್ಘಾನ್ ಪ್ರಾಂತ್ಯಗಳಲ್ಲಿ ಈ ದಾಳಿ ನಡೆದಿದೆ. ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 40 ನಾಗರಿಕರು ಮೃತಪಟ್ಟಿದ್ದು, 160ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪಾಕಿಸ್ತಾನದ ಈ ಕ್ರಮ ಹೇಡಿತನದ್ದು ಮತ್ತು ಕ್ರೂರ ಅಪರಾಧ ಎಂದು ತಾಲಿಬಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
29 ಉಗ್ರರ ಹತ್ಯೆ ಎಂದ ಪಾಕಿಸ್ತಾನ
ಆದರೆ, ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರತಿಯಾಗಿ ಈ ಸೇನಾ ಕಾರ್ಯಾಚರಣೆ ನಡೆಸಿದ್ದೇವೆ ಎಂದು ಪಾಕಿಸ್ತಾನ ವಾದಿಸಿದೆ. ಅಫ್ಘಾನಿಸ್ತಾನದ ಪಕ್ತಿಯಾ, ಪಕ್ತಿಕಾ ಮತ್ತು ಕುನಾರ್ ಪ್ರಾಂತ್ಯಗಳಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಇದರಲ್ಲಿ 29 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನದ ವಾರ್ತಾ ಸಚಿವ ಅತಾವುಲ್ಲಾ ತರಾರ್ ಸ್ಪಷ್ಟಪಡಿಸಿದ್ದಾರೆ.
ಆದರೆ, ಸತ್ತವರು ಸಾಮಾನ್ಯ ನಾಗರಿಕರು ಎಂದು ತಾಲಿಬಾನ್ ಹೇಳಿದೆ. ಪಕ್ತಿಕಾ ಪ್ರಾಂತ್ಯದ ಮಂದೋಖೈಲ್ ಗ್ರಾಮದಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಪಾಕ್ ಸೇನೆ ನಾಗರಿಕರ ಮನೆಗಳ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದೂ ತಾಲಿಬಾನ್ ಆರೋಪಿಸಿದೆ.
ನಾಗರೀಕರ ಮನೆ ಮೇಲೆ ದಾಳಿ ಎಂದ ತಾಲಿಬಾನ್
ಕಳೆದ ಶನಿವಾರ ಕರಾಚಿಯಲ್ಲಿ ಅರೆಸೇನಾ ಪಡೆಯಾದ ಸಿಂಧ್ ರೇಂಜರ್ಸ್‌ನ ಪ್ರಧಾನ ಕಚೇರಿ ಮೇಲೆ ಆ*ತ್ಮಾಹುತಿ ದಾಳಿ ನಡೆದಿತ್ತು. ಈ ಘಟನೆಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ಈ ದಾಳಿಯ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನ್‌ನ ಉಗ್ರಗಾಮಿ ಗುಂಪು ಜಮಾಅತುಲ್ ಅಹ್ರಾರ್ ಹೊತ್ತುಕೊಂಡಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ, ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿದೆ. ಕರಾಚಿ ದಾಳಿಯಲ್ಲಿ ಭಾಗಿಯಾಗಿದ್ದ ಅಫ್ಘಾನ್ ಪ್ರಜೆಯೊಬ್ಬನನ್ನು ಜೀವಂತವಾಗಿ ಸೆರೆಹಿಡಿದಿದ್ದೇವೆ ಎಂದೂ ಪಾಕಿಸ್ತಾನ ಹೇಳಿಕೊಂಡಿದೆ.
ತಮ್ಮ ದೇಶದಲ್ಲಿ ದಾಳಿ ನಡೆಸುವ ಉಗ್ರರಿಗೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವೇ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಬಹಳ ಕಾಲದಿಂದ ಆರೋಪಿಸುತ್ತಿದೆ. ಆದರೆ, ತಾಲಿಬಾನ್ ಸರ್ಕಾರ ಈ ಆರೋಪವನ್ನು ಸತತವಾಗಿ ನಿರಾಕರಿಸುತ್ತಲೇ ಬಂದಿದೆ.
ಕಳೆದ ಅಕ್ಟೋಬರ್‌ನಲ್ಲಿ ಎರಡೂ ದೇಶಗಳು ಅಂತರಾಷ್ಟ್ರೀಯ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದಕ್ಕೆ ಬಂದಿದ್ದವು. ಆದರೆ, ಕೆಲವೇ ತಿಂಗಳುಗಳಲ್ಲಿ ಅದು ಮುರಿದುಬಿದ್ದಿತ್ತು. ಈ ವರ್ಷದ ಫೆಬ್ರವರಿ ಮತ್ತು ಮಾರ್ಚ್‌ನಲ್ಲೂ ಎರಡೂ ದೇಶಗಳ ನಡುವೆ ತೀವ್ರ ಗಡಿ ಸಂಘರ್ಷ ಮತ್ತು ವೈಮಾನಿಕ ದಾಳಿಗಳು ನಡೆದಿದ್ದವು. ಜೂನ್ ಮೊದಲ ವಾರದಲ್ಲೂ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ 26 ಉಗ್ರರು ಹತರಾಗಿದ್ದರು ಎಂದು ವರದಿಗಳಿದ್ದವು.
ಭಾರತೀಯ ಮಾದರಿಯಲ್ಲಿ ಉಗ್ರ ತಾಣದ ಮೇಲೆ ದಾಳಿ
ಇತ್ತೀಚೆಗೆ ಪಾಕ್ ಆಶ್ರಿತ ಉಗ್ರರು ಭಾರತದ ಕಾಶ್ಮೀರದೊಳಗೆ ನುಗ್ಗಿ ಪೆಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ ಸಾರ್ವಜನಿಕ ನರಮೇಧ ಎಸಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು, ಪಾಕಿಸ್ತಾನದ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿ ‘ಆಪರೇಷನ್ ಸಿಂಧೂರ್’ ಹೆಸರಿನ ವೈಮಾನಿಕ ದಾಳಿಯನ್ನು ನಡೆಸಿತ್ತು. ಈ ವೇಳೆ ಹಲವು ಉಗ್ರರು ಸಾವನ್ನಪ್ಪಿದ್ದರು. ಇದೀಗ ಪಾಕಿಸ್ತಾನವೂ ಕೂಡ ಭಾರತದ ಆಪರೇಷನ್ ಸಿಂಧೂರ್ ಅನ್ನು ಕಾಪಿ ಹೊಡೆದಿದ್ದು, ಅಪಘಾನಿಸ್ಥಾನದ ಉಗ್ರರ ಅಡಗು ತಾಣಗಳ ಮೇಲೆ ದಾಳಿ ಮಾಡಿದೆ. ಆದರೆ, ಅವರ ಗುರಿ ತಪ್ಪಿದ್ದು ನಾಗರೀಕರ ಮನೆಗಳು ಧ್ವಂಸಗೊಂಡು ಆಫ್ಘಾನ್ ನಾಗರೀಕರು ಸಾವನ್ನಪಿದ್ದಾರೆ ಎಂದು ತಾಲಿಬಾನ್ ಆಕ್ರೋಶ ಹೊರಹಾಕಿದೆ.


