NIT Silchar students drown: ಜಲಪಾತ ನೋಡಲು ಹೋಗಿದ್ದ ಎನ್‌ಐಟಿ ಸಿಲ್ಚಾರ್‌ನ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.ಒಬ್ಬರ ಶವ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಶೋಧ ನಡೆದಿದೆ.

ಜಲಪಾತ ನೋಡಲು ಹೋಗಿ ಮೂವರು ವಿದ್ಯಾರ್ಥಿಗಳು ನೀರುಪಾಲು

ಗುವಾಹಟಿ: ಇಂಜಿನಿಯರ್‌ ಓದುತ್ತಿದ್ದ ಮೂವರು ವಿದ್ಯಾರ್ಥಿಗಳು ಜಲಪಾತ ನೋಡುವುದಕ್ಕೆ ಹೋಗಿ ಸಾವನ್ನಪ್ಪಿದಂತಹ ಆಘಾತಕಾರಿ ಘಟನೆ ಅಸ್ಸಾಂನಲ್ಲಿ ನಡೆದಿದೆ. ಅಸ್ಸಾಂನ ಸಿಲ್ಚಾರ್‌ನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಮೂವರು ವಿದ್ಯಾರ್ಥಿಗಳು ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿರುವ ಜಲಪಾತವನ್ನು ನೋಡುವುದಕ್ಕೆ ಹೋದ ವೇಳೆ ಈ ದುರಂತ ಸಂಭವಿಸಿದೆ. 20 ವರ್ಷದ ಸರ್ಬಾಕೃತಿಕಾ ಆಕೆಯ ಸ್ನೇಹಿತರಾದ 19 ವರ್ಷದ ರಾಧಿಕಾ 20 ವರ್ಷದ ಸೌಹಾರ್ದ್ ಜಲಪಾತನ ನೋಡುವುಕ್ಕೆ ಹೋಗಿ ನಾಪತ್ತೆಯಾದವರು. ಇವರಲ್ಲಿ ಸರ್ಬಾಕೃತಿಕಾಳ ಶವ ಪತ್ತೆಯಾಗಿದೆ. ಈಕೆ ಉತ್ತರ ಪ್ರದೇಶದ ನಿವಾಸಿಯಾಗಿದ್ದು, ಅಸ್ಸಾಂನ ಸೀಲ್ಚಾರ್‌ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(ಎನ್‌ಐಟಿ)ಯಲ್ಲಿ ಓದುತ್ತಿದ್ದಳು. ಹಾಗೆಯೇ ಜಲಪಾತನ ನೋಡುವುದಕ್ಕೆ ಹೋಗಿ ನಾಪತ್ತೆಯಾದ ಇನೋರ್ವ ವಿದ್ಯಾರ್ಥಿನಿ ರಾಧಿಕಾ ಬಿಹಾರ ನಿವಾಸಿಯಾಗಿದ್ದರೆ ಸೌಹಾರ್ದ್ ರೈ ಉತ್ತರ ಪ್ರದೇಶದ ನಿವಾಸಿಯಾಗಿದ್ದು, ಇವರಿಬ್ಬರು ಇನ್ನೂ ಪತ್ತೆಯಾಗಿಲ್ಲ. ಇವರೆಲ್ಲರೂ ಸ್ನೇಹಿತರಾಗಿದ್ದು, ಅಸ್ಸಾಂನ ಸೀಲ್ಚಾರ್‌ನಲ್ಲಿರುವ ಎನ್‌ಐಟಿಯಲ್ಲಿ ಓದುತ್ತಿದ್ದರು.

ಅಸ್ಸಾಂನ ಸೀಲ್ಚಾರ್‌ ಎನ್‌ಐಟಿಯಲ್ಲಿ ಓದುತ್ತಿದ್ದ ಮೂವರು ವಿದ್ಯಾರ್ಥಿಗಳು

ದಿಮಾ ಹಸವೊ ಜಿಲ್ಲೆಯಲ್ಲಿ ಜಲಪಾತ ನೋಡುವುದಕ್ಕೆ ಹೋಗಿ ಇವರು ಜಲಪಾತಕ್ಕೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಈ ಮೂವರು ಪ್ರಥಮ ವರ್ಷದ ಐಟಿ ವಿದ್ಯಾರ್ಥಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು 7 ವಿದ್ಯಾರ್ಥಿಗಳು ಜಲಪಾತ ವೀಕ್ಷಣೆಗೆ ಹೋಗಿದ್ದು, ಇವರಲ್ಲಿ ಮೂವರು ನೀರುಪಾಲಾಗಿದ್ದಾರೆ. ಮೊದಲಿಗೆ ಈ 7 ಜನರಲ್ಲಿ ಒಬ್ಬರು ನೀರಿಗೆ ಬಿದ್ದ ನಂತರ ಇನ್ನಿಬ್ಬರು ಅವರನ್ನು ರಕ್ಷಿಸುವುದಕ್ಕಾಗಿ ಹಾರಿದು ಮೂವರು ನೀರು ಪಾಲಾಗಿದ್ದಾರೆ. ಮಧ್ಯಾಹ್ನ 2 ಗಂಟೆ ವೇಳೆ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಚಾರ ತಿಳಿದ ತಕ್ಷಣವೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ನೀರುಪಾಲಾದ ವಿದ್ಯಾರ್ಥಿಗಳಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.

ಓರ್ವ ವಿದ್ಯಾರ್ಥಿನಿ ಶವ ಪತ್ತೆ:ಪೋಷಕರ ಆಕ್ರಂದನ

ಶನಿವಾರ ಎನ್‌ಐಟಿಯ 7 ವಿದ್ಯಾರ್ಥಿಗಳು ಹಸವೊ ಜಿಲ್ಲೆಯ ಬೌಲ್ಸೋಲ್‌ ಜಲಪಾತವನ್ನು ನೋಡುವುದಕ್ಕೆ ಹೋದ ನಂತರ ಈ ದುರಂತ ಸಂಭವಿಸಿದೆ. ಈ ಜಲಪಾತವೂ ವಿದ್ಯಾರ್ಥಿಗಳು ಓದುತ್ತಿರುವ ಸೀಲ್ಚಾರ್ ಎನ್‌ಐಟಿಯಿಂದ 55 ಕಿಲೋ ಮೀಟರ್ ದೂರದಲ್ಲಿದೆ. ಘಟನೆಯ ಬಳಿಕ ನಾಪತ್ತೆಯಾದ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಅಮೆರಿಕಾದಲ್ಲಿ ಭಾರತದ ಇಬ್ಬರು ಮೋಸ್ಟ್ ವಾಂಟೆಂಡ್ ಗ್ಯಾಂಗ್‌ಸ್ಟಾರ್‌ಗಳ ಬಂಧನ, ಶೀಘ್ರದಲ್ಲೇ ಗಡೀಪಾರು

ಇದನ್ನೂ ಓದಿ: 4 ಬಾರಿಯ ಸಂಸದರಿಗೇ ಸೈಬರ್ ವಂಚಕರ ಶಾಕ್: ಖಾತೆಯಿಂದ 55 ಲಕ್ಷ ಮಾಯ