ದಾವಣಗೆರೆಯ ಬನ್ನಿಕೋಡು ಗ್ರಾಮದಲ್ಲಿ ಪೇಂಟರ್ ಸೋಗಿನಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರ ಸೊಹೇಲ್‌ನನ್ನು ಬಂಧಿಸಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ, ಪಾಕಿಸ್ತಾನಿ ಉಗ್ರರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಈತನನ್ನು ವಶಕ್ಕೆ ಪಡೆಯಲಾಗಿದೆ.

ದಾವಣಗೆರೆ (ಜೂ.24): ಪೇಂಟಿಂಗ್ ಕೆಲಸ ಮಾಡುವ ನೆಪದಲ್ಲಿ ಹರಿಹರ ತಾಲೂಕು ಬನ್ನಿಕೋಡು ಗ್ರಾಮದಲ್ಲಿ ಕಳೆದ 20-25 ದಿನಗಳಿಂದ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರನನ್ನು ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ ನೇತೃತ್ವದಲ್ಲಿ ಮಂಗಳವಾರ ಬೆಳಗಿನ ಜಾವ ವಶಕ್ಕೆ ಪಡೆಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೇಂಟಿಂಗ್ ಮಾಡುವ ನೆಪದಲ್ಲಿ ಅಡಗಿದ್ದ ಶಂಕಿತ

ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಲಖ್ನೋತಿ ಗ್ರಾಮ ಮೂಲದ ಸೊಹೇಲ್‌ (22) ಬಂಧಿತ ಶಂಕಿತ ಉಗ್ರ. ಬೆಳ್ಳೂಡಿಯ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಉತ್ತರ ಪ್ರದೇಶದ ಏಳೆಂಟು ಕೆಲಸಗಾರರು ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ರೆಡ್ ಆಕ್ಸೈಡ್‌ ಪೇಂಟಿಂಗ್‌ ಕೆಲಸ ಮಾಡುತ್ತಿದ್ದ ಈ ಕಾರ್ಮಿಕರ ಪೈಕಿ ಓರ್ವನ ಸಹೋದರನೇ ಸೊಹೇಲ್. ಉತ್ತರ ಪ್ರದೇಶದಿಂದ ತನ್ನ ಸಹೋದರ ಕೆಲಸ ಮಾಡುತ್ತಿದ್ದ ಬನ್ನಿಕೋಡು ಗ್ರಾಮಕ್ಕೆ ಬಂದು, ಇಲ್ಲೇ ವಾಸವಿದ್ದ. ಇಲ್ಲಿ ಏನೂ ಅರಿಯದವನಂತಿದ್ದ ಸೊಹೇಲ್‌ನ ಜನ್ಮ ಜಾಲಾಡಿದ್ದ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಬಂಧಿಸಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ ಪಾಕ್ ನಂಟು

ಇನ್‌ಸ್ಟಾಗ್ರಾಂನಲ್ಲಿ ಪಾಕಿಸ್ತಾನ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಹಾಗೂ ಕರೆ ಮಾಡಿ ಮಾತನಾಡುತ್ತಿದ್ದ, ಪಾಕ್‌ ಮೂಲದ ಭಾರತ ವಿರೋಧಿ ವಾಟ್ಸಪ್ ಗ್ರೂಪ್ ಆದ ರಾಣಾದಲ್ಲಿ ಸೊಹೇಲ್ ಸಕ್ರಿಯನಾಗಿದ್ದ. ತಿಂಗಳ ಹಿಂದಷ್ಟೇ ತುಮಕೂರು ಮೂಲಕ ಅಲ್ಲಾಭಕ್ಷಿ ಹಾಗೂ ದಾವಣಗೆರೆಯ ಜಮೀರ್ ಖಾನ್ ಎಂಬ ಶಂಕಿತ ಉಗ್ರರನ್ನು ತುಮಕೂರು ಪೊಲೀಸರು ಬಂಧಿಸಿದ್ದರು. 

ಕೇಂದ್ರ ಗುಪ್ತಚರ ಇಲಾಖೆ ನಸುಕಿನಲ್ಲಿ ಬನ್ನಿಕೋಡು ಗ್ರಾಮದಲ್ಲಿದ್ದ ಈಗ ಮತ್ತೊಬ್ಬನನ್ನು ಬಂಧಿಸಿ, ತುಮಕೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸೊಹೇಲ್ ವಾಸಿಸುತ್ತಿದ್ದ ಮನೆ ಮೇಲೆ ದಾಳಿ ಮಾಡಿ, 8 ಆರೋಪಿಗಳನ್ನು ವಶಕ್ಕೆ ಪಡೆದರು. ಉಳಿದವರನ್ನು ಬಿಟ್ಟು, ಸೊಹೇಲ್‌ನನ್ನು ಬಂಧಿಸಿ, ತುಮಕೂರು ಪೊಲೀಸರ ವಶಕ್ಕೆ ನೀಡಲಾಗಿದೆ. ಸೊಹೇಲ್‌ನನ್ನು ಎನ್ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.