ನೇಪಾಳ-ಟಿಬೆಟ್ ಗಡಿಯಲ್ಲಿನ ವಿನಾಶಕಾರಿ ಪ್ರವಾಹವು ಹಿಮಾಲಯದ ಹಿಮಮಂಡಲದ ಬಿಕ್ಕಟ್ಟನ್ನು ಜಗತ್ತಿಗೆ ಅನಾವರಣಗೊಳಿಸಿದೆ. ICIMOD ವರದಿಯು ಹಿಮನದಿಗಳು ವೇಗವಾಗಿ ಕರಗುತ್ತಿವೆ ಎಂದು ಮೊದಲೇ ಎಚ್ಚರಿಸಿತ್ತು. 'ಮಂಜುಗಡ್ಡೆ ಮತ್ತು ಬಂಡೆಗಳ ಹಿಮಪಾತ' ಈ ದುರಂತಕ್ಕೆ ಮುಖ್ಯ ಕಾರಣವಾಗಿದ್ದು, ಇಂತಹ ಗಡಿಯಾಚೆಗಿನ ವಿಪತ್ತುಗಳನ್ನು ಎದುರಿಸಲು ಪ್ರಾದೇಶಿಕ ಸಹಕಾರದ ಅಗತ್ಯವನ್ನು ಇದು ಒತ್ತಿಹೇಳುತ್ತದೆ.
ನೇಪಾಳ ಮತ್ತು ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹಗಳು ಹಿಮಾಲಯದ ಕ್ರಯೋಸ್ಪಿಯರ್ (ಹಿಮಮಂಡಲ) ವಲಯದಲ್ಲಿ ಎದುರಾಗಿರುವ ಗಂಭೀರ ಬಿಕ್ಕಟ್ಟನ್ನು ಜಗತ್ತಿಗೆ ಮತ್ತೊಮ್ಮೆ ಅನಾವರಣಗೊಳಿಸಿವೆ. ಈ ಭೀಕರ ದುರಂತಕ್ಕೆ ಕೆಲವು ತಿಂಗಳುಗಳ ಮುಂಚೆಯಷ್ಟೇ, 'ಅಂತರರಾಷ್ಟ್ರೀಯ ಸಮಗ್ರ ಪರ್ವತ ಅಭಿವೃದ್ಧಿ ಕೇಂದ್ರ' (ICIMOD) ತನ್ನ ಪ್ರಮುಖ ವರದಿಗಳಲ್ಲಿ ಹಿಂದೂ ಕುಶ್ ಹಿಮಾಲಯ (HKH) ಪ್ರದೇಶದಲ್ಲಿ ಹಿಮನದಿಗಳು ವೇಗವಾಗಿ ಕರಗುತ್ತಿದ್ದು, ದೊಡ್ಡ ಮಟ್ಟದ ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ ಎಂದು ಮೊದಲೇ ಎಚ್ಚರಿಸಿತ್ತು ಅಂಶ ಈ ಭೀಕರ ದುರಂತ ನಡೆದ ಬಳಿಕ ಬೆಳಕಿಗೆ ಬರುತ್ತಿದೆ.
ಮಾರ್ಚ್ 2026 ರಲ್ಲಿ ಬಿಡುಗಡೆಯಾದ ICIMOD ವರದಿಯ ಪ್ರಕಾರ, 2000 ನೇ ಇಸವಿಯಿಂದೀಚೆಗೆ ಈ ಭಾಗದಲ್ಲಿ ಹಿಮ ನಷ್ಟದ ಪ್ರಮಾಣ ದ್ವಿಗುಣಗೊಂಡಿದೆ. 1975 ರಿಂದ ಈವರೆಗೆ ಹಿಮನದಿಗಳು ಸುಮಾರು 27 ಮೀಟರ್‌ಗಳಷ್ಟು ಮಂಜುಗಡ್ಡೆಯ ದಪ್ಪವನ್ನು ಕಳೆದುಕೊಂಡಿದ್ದು, ಸಣ್ಣ ಹಿಮನದಿಗಳು ಅತ್ಯಂತ ವೇಗವಾಗಿ ಕುಗ್ಗುತ್ತಿವೆ.
ನೇಪಾಳ-ಚೀನಾ ಗಡಿ ಪ್ರವಾಹಕ್ಕೆ ನಿಜವಾದ ಕಾರಣವೇನು?
ಇತ್ತೀಚೆಗೆ ನೂರಾರು ಜನರ ಸಾವು ಮತ್ತು ಸಾವಿರಕ್ಕೂ ಹೆಚ್ಚು ಜನರ ನಾಪತ್ತೆಗೆ ಕಾರಣವಾದ ನೇಪಾಳ-ಚೀನಾ ಗಡಿಯ ಪ್ರವಾಹಕ್ಕೆ 'ಮಂಜುಗಡ್ಡೆ ಮತ್ತು ಬಂಡೆಗಳ ಹಿಮಪಾತ' (Ice and Rock Avalanche) ಮುಖ್ಯ ಕಾರಣ ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ICIMOD ಕ್ರಯೋಸ್ಪಿಯರ್ ತಜ್ಞ ಮೊಹಮ್ಮದ್ ಫಾರೂಕ್ ಅಜಮ್ ತಿಳಿಸಿರುವಂತೆ, ಹಿಮನದಿಯ ಕೆಳಭಾಗದ ತಳಪಾಯವು (Bedrock) ಅದರ ಸ್ಥಾನದಿಂದ ಬೇರ್ಪಟ್ಟು ಕಣಿವೆಯೊಳಗೆ ಬಂಡೆ ಹಾಗೂ ಮಂಜುಗಡ್ಡೆಯೊಂದಿಗೆ ಧುಮುಕಿದ್ದರಿಂದ ಈ ದುರಂತ ನಡೆದಿದೆ. ಈ ಆಘಾತದಿಂದಾಗಿ ನದಿಯ ಸಂಗಮ ಸ್ಥಳದಲ್ಲಿ ಅಪಾರ ಪ್ರಮಾಣದ ಶಿಲಾಖಂಡರಾಶಿಗಳು ಸಂಗ್ರಹಗೊಂಡು ತಾತ್ಕಾಲಿಕ ಅಣೆಕಟ್ಟಿನಂತಹ ಕೃತಕ ಕೊಳವನ್ನು ಸೃಷ್ಟಿಸಿವೆ. ಈ ಜಲಾಶಯದಲ್ಲಿ 2.5 ಮಿಲಿಯನ್ ಘನ ಮೀಟರ್‌ಗೂ ಹೆಚ್ಚು ನೀರು ಶೇಖರಣೆಯಾಗಿದ್ದು, ಎರಡನೇ ಪ್ರವಾಹದ ಭೀತಿಯನ್ನು ಹೆಚ್ಚಿಸಿದೆ.
ಮೂರು ದಶಕಗಳಲ್ಲಿ 12% ಹಿಮನದಿ ನಾಶ
ICIMOD ಪ್ರಕಟಿಸಿರುವ "HKH ಗ್ಲೇಸಿಯರ್ ಔಟ್‌ಲುಕ್ 2026" ವರದಿಯಲ್ಲಿ ಉಲ್ಲೇಖಿಸಿರುವಂತೆ 1990 ರಿಂದ 2020 ರ ನಡುವೆ ಹಿಂದೂ ಕುಶ್ ಹಿಮಾಲಯದ ಹಿಮನದಿಗಳು ತಮ್ಮ ಒಟ್ಟು ವಿಸ್ತೀರ್ಣದ 12% ಭಾಗವನ್ನು ಮತ್ತು 9% ರಷ್ಟು ಹಿಮದ ನಿಕ್ಷೇಪವನ್ನು ಕಳೆದುಕೊಂಡಿವೆ. ಈ ಕಾರಣಕ್ಕೆ 0.5 ಚದರ ಕಿಮೀಗಿಂತ ಸಣ್ಣದಾಗಿರುವ ಹಿಮನದಿಗಳು ಅತ್ಯಂತ ವೇಗವಾಗಿ ಕರಗುತ್ತಿವೆ. ಈ ಪ್ರದೇಶದ ಶೇ. 75 ರಷ್ಟು ಹಿಮನದಿಗಳು ಇದೇ ವರ್ಗಕ್ಕೆ ಸೇರುತ್ತವೆ. ಧ್ರುವ ಪ್ರದೇಶಗಳನ್ನು ಹೊರತುಪಡಿಸಿ ವಿಶ್ವದಲ್ಲೇ ಅತಿ ಹೆಚ್ಚು ಹಿಮವನ್ನು ಹೊಂದಿರುವ HKH ಪ್ರದೇಶವು ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ಸೇರಿದಂತೆ ಏಷ್ಯಾದ 10 ಪ್ರಮುಖ ನದಿ ವ್ಯವಸ್ಥೆಗಳಿಗೆ ಮೂಲ ಆಧಾರವಾಗಿದೆ. ಇದು ಪ್ರದೇಶದ 74% ಕ್ಕಿಂತ ಹೆಚ್ಚು ಹಿಮನದಿಗಳನ್ನು ಹೊಂದಿದೆ.
"ಇದು ಎಲ್ಲೋ ದೂರದಲ್ಲಿ ನಡೆಯುತ್ತಿರುವ ಸಮಸ್ಯೆಯಲ್ಲ; ಪ್ರತಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಹೊಸ ವಿಪತ್ತುಗಳ ರೂಪದಲ್ಲಿ ನಮ್ಮ ಕಣ್ಣಮುಂದೆಯೇ ಬಿಚ್ಚಿಕೊಳ್ಳುತ್ತಿರುವ ಜೀವಂತ ಬಿಕ್ಕಟ್ಟು."
— ಪೆಮಾ ಗ್ಯಾಮ್ಟ್ಶೋ (ಮಹಾನಿರ್ದೇಶಕರು, ICIMOD)
ಮೇಲ್ವಿಚಾರಣೆಯ ಕೊರತೆ , ಪ್ರಾದೇಶಿಕ ಸಹಕಾರದ ಅಗತ್ಯತೆ
ಹಿಮಾಲಯ ವಲಯದಲ್ಲಿ 63,700 ಕ್ಕೂ ಹೆಚ್ಚು ಹಿಮನದಿಗಳಿದ್ದರೂ, ಕೇವಲ 38 ಹಿಮನದಿಗಳನ್ನು ಮಾತ್ರ ಸರಿಯಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅದರಲ್ಲಿ ಕೇವಲ 7 ಮಾತ್ರ ಜಾಗತಿಕ ಮಾನದಂಡಗಳನ್ನು ಪೂರೈಸುತ್ತವೆ. ಕಾರಕೋರಂ, ಝನ್ಸ್ಕಾರ್, ಸಿಕ್ಕಿಂ ಮತ್ತು ಭೂತಾನ್‌ನಂತಹ ಪ್ರಮುಖ ಹಿಮಪ್ರದೇಶಗಳ ಡೇಟಾ ಸರಿಯಾಗಿ ಲಭ್ಯವಿಲ್ಲದಿರುವುದು ಆತಂಕಕಾರಿ ವಿಷಯವಾಗಿದೆ.
ಪ್ರವಾಹ ಮತ್ತು ಹಿಮನದಿ ದುರಂತಗಳಿಗೆ ರಾಷ್ಟ್ರೀಯ ಗಡಿಗಳ ಹಾದಿಯಿಲ್ಲ. ಚೀನಾದ ಟಿಬೆಟ್ ಪ್ರದೇಶದಲ್ಲಿ ಉಂಟಾದ ಪ್ರಕೃತಿ ವಿಕೋಪವು ಗಡಿ ದಾಟಿ ನೇಪಾಳದ ಮೂಲಸೌಕರ್ಯಗಳನ್ನು ನಾಶಪಡಿಸಿದೆ. ಇಂತಹ ಗಡಿಯಾಚೆಗಿನ ದುರಂತಗಳನ್ನು ಎದುರಿಸಲು ಮತ್ತು ಮುನ್ನೆಚ್ಚರಿಕೆ ವಹಿಸಲು ಹಿಮಾಲಯನ್ ದೇಶಗಳ ನಡುವೆ ದತ್ತಾಂಶ ಹಂಚಿಕೆ ಹಾಗೂ ಪ್ರಾದೇಶಿಕ ಸಹಕಾರ ಅತ್ಯಗತ್ಯವಾಗಿದೆ.


