ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಬುರ್ಖಾ ಮತ್ತು ನಿಕಾಬ್ ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಸಜ್ಜಾಗಿದೆ. ಇದರೊಂದಿಗೆ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಮತ್ತು ಪೋಷಕರಿಗೆ ಇಟಾಲಿಯನ್ ಭಾಷೆ ಕಡ್ಡಾಯಗೊಳಿಸುವ ಪ್ರಸ್ತಾಪವನ್ನೂ ಮುಂದಿಟ್ಟಿದೆ.

ರೋಮ್ (ಸೆ.21): ಯುರೋಪಿಯನ್ ಒಕ್ಕೂಟದ ಪ್ರಮುಖ ದೇಶವಾದ ಇಟಲಿಯ ಶಾಲಾ-ಕಾಲೇಜುಗಳಲ್ಲಿ ಬುರ್ಖಾ (Burqa) ಮತ್ತು ನಿಕಾಬ್ (Niqab) ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಸರ್ಕಾರ ಸಜ್ಜಾಗಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ಭಾನುವಾರ ಈ ಪ್ರಮುಖ ನಿರ್ಧಾರವನ್ನು ಪ್ರಕಟಿಸಿದ್ದು, ಈ ಮೂಲಕ ಯುರೋಪ್‌ನಲ್ಲಿ ಸುದೀರ್ಘ ಕಾಲದಿಂದ ನಡೆಯುತ್ತಿರುವ ಧಾರ್ಮಿಕ ಉಡುಪುಗಳ ಹಕ್ಕು, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಮಗ್ರತೆಯ ಕುರಿತಾದ ಚರ್ಚೆ ಮತ್ತೆ ಬಿಸಿಯೇರಿದೆ.

ಈ ಕುರಿತು ಶೀಘ್ರದಲ್ಲೇ ಸಚಿವ ಸಂಪುಟದ (Cabinet) ಅನುಮೋದನೆ ಪಡೆದು ಶಾಸನಸಭೆಯಲ್ಲಿ ವಿಧೇಯಕ ಮಂಡಿಸುವುದಾಗಿ ಪ್ರಧಾನಿ ಮೆಲೋನಿ ತಿಳಿಸಿದ್ದಾರೆ. ಇದರೊಂದಿಗೆ ಪ್ರತಿ ತರಗತಿಯಲ್ಲಿ ಇರಬೇಕಾದ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಹೇರುವುದು ಹಾಗೂ ತೀವ್ರ ಸಾಮಾಜಿಕ ಹೊಂದಾಣಿಕೆಯ ಸಮಸ್ಯೆ ಎದುರಿಸುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪೋಷಕರು ಕಡ್ಡಾಯವಾಗಿ 'ಇಟಾಲಿಯನ್' (Italian) ಭಾಷೆಯನ್ನು ಕಲಿಯುವಂತೆ ಮಾಡುವ ಪ್ರಸ್ತಾಪವನ್ನೂ ಸರ್ಕಾರ ಮುಂದಿಟ್ಟಿದೆ. ಆದರೆ ವಿದೇಶಿ ವಿದ್ಯಾರ್ಥಿಗಳ ನಿರ್ದಿಷ್ಟ ಪ್ರಮಾಣ ಎಷ್ಟು ಇರಬೇಕು ಎಂಬುದನ್ನು ಸರ್ಕಾರ ಇನ್ನೂ ಸ್ಪಷ್ಟಪಡಿಸಿಲ್ಲ.

"ಪ್ರತಿಯೊಬ್ಬರೂ ಶಾಲೆಗೆ ಬರುವಾಗ ತಮ್ಮ ಮುಖವನ್ನು ಕಾಣುವಂತೆ (Uncovered) ತೆರೆದಿಟ್ಟುಕೊಂಡು ಬರಬೇಕು. ಸಂಪ್ರದಾಯ ಅಥವಾ ಸಂಸ್ಕೃತಿಯ ಹೆಸರಿನಲ್ಲಿ ಯುವತಿಯೊಬ್ಬಳು ತನ್ನ ಮುಖವನ್ನು ಮುಚ್ಚಿಕೊಳ್ಳಬೇಕು ಎಂದು ನಿರ್ಧರಿಸಲು ಇಟಲಿಯಲ್ಲಿ ಯಾರಿಂದಲೂ ಸಾಧ್ಯವಿಲ್ಲ," ಎಂದು ಮೆಲೋನಿ ಕಟ್ಟುನಿಟ್ಟಿನ ಧಾಟಿಯಲ್ಲಿ ಹೇಳಿದ್ದಾರೆ. ಈ ಪ್ರಸ್ತಾಪವು ಕಾಯ್ದೆಯಾಗಿ ಜಾರಿಯಾಗಲು ಇನ್ನು ಕಾನೂನು ಪ್ರಕ್ರಿಯೆಗಳು ಬಾಕಿ ಇವೆ.

ಇಟಲಿ ಸರ್ಕಾರದ ಪ್ರಸ್ತಾಪದಲ್ಲಿ ನಿರ್ದಿಷ್ಟವಾಗಿ ಏನಿದೆ?

ಪ್ರಸ್ತುತ ತರಲು ಹೊರಟಿರುವ ಪ್ರಸ್ತಾಪವು ಮುಖ್ಯವಾಗಿ 'ಬುರ್ಖಾ' ಮತ್ತು 'ನಿಕಾಬ್'ಗಳಿಗೆ ಮಾತ್ರ ಅನ್ವಯಿಸಲಿದ್ದು, 'ಹಿಜಾಬ್' (Hijab) ಅನ್ನು ಒಳಗೊಂಡಿಲ್ಲ.

  • ಬುರ್ಖಾ (Burqa): ಇದು ಸಂಪೂರ್ಣ ದೇಹವನ್ನು ಮುಚ್ಚಲಿದ್ದು, ಕಣ್ಣುಗಳ ಭಾಗದಲ್ಲಿ ಜಾಲರಿಯಂತಹ ವಿನ್ಯಾಸವನ್ನು ಹೊಂದಿರುತ್ತದೆ.
  • ನಿಕಾಬ್ (Niqab): ಇದು ಇಡೀ ಮುಖವನ್ನು ಮುಚ್ಚುತ್ತದೆ ಆದರೆ ಕಣ್ಣುಗಳು ಮಾತ್ರ ಹೊರಗೆ ಕಾಣಿಸುತ್ತವೆ.
  • ಹಿಜಾಬ್ (Hijab): ಇದು ತಲೆಗೂದಲು ಹಾಗೂ ಕತ್ತಿನ ಭಾಗವನ್ನು ಮುಚ್ಚಲಿದ್ದು, ಮುಖವು ಸಂಪೂರ್ಣವಾಗಿ ಕಾಣಿಸುತ್ತದೆ.

ಇಟಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗಳ ಗುರುತು ಪತ್ತೆಗೆ ಅಡಚಣೆ ಉಂಟುಮಾಡುವ ರೀತಿಯಲ್ಲಿ ಮುಖ ಮುಚ್ಚಿಕೊಳ್ಳುವುದನ್ನು ತಡೆಯಲು 1975ರಲ್ಲೇ ಕಾನೂನು ಜಾರಿಯಲ್ಲಿದೆ. ಈ ಕಾನೂನಿನ ಅಡಿಯಲ್ಲೇ ಈ ಹಿಂದೆ ಕೆಲ ಸಂದರ್ಭಗಳಲ್ಲಿ ಪೂರ್ಣ ಪ್ರಮಾಣದ ಮುಖ ಮುಸುಕಿನ ಉಡುಪುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ ಶಾಲೆಗಳಲ್ಲಿ ಧರಿಸುವ ಬುರ್ಖಾ ಅಥವಾ ನಿಕಾಬ್ ಅನ್ನು ಸಂಪೂರ್ಣವಾಗಿ ನಿಷೇಧಿಸುವ ಪ್ರತ್ಯೇಕ ರಾಷ್ಟ್ರೀಯ ಕಾನೂನು ಇಟಲಿಯಲ್ಲಿ ಇರಲಿಲ್ಲ. ಇದೀಗ ಮೆಲೋನಿ ಸರ್ಕಾರ ಪ್ರತ್ಯೇಕ ಕಾನೂನು ತರಲು ಮುಂದಾಗಿದೆ.

ಯುರೋಪ್‌ನ ಇತರ ದೇಶಗಳಿಗೆ ಹೋಲಿಸಿದರೆ ಇಟಲಿಯ ನಡೆ ಹೇಗಿದೆ?

ಬುರ್ಖಾ ಮತ್ತು ನಿಕಾಬ್ ಧರಿಸುವ ವಿಚಾರದಲ್ಲಿ ಇಡೀ ಯುರೋಪ್‌ಗೆ ಅನ್ವಯಿಸುವ ಏಕರೂಪದ ಯಾವುದೇ ನಿಯಮವಿಲ್ಲ. ಪ್ರತಿಯೊಂದು ದೇಶವೂ ತನಗೆ ಅನುಕೂಲಕರವಾದ ಶಾಸನಗಳನ್ನು ಜಾರಿಗೆ ತಂದಿವೆ.

ಫ್ರಾನ್ಸ್ (France): ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣವಾಗಿ ಮುಖ ಮುಚ್ಚುವ ಉಡುಪುಗಳನ್ನು ನಿಷೇಧಿಸಿದ ಮೊದಲ ಯುರೋಪಿಯನ್ ದೇಶ ಫ್ರಾನ್ಸ್ (2011). ನಿಯಮ ಉಲ್ಲಂಘಿಸಿದರೆ ದಂಡ ಹಾಗೂ ಪೌರತ್ವ ಶಿಕ್ಷಣ ತರಗತಿಗಳಿಗೆ ಹಾಜರಾಗಬೇಕಾಗುತ್ತದೆ.

ಬೆಲ್ಜಿಯಂ (Belgium): 2011ರಲ್ಲಿ ರಾಷ್ಟ್ರವ್ಯಾಪಿ ನಿಷೇಧ ಹೇರಿದ್ದು, ನಿಯಮ ಉಲ್ಲಂಘಿಸಿದರೆ ದಂಡದ ಜೊತೆಗೆ 7 ದಿನಗಳವರೆಗೆ ಜೈಲು ಶಿಕ್ಷೆಯ ಕಾನೂನಿದೆ.

ಬಲ್ಗೇರಿಯಾ (Bulgaria): 2016ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಪೂರ್ಣ ಮುಖ ಮುಸುಕನ್ನು ನಿಷೇಧಿಸಲಾಗಿದೆ. ಮನೆಗಳು ಹಾಗೂ ಪ್ರಾರ್ಥನಾ ಮಂದಿರಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ಆಸ್ಟ್ರಿಯಾ (Austria): 2017ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚುವುದಕ್ಕೆ ನಿಷೇಧ ಹೇರಿತ್ತು. ಅಲ್ಲದೆ, ಸೆಪ್ಟೆಂಬರ್ 2026ರಿಂದ ಅನ್ವಯವಾಗುವಂತೆ ಶಾಲೆಗಳಲ್ಲಿ 14 ವರ್ಷದೊಳಗಿನ ಹೆಣ್ಣುಮಕ್ಕಳು ತಲೆ ಮುಚ್ಚುವ ಇಸ್ಲಾಮಿಕ್ ಸ್ಕಾರ್ಫ್ ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಡೆನ್ಮಾರ್ಕ್ (Denmark): 2018ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಮತ್ತು ನಿಕಾಬ್ ಸೇರಿದಂತೆ ಮುಖ ಮುಚ್ಚುವ ಉಡುಪುಗಳನ್ನು ನಿಷೇಧಿಸಿದೆ.

ನೆದರ್ಲ್ಯಾಂಡ್ಸ್ (Netherlands): 2019ರಲ್ಲಿ ಕಾನೂನು ಜಾರಿಗೆ ತಂದಿದ್ದು, ಸಾರ್ವಜನಿಕ ಸ್ಥಳಗಳ ಬದಲಿಗೆ ಶಾಲೆಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ರಸ್ತೆ ಸಾರಿಗೆಯಲ್ಲಿ ಮಾತ್ರ ಮುಖ ಮುಚ್ಚುವುದಕ್ಕೆ ಮಿತಿ ಹೇರಿದೆ.

ಸ್ವಿಟ್ಜರ್‌ಲ್ಯಾಂಡ್ (Switzerland): ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹಣೆಯ (Referendum) ಬಳಿಕ 2023ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚುವುದನ್ನು ಒಕ್ಕೂಟ ಮಟ್ಟದಲ್ಲಿ ನಿಷೇಧಿಸಿದೆ.

ಪೋರ್ಚುಗಲ್ (Portugal): ಆಗಸ್ಟ್ 2026ರಲ್ಲಿ ಶಾಸನ ಪೂರ್ಣಗೊಳಿಸಿದ್ದು, ಆರೋಗ್ಯ, ವೃತ್ತಿಪರ, ಕಲಾತ್ಮಕ ಹಾಗೂ ಧಾರ್ಮಿಕ ಸಂದರ್ಭಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚುವುದಕ್ಕೆ ನಿಷೇಧ ಹೇರಿದೆ.

ಜರ್ಮನಿ (Germany): ದೇಶಾದ್ಯಂತ ಸಂಪೂರ್ಣ ನಿಷೇಧವಿಲ್ಲ. ಆದರೆ ಸರ್ಕಾರಿ ನೌಕರರು, ನ್ಯಾಯಾಧೀಶರು, ಸಶಸ್ತ್ರ ಪಡೆಗಳು ಹಾಗೂ ವಾಹನ ಚಾಲಕರಿಗೆ ಮುಖ ಮುಚ್ಚಲು ಮಿತಿಗಳಿವೆ.

ಸ್ವೀಡನ್ ಮತ್ತು ಸ್ಪೇನ್ (Sweden & Spain): ಇಲ್ಲಿ ಯಾವುದೇ ರಾಷ್ಟ್ರೀಯ ಮಟ್ಟದ ನಿಷೇಧವಿಲ್ಲ. ಪ್ರಾದೇಶಿಕ ಅಥವಾ ಸ್ಥಳೀಯ ಆಡಳಿತಗಳು ತಮ್ಮದೇ ಆದ ನಿಯಮಗಳನ್ನು ರೂಪಿಸಿಕೊಂಡಿವೆ.

ಯುರೋಪ್‌ನಲ್ಲಿ ಫ್ರಾನ್ಸ್, ಬೆಲ್ಜಿಯಂ ಹಾಗೂ ಡೆನ್ಮಾರ್ಕ್‌ಗಳು ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣ ನಿಷೇಧ ಹೇರಿದ್ದರೆ, ನೆದರ್ಲ್ಯಾಂಡ್ಸ್‌ನಂತಹ ದೇಶಗಳು ನಿರ್ದಿಷ್ಟ ಸಂಸ್ಥೆಗಳಿಗೆ ಮಾತ್ರ ಇದನ್ನು ಸೀಮಿತಗೊಳಿಸಿವೆ. ಇಟಲಿ ಸರ್ಕಾರವು ಪ್ರಸ್ತುತ ತರಲು ಹೊರಟಿರುವ ಕಾನೂನು 'ಶಾಲೆಗಳಿಗೆ' ಮಾತ್ರ ಸೀಮಿತವಾಗಿರುವುದರಿಂದ, ಇದು ಆಸ್ಟ್ರಿಯಾ ದೇಶ ಅನುಸರಿಸುತ್ತಿರುವ ಹಾದಿಗೆ ಅತ್ಯಂತ ಹತ್ತಿರವಾಗಿದೆ. ಸಂಸತ್ತಿನ ಪ್ರಕ್ರಿಯೆಯ ಬಳಿಕವೇ ಇದು ಅಂತಿಮ ಕಾನೂನಾಗಿ ಬದಲಾಗಲಿದೆ.