Asianet Suvarna News Asianet Suvarna News

ಯಲ್ಲಾಪುರ: ಶಿರ್ಲೆ ಜಲಪಾತಕ್ಕೆ ತೆರಳಿದ್ದ ಆರು ಯುವಕರು ಪತ್ತೆ

* ಜಲಪಾತದ ಬಳಿ ಸಂಕ ಕೊಚ್ಚಿ ಹೋಗಿ ರಾತ್ರಿಯಿಡಿ ಅರಣ್ಯದಲ್ಲೇ ಕಳೆದ ಯುವಕರು
* ಮುಂಜಾನೆ ಸುತ್ತಾಡುತ್ತಾ ಸುಣಜೋಗ ಮಹಾಬಲೇಶ್ವರ ಭಟ್ಟರ ಮನೆಗೆ ಬಂದರು
* ಕಾಣೆಯಾಗಿದ್ದ ಯುವಕರಿಗಾಗಿ ತೀವ್ರ ಹುಡುಕಾಟ ನಡೆಸಿದ್ದ ಸಂಬಂಧಿಕರು
 

Six Youngsters Found Those Who Missing in Shirle Falls at Yellapura in Uttara Kannada grg
Author
Bengaluru, First Published Jul 24, 2021, 8:50 AM IST

ಯಲ್ಲಾಪುರ(ಜು.24): ತಾಲೂಕಿನ ಶಿರ್ಲೆ ಜಲಪಾತಕ್ಕೆ ಆಗಮಿಸಿ ಕಣ್ಮರೆಯಾಗಿದ್ದ 6 ಯುವಕರು ಶುಕ್ರವಾರ ಬೆಳಗ್ಗೆ ಪತ್ತೆಯಾಗಿದ್ದಾರೆ.

ಹುಬ್ಬಳ್ಳಿಯ ನವನಗರದಿಂದ ಮೂರು ಬೈಕ್‌ಗಳಲ್ಲಿ ಆಗಮಿಸಿದ್ದ ಅಸೀಫ್‌ ಮಕ್ಬುಲ್‌ಸಾಬ್‌ ದಲಾಯತ್‌, ಅಹ್ಮದ್‌ ಸೈಯ್ಯದ್‌ ಶೇಖ, ಅಬತಾಬ್‌ ಸದ್ದಾಂ ಶಿರಹಟ್ಟಿ, ಮಾಬುಸಾಬ್‌ ಮುಕಬುಲಸಾಬ್‌ ಶಿರಹಟ್ಟಿ, ಶಾನು ಬಿಜಾಪುರಿ ಹಾಗೂ ಇಮ್ತಿಯಾಜ್‌ ನೀರಸಾಬ ಮುಲ್ಲಾನವರ ಪಾಲ್ಸ್‌ನತ್ತ ಹೋಗಿದ್ದನ್ನು ಸ್ಥಳೀಯರು ನೋಡಿದ್ದರು. ಆದರೆ ಗುರುವಾರ ರಾತ್ರಿ 10 ಗಂಟೆಯಾದರೂ ಮರಳಿ ಬಂದಿರಲಿಲ್ಲ.

ಕಾರವಾರ: ಶಿರ್ಲೆ ಜಲಪಾತಕ್ಕೆ ಆಗಮಿಸಿದ 6 ಜನರು ನಾಪತ್ತೆ

ಜಲಪಾತ ವೀಕ್ಷಿಸುತ್ತಾ ಜಲಪಾತದ ಕೆಳಗಡೆ ಈಚೆಯಿಂದ-ಆಚೆ ಹೋಗಲು ಹಾಕಿದ ಸಂಕದ ಮೇಲೆ ಇನ್ನೊಂದು ದಡಕ್ಕೆ ಹೋದ ಕೆಲವೇ ಕ್ಷಣದಲ್ಲಿ ಒಮ್ಮೆಲೆ ಜಲಪಾತದಲ್ಲಿ ನೀರು ಹೆಚ್ಚಾಗಿ ಸಂಕ ಕೊಚ್ಚಿ ಹೋಗಿದೆ. ಇದರಿಂದ ದಿಕ್ಕು ತೋಚದೆ ರಾತ್ರಿಯಿಡಿ ಕಾಡಿನಲ್ಲಿಯೇ ಕಳೆದ ಯುವಕರು, ಗುಡ್ಡ ಏರುತ್ತ ಹಳ್ಳದ ಅಂಚಿನಲ್ಲಿ 2 ಕಿಮಿ ನಡೆದುಕೊಂಡು ಬಂದು ಸುಣಜೋಗ ಮಹಾಬಲೇಶ್ವರ ಭಟ್ಟರ ತೋಟದ ಕಿರುಸೇತುವೆ ಮೂಲಕ ಶುಕ್ರವಾರ ಬೆಳಗ್ಗೆ 8.30 ವೇಳೆಗೆ ಅವರ ಮನೆ ಸೇರಿದ್ದಾರೆ.

ಈ ಯುವಕರು ಕಣ್ಮರೆಯಾಗಿರುವ ವಿಷಯ ತಿಳಿದಿದ್ದ ಅರಣ್ಯ ಇಲಾಖೆ, ಪೊಲೀಸರು ಹಾಗೂ ಹುಬ್ಬಳ್ಳಿಯಿಂದ ಆಗಮಿಸಿದ್ದ ಯುವಕರ ಸಂಬಂಧಿಕರು ತೀವ್ರ ಹುಡುಕಾಟ ನಡೆಸಿದ್ದರು. ಬೆಳಗ್ಗೆ 9.30ರ ವೇಳೆಗೆ ಮಹಾಬಲೇಶ್ವರ ಭಟ್ಟ ಯುವಕರನ್ನು ತಮ್ಮ ವಾಹನದಲ್ಲಿ ಯಲ್ಲಾಪುರ ಠಾಣೆಗೆ ಕರೆತಂದಿದ್ದಾರೆ. ಈ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
 

Follow Us:
Download App:
  • android
  • ios