ಜಾರ್ಜಿಯಾ ಮೆಲೋನಿ ಅವರ ಬದುಕು ಬಡತನ, ಕೌಟುಂಬಿಕ ಸಂಕಷ್ಟಗಳಿಂದ ಕೂಡಿತ್ತು. ಬಾಲ್ಯದಲ್ಲಿಯೇ ಮನೆ ಬೆಂಕಿಗೆ ಆಹುತಿಯಾಗಿ, ಬಾರ್ ಅಟೆಂಡರ್ ಆಗಿ ಕೆಲಸ ಮಾಡುತ್ತಲೇ ರಾಜಕೀಯ ಪ್ರವೇಶಿಸಿ, ತಮ್ಮ ಛಲದಿಂದ ಇಟಲಿಯ ಮೊಟ್ಟಮೊದಲ ಮಹಿಳಾ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದರು.
ಅದು 1976ರ ಸಮಯ. ಜಾರ್ಜಿಯಾ ಮೆಲೋನಿ ಅವರು ಅಮ್ಮನ ಗರ್ಭದಲ್ಲಿದ್ದರು. ಅದಾಗಲೇ ಅಮ್ಮನಿಗೆ ಇನ್ನೊಬ್ಬ ಮಗಳಿದ್ದಳು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತುತ್ತು ಊಟಕ್ಕೂ ಹಾಹಾಕಾರ. ಒಂದು ಮಗುವನ್ನೇ ಸಾಕುವುದು ಕಷ್ಟ ಇರುವಾಗ, ಇನ್ನೊಂದು ಮಗು ಹೇಗೆ ಸಾಕಲಿ ಎಂದುಕೊಂಡ ಮೆಲೋನಿ ಅಮ್ಮ, ಮೆಲೋನಿಯನ್ನು ಗರ್ಭದಲ್ಲಿಯೇ ಚಿವುಟಲು ಆಸ್ಪತ್ರೆ ಮೆಟ್ಟಿಲೇರಿದ್ದರು. ಆದರೆ ಅದ್ಯಾಕೋ ಕೊನೆಯ ಕ್ಷಣದಲ್ಲಿ ಮನಸ್ಸನ್ನು ಬದಲಿಸಿಬಿಟ್ಟರು. ಅದರ ಪರಿಣಾಮವಾಗಿ 1977ರ ಜನವರಿ 15ರಂದು ಜನಿಸಿದ ಈ ಹೆಣ್ಣುಮಗಳೇ ಮುಂದೆ ಇಟಲಿ ದೇಶವನ್ನು ಆಳುತ್ತಾಳೆ ಎಂದರೆ ಬಹುಶಃ ಯಾವ ಜ್ಯೋತಿಷಿಯೂ ಹೇಳಿರಲಿಲ್ಲವೇನೋ.

ಇಷ್ಟು ಹೇಳಿದರೆ ಜಾರ್ಜಿಯಾ ಮೆಲೋನಿಗೆ ಕಣ್ಣೀರಿನ ಕಥೆ ಮುಗಿಯುವುದಿಲ್ಲ. ಕಡು ಬಡತನದಲ್ಲಿ ಇರುವಾಗಲೇ, ಸಂಸಾರವೇ ಬೇಡ ಎಂದುಕೊಂಡು ಜಾರ್ಜಿಯಾ ಅಪ್ಪ ಸ್ಪೇನ್ಗೆ ಹೊರಟೇ ಬಿಟ್ಟ. ಅಲ್ಲಿ ಮತ್ತೊಂದು ಮದುವೆಯಾಗಿ ಸಂಸಾರ ನಡೆಸಿದ. ಆಗ ಜಾರ್ಜಿಯಾ ಮೆಲೋನಿ ಇನ್ನೂ ಒಂದು ವರ್ಷದ ಪುಟಾಣಿ. ದೇವರು ಒಮ್ಮೆ ತನ್ನ ಲೀಲೆ ಶುರು ಮಾಡಿದರೆ, ಅದನ್ನು ಅಷ್ಟಕ್ಕೇ ಮುಗಿಸುವುದಿಲ್ಲವಲ್ಲ, ಪೆಟ್ಟಿನ ಮೇಲೆ ಪೆಟ್ಟು ಕೊಡುತ್ತಾನೆ. ಬಹುಶಃ ಒಂದು ಶಿಲ್ಪ ಅಷ್ಟು ಪೆಟ್ಟು ತಿಂದರೇನೇ ಅದಕ್ಕೊಂದು ರೂಪ ಬರುತ್ತದೆ ಎನ್ನುವುದು ಆತನ ಲೆಕ್ಕಾಚಾರವೋ ಏನೋ.
ಬೆಂಕಿಯಲ್ಲಿ ಬೆಂದ ಬದುಕು
ಒಟ್ಟಿನಲ್ಲಿ ಮೆಲೋನಿ ಜೀವನದಲ್ಲಿಯೂ ಆಗಿದ್ದೂ ಅದೇ. ಅಕ್ಕನ ಜೊತೆ ಆಟವಾಡುತ್ತಿದ್ದ ವೇಳೆ ಏನೋ ಅನಾಹುತ ಸಂಭವಿಸಿ ಇಡೀ ಮನೆ ಬೆಂಕಿಗೆ ಆಹುತಿಯಾಯಿತು. ಮೊದಲೇ ತುತ್ತು ಊಟಕ್ಕೂ ಗತಿ ಇಲ್ಲದ ಸ್ಥಿತಿ. ಇದೀಗ ಅಕ್ಷರಶಃ ಬೀದಿಪಾಲಾಯಿತು ಕುಟುಂಬ. ಅಜ್ಜಿಯ ಅತ್ಯಂತ ಚಿಕ್ಕದಾದ ಮನೆಯಲ್ಲಿ ಹೇಗೋ ಬಾಲ್ಯ ಕಳೆಯಿತು ಈ ಕುಟುಂಬ. ಎಷ್ಟೋ ದಿನಗಳು ಊಟಕ್ಕೂ ಗತಿಯಿಲ್ಲದೇ ಬದುಕಿದ ಜೀವವದು. ಬಹುಶಃ ಈ ಬಡತನವೇ ಮೆಲೋನಿ ಅವರಲ್ಲಿ ಕಿಚ್ಚು ಹೊತ್ತಿಸಿತು. ತಮ್ಮ ಸ್ಥಿತಿ ಯಾರೊಬ್ಬರಿಗೂ ಬರಬಾರದು, ಅಂಥದ್ದೊಂದು ದೇಶ ಕಟ್ಟಬೇಕು ಎನ್ನುವ ಕಲ್ಪನೆ ಆ ಎಳೆ ವಯಸ್ಸಿನಲ್ಲಿಯೇ ಹುಟ್ಟಿಕೊಂಡಿತು. ಹಾಗೆಂದು ಹಸಿವು ಕೇಳಬೇಕಲ್ಲ. ಜೀವನ ನಿರ್ವಹಣೆಗೆ ಕಂಡ ಕಂಡಲ್ಲಿ ಕೆಲಸ ಮಾಡಿದರು ಮೆಲೋನಿ. ಕೊನೆಗೆ ಅವರು ನಿಜವಾದ ಜೀವನವನ್ನು ಕಂಡದ್ದು ಬಾರ್ನ ಕಗ್ಗತ್ತಿಲಿನಲ್ಲಿ ಬಾರ್ ಅಟೆಂಡರ್ ಆಗಿ ಕೆಲಸ ಮಾಡಿದಾಗ. ರೆಸ್ಟೋರೆಂಟ್ಗಳಲ್ಲಿ ಬಾರ್‌ಮೇಡ್ ಆಗಿ, ಮನೆಗಳಲ್ಲಿ ಬೇಬಿಸಿಟ್ಟರ್ ಆಗಿ ಮತ್ತು ರೋಮ್‌ನ ಪ್ರಸಿದ್ಧ ನೈಟ್ ಕ್ಲಬ್‌ಗಳಲ್ಲಿ ಕೆಲಸ ಮಾಡುತ್ತಲೇ ಶಿಕ್ಷಣವನ್ನೂ ಕಲಿತರು.
15 ಹರೆಯದಲ್ಲಿ ಸಾಹಸ
ಆಗಿನ್ನೂ ಮೆಲೋನಿ ಅವರಿಗೆ 15ರ ಹರೆಯ ಅಷ್ಟೇ. ಬಹುಶಃ ಈಗಿನ ಮಕ್ಕಳಿಗೆ ಏನೂ ತಿಳಿಯದ ವಯಸ್ಸದು. ಆದರೆ ಮೆಲೋನಿ ಆ ಹಂತದಲ್ಲಿಯೇ ದೇಶಕ್ಕಾಗಿ ಏನಾದರೂ ಮಾಡುವ ಪಣ ತೊಟ್ಟರು. . ಇಟಲಿಯ ಕಮ್ಯುನಿಸ್ಟ್ ವಿರೋಧಿ ಮತ್ತು ರಾಷ್ಟ್ರೀಯತಾವಾದಿ ‘ಯೂತ್ ಫ್ರಂಟ್’ ಸೇರಿದರು. ಚುರುಕಾದ ಮಾತುಗಾರಿಕೆ ಮತ್ತು ಧೈರ್ಯದಿಂದಾಗಿ ಅವರು ವಿದ್ಯಾರ್ಥಿ ನಾಯಕಿಯಾಗಿ ಬೆಳೆದರು. ಆ ಸಂದರ್ಭದಲ್ಲಿ ಇಟಲಿಯಲ್ಲಿ ಜೋರಾಗಿದ್ದ ಮಾಫಿಯಾ ಮತ್ತು ಭ್ರಷ್ಟಾಚಾರ ವಿರುದ್ಧ ಸಿಡಿದೆದ್ದರು. ಅದಕ್ಕೆ ಕಾರಣ ನ್ಯಾಯಾಧೀಶ ಪವೋಲೋ ಬೊರ್ಸಿಲ್ಲಿನೋ ಅವರ ಹತ್ಯೆ. ಅದು ಈ ಎಳೆ ವಯಸ್ಸಿನಲ್ಲಿ ಸಿಕ್ಕಾಪಟ್ಟೆ ಪರಿಣಾಮ ಬೀರಿತು. ರಾಜಕೀಯಕ್ಕೆ ಎಂಟ್ರಿ ಕೊಟ್ಟು ಈ ಮಾಫಿಯಾಗಳಿಗೆ ಬುದ್ಧಿ ಕಲಿಸುವ ಪಣತೊಟ್ಟರು ಮೆಲೋನಿ.
ಪಕ್ಷ ಕಟ್ಟಿ ಸೋಲು
ಫ್ರಾಟಲಿಯಾ ಡಿ ಇಟಾಲಿಯಾ ಎನ್ನುವ ಪಕ್ಷ ಕಟ್ಟಿದರು. ಆದರೆ ಅಲ್ಲಿ ಅವರಿಗೆ ಕಂಡದ್ದು ಬರೀ ಸೋಲು. ಅವಮಾನ ಮಾತ್ರ. ಆದರೆ ಮೆಲೋನಿ ಕುಗ್ಗಲಿಲ್ಲ. ಆ ಸಂದರ್ಭದಲ್ಲಿ ನಡೆದ ಹಣದುಬ್ಬರ, ತಾಂಡವಾಡುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದರು. ಕೊನೆಗೆ ಅವರ ಪಕ್ಷಕ್ಕೆ ಭರ್ಜರಿ ಗೆಲುವು ಸಿಕ್ಕಿತು. 29ನೇ ವಯಸ್ಸಿನಲ್ಲಿ ಇಟಲಿಯ ಸಂಸತ್ ಸದಸ್ಯೆಯಾಗಿ ಆಯ್ಕೆಯಾದರು. ಇಟಲಿಯ ಅಂದಿನ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರ ಸರ್ಕಾರದಲ್ಲಿ ಯುವಜನ ಕಲ್ಯಾಣ ಸಚಿವೆಯಾದರು. ಇಟಲಿಯ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಸಚಿವೆ ಎಂದೆನಿಸಿದರು. 2012ರಲ್ಲಿ ಮೆಲೋನಿ ತಮ್ಮದೇ ಆದ ‘ಬ್ರದರ್ಸ್ ಆಫ್ ಇಟಲಿ’ ಎಂಬ ಬಲಪಂಥೀಯ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. 2022ರ ಸಾರ್ವತ್ರಿಕ ಚುನಾವಣೆಯಲ್ಲಿ ಇವರ ಪಕ್ಷವು ಭರ್ಜರಿ ಜಯ ಗಳಿಸಿತು. ಅಕ್ಟೋಬರ್ 2022ರಲ್ಲಿ ಜಾರ್ಜಿಯಾ ಮೆಲೋನಿ ಇಟಲಿಯ ಮೊಟ್ಟಮೊದಲ ಮಹಿಳಾ ಪ್ರಧಾನಿಯಾಗಿ ಇತಿಹಾಸ ಸೃಷ್ಟಿಸಿದರು.
ಒಬ್ಬಳು ಮಗಳು
ಇವರಿಗೆ ಲಿವ್ ಇನ್ ಸಂಗಾತಿಯಿಂದ ಒಬ್ಬಳು ಮಗಳಿದ್ದಾಳೆ. ಒಂದು ಹೆಣ್ಣು ಮಗಳು ಮುಂದೆ ಬರುತ್ತಾಳೆ ಎಂದರೆ ಅದನ್ನು ಸಹಿಸದ ಜನ ಇದ್ದೇ ಇರುತ್ತಾರೆ ಅಲ್ಲವೆ. ಅದೇ ರೀತಿ ಮೆಲೋನಿ ಅವರನ್ನು ತುಳಿಯುವುದಕ್ಕಾಗಿ ಪೋ*ರ್ನ್ ವೆಬ್ಸೈಟ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಯಿತು. ಆದರೆ ಈ ವಿಡಿಯೋ ಅಪ್ಲೋಡ್ ಮಾಡಿದವರನ್ನು ಕೋರ್ಟ್ಗೆ ಎಳೆದುತಂದರು ಮೆಲೋನಿ. ಕೊನೆಗೆ ತಮಗೆ ನೀಡಿದ್ದ ಪರಿಹಾರದ ಹಣವನ್ನು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗಾಗಿ ಮೀಸಲು ಇಟ್ಟರು. ಹೀಗೆ ಒಂಟಿಯಾಗಿ ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದವರು ಪ್ರಧಾನಿ ನರೇಂದ್ರ ಮೋದಿ ಅವರ ಫ್ರೆಂಡ್ ಜಾರ್ಜಿಯಾ ಮೆಲೋನಿ.


