ಡೇಟಿಂಗ್ ಆ್ಯಪ್​ನಲ್ಲಿ ಪರಿಚಯವಾದ ಯುವತಿಯೊಬ್ಬಳು, ಪುರುಷನಿಗೆ ಮುತ್ತು ಕೊಟ್ಟು ಕೋಣೆಯೊಳಗೆ ಹೋಗುತ್ತಾಳೆ. ಆದರೆ, ವಾಪಸ್ ಬರುವಾಗ ಆತನನ್ನು ಪ್ರಜ್ಞೆ ತಪ್ಪಿಸಿ, ಅವನ ವಸ್ತುಗಳನ್ನು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಪರಾರಿಯಾಗುತ್ತಾಳೆ. ಅರ್ಜೆಂಟೀನಾದಲ್ಲಿ ನಡೆದ ಈ ಘಟನೆ, ಡೇಟಿಂಗ್ ಆ್ಯಪ್ ವಂಚನೆಯ ಜಾಲವನ್ನು ಬಯಲಿಗೆಳೆದಿದೆ.

ಡೇಟಿಂಗ್​ ಆ್ಯಪ್​ನಲ್ಲಿಯೋ ಅಥವಾ ಇನ್ನಾವುದರ ಮೂಲಕವೋ ಸುಲಭದಲ್ಲಿ ಹುಡುಗಿ ಸಿಕ್ಕಳು ಎಂದಾಕ್ಷಣ ಆಕೆಯ ಹಿಂದೆ ಬಾಯಿ ಚಪ್ಪರಿಸಿಕೊಂಡು ಹೋಗುವವರು ಕೆಲವರಿದ್ದಾರೆ. ಅದು ಭಾರತ ಆಗಲಿ, ಇನ್ನಾವುದೇ ದೇಶ ಆಗಲಿ. ಹೆಣ್ಣು ಮಾಯೆ ಎನ್ನುವುದು ತಿಳಿದಿದ್ದರೂ, ಆ ಕ್ಷಣದಲ್ಲಿ ಅವೆಲ್ಲವೂ ಅವರಿಗೆ ತಿಳಿಯುವುದೇ ಇಲ್ಲ. ತಾನು ಹೆಣ್ಣೊಬ್ಬಳನ್ನು ಬುಟ್ಟಿಗೆ ಹಾಕಿಕೊಂಡೆ ಎಂದುಕೊಂಡು ಬಿಡುತ್ತಾರೆ. ಆದರೆ ಅಸಲಿಗೆ ಅಲ್ಲಿರುವ ಉದ್ದೇಶವೇ ಬೇರೆ ಇರುತ್ತದೆ. ಬುಟ್ಟಿಗೆ ಹಾಕಿಕೊಳ್ಳುವುದು ಇವರಲ್ಲ, ಬದಲಿಗೆ ಅವರು ಎನ್ನುವುದು ತಿಳಿಯುವ ಹೊತ್ತಿಗೆ ಎಲ್ಲವನ್ನೂ ಕಳೆದುಕೊಂಡಿರುತ್ತಾರೆ, ಕೆಲವೊಮ್ಮೆ ಜೀವವನ್ನೂ ಕಳೆದುಕೊಳ್ಳುತ್ತಾರೆ.

ಹೆಣ್ಣಿನ ಹಿಂದೆ ಬಿದ್ದು ಇದಾಗಲೇ ಲಕ್ಷಾಂತರ ಮಂದಿ ಮೋಸ ಹೋಗಿದ್ದರೂ, ತಮಗೇನೂ ಆಗುವುದಿಲ್ಲ ಎಂದು ಅಂದುಕೊಳ್ಳುವ ಪುರುಷರಿಗೆ ಈ ಘಟನೆ ಮತ್ತೊಂದು ಪಾಠವಾಗಿದೆ. ಡೇಟಿಂಗ್​ ಆ್ಯಪ್​ ಎನ್ನುವುದು ಈಗ ಕೆಲವು ಹೆಣ್ಣುಮಕ್ಕಳಿಗೆ ಬಹುದೊಡ್ಡ ಬಿಜಿನೆಸ್​ ಆಗಿಬಿಟ್ಟಿದೆ. ಆದರೆ ಇದನ್ನು ಅರಿಯದೇ ಹೆಣ್ಣು ಸಿಕ್ಕಳು ಎಂದುಕೊಂಡು ಆಕೆಯ ಹಿಂದೆ ಹೋಗುವವರು ಅಷ್ಟೇ ಪ್ರಮಾಣದಲ್ಲಿ ಇದ್ದಾರೆ. ಅಂಥದ್ದೊಂದು ಶಾಕಿಂಗ್​ ವಿಡಿಯೋ ಇದೀಗ ವೈರಲ್​ ಆಗಿದೆ. ಡೇಟಿಂಗ್​ ಆ್ಯಪ್​ನಲ್ಲಿ ಸಿಕ್ಕ ಬಕರಾ ಒಬ್ಬನಿಗೆ ಕಿಸ್​ ಕೊಡುತ್ತಲೇ ಲಿಫ್ಟ್​ನಲ್ಲಿ ಬಂದ ಯುವತಿ, ಕೊಠಡಿಯೊಳಕ್ಕೆ ಹೋಗಿದ್ದಾಳೆ. ಆದರೆ ವಾಪಸ್​ ಬರುವಾಗ ಮಾತ್ರ ಸೂಟ್​ಕೇಸ್​ ಜೊತೆ ಒಬ್ಬಳೇ ಬಂದಿದ್ದಾಳೆ. ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಒಳಗೆ ಹೋದ ಆಸಾಮಿ ಸೂಟ್​ಕೇಸ್​ನಲ್ಲಿ ಬಂದನಾ ಎನ್ನುವ ಸಂದೇಹ ಕೂಡ ಕೆಲವರನ್ನು ಕಾಡಿತ್ತು.

ಸೂಟ್​ಕೇಸ್​ನಲ್ಲಿ ಏನಿತ್ತು?

ಅಸಲಿಗೆ ವಿಷ್ಯ ಇರೋದೇ ಬೇರೆ. ಅವಳೇನು ಆತನನ್ನು ಕೊಂದು ಸೂಟ್​ಕೇಸ್​ನಲ್ಲಿ ಹಾಕಿಕೊಂಡು ಬರಲಿಲ್ಲ. ಆದರೆ ಕಿಸ್​ ಕೊಡುತ್ತಲೇ ಆತನ ಮತ್ತನ್ನು ಏರಿಸಿದ ಈ ಮಹಿಳೆ, ಒಳಗೆ ಹೋಗಿ ಪ್ರಜ್ಞೆ ತಪ್ಪಿಸುವ ಮಾತ್ರೆ ಕೊಟ್ಟು ಆತನ ಪ್ರಜ್ಞೆ ತಪ್ಪಿಸಿ, ಆತನ ಬಳಿ ಇರುವುದನ್ನೆಲ್ಲಾ ದೋಚಿಕೊಂಡು ಸೂಟ್​ಕೇಸ್​​ನಲ್ಲಿ ಹಾಕಿಕೊಂಡು ಬಂದಿದ್ದಾಳೆ. ಮುತ್ತಿನ ಮತ್ತಿನಲ್ಲಿದ್ದ ವ್ಯಕ್ತಿಗೆ ಎಚ್ಚರವಾದಾಗ ತಾನು ಮೋಸ ಹೋಗಿರುವುದು ತಿಳಿದಿದೆ. ಬಳಿಕ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾನೆ. ಸಿಸಿಟಿವಿ ಫುಟೇಜ್​ ನೋಡಿದಾಗ, ಮಹಿಳೆಯ ಮೋಸ ಬಯಲಿಗೆ ಬಂದಿದೆ.

ಅಂದಹಾಗೆ ಇದು ನಡೆದಿರುವುದು ಅರ್ಜೆಂಟೀನಾದಲ್ಲಿ. 31 ವರ್ಷದ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಯಾಗಿರುವ ಮಹಿಳೆ ಈ ಮೋಸದ ಜಾಲದ ರೂವಾರಿ. ಶ್ರೀಮಂತ ಪುರುಷರನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತ ಡೇಟಿಂಗ್ ಆ್ಯಪ್ ವಂಚನೆ ನಡೆಸುತ್ತಿದ್ದ ಈ ಮಹಿಳೆಯ ಗ್ಯಾಂಗ್​ ಅನ್ನು ಅಲ್ಲಿಯ ಪೊಲೀಸರು ಬಂಧಿಸಿದ್ದಾರೆ. ಲೂಸಿಯಾ ಫೆರ್ನಾಂಡಾ ಡಿಯಾಜ್ ಡಾ ಮೋಟಾ ಎಂಬಾಕೆ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಮೊದಲಿಗೆ ಶ್ರೀಮಂತ ಪುರುಷರಿಗೆ ಡೇಟಿಂಗ್​ ಆ್ಯಪ್​ ಮೂಲಕ ಗಾಳ ಹಾಕಿ ಅವರನ್ನು ತಾವೇ ಊಟಕ್ಕೆ ಕರೆದುಕೊಂಡು ಹೋಗಿ ಬಳಿಕ ಹೋಟೆಲ್​ ರೂಮ್​ ಬುಕ್​ ಮಾಡಿ ಅಲ್ಲಿ ಮುತ್ತಿನ ಮಳೆಗೈದು ಇಂಥ ಕೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಪ್ರಜ್ಞಾಹೀನರನ್ನಾಗಿ ಮಾಡಿ ನಗದು, ಬೆಲೆ ಬಾಳುವ ವಾಚ್ ಇತ್ಯಾದಿಗಳನ್ನು ಲಪಟಾಯಿಸಿಕೊಂಡು ಹೋಗುವ ಗ್ಯಾಂಗ್​ ಇದಾಗಿದೆ.

ದೂರು ಕೊಡಲು ಹಿಂದೇಟು

ಅಲ್ಲೇನೋ ಪೊಲೀಸರು ಆಕೆಯನ್ನು ಹಿಡಿದರು. ಆದರೆ ನಮ್ಮಲ್ಲಿ ಅದೇ ರೀತಿ ಆಗುತ್ತದೆ ಎಂದು ಹೇಳಲು ಆಗದು. ಜೊತೆಗೆ, ಇಂಥ ಪ್ರಕರಣಗಳಲ್ಲಿ ಮದುವೆಯಾಗಿ, ಮಕ್ಕಳಿರೋ ಪುರುಷರೇ ಬೇರೆ ಯುವತಿಯರನ್ನು ಅರಸಿ ಹೋಗುವ ಕಾರಣ, ದೂರು ಕೂಡ ನೀಡಲು ಹಿಂಜರಿಯುವುದು ಇಂಥವರಿಗೆ ತಿಳಿದಿದ್ದರಿಂದಲೇ ಅಂಥವರನ್ನು ಬಲೆಗೆ ಬೀಸಿಕೊಳ್ಳುತ್ತಾರೆ. ಆದ್ದರಿಂದ ಸುಲಭದಲ್ಲಿ ಹೆಣ್ಣು ಸಿಕ್ಕಳು ಎಂದು ಆಕೆ ಜೊತೆ ಹೋಗುವ ಮುನ್ನ ನೂರೆಂಟು ಬಾರಿ ಪುರುಷರು ಯೋಚಿಸಿ ಎಂದು ಪೊಲೀಸರು ಎಚ್ಚರಿಕೆ ಕೊಡುತ್ತಲೇ ಇರುತ್ತಾರೆ.