ತೃಣಮೂಲ ಕಾಂಗ್ರೆಸ್‌ನ ಸಂಸದ ಕಲ್ಯಾಣ್ ಬ್ಯಾನರ್ಜಿ ಸೈಬರ್ ವಂಚನೆಗೆ ಬಲಿಯಾಗಿದ್ದು, ಬರೋಬ್ಬರಿ 55 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ವಂಚಕರು ಅವರ ಸಕ್ರಿಯ ಖಾತೆಯಿಂದ ನಿಷ್ಕ್ರಿಯ ಖಾತೆಗೆ ಹಣ ವರ್ಗಾಯಿಸಿ, ನಂತರ ಸಂಪೂರ್ಣ ಹಣವನ್ನು ಲಪಟಾಯಿಸಿದ್ದಾರೆ. 

ಹಿರಿಯ ನಾಗರಿಕರೇ ಸೈಬರ್ ವಂಚಕರ ಟಾರ್ಗೆಟ್

ಸೈಬರ್ ವಂಚನೆಯ ಬಗ್ಗೆ ದಿನವೂ ಸರ್ಕಾರ, ಆಡಳಿತ ಸಂಸ್ಥೆಗಳು ಪೊಲೀಸ್ ಇಲಾಖೆ ಟೆಲಿಕಾಂ ಕಂಪನಿಗಳು ಮೊಬೈಲ್ ಸಂದೇಶಗಳ ಮೂಲಕ ಜಾಗೃತಿ ಮೂಡಿಸುತ್ತಲೇ ಇದೆ. ಆದರೆ ಜನ ಮಾತ್ರ ಇದರ ಬಗ್ಗೆ ಅರಿತುಕೊಳ್ಳುವುದೇ ಇಲ್ಲ, ಅದರಲ್ಲೂ ಮುಖ್ಯವಾಗಿ ಸುಶಿಕ್ಷಿತರೆನಿಸಿಕೊಂಡವರು, ಉನ್ನತ ಶಿಕ್ಷಣ ಪಡೆದವರೇ ಈ ವಂಚನೆಯ ಬೃಹತ್ ಜಾಲಕ್ಕೆ ಬಲಿಯಾಗುತ್ತಿರುವುದು ಅಚ್ಚರಿ ಮೂಡಿಸಿದೆ. ಹಿರಿಯ ನಾಗರಿಕರನ್ನೇ ಈ ಸೈಬರ್ ವಂಚಕರ ಗುಂಪು ಟಾರ್ಗೆಟ್ ಮಾಡಿದ್ದು, ನಿನ್ನೆಯಷ್ಟೇ ಸೈಬರ್ ವಂಚಕರು 68 ವರ್ಷದ ಚಾರ್ಟೆಡ್ ಅಕೌಂಟೆಂಟ್‌ಗೆ ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ಒಂದು ಕೋಟಿಗೂ ಅಧಿಕ ಮೊತ್ತದ ಹಣವನ್ನು ಪೀಕಿಸಿ ವಂಚಿಸಿದ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆ ಮಾಸುವ ಮೊದಲೇ ಈಗ ತೃಣಮೂಲ ಕಾಂಗ್ರೆಸ್‌ನ ಸಂಸದರೇ ಈಗ ಸೈಬರ್ ವಂಚಕರ ಮೋಸದ ಜಾಲಕ್ಕೆ ಬಲಿಯಾಗಿ ಬರೋಬ್ಬರಿ 55 ಲಕ್ಷ ರೂಪಾಯಿಯನ್ನು ಕಳೆದುಕೊಂಡಂತಹ ಘಟನೆ ನಡೆದಿದೆ.

ತೃಣಮೂಲ ಕಾಂಗ್ರೆಸ್ ಸಂಸದನ ಖಾತೆಯಿಂದ 55 ಲಕ್ಷ ಗುಳುಂ:

ನಾಲ್ಕು ಸಲ ಸಂಸದರಾಗಿ ಆಯ್ಕೆಯಾಗಿರುವ ಪಶ್ಚಿಮ ಬಂಗಾಳದ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರೇ ಸೈಬರ್ ವಂಚಕರ ಮೋಸದಾಟದಿಂದ ಹಣ ಕಳೆದುಕೊಂಡವರು. ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಮಾಜಿ ಮುಖ್ಯ ವಿಪ್ ಆಗಿದ್ದ ಕಲ್ಯಾಣ್ ಬ್ಯಾನತ್ಜಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದರು. 2001 ಮತ್ತು 2006 ರ ನಡುವೆ ಅವರು ಪಶ್ಚಿಮ ಬಂಗಾಳ ವಿಧಾನಸಭಾ ಸದಸ್ಯರಾಗಿದ್ದರು. ಆ ಸಮಯದಲ್ಲಿ ಅವರಿಗೆ ಸಿಕ್ಕ ಸಂಬಳವನ್ನು ಅಲ್ಲಿ ಜಮಾ ಮಾಡಲಾಗುತ್ತಿತ್ತು, ಆಗ ಅವರು ಅಸನ್ಸೋಲ್ (ದಕ್ಷಿಣ) ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಶಾಸಕರಾಗಿದ್ದರು. ಈ ಕ್ಷೇತ್ರವು ಆಗ ಅವಿಭಜಿತ ಬುರ್ದ್ವಾನ್ ಜಿಲ್ಲೆಯ ಭಾಗವಾಗಿತ್ತು ಮತ್ತು ಈಗ ಪಶ್ಚಿಮ ಬುರ್ದ್ವಾನ್ ಜಿಲ್ಲೆಯ ಭಾಗವಾಗಿದೆ.

ಈ ಬ್ಯಾಂಕ್ ಖಾತೆಯಲ್ಲಿ ಚಟುವಟಿಕೆಗಳಿಲ್ಲದ ಕಾರಣ ಖಾತೆಯೂ ನಿಷ್ಕ್ರಿಯಗೊಂಡಿತ್ತು. ಆದರೆ ಈ ನಿಷ್ಕ್ರಿಯಗೊಂಡ ಖಾತೆಗೆ ಎಸ್‌ಬಿಐನ ಕಾಲಿಘಾಟ್ ಶಾಖೆಯಲ್ಲಿರುವ ಅವರ ವೈಯಕ್ತಿಕ ಖಾತೆಯಿಂದ ಮೊದಲು 55 ಲಕ್ಷ ರೂ.ಗಳನ್ನು ಹಾಕಲಾಗಿದೆ ಮತ್ತು ನಂತರ ಆ ನಿಷ್ಕ್ರಿಯ ಖಾತೆಯಿಂದ ಸಂಪೂರ್ಣ 55 ಲಕ್ಷ ರೂ.ಗಳನ್ನು ಡೆಬಿಟ್ ಮಾಡಲಾಗಿದೆ. ಈ ವಿಚಾರ ಇತ್ತೀಚೆಗಷ್ಟೇ ಅವರ ಗಮನಕ್ಕೆ ಬಂದಿದ್ದು, ಅವರು ತಕ್ಷಣ ಎಸ್‌ಬಿಐ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಇದಾದ ನಂತರ ಅವರು ಕೋಲ್ಕತ್ತಾ ಪೊಲೀಸರ ಸೈಬರ್ ಅಪರಾಧ ವಿಭಾಗದಲ್ಲಿ ದೂರು ದಾಖಲಿಸಿದ್ದಾರೆ.

ಇಡೀ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ. ಬ್ಯಾಂಕ್ ಅಧಿಕಾರಿಗಳನ್ನು ಸಹ ಸಂಪರ್ಕಿಸಲಾಗುತ್ತಿದೆ. ವಂಚಕರನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಅದೇ ಸಮಯದಲ್ಲಿ, ಬ್ಯಾಂಕ್ ಅಧಿಕಾರಿಗಳು ಅವರ ಕಡೆಯಿಂದ ಏನಾದರೂ ಲೋಪವಾಗಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ ಎಂದು ನಗರ ಪೊಲೀಸರ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿರುವ ಅವರ ಫೋಟೋ ಮತ್ತು ಮೊಬೈಲ್ ಸಂಖ್ಯೆಯನ್ನು ಈ ಕೃತ್ಯದಲ್ಲಿ ಬಳಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಕಲ್ಯಾಣ್ ಬ್ಯಾನರ್ಜಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆದರೆ ಪೊಲೀಸರು ಪ್ರಕರಣವನ್ನು ಆದಷ್ಟು ಬೇಗ ಬಗೆಹರಿಸಿ ತಮ್ಮ ಹಣವನ್ನು ವಾಪಸ್ ಪಡೆಬಹುದು ಎಂಬ ಭರವಸೆಯಲ್ಲಿ ಬ್ಯಾನರ್ಜಿ ಇದ್ದಾರೆ ಎಂದು ಬ್ಯಾನರ್ಜಿಯ ಆಪ್ತ ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಆನ್‌ಲೈನ್ ಆರ್ಡರ್ ಲೇಟ್ ಮಾಡಿದ್ರು ಅಂತ ಮ್ಯಾಕ್‌ಡೋನಾಲ್ಡ್‌ ಕೆಲಸಗಾರನ ಮೇಲೆ ಬಿಸಿ ಟೀ ಎರಚಿದ ಮಹಿಳೆ

ಇದನ್ನೂ ಓದಿ: ಅವಲಕ್ಕಿ ನೀಡಿದಂತೆ ನ್ಯೂಸ್ ಪೇಪರ್‌ನಲ್ಲಿ ಬಿಸಿಯೂಟ ನೀಡಿದ ಶಾಲೆ: ವೀಡಿಯೋ ವೈರಲ್