ಮುದ್ದಾದ ಮಗು ಮನೆಗೆ ಬಂದಿದೆ. ಕೆಲವೇ ದಿನಗಳಲ್ಲಿ ಬದುಕು ತಲೆ ಕೆಳಗಾಗಿಬಿಟ್ಟಿದೆ. ನಿದ್ರೆಯಿಲ್ಲದ ರಾತ್ರಿಗಳು, ಸದಾ ಬೆನ್ನು ಬಿದ್ದ ಸುಸ್ತು ದಿನಚರಿಯಾಗಿದೆ. ಆರಂಭದಲ್ಲಿ ಸಿಕ್ಕಾಪಟ್ಟೆ ಕಷ್ಟವೆನಿಸಿದ್ದನ್ನು ಈಗೀಗ ಮ್ಯಾನೇಜ್ ಮಾಡಲು ಕಲಿಯುತ್ತಿದ್ದೀರಿ. ಆದರೂ ಬೆಳಗಾಗುತ್ತಿದ್ದಂತೆಯೇ ಮಗು ಮುಖ ನೋಡಲು ಕಾತರ ಉಕ್ಕುತ್ತಿರುತ್ತದೆ. ಪ್ರತಿ ನಿತ್ಯ ಅದು ಹೊಸತೇನು ಮಾಡುತ್ತದೆ ಎಂದು ನೋಡುವುದೇ ಖುಷಿ. ನಿನ್ನೆ ತನಕ ಗೋಡೆ ನೋಡುತ್ತಿದ್ದ ಮಗು ಇಂದು ಮುಖ ನೋಡಲಾರಂಭಿಸಿದೆ ಎಂಬ ಖುಷಿ, ಅದು ನಕ್ಕಾಗ ಸಿಗುವ ಸಂತೋಷ, ಕೈಕಾಲು ಕುಣಿಸುವಾಗ ಕುಣಿದಾಡುವ ಮನಸು, ಮಗುಚಿಕೊಂಡಾಗ ಮತ್ತಷ್ಟು ಸಂಭ್ರಮದಿ ತೇಲಾಡುತ್ತದೆ. ಮತ್ತಾ ಪುಟಾಣಿ ನಿದ್ರೆಗೆ ಜಾರಿದಾಗ, ಹೇಗಪ್ಪಾ ಇದನ್ನು ಬಿಟ್ಟು ಮತ್ತೆ ಕೆಲಸಕ್ಕೆ ಮರಳೋದು, ಮಗು ಇದಕ್ಕೆ ಒಗ್ಗಿಕೊಳ್ಳುತ್ತದೋ ಇಲ್ಲವೋ, ನಾನು ನೋಡಿಕೊಂಡ ಹಾಗೆ ಮತ್ತೆ ಯಾರು ನೋಡಿಕೊಳ್ಳುತ್ತಾರೆ, ಉದ್ಯೋಗಕ್ಕೆ ಹೋದರೆ ಮಗುವಿಗೆ ಏನಾದರೂ ಕಡಿಮೆ ಮಾಡಿದಂತಾಗುತ್ತಾ, ಕೆಲಸ ಬಿಡುವುದೇ ಸರಿಯಾದ ಆಯ್ಕೆಯೇ ಎಂಬ ಪ್ರಶ್ನೆಗಳು ನಿಮ್ಮನ್ನು ಬಿಟ್ಟೂ ಬಿಡದೆ ಕಾಡುತ್ತವೆ. ಮಗುವಿಗೆ ಪೂರ್ತಿ ಸಮಯ ಕೊಡದೆ ಕೆಲಸಕ್ಕೆ ಹೋದರೆ ಅನ್ಯಾಯ ಮಾಡಿದಂತಾಗುತ್ತೇನೋ, ಪಶ್ಚಾತ್ತಾಪ ಪಡಬೇಕಾಗುತ್ತೇನೋ ಎಂಬೆಲ್ಲ ಯೋಚನೆಗಳು ನಿಮ್ಮನ್ನು ಹೈರಾಣು ಮಾಡುತ್ತವೆ. 

ಹಾಗಾದರೆ ಉದ್ಯೋಗಕ್ಕೆ ಮರಳುವ ಯೋಚನೆಗೇ ತಿಲಾಂಜಲಿ ಇಟ್ಟು ಹಾಯಾಗಿದ್ದು ಬಿಡಲೇ ಎನಿಸದಿರದು. ಆದರೆ, ಖಂಡಿತಾ ಬೇಡ. ಡೇಕೇರ್‌ನಲ್ಲಿ ಮಗುವನ್ನು ಬಿಡುವ ಆಯ್ಕೆ ತಪ್ಪೆಂದು ಮುಂಚೆ ಭಾವಿಸಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಈಗಿನ ಡೇಕೇರ್‌ಗಳಲ್ಲಿ ಪೋಷಕರ ಫೋನ್‌ಗೆ ಲೈವ್ ಸಿಸಿಟಿವಿ ಫೂಟೇಜ್ ಸಿಗುವ ಸೌಲಭ್ಯವಿರುತ್ತದೆ. ಜೊತೆಗೆ ಗುಣಮಟ್ಟದ ಆಹಾರ, ಕಲಿಕಾ ಚಟುವಟಿಕೆಗಳು ಕೂಡಾ ಮಕ್ಕಳ ಬೆಳವಣಿಗೆಗೆ ತಕ್ಕಂತೆ ರೂಪಿತವಾಗಿವೆ. 
ನಿಮ್ಮ ಕರಿಯರ್ ಬಗ್ಗೆ ಯೋಚಿಸುವುದಕ್ಕೆ ಪಶ್ಚಾತ್ತಾಪ ಪಡದೆ ಮಗುವನ್ನು ಬೆಳೆಸಲು ಹಲವಾರು ಆಯ್ಕೆಗಳು ಇಂದಿನ ತಾಯಂದಿರ ಮುಂದಿವೆ.  ಹೌದು, ಉದ್ಯೋಗ ಮಾಡಿಕೊಂಡು ಮನೆ, ಮಗುವನ್ನು ನಿಭಾಯಿಸುವುದು ಕಷ್ಟವೇ. ಅದಕ್ಕಾಗಿಯೇ ಮಗುವಾದ ಮೇಲೆ ಕೆಲಸಕ್ಕೆ ಹೋಗಲು ನೀವು ಪಶ್ಚಾತ್ತಾಪ ಪಡಬೇಕಿಲ್ಲ ಎಂಬುದಕ್ಕೆ ಕಾರಣಗಳು ಇಲ್ಲಿವೆ. 

ಕಂದ ಬಂದರೆ ಕೆಡುತ್ತಾ ಅಂದ?

1.  ಹೊರಜಗತ್ತಿನೊಡನೆ ಒಡನಾಟ
ಡೇಕೇರ್‌ನಲ್ಲಿ ನಿಮ್ಮ ಮಗು ಹೊಸ ಜನರೊಂದಿಗೆ ಬೆರೆಯುವ ಕೌಶಲ ಕಲಿತುಕೊಳ್ಳುತ್ತದೆ. ಇತರೆ ಮಕ್ಕಳು ಹಾಗೂ ಹಿರಿಯರ ಜೊತೆ ದಿನಕಳೆಯುವುದನ್ನು ಮಗು ಕಲಿತುಕೊಳ್ಳುತ್ತದೆ. ಹೆಚ್ಚು ಜನರೊಂದಿಗೆ ಬೆರೆತಾಗ ಯಾರಿಗಾದರೂ ಖುಷಿ ಸಿಗುವುದು. ಹಾಗೆಯೇ ಮಗುವಿಗೂ ಸಂತೋಷವಾಗುತ್ತದೆ. ಜೊತೆಗೆ, ಹೊಸಬರೊಂದಿಗಿನ ಒಡನಾಟ ಮಗುವಿನ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಪಾಸಿಟಿವ್ ಆಗಿ ಕೆಲಸ ಮಾಡುತ್ತದೆ.

2. ಭವಿಷ್ಯಕ್ಕೆ ಸಜ್ಜು
ಒಮ್ಮೆ ನಿಮ್ಮ ಮಗು ಪ್ರತಿದಿನ ನಿಮ್ಮ ಬಿಟ್ಟು ಕೆಲ ಹೊತ್ತು ಇರಲು ಕಲಿತು, ಡೇಕೇರ್‌ನಲ್ಲಿ ಸಮಯ ಕಳೆಯಲು ಶುರು ಮಾಡಿದೊಡನೆ ಹೆಚ್ಚು ಸ್ವತಂತ್ರವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳತೊಡಗುತ್ತವೆ. ಇದು ಮಗುವಿಗೆ ಮುಂದೆ ಶಾಲೆಗೆ, ಸಂಬಂಧಿಕರ ಮನೆಗೆ ಸುಲಭವಾಗಿ ಹೊಂದಿಕೊಳ್ಳಲು ನೆರವಾಗುತ್ತದೆ. ಹೊಸ ವಾತಾವರಣದಲ್ಲಿ ಹೇಗೆ ಹೊಂದಿಕೊಳ್ಳಬೇಕೆಂಬ ಕೌಶಲಗಳನ್ನು ಮಗು ಕಲಿತುಬಿಟ್ಟಿರುತ್ತದೆ. ಇದರಿಂದ ಪೋಷಕರ ಜವಾಬ್ದಾರಿ ಸುಲಭವಾಗುತ್ತದೆ.

ಪಾಲಕ್ ಹೆಚ್ಚಿಸುತ್ತೆ ಬಾಣಂತಿ, ಬಾಲೆ ಝಲಕ್

3. ದಿನಚರಿ
ಡೇಕೇರ್‌ನಿಂದಾಗಿ ಪ್ರತಿ ದಿನ ಸಮಯಕ್ಕೆ ಸರಿಯಾಗಿ ಊಟ, ಆಟ, ಕಲಿಕೆ ಹಾಗೂ ನಿದ್ರಿಸುವುದನ್ನು ಮಕ್ಕಳು ರೂಢಿಸಿಕೊಳ್ಳುತ್ತಾರೆ. ಈ ವಿಷಯವಾಗಿ ಅವರಲ್ಲಿ ಶಿಸ್ತು ಮೂಡುತ್ತದೆ. ಜೊತೆಗೆ, ಮಗು ಇಡೀ ದಿನ ಎಂಗೇಜ್ ಆಗಿರುತ್ತದೆ. 2 ವರ್ಷದ ನಂತರದ ಮಕ್ಕಳಿಗೆ ಅವರ ಬೌದ್ಧಿಕ ಬೆಳವಣಿಗೆಗೆ ಡೇಕೇರ್‌ನಿಂದ ಸಾಕಷ್ಟು ಲಾಭಗಳಾಗುತ್ತವೆ. 

4. ಬೌದ್ಧಿಕ ಬೆಳವಣಿಗೆ
ಈಗಂತೂ ಚೈಲ್ಡ್ ಕೇರ್ ತಜ್ಞರ ಸಹಾಯದಿಂದ ಉತ್ತಮ ಡೇಕೇರ್‌ಗಳಲ್ಲಿ ಮಗುವಿನ ಬೌದ್ಧಿಕ ಬೆಳವಣಿಗೆಗೆ ಬೇಕಾದ ಪಠ್ಯವನ್ನೇ ಅಳವಡಿಸಿಕೊಂಡಿರುತ್ತಾರೆ. ಚಿಕ್ಕ ಮಕ್ಕಳು ಇಂಥ ಪಠ್ಯಗಳಿಗೆ ತೆರೆದುಕೊಂಡರೆ ಅವರ ಬೌದ್ಧಿಕ ಮಟ್ಟ ಹಾಗೂ ಶೈಕ್ಷಣಿಕ ಸಾಧನೆಗಳು ಈ ವಯಸ್ಸಿನಲ್ಲಿ ಈ ರೀತಿಯ ಪಠ್ಯಕ್ಕೆ ತೆರೆದುಕೊಳ್ಳದ ಮಕ್ಕಳಿಗಿಂತ ಹೆಚ್ಚಾಗಿರುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ. 

5. ಫ್ರೆಂಡ್‌ಝೋನ್
ಫ್ರೆಂಡ್‌ಶಿಪ್ ಎಂಬ ಸಂಬಂಧ ಈ ಮಕ್ಕಳಿಗೆ ಡೇಕೇ‌ರ್‌ನಲ್ಲಿಯೇ ಆರಂಭವಾಗುತ್ತದೆ. ತನ್ನದೇ ವಯಸ್ಸಿನ ಇತರ ಮಕ್ಕಳೊಂದಿಗೆ ಮಗುವಿಗೆ ಸಮಯ ಕಳೆಯಲು ಇಲ್ಲಿ ಅವಕಾಶ ಸಿಗುತ್ತದೆ. ಇದರಿಂದ ಮಗುವಿನ ಸಂವಹನ ಕೌಶಲ ಬೆಳವಣಿಗೆಯಾಗುತ್ತದೆ. ಹಂಚಿಕೊಳ್ಳುವುದು ಹಾಗೂ ಮಾತನಾಡುವುದನ್ನು ಬೇಗ ಕಲಿಯುತ್ತಾರೆ. 

6. ಆರಾಮಾಗಿ ಉಸಿರಾಡಿ
ಮಗುವು ಉತ್ತಮ ಪರಿಸರದಲ್ಲಿ ಬೆಳೆಯುತ್ತಿದೆ ಎಂದಾಗ ನೀವು ನಿಮ್ಮ ಕೆಲಸದ ಮೇಲೆ ಆರಾಮಾಗಿ ಏಕಾಗ್ರತೆ ಸಾಧಿಸಬಹುದು. ಇದರಿಂದ ನಿಮ್ಮ ಮೇಲೆ ಬೀಳುತ್ತಿದ್ದ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಮನಸ್ಸು ಕೂಡಾ ಸದಾ ಶಾಂತವಾಗಿದ್ದು, ಕಚೇರಿಯಿಂದ ಬಂದೊಡನೆ ಮಗುವಿಗೆ ಗುಣಮಟ್ಟದ ಸಮಯ ನೀಡಲು ಸಾಧ್ಯವಾಗುತ್ತದೆ.

ಬಾಣಂತಿಗೇಕೆ ಕಾಡುತ್ತೆ ಖಿನ್ನತೆ